ADVERTISEMENT

ಉಗ್ರರಿಂದ ಸಂಭಾವ್ಯ ದುಷ್ಕೃತ್ಯ ತಪ್ಪಿಸಲು ಪ್ರತಿದಾಳಿ ಅನಿವಾರ್ಯ: ಭಾರತ

ವಿಶ್ವಸಂಸ್ಥೆಯಲ್ಲಿ ಪರೋಕ್ಷವಾಗಿ ಪಾಕ್‌ ವಿರುದ್ಧ ಟೀಕೆ

ಪಿಟಿಐ
Published 25 ಫೆಬ್ರುವರಿ 2021, 9:53 IST
Last Updated 25 ಫೆಬ್ರುವರಿ 2021, 9:53 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ವಿಶ್ವಸಂಸ್ಥೆ: ನೆರೆಯ ರಾಷ್ಡ್ರವೊಂದರಲ್ಲಿ ಸಕ್ರಿಯವಾಗಿರುವ ಸಂಘಟನೆಯಿಂದ ತನ್ನ ಮೇಲೆ ವಿಧ್ವಂಸಕ ದಾಳಿ ಸನ್ನಿಹಿತ ಎಂಬುದು ಗೊತ್ತಾದಾಗ ದೇಶವೊಂದು ದುರಂತ ತಪ್ಪಿಸಲು ಪ್ರತಿ ದಾಳಿ ನಡೆಸಬೇಕಾಗುತ್ತದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ.

ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾದ ಮೆಕ್ಸಿಕೊ ಆಯೋಜಿಸಿದ್ದ ಔಪಚಾರಿಕ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಕಾಯಂ ಪ್ರತಿನಿಧಿ ಕೆ.ನಾಗರಾಜ ನಾಯ್ಡು, ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ಕೃತ್ಯ, ಗಡಿಯಾಚೆ ನಡೆಯುತ್ತಿರುವ ಉಗ್ರ ಚಟುವಟಿಕೆಗಳನ್ನು ಪ್ರಸ್ತಾಪಿಸಿದ ಅವರು, ‘ನೆರೆಯ ರಾಷ್ಡ್ರವೊಂದರ ನೆಲೆದಿಂದ ನಮ್ಮ ಮೇಲೆ ಉಗ್ರ ಸಂಘಟನೆಗಳು ದಾಳಿ ನಡೆಸುತ್ತಿವೆ. ಆ ದೇಶದ ಸಾರ್ವಭೌಮತೆಯನ್ನು ತಮ್ಮ ದುಷ್ಕೃತ್ಯಗಳಿಗೆ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿವೆ’ ಎಂದೂ ಹೇಳಿದರು.

ADVERTISEMENT

‘ಸಂದರ್ಭಕ್ಕೆ ತಕ್ಕಂತೆ ತನ್ನ ರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದು ಒಂದು ದೇಶದ ಪರಮಾಧಿಕಾರವಾಗಿದೆ’ ಎಂದು ಹೇಳುವ ಮೂಲಕ ಅವರು ಭಾರತ ಕೈಗೊಂಡ ಉಗ್ರ ನಿಗ್ರಹ ಕಾರ್ಯಾಚರಣೆಗಳನ್ನು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.