ADVERTISEMENT

ಪ್ರಯಾಣ ಮಾರ್ಗಸೂಚಿ: ಭಾರತದೊಂದಿಗಿನ ಸಮಸ್ಯೆ ಹಂತ ಹಂತವಾಗಿ ನಿವಾರಣೆ– ಬ್ರಿಟನ್

ಪಿಟಿಐ
Published 23 ಸೆಪ್ಟೆಂಬರ್ 2021, 5:30 IST
Last Updated 23 ಸೆಪ್ಟೆಂಬರ್ 2021, 5:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ‘ಕೋವಿಡ್‌ ಅಂತರರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಗಳಿಗೆ ಸಂಬಂಧಿಸಿ, ಭಾರತದೊಂದಿಗಿನ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ’ ಬ್ರಿಟನ್‌ ಸರ್ಕಾರ ಹೇಳಿದೆ.

ಕೋವಿಡ್‌–19 ಲಸಿಕೆ ಹಾಕಿಸಿಕೊಂಡಿರುವುದಕ್ಕೆ ಸಂಬಂಧಿಸಿ ಎಲ್ಲ ದೇಶಗಳು ನೀಡುವ ಪ್ರಮಾಣಪತ್ರ ಕನಿಷ್ಠ ಮಾನದಂಡಗಳಿಗೆ ಅನುಗುಣವಾಗಿ ಇರಬೇಕು ಎಂದೂ ಹೇಳಿದೆ. ಹೀಗಾಗಿ ಕೋವಿಡ್‌ ಲಸಿಕೆ ಹಾಕಿಸಿಕೊಂಡಿರುವುದಕ್ಕೆ ಸಂಬಂಧಿಸಿದ ಪ್ರಮಾಣಪತ್ರ ಕುರಿತ ಅಸ್ಪಷ್ಟತೆ ಇನ್ನೂ ನಿವಾರಣೆಯಾದಂತಾಗಿಲ್ಲ.

ಬ್ರಿಟನ್‌ ರೂಪಿಸಿರುವ ನೂತನ ‘ಕೋವಿಡ್‌ ಅಂತರರಾಷ್ಟ್ರೀಯ ಪ್ರಯಾಣ
ಮಾರ್ಗಸೂಚಿ’ಯಲ್ಲಿ ಭಾರತದಲ್ಲಿ ತಯಾರಾದ ಕೋವಿಶೀಲ್ಡ್‌ ಲಸಿಕೆಗೆ ಮಾನ್ಯತೆ ನೀಡಿದೆ. ಆದರೆ, ಕ್ವಾರಂಟೈನ್ ಇಲ್ಲದೆಯೇ ಬ್ರಿಟನ್ ಪ್ರವೇಶಕ್ಕೆ ಅವಕಾಶ ಪಡೆದ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರು ಇಲ್ಲ.

ADVERTISEMENT

ಹೀಗಾಗಿ ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡ ಭಾರತೀಯರೂ ಬ್ರಿಟನ್ ಪ್ರವೇಶದ ನಂತರ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಇದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಬ್ರಿಟನ್‌ನಿಂದ ಈ ಹೇಳಿಕೆ ಹೊರಬಿದ್ದಿದೆ.

ಅಲ್ಲದೇ, ಕ್ವಾರಂಟೈನ್ ಇಲ್ಲದೆಯೇ ಬ್ರಿಟನ್ ಪ್ರವೇಶಕ್ಕೆ ಅವಕಾಶ ಪಡೆದ ದೇಶಗಳ ಪಟ್ಟಿಯನ್ನು ಬದಲಾವಣೆ ಮಾಡುವ ಹಾಗೂ ಈ ಪಟ್ಟಿಗೆ ಮತ್ತಷ್ಟು ದೇಶಗಳನ್ನು ಸೇರಿಸುವ ಯೋಚನೆ ಇದೆ ಎಂದೂ ಸರ್ಕಾರ ಹೇಳಿದೆ. ಆದರೆ, ಈ ಬಗ್ಗೆ ಸಹ ಇನ್ನೂ ಸ್ಪಷ್ಟತೆ ಇಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.