ADVERTISEMENT

ಹವಾಮಾನ ಬದಲಾವಣೆ: ಭಾರತವೇ ಸವಾಲು

ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಆಕಾಂಕ್ಷಿ ಬ್ಲೂಮ್‌ಬರ್ಗ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 19:45 IST
Last Updated 20 ಫೆಬ್ರುವರಿ 2020, 19:45 IST
ಬ್ಲೂಮ್‌ಬರ್ಗ್‌
ಬ್ಲೂಮ್‌ಬರ್ಗ್‌   

ವಾಷಿಂಗ್ಟನ್‌ (ಪಿಟಿಐ): ‘ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವಲ್ಲಿ, ಅದರಲ್ಲೂ ಇಂಗಾಲದ ಹೊರಸೂಸಿವಿಕೆಯನ್ನು ಕಡಿಮೆ ಮಾಡುವಲ್ಲಿ, ಚೀನಾಕ್ಕಿಂತಲೂ ಭಾರತವೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ’ ಎಂದು ಅಮೆರಿಕ ಅಧ್ಯಕ್ಷ ಚುನಾವಣೆಗೆ ಡೆಮಾಕ್ರಟಿಕ್‌ ಪಕ್ಷದಿಂದ ಸ್ಪರ್ಧಿಸಲು ಬಯಸಿರುವ ಮೈಕೆಲ್‌ ಬ್ಲೂಮ್‌ಬರ್ಗ್‌ ಅಭಿಪ್ರಾಯಪಟ್ಟಿದ್ದಾರೆ.

ಲಾಸ್‌ ವೆಗಾಸ್‌ನಲ್ಲಿ ನಡೆದ ಮೊದಲ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಈ ಅನಿಸಿಕೆಯನ್ನು ವ್ಯಕ್ತಡಿಸಿದರು. ‘ಟ್ರಂಪ್‌ ಆಡಳಿತ 2015ರ ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹೊರಗುಳಿ
ಯುವಂತೆ ನೋಡಿಕೊಂಡಿದ್ದು ಹಾಸ್ಯಾಸ್ಪದ’ ಎಂದು ಕುಟುಕಿದರು.

‘ಚೀನಾದಲ್ಲಿ ಆರ್ಥಿಕ ಚಟುವಟಿಕೆಗಳು ನಿಧಾನಗೊಂಡಿವೆ. ಈಗ ನಿಜವಾಗಿ ಸಮಸ್ಯೆ ಆಗಿರುವುದು ಭಾರತ. ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಯಾರೂ ಏನನ್ನೂ ಮಾಡುತ್ತಿಲ್ಲ’ ಎಂದು ಅವರು ವಿಶ್ಲೇಷಿಸಿದರು.

ADVERTISEMENT

ಬ್ಲೂಮ್‌ಬರ್ಗ್‌ ಅವರು ಚೀನಾದಲ್ಲಿ ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿರುವ ಕುರಿತು ಪ್ರಶ್ನೆಗಳು ಎದುರಾದವು. ‘ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಇಂಗಾಲವನ್ನು ಹೊರಸೂಸುತ್ತಿರುವ ದೇಶ ಚೀನಾ. ಈ ಮಾಲಿನ್ಯವನ್ನು ಕಡಿಮೆ ಮಾಡುವಂತೆ ಚೀನಾ ಮೇಲೆ ಹೇಗೆ ಒತ್ತಡ ಹೇರಲಿದ್ದೀರಿ’ ಎಂಬ ಪ್ರಶ್ನೆ ತೂರಿಬಂತು.

‘ಚೀನಿಯರೊಂದಿಗೆ ಈ ವಿಷಯವಾಗಿ ಯುದ್ಧಕ್ಕೆ ನಿಲ್ಲಲು ಆಗುವುದಿಲ್ಲ. ಸಂವಾದಗಳ ಮೂಲಕವೇ ಅವರ ಮನ ಒಲಿಸಬೇಕು. ಇಂಗಾಲ ಹೊರಸೂಸುವ ಪ್ರಮಾಣ ಕಡಿಮೆ ಮಾಡುವಲ್ಲಿ ಚೀನಾದ ಹಿತಾಸಕ್ತಿಯೂ ಇದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಹವಾಮಾನ ವೈಪರೀತ್ಯದಿಂದ ನಮ್ಮ ಜನರಂತೆಯೇ ಅವರ ಜನರೂ ಸಾಯುತ್ತಾರೆ. ಇಬ್ಬರೂ ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಅವರಿಗೆ ವಿವರಿಸ
ಬೇಕು’ ಎಂದು ಪ್ರತಿಪಾದಿಸಿದರು.

2030ರ ವೇಳೆಗೆ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ಶೇ 30ರಿಂದ 35ರಷ್ಟು ಕಡಿಮೆ ಮಾಡಲು ಬದ್ಧ ಎಂದು ಭಾರತ ಘೋಷಿಸಿದ್ದರೂ ಬ್ಲೂಮ್‌ಬರ್ಗ್‌ ಅವರಿಂದ ಈ ಹೇಳಿಕೆ ಬಂದಿದೆ. ಇದು ಹಲವರ ಹುಬ್ಬೇರಿಸುವಂತೆ ಮಾಡಿದೆ.

ಇಂಗಾಲದ ಹೊರಸೂಸುವಿಕೆಯನ್ನು ಅಮೆರಿಕ ಹೇಗೆ ಕಡಿಮೆ ಮಾಡಲಿದೆ ಎಂಬ ಪ್ರಶ್ನೆಗೆ, ‘ಕಲ್ಲಿದ್ದಲು ಶಾಖೋತ್ಪನ್ನ ಘಟಕಗಳನ್ನು ಬಂದ್‌ ಮಾಡುವ ಮೂಲಕ’ ಎಂದು ಬ್ಲೂಮ್‌ಬರ್ಗ್‌ ಉತ್ತರಿಸಿದರು. ‘ಅಮೆರಿಕದ ಅಧ್ಯಕ್ಷನಾಗಿ ನಾನು ಚುನಾಯಿತನಾದರೆ ಮೊದಲು ಮಾಡುವ ಕೆಲಸವೆಂದರೆ ಪ್ಯಾರಿಸ್‌ ಒಪ್ಪಂದದ ಭಾಗವಾಗುವ ಕೆಲಸವನ್ನು ಮಾಡುವುದೇ ಆಗಿದೆ. ಏಕೆಂದರೆ, ಚೀನಾ, ಭಾರತ, ಯುರೋಪ್‌ ಹಾಗೂ ಅಮೆರಿಕ ಜತೆಯಾಗಿ ಕಾರ್ಯನಿರ್ವಹಿಸದಿದ್ದರೆ ಈ ಸಮಸ್ಯೆಗೆ ಪರಿಹಾರವಿಲ್ಲ’ ಎಂದು ಅವರು ಪ್ರತಿಪಾದಿಸಿದರು.

ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್‌, ‘ಚೀನಾದಿಂದಲೇ ಜಗತ್ತಿನ ತುಂಬಾ ಮಾಲಿನ್ಯ ಹರಡುತ್ತಿರುವುದು’ ಎಂದು ದೂರಿದರು. ‘ಚೀನಾದ ಮಹಾತ್ವಾಕಾಂಕ್ಷಿ ‘ಒಂದು ವಲಯ, ಒಂದು ರಸ್ತೆ’ ಯೋಜನೆ ರೂಪುಗೊಂಡಿರುವುದೇ ಜಗತ್ತಿನ ಬೇರೆ ಭಾಗಗಳಿಂದ ಕಲ್ಲಿದ್ದಲನ್ನು ತನ್ನ ದೇಶಕ್ಕೆ ತರಿಸಿಕೊಳ್ಳಲು’ ಎಂದು ಅವರು ವ್ಯಾಖ್ಯಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.