ADVERTISEMENT

ಆಫ್ಗನ್‌ ಮಹಿಳೆಯರ ರಕ್ಷಣೆಗಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಕಳುಹಿಸಲು ಮನವಿ

ಏಜೆನ್ಸೀಸ್
Published 16 ಜುಲೈ 2021, 7:06 IST
Last Updated 16 ಜುಲೈ 2021, 7:06 IST
.
.   

ವಿಶ್ವಸಂಸ್ಥೆ: ಅಮೆರಿಕ ಮತ್ತು ನ್ಯಾಟೊ ಪಡೆಗಳ ರಕ್ಷಣೆಯಲ್ಲಿ ಎರಡು ದಶಕಗಳ ಕಾಲ ಅಫ್ಗಾನಿಸ್ತಾನದ ಮಹಿಳೆಯರು ಪಡೆದುಕೊಂಡಿರುವ ಹಕ್ಕುಗಳನ್ನು ರಕ್ಷಿಸುವಂತೆ ಮಹಿಳಾ ಹಕ್ಕುಗಳ ಬೆಂಬಲಿಗರು ಮತ್ತು ನಾಯಕರು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ಕೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಅಮೆರಿಕ ನಿಯೋಜಿಸಿರುವ ಸೈನಿಕರನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಂಡ ನಂತರ, ತಾಲಿಬಾನಿಗಳು ದೇಶವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ತಾಲಿಬಾನ್‌ ಆಳ್ವಿಕೆಯಲ್ಲಿ, ಮಹಿಳೆಯರು ಶಾಲೆಗೆ ಹೋಗಲು ಅವಕಾಶ ನೀಡುವುದಿಲ್ಲ. ಮಹಿಳೆಯರು, ಪುರುಷರ ರಕ್ಷಣೆಯಿಲ್ಲದೇ, ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಸೂಚನೆ ಲಭಿಸುತ್ತಿದ್ದಂತೆಯೇ ಈ ಒತ್ತಾಯವೂ ಪ್ರಬಲವಾಗತೊಡಗಿದೆ.

ಪುರುಷ ಪ್ರಧಾನ ಸಮಾಜದಲ್ಲಿ ಈಗಲೂ ಆಫ್ಗನ್‌ ಮಹಿಳೆಯರು ಹಲವು ಸವಾಲುಗಳನ್ನು ಎದುರಿಸುತ್ತಿದ್ದರೂ, ಅವರು ಇಂದು ಹಲವು ಕ್ಷೇತ್ರಗಳಲ್ಲಿ ಪ್ರಬಲವಾದ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಅಮೆರಿಕ ಸೇನೆ ಅಫ್ಗನ್ ತೊರೆದು, ತಾಲಿಬಾನಿಗಳು ದೇಶವನ್ನು ಸ್ವಾಧೀನಪಡಿಸಿಕೊಂಡ ಮೇಲೆ, ಮಹಿಳೆಯರಿಗಿರುವ ಈ ಎಲ್ಲ ಸೌಕರ್ಯಗಳನ್ನು ಕಸಿದುಕೊಳ್ಳಬಹುದು ಎಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಕುರಿತು 140 ನಾಗರಿಕ ಸಂಘಟನೆಗಳು ಮತ್ತು ಅಮೆರಿಕ, ಅಫ್ಗಾನಿಸ್ತಾನ ಮತ್ತು ಇತರೆ ದೇಶಗಳಲ್ಲಿರುವ ನಾಯಕರು, ಮೇ 14ರಂದು ಬರೆದಿರುವ ಪತ್ರದ ಪ್ರತಿಯೊಂದು ಸುದ್ದಿ ಸಂಸ್ಥೆಗೆ ಲಭ್ಯವಾಗಿದೆ. ಅದರಲ್ಲಿ ಅಫ್ಗಾನಿಸ್ಥಾನದ ಮಹಿಳೆಯರ ಶಿಕ್ಷಣ ಮತ್ತು ಹಕ್ಕುಗಳ ರಕ್ಷಣೆಗಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ನಿಯೋಜಿಸುವಂತೆ, ವಿವಿಧ ಸಂಘಟನೆಗಳು, ಮಹಿಳಾ ಹಕ್ಕುಗಳ ಹೋರಾಟಗಾರರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಕೇಳಿದ್ದಾರೆ.

ಇದೇ ಪತ್ರದಲ್ಲಿ ಅಫ್ಗಾನಿಸ್ತಾನದ ಮ‌ಹಿಳೆಯರು ಮತ್ತು ಬಾಲಕಿಯರು ಮತ್ತು ಹಜಾರಸ್‌ನಂತಹ ಧಾರ್ಮಿಕ ಅಲ್ಪಸಂಖ್ಯಾತರನ್ನು ಬಲಪಡಿಸಲು ಅಫ್ಗಾನಿಸ್ತಾನಕ್ಕೆ ಮಾನವೀಯ ಮತ್ತು ಅಭಿವೃದ್ಧಿಯ ನೆರವನ್ನು ಹೆಚ್ಚಿಸುವಂತೆ ಅಮೆರಿಕವನ್ನು ಕೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.