ADVERTISEMENT

ಅಣ್ವಸ್ತ್ರ ದಾಳಿ ಎಚ್ಚರಿಕೆ ಲಘುವಾಗಿ ಪರಿಗಣಿಸದಿರಿ: ಪುಟಿನ್ ಆಪ್ತ ಡಿಮಿಟ್ರಿ

ಏಜೆನ್ಸೀಸ್
Published 27 ಸೆಪ್ಟೆಂಬರ್ 2022, 14:51 IST
Last Updated 27 ಸೆಪ್ಟೆಂಬರ್ 2022, 14:51 IST
   

ಮಾಸ್ಕೊ: ರಷ್ಯಾದ ಅಣ್ವಸ್ತ್ರ ಬಳಕೆ ಎಚ್ಚರಿಕೆಯನ್ನು ಜಗತ್ತು ಲಘುವಾಗಿ ಪರಿಗಣಿಸುವ ಅಗತ್ಯ ಇಲ್ಲ ಎಂದು ಪುಟಿನ್ ಆಪ್ತ ಡಿಮಿಟ್ರಿ ಮೆಡ್ವೆಡೇವ್ ಮಂಗಳವಾರ ಹೇಳಿದ್ದಾರೆ.

ರಾಷ್ಟ್ರದ ಭದ್ರತೆಗೆ ಬೆದರಿಕೆ ಎದುರಾದರೆ ಉಕ್ರೇನ್ ವಿರುದ್ಧಅಣ್ವಸ್ತ್ರಗಳನ್ನುರಷ್ಯಾ ಖಂಡಿತ ಬಳಸಲಿದೆ. ಇದರಲ್ಲಿ ಪಶ್ಚಿಮವು ಮಧ್ಯಪ್ರವೇಶಿಸುವ ಧೈರ್ಯ ತೋರದು ಎಂದು ಪುಟಿನ್‌ ಅಧ್ಯಕ್ಷತೆಯ ದೇಶದ ಭದ್ರತಾ ಸಮಿತಿಯ ಕಾರ್ಯದರ್ಶಿಯೂ ಆದ ಮೆಡ್ವೆಡೇವ್‌ ಹೇಳಿದ್ದಾರೆ.

ರಷ್ಯಾ ಹಿಡಿತಕ್ಕೆ ತೆಗೆದುಕೊಂಡಿರುವ ಪ್ರದೇಶಗಳನ್ನು ಉಕ್ರೇನ್‌ ಮರುವಶಕ್ಕೆ ಪಡೆಯುವುದನ್ನು ತಡೆಯಲು, ರಷ್ಯಾ ಅಣ್ವಸ್ತ್ರ ಬಳಕೆ ಬಗ್ಗೆ ಯೋಚಿಸುತ್ತಿದೆ ಎಂದು ಅಧಿಕಾರಿಗಳು ಎಚ್ಚರಿಸಿದ ಬೆನ್ನಲ್ಲೇಮೆಡ್ವೆಡೇವ್‌ ಅವರು ‘ರಷ್ಯಾಕ್ಕೆ ಬೆದರಿಕೆ ಒಂದು ನಿರ್ದಿಷ್ಟ ಅಪಾಯದ ಮಿತಿ ಮೀರಿದರೆ, ಯಾರ ಜತೆಗೂ ಸಮಾಲೋಚನೆ ನಡೆಸದೇ ಮತ್ತು ಯಾರ ಒಪ್ಪಿಗೆಯನ್ನೂ ಕೇಳದೆ ಪ್ರತಿಕ್ರಿಯಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಉಕ್ರೇನ್‌ ಮತ್ತು ಅದರ ಪಶ್ಚಿಮದ ಮಿತ್ರ ರಾಷ್ಟ್ರಗಳು ರಷ್ಯಾದ ಅಣ್ವಸ್ತ್ರ ದಾಳಿ ಬೆದರಿಕೆಯನ್ನು ತಳ್ಳಿಹಾಕಿದ್ದು, ಇದೊಂದು ಭಯ ಮೂಡಿಸುವ ತಂತ್ರ ಎಂದಿವೆ.

ಸಂಸತ್‌ನಲ್ಲಿ ಅಧಿಕೃತ ಘೋಷಣೆ?:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ತಮ್ಮ ಸೇನಾ ಪಡೆಗಳು ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವುದನ್ನು ಶುಕ್ರವಾರ ದೇಶದ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾಡಲಿರುವ ಭಾಷಣದಲ್ಲಿ ಅಧಿಕೃತ ಘೋಷಣೆ ಮಾಡುವ ಮಾಹಿತಿ ಇದೆ ಎಂದು ಬ್ರಿಟನ್‌ ರಕ್ಷಣಾ ಸಚಿವಾಲಯ ಮಂಗಳವಾರ ಹೇಳಿದೆ.

ರಷ್ಯಾಕ್ಕೆ ಸೇರುವ ಬಯಕೆ:

ಅಂತರರಾಷ್ಟ್ರೀಯ ಸಮುದಾಯದ ತೀವ್ರ ಟೀಕೆಯ ನಡುವೆಯೂ ರಷ್ಯಾ ಉಕ್ರೇನ್‌ ಪೂರ್ವದಲ್ಲಿ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ತನ್ನ ಗಡಿಯೊಳಗೆ ಸೇರಿಸಿಕೊಳ್ಳಲು ಕೆಲ ದಿನಗಳಿಂದ ನಡೆಸಿದ ಜನಮತಗಣನೆ ಮಂಗಳವಾರ ಕೊನೆಯಾಯಿತು. ಈ ಪ್ರದೇಶದ ನಿವಾಸಿಗಳು ರಷ್ಯಾಕ್ಕೆ ಸೇರಲು ಬಯಸಿರುವುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.