ADVERTISEMENT

ಅಮೆರಿಕಕ್ಕೆ ‘ಫೆಂಟಾನಿಲ್’ ಕಳ್ಳಸಾಗಣೆ: ಕೆಲ ಭಾರತೀಯರ ವೀಸಾ ರದ್ದು

ಪಿಟಿಐ
Published 18 ಸೆಪ್ಟೆಂಬರ್ 2025, 15:45 IST
Last Updated 18 ಸೆಪ್ಟೆಂಬರ್ 2025, 15:45 IST
   

ನವದೆಹಲಿ: ‘ಫೆಂಟಾನಿಲ್‌’ ಮಾದಕದ್ರವ್ಯ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪದ ಮೇರೆಗೆ ಭಾರತದ ಕೆಲ ಮಾರುಕಟ್ಟೆ ಪ್ರತಿನಿಧಿಗಳು ಮತ್ತು ಕಾರ್ಪೊರೇಟ್‌ ಸಂಸ್ಥೆಗಳ ಪ್ರಮುಖರ ವೀಸಾಗಳನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವರಿಗೆ ವೀಸಾ ನಿರಾಕರಿಸಲಾಗಿದೆ ಎಂದು ಅಮೆರಿಕ ಗುರುವಾರ ತಿಳಿಸಿದೆ.

ಮಾದಕದ್ರವ್ಯ ಕಳ್ಳಸಾಗಣೆ ಆರೋಪದ ಮೇರೆಗೆ ವೀಸಾ ರದ್ದು ಮಾಡಿರುವ ಮತ್ತು ವೀಸಾ ನಿರಾಕರಿಸಿರುವ ವ್ಯಕ್ತಿಗಳ ಗುರತನ್ನು ಅಮೆರಿಕದ ರಾಯಭಾರ ಕಚೇರಿ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಅಮೆರಿಕದ ಈ ಕ್ರಮದ ಬಗ್ಗೆ ಕೇಂದ್ರ ಸರ್ಕಾರದಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಮಾದಕದ್ರವ್ಯಗಳನ್ನು ಅಕ್ರಮವಾಗಿ ಉತ್ಪಾದಿಸುವ ಮತ್ತು ಅಮೆರಿಕಕ್ಕೆ ಸಾಗಿಸುವ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಪ್ರಕಟಣೆಯಲ್ಲಿ ಹೇಳಿದೆ.  

ADVERTISEMENT

ಅಮೆರಿಕ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಸೆಕ್ಷನ್‌ 222(1), ಸೆಕ್ಷನ್‌ 212(ಎ)(2)(ಸಿ) ಮತ್ತು ಸೆಕ್ಷನ್‌ 214(ಬಿ) ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.  ಇದರ ಪರಿಣಾಮ, ವೀಸಾ ರದ್ದುಗೊಳಿಸಿರುವ ಅಥವಾ ನಿರಾಕರಿಸಿರುವ ವ್ಯಕ್ತಿಗಳು ಮತ್ತು ಅವರ ಕುಟುಂಬದ ಸದಸ್ಯರು ಅಮೆರಿಕಕ್ಕೆ ಪ್ರಯಾಣಿಸಲು ಅನರ್ಹರು ಎಂದು ಪ್ರಕಟಣೆ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.