ADVERTISEMENT

ಜೋ ಬಿಡೆನ್ ಅಧ್ಯಕ್ಷರಾಗಿ ಆಯ್ಕೆಯಾದರೆ ಅಮೆರಿಕ ನಗೆಪಾಟಲು: ಡೊನಾಲ್ಡ್ ಟ್ರಂಪ್

ಪಿಟಿಐ
Published 14 ಆಗಸ್ಟ್ 2020, 10:34 IST
Last Updated 14 ಆಗಸ್ಟ್ 2020, 10:34 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ‘ಜೋ ಬಿಡೆನ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ ದೇಶದ ವರ್ಚಸ್ಸು ಕುಸಿಯಲಿದ್ದು, ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗಲಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಬಿಡೆನ್ ಅವರು ಪ್ರಸ್ತಾಪಿಸಿರುವ ನೀತಿ, ಚಿಂತನೆಗಳಿಂದ ದೇಶಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಟ್ರಂಪ್ ಗುರುವಾರ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಜೋ ಬಿಡೆನ್ ಅವರು ಅಧ್ಯಕ್ಷರಾದರೆ ಜಗತ್ತು ನಗಲಿದೆ. ಇದರ ಪೂರ್ಣ ಲಾಭ ಪಡೆಯಲಿದೆ. ನಮ್ಮ ದೇಶ ಕುಸಿಯಲಿದೆ’ ಎಂದು ಅವರು ಟ್ವೀಟ್‌ನಲ್ಲಿ ಎಚ್ಚರಿಸಿದ್ದಾರೆ. ಇದರೊಂದಿಗೆ ಅವರು ಫಾಕ್ಸ್ ನ್ಯೂಸ್ ದೃಶ್ಯವನ್ನೂ ಹಂಚಿಕೊಂಡಿದ್ದಾರೆ.

ADVERTISEMENT

ಬಿಡೆನ್ ಅವರುಇಂದು ಕೋವಿಡ್ ಬಿಕ್ಕಟ್ಟಿನ ಸ್ಥಿತಿಯನ್ನು ರಾಜಕೀಯಗೊಳಿಸುತ್ತಿದ್ದಾರೆ. ಈ ಮೂಲಕ ಅಮೆರಿಕದ ಜನರಿಗೆ ಅಗೌರವ ತೋರಿದ್ದಾರೆ. ಕೊರೊನಾ ಕುರಿತಂತೆ ಪ್ರತಿ ಹಂತದಲ್ಲಿ ಬಿಡೆನ್ ಚಿಂತನೆ ತಪ್ಪಾಗಿದೆ. ವೈಜ್ಞಾನಿಕ ಸಾಕ್ಷ್ಯಗಳನ್ನು ಅಲಕ್ಷ್ಯಿಸಿದ್ದಾರೆ. ವಾಸ್ತವದ ಎದುರು ಎಡಪಂಥೀಯ ಚಿಂತನೆಗಳನ್ನು ಹರಿಬಿಟ್ಟಿದ್ದಾರೆ ಎಂದು ಟೀಕಿಸಿದರು.

ಬಿಡೆನ್ ಅವರು ಅಮೆರಿಕದ ವಾಯುಗಡಿಯನ್ನು ಮುಕ್ತಗೊಳಿಸುವ ಚಿಂತನೆ ಹೊಂದಿದ್ದಾರೆ. ಈ ಮೂಲಕ ಕೊರೊನಾ ಸೋಂಕು ಅಮೆರಿಕದ ಪ್ರತಿಯೊಂದು ಸಮುದಾಯವನ್ನು ಆವರಿಸಲಿದೆ. ಗಡಿಯನ್ನು ಮುಕ್ತಗೊಳಿಸುವುದರಿಂದ ದೇಶ ರಕ್ಷಿಸಲಾಗದು. ಇದನ್ನು ನಾನು ಆರಂಭದಿಂದಲೂ ಹೇಳುತ್ತಿದ್ದೇನೆ. ಆದರೆ, ಡೆಮಾಕ್ರಾಟಿಕ್‌ ಪಕ್ಷ ಗಡಿಯನ್ನು ಮುಕ್ತಗೊಳಿಸಲು ಬಯಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.