ADVERTISEMENT

ಮೆರ್ಕೆಲ್‌ ಬಳಿಕ ಜರ್ಮನಿ ಅಸ್ಥಿರ?

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 19:30 IST
Last Updated 27 ಸೆಪ್ಟೆಂಬರ್ 2021, 19:30 IST
   

ಫ್ರಾಂಕ್‌ಫರ್ಟ್‌ (ಎಎಫ್‌ಪಿ): ಜರ್ಮನಿಯಲ್ಲಿ ನಡೆದ ಚುನಾವಣೆಯಲ್ಲಿ ಸೋಷಿಯಲ್‌ ಡೆಮಾಕ್ರಟ್‌ ಪಕ್ಷಕ್ಕೆ ಅಲ್ಪ ಮುನ್ನಡೆ ಸಿಕ್ಕಿದೆ.ಆಡಳಿತಾರೂಢ ಸಿಡಿಯು–ಸಿಎಸ್‌ಯು ಮೈತ್ರಿಕೂಟವು ಶೇ 24.1ರಷ್ಟು ಮತಗಳನ್ನು ಪಡೆದುಕೊಂಡಿದೆ. ಎಡಪಂಥೀಯ ಒಲವಿನ ಸೋಷಿಯಲ್‌ ಡೆಮಾಕ್ರಟ್‌ ಪಕ್ಷಕ್ಕೆ ಶೇ 25.7ರಷ್ಟು ಮತಗಳು ಸಿಕ್ಕಿವೆ. ಸೋಷಿಯಲ್‌ ಡೆಮಾಕ್ರಟ್‌ ಪಕ್ಷಕ್ಕೆ ಅಲ್ಪ ಮುನ್ನಡೆ ಇದ್ದರೂ ಸಿಡಿಯು–ಸಿಎಸ್‌ಯು ಮೈತ್ರಿಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಾಗಿ ಹೇಳಿದೆ. ಸಣ್ಣ ಪಕ್ಷಗಳನ್ನು ಜತೆಗೆ ಸೇರಿಸಿ ಸರ್ಕಾರ ರಚಿಸಲು ಯತ್ನಿಸಲಾಗುವುದು ಎಂದಿದೆ. ಇದರೊಂದಿಗೆ ಜರ್ಮನಿಯು ರಾಜಕೀಯ ಅನಿಶ್ಚಿತ ಸ್ಥಿತಿಗೆ ಒಳಗಾಗುವುದು ಖಚಿತವಾಗಿದೆ.

ಸಿಡಿಯು–ಸಿಎಸ್‌ಯು ಮೈತ್ರಿಕೂಟದ ನಾಯಕಿ, ಜರ್ಮನಿಯ ಕಾಯಂ ಛಾನ್ಸೆಲರ್‌ ಎಂದೇ ಕರೆಸಿಕೊಳ್ಳುತ್ತಿದ್ದ ಅಂಗೆಲಾ ಮೆರ್ಕೆಲ್‌ ಅವರು ಸತತ 16 ವರ್ಷ ದೇಶಕ್ಕೆ ಸ್ಥಿರ ನಾಯಕತ್ವ ಒದಗಿಸಿದ್ದರು. ಆದರೆ, ಮುಂದಿನ ದಿನಗಳು ತೀವ್ರವಾಗಿ ಅನಿಶ್ಚಿತವಾಗಿ ಇರಲಿವೆ. ಸೋಷಿಯಲ್‌ ಡೆಮಾಕ್ರಟ್‌ ಪಕ್ಷದ ನಾಯಕ ಒಲಾಫ್‌ ಶೋಲ್ಸ್‌ ಮತ್ತು ಸಿಡಿಯು ನಾಯಕ ಅರ್ಮಿನ್‌ ಲಾಷೆಟ್‌ ಅವರು ಸರ್ಕಾರ ರಚನೆಯ ಉತ್ಸಾಹ ತೋರಿದ್ದಾರೆ. ಇದು ಸಂಘರ್ಷಮಯ ಸ್ಥಿತಿಗೆ ಕಾರಣ ಆಗಬಹುದು ಎನ್ನಲಾಗಿದೆ.

ಐದನೇ ಅವಧಿಗೆ ದೇಶದ ನಾಯಕತ್ವ ವಹಿಸಿಕೊಳ್ಳುವ ಉಮೇದನ್ನು ಅಂಗೆಲಾ ಅವರು ತೋರಲಿಲ್ಲ. ಇದುವೇ ಸಿಡಿಯು ಪಕ್ಷದ ಹಿನ್ನಡೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಅಂಗೆಲಾ ಅವರಿಗೆ ಪರ್ಯಾಯವಾಗಿ ಪಕ್ಷವು ಬಿಂಬಿಸಿದ ಅರ್ಮಿನ್‌ ಲಾಷೆಟ್‌ ಅವರಿಗೆ ಅಷ್ಟೊಂದು ಜನಪ್ರಿಯತೆ ಇಲ್ಲ.

ADVERTISEMENT

ಅಧಿಕಾರದಿಂದ ಕೆಳಗೆ ಇಳಿದರೂ ಜರ್ಮನಿಯ ಅತ್ಯಂತ ಜನಪ್ರಿಯ ನಾಯಕಿಯಾಗಿ ಅಂಗೆಲಾ ಉಳಿಯಲಿದ್ದಾರೆ.ಅಂಗೆಲಾ ಅವರು ಅಧಿಕಾರದಲ್ಲಿ ಇಲ್ಲ ಎನ್ನುವುದೇ ಬಹಳ ಬೇಸರದ ಸಂಗತಿ ಎಂದು ಹಲವು ಮಂದಿ ಹೇಳಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಅಂಗೆಲಾ ಅವರ ಪಕ್ಷಕ್ಕೆ ಚಾರಿತ್ರಿಕ ಹಿನ್ನಡೆ ಉಂಟಾಗಿದೆ. ಏಳು ದಶಕಗಳ ಇತಿಹಾಸದಲ್ಲಿ ಎಂದೂ ಆ ಪಕ್ಷವು ಶೇ 30ಕ್ಕಿಂತ ಕಡಿಮೆ ಮತಗಳನ್ನು ಪಡೆದಿರಲಿಲ್ಲ.

ಯುರೋಪ್‌ನ ಅಘೋಷಿತ ನಾಯಕ ಸ್ಥಾನದಲ್ಲಿ ಜರ್ಮನಿ ಈವರೆಗೆ ಇತ್ತು. ಐರೋಪ್ಯ ಒಕ್ಕೂಟದ ಯಾವುದೇ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲ ದೇಶಗಳು ಪರಿಹಾರಕ್ಕಾಗಿ ಜರ್ಮನಿಯತ್ತ ನೋಡುತ್ತಿದ್ದವು. ಆದರೆ, ರಾಜಕೀಯ ಪಕ್ಷಗಳ ನಡುವಣ ಸಂಘರ್ಷದಿಂದಾಗಿ ದೇಶವು ಈ ಸ್ಥಾನವನ್ನು ಕಳೆದುಕೊಳ್ಳಬಹುದು. ಜಾಗತಿಕ ಮಟ್ಟದಲ್ಲಿ ಸ್ವಲ್ಪ ಕಾಲ ಜರ್ಮನಿಯು ಕಾಣಿಸಿಕೊಳ್ಳದೇ ಇರಬಹುದು.

ಜರ್ಮನಿಯಲ್ಲಿ ಶೀಘ್ರದಲ್ಲಿಯೇ ಸ್ಥಿರ ಸರ್ಕಾರ ರಚನೆ ಆಗಬೇಕಾದ ಅನಿವಾರ್ಯ ಇದೆ. ಹವಾಮಾನ ಶೃಂಗ ಸಭೆಯು ಸದ್ಯದಲ್ಲೇ ನಡೆಯಲಿದೆ. ಜರ್ಮನಿಯಂತಹ ಪ್ರಮುಖ ದೇಶವು ಹವಾಮಾನ ವೈಪರೀತ್ಯ ತಡೆಗೆ ದೊಡ್ಡ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅದಲ್ಲದೆ, ಜಿ7 ಗುಂಪಿನ ಅಧ್ಯಕ್ಷತೆಯು ಮುಂದಿನ ವರ್ಷ ಜರ್ಮನಿಗೆ ಸಿಗಲಿದೆ. ಜಿ7 ಗುಂಪಿನ ಕಾರ್ಯಸೂಚಿಯನ್ನು ನಿಗದಿ ಮಾಡಲು ಸಾಮರ್ಥ್ಯ ಇರುವ ಸರ್ಕಾರವು ಸ್ಥಾಪನೆ ಆಗಬೇಕಾದುದು ಅಗತ್ಯ.

ಮೈತ್ರಿ ಕಸರತ್ತು

ಎರಡು ಪಕ್ಷಗಳು ಮೈತ್ರಿಕೂಟ ಮಾಡಿಕೊಂಡು ಸರ್ಕಾರ ರಚಿಸುವ ಕ್ರಮ ಈವರೆಗೆ ಇತ್ತು. ಅಂಗೆಲಾ ನಂತರದ ಯುಗದಲ್ಲಿ ಅದು ಮೂರು ಪಕ್ಷಗಳ ಮೈತ್ರಿಕೂಟದ ಸರ್ಕಾರ ಆಗಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಶೇ 14.8ರಷ್ಟು ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿರುವ ಗ್ರೀನ್‌ ಪಾರ್ಟಿಯ (ಇದು ಪರಿಸರಪರ ಹೋರಾಟದ ಪಕ್ಷ) ಬೆಂಬಲದ ಮೇಲೆ ಲಾಷೆಟ್‌ ಮತ್ತು ಶೋಲ್ಸ್‌ ಕಣ್ಣಿಟ್ಟಿದ್ದಾರೆ.

ಉದಾರವಾದಿ ಮತ್ತು ಉದ್ಯಮಪರವಾದ ಎಫ್‌ಡಿಪಿ ಪಕ್ಷದ (ಶೇ 11.5ರಷ್ಟು ಮತ) ಬೆಂಬಲವನ್ನೂ ಈ ಇಬ್ಬರು ಎದುರು ನೋಡುತ್ತಿದ್ದಾರೆ. ಆದರೆ, ಎಫ್‌ಡಿಪಿ ಮತ್ತು ಗ್ರೀನ್‌ ಪಾರ್ಟಿಯ ಸಿದ್ಧಾಂತ ಪರಸ್ಪರ ವ್ಯತಿರಿಕ್ತವಾಗಿದೆ. ಹಾಗಾಗಿ ಎರಡೂ ಪಕ್ಷಗಳನ್ನು ಜತೆಗೂಡಿಸಿ ಮೈತ್ರಿಕೂಟ ರಚಿಸುವುದು ಸುಲಭವಲ್ಲ.

ಬಲಪಂಥೀಯ ಪಕ್ಷ ಆಲ್ಟರ್‌ನೇಟಿವ್‌ ಫಾರ್‌ ಜರ್ಮನಿ ಈ ಬಾರಿ ಶೇ 10.3ರಷ್ಟು ಮತ ಪಡೆದಿದೆ. ಆದರೆ, ಆ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳುವ ಒಲವು ಯಾರಿಗೂ ಇಲ್ಲ. ತೀವ್ರ ಎಡಪಂಥೀಯ ಪಕ್ಷ ಲಿಂಕ್‌ ಪಾರ್ಟಿಗೆ ಶೇ ಐದರಷ್ಟು ಮತ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.