ADVERTISEMENT

ಪಿಡುಗು ನಿರ್ವಹಣೆ: ಅಂತರರಾಷ್ಟ್ರೀಯ ಒಡಂಬಡಿಕೆಗೆ ಒತ್ತಾಯ

ಏಜೆನ್ಸೀಸ್
Published 30 ಮಾರ್ಚ್ 2021, 10:43 IST
Last Updated 30 ಮಾರ್ಚ್ 2021, 10:43 IST
ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷೆ ಚಾರ್ಲ್ಸ್‌ ಮಿಷೆಲ್‌, ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕ ಟೆಡ್ರೋಸ್‌ ಅಧನೋಮ್‌ ಅವರು ಬ್ರಸೆಲ್ಸ್‌ನಲ್ಲಿ ನಡೆದ ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು –ರಾಯಿಟರ್ಸ್‌ ಚಿತ್ರ
ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷೆ ಚಾರ್ಲ್ಸ್‌ ಮಿಷೆಲ್‌, ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕ ಟೆಡ್ರೋಸ್‌ ಅಧನೋಮ್‌ ಅವರು ಬ್ರಸೆಲ್ಸ್‌ನಲ್ಲಿ ನಡೆದ ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು –ರಾಯಿಟರ್ಸ್‌ ಚಿತ್ರ   

ಲಂಡನ್‌ (ಎಪಿ): ಭವಿಷ್ಯದಲ್ಲಿ ಬಾಧಿಸುವ ಪಿಡುಗುಗಳ ಸಮರ್ಥ ನಿರ್ವಹಣೆಗಾಗಿ ಅಂತರರಾಷ್ಟ್ರೀಯ ಮಟ್ಟದ ಒಡಂಬಡಿಕೆ ಅಗತ್ಯವಿದೆ ಎಂದು 20 ಹೆಚ್ಚು ದೇಶಗಳ ಮುಖ್ಯಸ್ಥರು, ಸಂಘಟನೆಗಳ ಪ್ರತಿನಿಧಿಗಳು ಮಂಗಳವಾರ ಹೇಳಿದ್ದಾರೆ.

‘ಮುಂದಿನ ಪೀಳಿಗೆಗಳನ್ನು ರೋಗಗಳಿಂದ ರಕ್ಷಿಸುವುದು ವಿಶ್ವ ಸಮುದಾಯದ ಹೊಣೆ. ಈ ನಿಟ್ಟಿನಲ್ಲಿ ಎಲ್ಲ ದೇಶಗಳು ಸಾಂಘಿಕ ಬದ್ಧತೆಯನ್ನು ಪ್ರದರ್ಶಿಸಬೇಕಾಗಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್‌ ಅಧನೋಮ್ ಗೆಬ್ರೆಯೇಸಸ್‌, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಇಟಲಿಯ ಮುಖಂಡ ಮಾರಿಯೊ ಡ್ರಾಗಿ, ರವಾಂಡದ ಪಾಲ್‌ ಕಗಾಮೆ ಹೇಳಿದ್ದಾರೆ.

ಬ್ರಸೆಲ್ಸ್‌ನಲ್ಲಿ ನಡೆದ ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ಗೆಬ್ರೆಯೇಸಸ್‌ ಅವರು ಈ ಒಪ್ಪಂದದ ಕುರಿತು ವಿವರಿಸಿದರು.

ADVERTISEMENT

‘ಬರುವ ದಿನಗಳಲ್ಲಿ ಮನುಕುಲವನ್ನು ಬಾಧಿಸುವ ಯಾವುದೇ ಪಿಡುಗನ್ನು ಎದುರಿಸಲು ವಿಶ್ವ ಸಮುದಾಯ ಸನ್ನದ್ಧವಾಗಿರುವಂತೆ ನೋಡಿಕೊಳ್ಳಬೇಕು. ಅಗತ್ಯ ಆರೋಗ್ಯ ಮೂಲಸೌಕರ್ಯಗಳನ್ನು ಹೊಂದಿರಬೇಕು. ಈ ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಂವಿಧಾನದಲ್ಲಿಯೇ ಅಳವಡಿಸಬೇಕು’ ಎಂದೂ ವಿಶ್ವ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

‘ಕೋವಿಡ್‌–19 ಕಲಿಸಿರುವ ಪಾಠದಿಂದ ನಾವು ಎಚ್ಚೆತ್ತುಕೊಳ್ಳಬೇಕಿದೆ. ದಿಢೀರ್‌ ಎದುರಾದ ಪಿಡುಗನ್ನು ನಿಭಾಯಿಸಲು ಯಾವ ದೇಶವೂ ತಯಾರಿರಲಿಲ್ಲ ಎಂಬುದನ್ನು ಕೋವಿಡ್‌–19 ತೋರಿಸಿಕೊಟ್ಟಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.