ADVERTISEMENT

ಕೋವಿಡ್‌ ಕೆಡುಕಿನ ಸ್ಥಿತಿಯಲ್ಲೇ ಇದೆ: ಡಬ್ಲ್ಯುಎಚ್‌ಒ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 23:30 IST
Last Updated 19 ಏಪ್ರಿಲ್ 2023, 23:30 IST
   

ಜಿನೀವಾ, ಸ್ವಿಟ್ಜರ್‌ಲೆಂಡ್‌: ಕೋವಿಡ್‌ ಸಾಂಕ್ರಾಮಿಕವು ಇನ್ನೂ ಹೆಚ್ಚು ಕೆಡುಕು ಉಂಟು ಮಾಡುವ, ಊಹಿಸಲು ಅಸಾಧ್ಯವಾದ ಮತ್ತು ತ್ವರಿತ ರೂಪಾಂತರಿ ಸ್ಥಿತಿಯಲ್ಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗುರುವಾರ ಎಚ್ಚರಿಕೆ ನೀಡಿದೆ.

ಕೋವಿಡ್‌ನಿಂದ ಕಳೆದ 28 ದಿನಗಳಲ್ಲಿ ವಿಶ್ವದಾದ್ಯಂತ 30 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. 23 ಸಾವಿರ ಜನರು ಸಾವನ್ನಪ್ಪಿದ್ದಾರೆ. ಕೋವಿಡ್‌ ಪರೀಕ್ಷೆಯನ್ನು ತಗ್ಗಿಸಿರುವಾಗ ಇಷ್ಟೊಂದು ಪ್ರಕರಣಗಳು ದಾಖಲಾಗಿರುವುದು ಮತ್ತು ಸಾವುಗಳು ಸಂಭವಿಸಿರುವುದು ಗಮನಾರ್ಹ ಆಗಿದೆ.

ಸೋಂಕಿನ ಪ್ರಕರಣಗಳ ಸಂಖ್ಯೆ ಒಟ್ಟಾರೆ ತಗ್ಗುತ್ತಿರುವಾಗ, ಸಾವುಗಳು ಸಂಭವಿಸುತ್ತಿರುವುದು ಮತ್ತು ಬಹಳಷ್ಟು ಜನರು ಅನಾರೋಗ್ಯಕ್ಕೆ ಇನ್ನೂ ತುತ್ತಾಗುತ್ತಿರುವುದು ಮುಂದುವರಿದಿದೆ ಎಂದು ಡಬ್ಲ್ಯುಎಚ್‌ಒ ತುರ್ತು ವಿಭಾಗಗಳ ನಿರ್ದೇಶಕ ಮಿಖಾಯಿಲ್‌ ರಿಯಾನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಕೋವಿಡ್ -19 ಕುರಿತು ಡಬ್ಲ್ಯುಎಚ್‌ಒದ ತುರ್ತು ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರುತ್ತಿದೆ. ಮೇ ಆರಂಭದಲ್ಲಿ ಮತ್ತೆ ಸಭೆ ಸೇರಲಿದೆ. ಈ ಸಭೆಯಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದ ಪಥ ಮತ್ತು ಅಸ್ತಿತ್ವದ ಮೌಲ್ಯಮಾಪನದ ಬಗ್ಗೆ ಡಬ್ಲ್ಯುಎಚ್‌ಒ ಮುಖ್ಯಸ್ಥ ಡಾ. ಟೆಡ್ರೊಸ್ ಅಧಾನೊಮ್‌ ಘೆಬ್ರಿಯೆಸಿಸ್‌ ಅವರಿಗೆ ಮತ್ತಷ್ಟು ಸಕಾರಾತ್ಮಕ ಸಲಹೆ ನೀಡಲಾಗುತ್ತದೆ ಎಂದು ರಿಯಾನ್ ಹೇಳಿದರು.

ಸದ್ಯದ ಸ್ಥಿತಿಯಲ್ಲಿ ಕೋವಿಡ್‌ 19 ಅನ್ನು ಸಾಂಕ್ರಾಮಿಕ ರೋಗಗಳ ಪಟ್ಟಿಯಿಂದ ಕೈಬಿಡಲಾಗದು ಎಂದು ರಿಯಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.