ADVERTISEMENT

ಅಫ್ಗಾನಿಸ್ತಾನದಲ್ಲಿರುವ ಭಾರತೀಯರ ಸುರಕ್ಷತೆಗೆ ಎಲ್ಲಾ ಕ್ರಮ: ವಿದೇಶಾಂಗ ಇಲಾಖೆ

ಪಿಟಿಐ
Published 16 ಆಗಸ್ಟ್ 2021, 15:47 IST
Last Updated 16 ಆಗಸ್ಟ್ 2021, 15:47 IST
ಕಾಬೂಲ್ ಏರ್‌ಪೋರ್ಟ್‌ನಲ್ಲಿ ವಿಮಾನಕ್ಕಾಗಿ ಕಾಯುತ್ತಿರುವ ಜನರು: ಎಎಫ್‌ಪಿ ಚಿತ್ರ
ಕಾಬೂಲ್ ಏರ್‌ಪೋರ್ಟ್‌ನಲ್ಲಿ ವಿಮಾನಕ್ಕಾಗಿ ಕಾಯುತ್ತಿರುವ ಜನರು: ಎಎಫ್‌ಪಿ ಚಿತ್ರ   

ನವದೆಹಲಿ: ಅಫ್ಗಾನಿಸ್ತಾನದ ಪರಿಸ್ಥಿತಿಯನ್ನು ಭಾರತವು ನಿರಂತರವಾಗಿ ಗಮನಿಸುತ್ತಿದೆ. ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ಹಾಗೂ ಅಲ್ಲಿ ಭಾರತದ ಹಿತಾಸಕ್ತಿಗಳನ್ನು ಕಾ‍ಪಾಡಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ವಿದೇಶಾಂಗ ಇಲಾಖೆ ತನ್ನ ಮೊದಲ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಭಾರತವು ಅಫ್ಘಾನಿಸ್ತಾನದ ಸಿಖ್ ಮತ್ತು ಹಿಂದೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಆ ದೇಶವನ್ನು ತೊರೆಯಲು ಇಚ್ಛಿಸುವವರನ್ನು ವಾಪಸ್ ಕರೆಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಹೇಳಿದ್ದಾರೆ.

‘ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ನಿರಂತರವಾಗಿ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಫ್ಗಾನಿಸ್ತಾನದಲ್ಲಿ ಭಾರತೀಯರು ಹಾಗೂ ನಮ್ಮ ದೇಶದ ಹಿತಾಸಕ್ತಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ’ಎಂದು ಬಾಗ್ಚಿ ಹೇಳಿದ್ದಾರೆ.

ADVERTISEMENT

ಆಫ್ಗಾನ್ ಅಧ್ಯಕ್ಷ ಅಶ್ರಫ್ ಘನಿ ಅಜ್ಞಾತ ಸ್ಥಳಕ್ಕೆ ತೆರಳಿದ ನಂತರ ಭಾನುವಾರ ಸಂಜೆ ಕೆಲವೇ ಗಂಟೆಗಳಲ್ಲಿ ಕಾಬೂಲ್‌ ನಗರವನ್ನು ತಾಲಿಬಾನ್ ಆಕ್ರಮಿಸಿಕೊಂಡಿತು.

‘ಕಳೆದ ಕೆಲವು ದಿನಗಳಲ್ಲಿ ಕಾಬೂಲ್‌ನಲ್ಲಿ ಭದ್ರತಾ ಪರಿಸ್ಥಿತಿ ಗಣನೀಯವಾಗಿ ಹದಗೆಟ್ಟಿದೆ. ನಾವು ಮಾತನಾಡುವಾಗಲೂ ಅದು ವೇಗವಾಗಿ ಬದಲಾಗುತ್ತಿದೆ’ಎಂದು ಬಾಗ್ಚಿ ಹೇಳಿದರು.

ಪರಸ್ಪರ ಅಭಿವೃದ್ಧಿ, ಶೈಕ್ಷಣಿಕ ಮತ್ತು ಮುಂತಾದ ಪ್ರಯತ್ನಗಳಲ್ಲಿ ಭಾರತದ ಪಾಲುದಾರರಾಗಿರುವ ಹಲವಾರು ಅಫ್ಘಾನಿಸ್ತಾನಿಗಳಿದ್ದಾರೆ. ಭಾರತವು ಅವರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಅವರು ಅವರು ಹೇಳಿದರು.

‘ಭಾರತಕ್ಕೆ ತಕ್ಷಣ ಹಿಂದಿರುಗಬೇಕೆಂಬ ಸೂಚನೆ ಸೇರಿದಂತೆ ನಾವು ಆ ದೇಶದಲ್ಲಿರುವ ಭಾರತೀಯರ ರಕ್ಷಣೆ ಮತ್ತು ಸುರಕ್ಷತೆಗಾಗಿ ನಿಯಮಿತವಾಗಿ ಸಲಹೆಗಳನ್ನು ನೀಡುತ್ತಿದ್ದೇವೆ’ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.