ಸ್ಯಾನ್ ಫ್ರಾನ್ಸಿಸ್ಕೊ / ಓರೊವಿಲ್ಲೆ: ಉತ್ತರ ಕ್ಯಾಲಿಫೋರ್ನಿಯಾದ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಕಾಳ್ಗಿಚ್ಚಿಗೆ ಮೂವರು ಬಲಿಯಾಗಿದ್ದು, ಸಾವಿರಾರು ಮಂದಿ ಮನೆಗಳನ್ನು ತೊರೆದಿದ್ದಾರೆ.
ಮೃತಪಟ್ಟ ಮೂವರಲ್ಲಿ, ಇಬ್ಬರನ್ನ ಒಂದು ಪ್ರದೇಶದಲ್ಲಿ, ಮತ್ತೊಬ್ಬರನ್ನು ಬೇರೆ ಪ್ರದೇಶದಲ್ಲಿ ಪತ್ತೆ ಮಾಡಿರುವುದಾಗಿ ಬುಟ್ಟೆ ಕೌಂಟಿಯ ಶರೀಫ್ ಕೋರಿ ಹೊನಿಯಾ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾ ಹೆದ್ದಾರಿ ಗಸ್ತು ಅಧಿಕಾರಿ ಬೆನ್ ಡ್ರಾಪರ್ ಅವರು, ‘ಬೆಂಕಿ ಹೊತ್ತುಕೊಂಡ ಕಾರಿನೊಳಗೆ ವ್ಯಕ್ತಿಯೊಬ್ಬನ್ನು ನೋಡಿದ್ದು, ಆತ ಬೆಂಕಿಯಿಂದ ತಪ್ಪಿಸಿಕೊಳ್ಳಲು ಪರಾದಾಡುತ್ತಿದ್ದ‘ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಈಶಾನ್ಯ ಸ್ಯಾನ್‌ಫ್ರಾನ್ಸಿಸ್ಕೊದ ಕೆಲವೊಂದು ಸಮುದಾಯಗಳಿಗೆ ಈ ಕಾಳ್ಗಿಚ್ಚಿನಿಂದ ತೀವ್ರ ತೊಂದರೆಯುಂಟಾಗಿದೆ. ವಿಪರೀತ ಬಿರುಗಾಳಿ ಬೀಸಿದ ಪರಿಣಾಮ ಬೆಂಕಿಯ ಕೆನ್ನಾಲಿಗೆ 25 ಮೈಲುಗಳ ಉದ್ದಕ್ಕೂ ಬೆಟ್ಟದ ತಪ್ಪಲಿನಲ್ಲಿರುವ ಒಣಗಿದ ಭೂಪ್ರದೇಶವನ್ನು ಸುಟ್ಟು ಹಾಕಿದೆ. ಈ ಪ್ರದೇಶದ ಸುತ್ತಮುತ್ತಲಿದ್ದ ನೂರಾರು ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ.
ಕಾಳ್ಚಿಚ್ಚಿನಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡಗಳ ರೀತಿಯಲ್ಲಿ ದಟ್ಟಹೊಗೆ ಆವರಿಸಿಕೊಂಡಿತು. ಬೆಳಗಿನ ವೇಳೆಯಲ್ಲೇ ಬೀದಿದೀಪಗಳನ್ನು ಬೆಳಗಿಸಲಾಯಿತು. ಸ್ಯಾನ್‌ಫ್ರಾನ್ಸಿಕೊದಿಂದ ಸಿಯಾಟಲ್‌ವರೆಗೆ ಹೆದ್ದಾರಿಯಲ್ಲಿ ಸಾಗುತ್ತಿದ್ದವರು ತಮ್ಮ ವಾಹನಗಳ ಲೈಟ್‌ಗಳನ್ನು ಆನ್ ಮಾಡಿಕೊಂಡಿದ್ದರು.
ಬೆಳಿಗ್ಗೆ 9 ಗಂಟೆಯಾದರೂ ಸೂರ್ಯೋದಯದ ಸೂಚನೆಯೇ ಕಾಣಲಿಲ್ಲ ಎಂದು ಕ್ಯಾಲಿಫೋರ್ನಿಯಾ ಹೆದ್ದಾರಿ ಗೋಲ್ಡರ್ ಗೇಟ್ ವಿಭಾಗ ಟ್ವೀಟ್ ಮಾಡಿದೆ. ವಾಹನ ಚಾಲಕರು ಹೆಡ್‌ಲೈಟ್ ಹಾಕಿಕೊಂಡು, ವಾಹನಗಳನ್ನು ನಿಧಾನವಾಗಿ ಓಡಿಸುವಂತೆ ಸೂಚನೆ ನೀಡಿತ್ತು. ಇಷ್ಟೆಲ್ಲ ಹೊಗೆ ಆವರಿಸಿಕೊಂಡಿದ್ದರೂ, ಗಾಳಿಯ ಗುಣಮಟ್ಟದ ಸೂಚ್ಯಂಕ ಅನಾರೋಗ್ಯಕರ ಮಟ್ಟ ತಲುಪಿರಲಿಲ್ಲ.
ಶುಕ್ರವಾರದವರೆಗೆ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದುವಾಯು ಗುಣಮಟ್ಟ ನಿರ್ವಹಣಾ ಕೇಂದ್ರದ ವಕ್ತಾರ ರಾಲ್ಫ್ ಬೋರ್ಮನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.