ವಾಷಿಂಗ್ಟನ್: ರಷ್ಯಾ ಆರಂಭಿಸಿರುವ ಯುದ್ಧವನ್ನು ತಾನಾಗಿಯೇ ಕೊನೆಗೊಳಿಸಲೇಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಸೋಮವಾರ ಆಗ್ರಹಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಐರೋಪ್ಯ ಒಕ್ಕೂಟದ ನಾಯಕರ ಜತೆ ಶ್ವೇತ ಭವನದಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ಝೆಲೆನ್‌ಸ್ಕಿ ವಾಷಿಂಗ್ಟನ್‌ಗೆ ಆಗಮಿಸಿದ್ದಾರೆ.
ಈ ವೇಳೆ ಮಾತನಾಡಿರುವ ಅವರು, ‘ಉಕ್ರೇನ್ ಪ್ರಜೆಗಳು ತಮ್ಮ ಭೂಮಿ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ. ಈ ಯುದ್ಧವನ್ನು ಶುರು ಮಾಡಿದ್ದು ರಷ್ಯಾ. ಹೀಗಾಗಿ, ಯುದ್ಧವನ್ನು ಅದೇ ರಾಷ್ಟ್ರ ಕೊನೆಗೊಳಿಸಬೇಕಿದೆ’ ಎಂದು ಹೇಳಿದ್ದಾರೆ.
ಉಕ್ರೇನ್–ರಷ್ಯಾ ಯುದ್ಧವನ್ನು ಅಂತ್ಯಗೊಳಿಸುವ ಸಲುವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಡುವೆ ನಡೆದ ಅಲಾಸ್ಕದಲ್ಲಿ ಭಾನುವಾರ ಸಭೆ ನಡೆದಿತ್ತು.
ಝೆಲೆನ್‌ಸ್ಕಿಗೆ ಐರೋಪ್ಯ ನಾಯಕರ ಬೆಂಬಲ ರಷ್ಯಾ–ಉಕ್ರೇನ್ ಯುದ್ಧ ವಿಚಾರವಾಗಿ ಟ್ರಂಪ್ ಜತೆಗೆ ನಡೆಯಲಿರುವ ಸಭೆಗೆ ಝೆಲೆನ್‌ಸ್ಕಿ ಐರೋಪ್ಯ ರಾಷ್ಟ್ರಗಳ ಪ್ರಭಾವಿ ನಾಯಕರ ಜತೆಗೆ ಹಾಜರಾಗಲಿದ್ದಾರೆ. ಐರೋಪ್ಯ ಒಕ್ಕೂಟದ ಅಧ್ಯಕ್ಷ ಉರ್ಸುಲಾ ವಾನ್ ಡೇರ್ ಲೇಯನ್ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಬ್ರಿಟಿಷ್ ಪ್ರಧಾನಿ ಕಿಯರ್ ಸ್ಟಾರ್ಮರ್ ಜರ್ಮನ್ ಚಾನ್ಸಲರ್ ಫೆಡ್ರಿಷ್ ಮೆರ್ಜ್ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.