ADVERTISEMENT

ಕಮಲಾ ಹ್ಯಾರಿಸ್, ಮಿಶೆಲ್ ಒಮಾಮ, ಹಿಲರಿ: ನೇರಳೆ ಬಣ್ಣದ ಉಡುಪು ಧರಿಸಿದ್ದೇಕೆ?

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 2:06 IST
Last Updated 22 ಜನವರಿ 2021, 2:06 IST
ಮೇರಿ ವೆಚ್ಚಿ ಟ್ವಿಟ್ಟರ್ ಖಾತೆಯಿಂದ ತೆಗೆದ ಚಿತ್ರ
ಮೇರಿ ವೆಚ್ಚಿ ಟ್ವಿಟ್ಟರ್ ಖಾತೆಯಿಂದ ತೆಗೆದ ಚಿತ್ರ   

ವಾಷಿಂಗ್ಟನ್: ನಿನ್ನೆ ಅಮೆರಿಕದಲ್ಲಿ ನಡೆದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪ್ರಮಾಣವಚನ ಸ್ವೀಕಾರ ಸಮಾರಂಭ ನೋಡಿದ್ದವರು ಬಹುಶಃ ಈ ಒಂದು ವಿಷಯವನ್ನು ಗಮನಿಸಿಯೇ ಇರುತ್ತಾರೆ. ಅದೇನೆಂದರೆ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಅಮೆರಿಕದ ಮಾಜಿ ಪ್ರಥಮ ಮಹಿಳೆ ಮಿಶೆಲ್ ಒಮಾಮ ಮತ್ತು ಹಿಲರಿ ಕ್ಲಿಂಟನ್ ಮೂವರೂ ನೆರಳೆ ಬಣ್ಣದ ಉಡುಪನ್ನು ಧರಿಸಿದ್ದರು.

ಅರೆ.. ಅದರಲ್ಲೇನು ವಿಶೇಷ. ಅದು ಕಾಕತಾಳಿಯವಿರಬಹುದು ಅಂದುಕೊಂಡರೆ, ನಿಜಕ್ಕೂ ಅಲ್ಲ. ಇದು ಏಕತೆಯ ಸಂಕೇತ. ಕೆಂಪು ಮತ್ತು ನೀಲಿ ಮಿಶ್ರಣದ ಪ್ರತಿನಿಧಿಯಾಗಿರುವ ನೇರಳೆ ಬಣ್ಣವು ಅಮೆರಿಕದ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ಒಗಟ್ಟಿನ ದ್ಯೋತಕವಾಗಿತ್ತು. ಒಂದರ್ಥದಲ್ಲಿ ಇದು ಕಾರ್ಯಕ್ರಮದ ಥೀಮ್ ಎಂಬಂತೆ ಕಾಣಿಸುತ್ತಿತ್ತು. ಅನೇಕ ಟ್ವೀಟಿಗರು ಸಹ ಇದನ್ನು ಗುರುತಿಸಿದ್ದಾರೆ.


ಮೋಸದಿಂದ ನನ್ನನ್ನು ಎರಡನೇ ಬಾರಿಗೆ ಅಧ್ಯಕ್ಷಗಾದಿಗೇರುವುದನ್ನು ತಪ್ಪಿಸಲಾಗಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಂಪಾಟ, ಕ್ಯಾಪಿಟಲ್ಸ್ ಭವನಕ್ಕೆ ನುಗ್ಗಿ ಟ್ರಂಪ್ ಬೆಂಬಲಿಗರ ದಾಂಧಲೆಯಿಂದ ಇಡೀ ದೇಶ ನೋವಿನ ರಾಜಕೀಯ ವಿಭಜನೆಯನ್ನು ಕಣ್ಣಾರೆ ಕಂಡಿತ್ತು. ಹಾಗಾಗಿ, ದೇಶಕ್ಕೆ ಎರಡೂ ಪಾರ್ಟಿಗಳ ನಡುವೆ ಹೊಂದಾಣಿಕೆ ಆರಂಭವಾಗಿದೆ ಎಂಬುದನ್ನು ಬಿಂಬಿಸಲು ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೂವರೂ ಗಣ್ಯ ಮಹಿಳೆಯರು ನೇರಳೆ ಉಡುಪನ್ನು ಧರಿಸಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ.‌

ADVERTISEMENT

ಪ್ರಮಾಣವಚನದ ಬಳಿಕ ನೂತನ ಅಧ್ಯಕ್ಷ ಜೋ ಬೈಡನ್ ಸಹ ಏಕತೆ ಮತ್ತು ಒಗ್ಗಟ್ಟಿನ ಸಂದೇಶ ಸಾರಿದ್ದರು. ನಾನು ಎಲ್ಲರ ಅಧ್ಯಕ್ಷನಾಗಿರುತ್ತೇನೆ. ನೀಲಿ(ರಿಪಬ್ಲಿಕನ್)ವಾದಿಗಳನ್ನು ಕೆಂಪು(ಡೆಮಾಕ್ರಟಿಕ್) ಅನುಯಾಯಿಗಳ ಮೇಲೆ ಎತ್ತಿಕಟ್ಟುವ ಅನಾಗರಿಕ ಕೊಳಕು ರಾಜಕೀಯವನ್ನು ಬಿಡಬೇಕಿದೆ ಎಂದಿದ್ದರು. ನಾನು ದೇಶದ ಜನರೆಲ್ಲರ ಧ್ವನಿಗೆ ಓಗೊಡುತ್ತೇನೆ ಎಂದು ಭರವಸೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.