ADVERTISEMENT

ಎಲ್ಲ ಆಯ್ಕೆಗಳು ಮುಕ್ತ: ಇರಾನ್‌ಗೆ ಅಮೆರಿಕ ಎಚ್ಚರಿಕೆ

ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆಯಲ್ಲಿ ಇರಾನ್‌ಗೆ ಎಚ್ಚರಿಕೆ

ಏಜೆನ್ಸೀಸ್
Published 16 ಜನವರಿ 2026, 14:07 IST
Last Updated 16 ಜನವರಿ 2026, 14:07 IST
ಮೈಕ್ ವಾಟ್ಜ್
ಮೈಕ್ ವಾಟ್ಜ್    

ವಿಶ್ವಸಂಸ್ಥೆ: ‘ಇರಾನ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಹತ್ಯೆ ತಡೆಯುವುದು ಅಮೆರಿಕಕ್ಕೆ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಮುಂದೆ ಎಲ್ಲ ಆಯ್ಕೆಗಳು ಮುಕ್ತವಾಗಿವೆ’ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಅಮೆರಿಕ ಹೇಳಿದೆ.

‘ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಾವು ಆಡಿದ ಮಾತನ್ನು ಕಾರ್ಯರೂಪಕ್ಕೆ ತಂದು ತೋರಿಸುವ ವ್ಯಕ್ತಿ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಈ ಮಾತನ್ನು ಇರಾನ್‌ ಸರ್ಕಾರದ ಚುಕ್ಕಾಣಿ ಹಿಡಿದವರಿಗಿಂತಲೂ ಹೆಚ್ಚು ಬೇರೆ ಯಾರೂ ಅರ್ಥ ಮಾಡಿಕೊಳ್ಳಲಾರರು’ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ಮೈಕ್ ವಾಟ್ಜ್ ಹೇಳಿದರು.

ಇರಾನ್‌ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆಗಳು ಆರಂಭವಾದ ಬಳಿಕ, ಇದೇ ಮೊದಲ ಬಾರಿಗೆ ಅಮೆರಿಕ ಹಾಗೂ ಇರಾನ್‌ ಪ್ರತಿನಿಧಿಗಳು ಗುರುವಾರ ನಡೆದ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಮುಖಾಮುಖಿಯಾಗಿದ್ದಾರೆ.

ADVERTISEMENT

ವಿಶ್ವಸಂಸ್ಥೆಯಲ್ಲಿ ಇರಾನ್‌ನ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ, ವಾಟ್ಜ್ ಅವರು ಅಮೆರಿಕದ ನಿಲುವನ್ನು ವಿವರಿಸಿದ್ದಾರೆ.

ಅಮೆರಿಕದ ಮನವಿ ಮೇರೆಗೆ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಆಯೋಜಿಸಲಾಗಿತ್ತು. ಇರಾನ್‌ನ ಭಿನ್ನಮತೀಯ ನಾಯಕಿ ಮಸಿಹ್ ಅಲಿನೆಜಾದ್ ಹಾಗೂ ಮುಖಂಡ ಅಹಮದ್ ಬತೇಬಿ ಅವರನ್ನು ಕೂಡ ಸಭೆಗೆ ಆಹ್ವಾನಿಸಲಾಗಿತ್ತು.

ಸಭೆ ಆರಂಭವಾದಾಗ ಮಾತನಾಡಿದ ಇರಾನ್‌ನ ಈ ಇಬ್ಬರು ಭಿನ್ನಮತೀಯ ನಾಯಕರು, ದೇಶದಲ್ಲಿ ಪ್ರತಿಭಟನಕಾರರ ಮೇಲೆ ನಡೆದ ದೌರ್ಜನ್ಯ ಕುರಿತು ವಿವರಿಸಿದರು.

ನೀವು(ಡೊನಾಲ್ಡ್‌ ಟ್ರಂಪ್) ಇರಾನ್‌ ಜನರ ಕೈಬಿಡಬೇಡಿ. ಸರ್ಕಾರದ ವಿರುದ್ಧ ಬೀದಿಗಳಿಯುವಂತೆ ನೀವು ಜನರನ್ನು ಪ್ರೇರೇಪಿಸಿದ್ದೀರಿ. ಅದು ಒಳ್ಳೆಯದೇ. ಈಗ ಅವರನ್ನು ನಡುನೀರಿನಲ್ಲಿ ಬಿಡಬೇಡಿ.
ಅಹಮದ್ ಬತೇಬಿ, ಇರಾನ್‌ನ ಭಿನ್ನಮತೀಯ ನಾಯಕ

‘ನನ್ನನ್ನು ಹತ್ಯೆ ಮಾಡಲು ನೀವು ಮೂರು ಬಾರಿ ಯತ್ನಿಸಿದಿರಿ. ನನ್ನನ್ನು ಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬ್ರೂಕ್‌ಲಿನ್‌ನಲ್ಲಿರುವ ಮನೆಯ ಮುಂದಿನ ಉದ್ಯಾನದಲ್ಲಿ ಸ್ವತಃ ನಾನೇ ನೋಡಿದ್ದೇನೆ’ ಎಂದು ಇರಾನ್‌ ಪ್ರತಿನಿಧಿಗಳನ್ನು ಉದ್ದೇಶಿಸಿ ಅಲಿನೆಜಾದ್‌ ಹೇಳಿದರು.

ಕಳೆದ ಅಕ್ಟೋಬರ್‌ನಲ್ಲಿ ಅಲಿನೆಜಾದ್‌ ಅವರನ್ನು ನ್ಯೂಯಾರ್ಕ್‌ನ ಅವರ ನಿವಾಸದಲ್ಲಿ ಹತ್ಯೆ ಮಾಡಲು ಇರಾನ್‌ ಸಂಚು ರೂಪಿಸಿತ್ತು. ಇರಾನ್‌ ಪರ ಕೆಲಸ ಮಾಡುತ್ತಿದ್ದ ರಷ್ಯಾದ ಇಬ್ಬರು ದರೋಡೆಕೋರರು ಒಬ್ಬ ವ್ಯಕ್ತಿಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ. ಈಗ ಈ ಇಬ್ಬರು ರಷ್ಯಾ ಪ್ರಜೆಗಳಿಗೆ ತಲಾ 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಮಾತುಕತೆ: ಸಭೆ ಆರಂಭಕ್ಕೂ ಮುನ್ನ ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ಅವರೊಂದಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಅವರು ದೂರವಾಣಿ ಮೂಲಕ ಮಾತನಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.