ADVERTISEMENT

ಮ್ಯಾಂಚೆಸ್ಟರ್‌ನಲ್ಲಿ ‘ಹನುಮನುದಿಸಿದ ನಾಡು’!

ಐ.ಎಂ.ವಿಠಲಮೂರ್ತಿ
Published 13 ಏಪ್ರಿಲ್ 2014, 19:30 IST
Last Updated 13 ಏಪ್ರಿಲ್ 2014, 19:30 IST
ಮ್ಯಾಂಚೆಸ್ಟರ್‌ನಲ್ಲಿ ‘ಹನುಮನುದಿಸಿದ ನಾಡು’!
ಮ್ಯಾಂಚೆಸ್ಟರ್‌ನಲ್ಲಿ ‘ಹನುಮನುದಿಸಿದ ನಾಡು’!   

ಒಂದು ಕಾಲದಲ್ಲಿ ಹಳ್ಳಿಗಳಿಗೆ ವಿವಿಧ ಬಣ್ಣ­ಗಳ ವೇಷ ಧರಿಸಿದ ಬಹುರೂಪಿ­ಗಳು ಬರು­ತ್ತಿದ್ದರು. ನನಗೆ ತುಂಬ ಇಷ್ಟ­ವಾಗುತ್ತಿದ್ದ ವೇಷಧಾರಿ ಎಂದರೆ ಬುಡ­ಬುಡಿಕೆ ಸಿದ್ಧ. ಅವನ ಬಣ್ಣ ಬಣ್ಣದ ಬಟ್ಟೆಗಳ ಸುತ್ತು ಪೇಟ, ಸ್ವಲ್ಪ ಭಯ ಮೂಡಿಸುವ ಮೀಸೆ, ಹಣೆಯಲ್ಲಿ ಸ್ಮಶಾನ ರುದ್ರನ ವಿಭೂತಿ, ಕುಂಕುಮ, ಗಂಧ–ತಿಲಕ... ಎಲ್ಲಾ ಚಿತ್ರ–ವಿಚಿತ್ರವಾಗಿದ್ದವು.

ಅವನ ಮುಖ ನೋಡಿದರೆ ಒಂದು ಈಸ್ಟ್‌ಮನ್‌ ಕಲರ್ ಸಿನಿಮಾದ ದೃಶ್ಯ ಕಣ್ಮುಂದೆ ಬರುತ್ತಿತ್ತು. ಒಂದು ಹಳೆಯ ಕೋಟು, ಗಿಡ್ಡನೆ ಕಚ್ಚೆ ಪಂಚೆ, ಬಿಸಿಲು, ಮಳೆಯೆನ್ನದೆ ಊರೂರು ತಿರುಗಿ, ತಿರುಗಿ ಒರಟಾಗಿ ಒಡೆದು ಚೂರುಚೂರಾಗಿದ್ದ ಮೊಸಳೆ ಚರ್ಮದ ಪಾದ­ಗಳು, ಕಟ್ಟುಮಸ್ತಾದ ತುಂಬಿದ ಮೈಕಟ್ಟು. ಅವನು ಮನೆಯೆದುರು ನಿಂತು ಬುಡಬುಡಿಕೆ ನುಡಿ­ಸಿದನೆಂದರೆ ಯಾವುದೇ ಆಟದಲ್ಲಿ ತೊಡಗಿ­ದ್ದರೂ ನನ್ನಂತಹ ಹುಡುಗರು ಅವನ ಬಳಿ ಹಾಜರಾಗುತ್ತಿದ್ದೆವು. ಯಾರು ಕೇಳಲಿ, ಬಿಡಲಿ ಭವಿಷ್ಯ ನುಡಿದು ಭಿಕ್ಷೆ ಬೇಡುತ್ತಿದ್ದ.

ಕೇಳಲು ಆಸಕ್ತರಂತೆ ಕಂಡರೆ ಅವನ ಭವಿಷ್ಯಕ್ಕೆ ತಡೆಯೇ ಇರುತ್ತಿರಲಿಲ್ಲ. ಅವನ ಸುತ್ತಮುತ್ತ ನಾವು ಜಮಾಯಿಸಿ ಕಣ್ಣು–ಬಾಯಿ ಬಿಟ್ಟು ಕೇಳುತ್ತಿದ್ದರೆ, ನಮ್ಮ ಕೈಹಿಡಿದೆಳೆದು, ಹಸ್ತನೋಡಿ ಸ್ವಾರಸ್ಯಕರ ಭವಿಷ್ಯ ನುಡಿಯುತ್ತಿದ್ದ. ‘ಇವನು ದೊಡ್ಡವನಾಗಿ ದೇಶ ಆಳುತ್ತಾನೆ, ಇವನು ಬಹಳ ಧೈರ್ಯವಂತ, ಇವನು ಮುಂದೆ ಪ್ರಪಂಚ ಸುತ್ತುತ್ತಾನೆ, ಹಾಗೆ, ಹೀಗೆ’ ಎಂದು ಇನ್ನೂ ಏನೇನೋ ಹೇಳುತ್ತಿದ್ದ. ಇದು ಊರಿನ ಎಲ್ಲ ಮಕ್ಕಳಿಗೂ ಹೇಳುತ್ತಿದ್ದ ಭವಿಷ್ಯ! ‘ಇವನು ಪ್ರಪಂಚ ಸುತ್ತುತ್ತಾನೆ’ ಎಂದು ನುಡಿದ ಒಂದು ಮಾತು ನನ್ನ ಮನಸ್ಸಿನ ಮೂಲೆಯಲ್ಲಿ ಉಳಿ­ದಿತ್ತು. ಬುಡಬುಡಿಕೆ  ಸಿದ್ಧ ಊರಿನ ಎಲ್ಲ ಮಕ್ಕಳಿಗೆ ಅದೇ ಮಾತನ್ನು ಹೇಳಿದ್ದರೂ ನನ್ನ ಲೋಕ ಸಂಚಾರದ ಕುರಿತು ನುಡಿದ ಭವಿಷ್ಯ ಮಾತ್ರ ನಿಜವಾಯ್ತು.

ಅದು 1988ನೇ ಇಸ್ವಿ. ರಾಮಕೃಷ್ಣ ಹೆಗಡೆ­ಯವರು ಮುಖ್ಯಮಂತ್ರಿಗಳಾಗಿದ್ದ ಸಮಯ. ಯು.ಕೆ. ಬಳಗದ ಅಧ್ಯಕ್ಷೆ ಡಾ.ಕೆ.ಭಾನುಮತಿ ತಮ್ಮ ಕಲ್ಪನೆ ಕೂಸಾದ ‘ಮ್ಯಾಂಚೆಸ್ಟರ್‌ ವಿಶ್ವ ಕನ್ನಡ ಸಮ್ಮೇಳನ’ದ ಪ್ರಸ್ತಾವವೊಂದನ್ನು ಸರ್ಕಾ­ರದ ಮುಂದಿಟ್ಟರು. ಅದನ್ನೊಪ್ಪಿದ ಮುಖ್ಯ­ಮಂತ್ರಿ­ಗಳು ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆಗಳಿಗೆ ಸಮ್ಮೇಳನ ನಿರ್ವಹಣೆ ಜವಾ­ಬ್ದಾರಿ ವಹಿಸಿದರು. ಸಚಿವ ಎಂ.ಪಿ. ಪ್ರಕಾಶ್‌ ಅವರ ನೇತೃತ್ವದಲ್ಲಿ ಕಾರ್ಯ ಯೋಜನೆ ತಯಾ­ರಾಯ್ತು. ಸಾಂಸ್ಕೃತಿಕ ನಿಯೋಗವನ್ನು ಕೊಂಡೊ­ಯ್ಯುವ ಜವಾಬ್ದಾರಿ ನನ್ನ ಪಾಲಿಗೆ ಬಂತು. ವಾರ್ತಾ ಇಲಾಖೆಯ ನಿರ್ದೇಶಕ ಡಾ.ಎಸ್‌. ಕೃಷ್ಣ­ಮೂರ್ತಿ ಅವರಿಗೆ ಸರ್ಕಾರದ ಸಾಧನೆ­ಗಳನ್ನು ಪರಿಚಯಿಸುವ ಹೊಣೆ ನೀಡಲಾಯ್ತು.

ವಿವಿಧ ಅಕಾಡೆಮಿಗಳೊಂದಿಗೆ ಸಮಾಲೋ­ಚಿಸಿ ಸಮ್ಮೇಳನದಲ್ಲಿ ಭಾಗವಹಿಸುವವರ ಪಟ್ಟಿ ತಯಾರಿಸಲಾಯ್ತು.  ಸಾಹಿತಿ ಡಾ. ಶಿವರಾಮ ಕಾರಂತರಂತಹ ಹಿರಿಯರಿಂದ ಸಾಲಿಗ್ರಾಮ ಮಕ್ಕಳ ಯಕ್ಷಗಾನ ತಂಡದ ಕಿರಿಯ ಮಕ್ಕಳ­ವರೆಗೂ ಒಂದು ಪ್ರತಿಭಾನ್ವಿತರ ನಿಯೋಗ ಸಿದ್ಧ­ವಾಯ್ತು. ಅದೊಂದು ಅಪರೂಪದ ಸಾಂಸ್ಕೃತಿಕ ತಂಡ. ಆಯ್ಕೆಗೆ ಒಂದು ಮಾನದಂಡವಿತ್ತು. ಅದರಂತೆ ಸಾಹಿತಿ, ಕಲಾವಿದರ ತಂಡ ಆಯ್ಕೆ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ ರಾಮಕೃಷ್ಣ ಹೆಗಡೆ, ಜೀವರಾಜ ಆಳ್ವ ಮತ್ತು ಎಂ.ಪಿ. ಪ್ರಕಾಶ್‌ ಸ್ಮರಣೀಯರು.
ವರ್ಷದ ಅತ್ಯುತ್ತಮ ನಟ–ನಟಿ ಪ್ರಶಸ್ತಿ ಪಡೆ­ದಿದ್ದ ಅನಂತನಾಗ್‌ ಮತ್ತು ಗೀತಾ, ಕಲಾತ್ಮಕ ಕ್ರಿಕೆಟ್‌ ಆಟಗಾರ ಜಿ.ಆರ್‌. ವಿಶ್ವನಾಥ್‌, ಗಾಯಕ ಸಿ. ಅಶ್ವತ್ಥ್‌, ಕಲಾವಿದರಾದ ಡಾ. ರೋಹಿಣಿ ಮೋಹನ್‌, ನರಸಿಂಹಲು ವಡವಾಟಿ, ಚಂದ್ರಶೇಖರ್‌, ಪ್ರತಿಭಾ ಪ್ರಹ್ಲಾದ್‌, ಶುಭಾ ಧನಂಜಯ, ರಾಮು ಅವರಿಗೆಲ್ಲ ಮ್ಯಾಂಚೆಸ್ಟರ್‌ ವಿಶ್ವ ಕನ್ನಡ ಸಮ್ಮೇಳನ ಒಂದು ಅಂತರ­ರಾಷ್ಟ್ರೀಯ ವೇದಿಕೆ ಒದಗಿಸಿತ್ತು. ಮುಂದಿನ ದಿನ­ಗಳಲ್ಲಿ ದೊಡ್ಡ ಹೆಸರು ಮಾಡಿದರು. ರಾಜ್ಯಕ್ಕೆ ಗೌರವವನ್ನೂ ತಂದರು.

ಶ್ರೀನಿವಾಸಪ್ರಭು, ಕೃಷ್ಣೇಗೌಡ, ರಿಚರ್ಡ್ಸ್‌ ಅವರ ನಾಟಕ ತಂಡ ಬಹು ಜನಪ್ರಿಯವಾಯ್ತು. ನಾಟಕಕ್ಕಿಂತ ಅವರ ಜಾಲಿಬಾರಿನ ಪೋಲಿ ಹಾಡು­ಗಳು ಎಲ್ಲರನ್ನೂ ಸೆಳೆದಿದ್ದವು! ಈ ಸಮ್ಮೇ­ಳನಕ್ಕೆ ಅತಿಥಿಗಳಾಗಿ ಬಂದಿದ್ದ ಶಂಕರನಾಗ್‌, ಶ್ರೀನಾಥ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಒಂದು ಹೊಸ ಆಯಾಮ ನೀಡಿದರು. ಶಂಕರ­ನಾಗ್‌ ನಮ್ಮ ತಂಡದಲ್ಲಿ ಮಿಂಚಿನ ಸಂಚಾರ ಮೂಡಿಸಿ ಚಳಿಬಿಟ್ಟು ಹಾಡುವಂತೆ, ಕುಣಿಯು­ವಂತೆ ಮಾಡಿದರು. ಈಗ ಶಂಕರನಾಗ್‌ ಮತ್ತು ಸಿ. ಅಶ್ವತ್ಥ್‌ ನಮ್ಮ ನಡುವೆ ಇಲ್ಲ. ಅವರ ಅದಮ್ಯ ಜೀವನ ಪ್ರೀತಿ, ಬೆಚ್ಚನೆಯ ಬಾಂಧವ್ಯ ಎಂದೆಂದಿಗೂ ಮರೆಯಲಾಗದ ಅನುಭವ. ಶಂಕರ­ನಾಗ್‌ ನಂದಿಬೆಟ್ಟಕ್ಕೆ ಒಂದು ರೋಪ್‌ವೇ ಮಾಡುವ ಕನಸು ಹೊತ್ತು ಇಂಗ್ಲೆಂಡ್‌ನಲ್ಲಿ ಹೂಡಿಕೆ­ದಾರರನ್ನು ಆರಿಸಿ ಬಂದಿದ್ದರು. ಅವರೊಬ್ಬ ಅಪರೂಪದ ಕನಸುಗಾರ.

ಲಂಡನ್‌ನಲ್ಲಿ ನಮಗೆ ಭಾರತೀಯ ವಿದ್ಯಾ­ಭವ­ನದಲ್ಲಿ ವಾಸ್ತವ್ಯದ ಏರ್ಪಾಟಾಗಿತ್ತು. ಭವ­ನದ ಡಾ.ಮತ್ತೂರು ಕೃಷ್ಣಮೂರ್ತಿಯವರ ಸೌಜನ್ಯ, ಪಾಂಡಿತ್ಯ, ಲಂಡನ್‌ನಲ್ಲಿ ಅವರಿಗಿದ್ದ ಅಪಾರ ಸಂಪರ್ಕಗಳು... ಅಬ್ಬಾ, ಅವರು ನಿಜ­ವಾದ ಅರ್ಥದಲ್ಲಿ ಸಾಂಸ್ಕೃತಿಕ ರಾಯಭಾರಿ. ನಮ್ಮ ತಂಡದ ಸದಸ್ಯರು ವಿದ್ಯಾಭವನದ ಆಹ್ವಾ­ನಿತರಿಗೆ ಒಂದು ಕಾರ್ಯಕ್ರಮ ನೀಡಿದರು. ನಮ್ಮ ಕಲಾವಿದರನ್ನು ಎಲ್ಲರೂ ಮುಕ್ತಕಂಠದಿಂದ ಹೊಗ­ಳಿದರು. ಇದಕ್ಕಿಂತ ಮುಂಚೆ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ನಡೆದ ಒಂದು ಘಟನೆಯನ್ನು ಹೇಳಲೇಬೇಕು. ಬ್ರಿಟಿಷ್‌ ವಲಸೆ ವಿಭಾಗದ ಅಧಿಕಾರಿಗಳು ನಮ್ಮ ಸಾಲಿಗ್ರಾಮ ಯಕ್ಷಗಾನ ತಂಡದ ಮಕ್ಕಳನ್ನು ಬಾಲ­ಕಾರ್ಮಿ­ಕರು ಎಂದುಕೊಂಡು ಅವರನ್ನು ಒಳಗೆ ಬಿಡಲು ಒಪ್ಪಲಿಲ್ಲ. ಅವರೆಲ್ಲ 10ನೇ ತರಗತಿ ಮುಗಿಸಿದ­ವ­ರೆಂದು ನಾವು ಎಷ್ಟು ಹೇಳಿದರೂ ಒಪ್ಪ­ಲೊ­ಲ್ಲರು. ಆ ಮಕ್ಕಳು ಅಷ್ಟು ಕೃಷಕಾಯದ­ವರು. ಅವ­ರೆಲ್ಲ ಯಕ್ಷಗಾನ ಕಲಾವಿದರೆಂದು ಅಧಿಕಾರಿ­ಗಳಿಗೆ ಒಪ್ಪಿಸುವಲ್ಲಿ ಸಾಕಾಗಿ ಹೋಯ್ತು. ಮೊದಲ ಬಾರಿಗೆ ವಲಸೆ ಅಧಿಕಾರಿಗಳ ನಡವಳಿಕೆಯೂ ಪರಿಚಯವಾಯ್ತು.

ಮರುದಿನ ಬೆಳಿಗ್ಗೆ ಲಂಡನ್‌ನಿಂದ ನಮ್ಮ ತಂಡ ಮ್ಯಾಂಚೆಸ್ಟರ್‌ ವಿಮಾನ ನಿಲ್ದಾಣದಲ್ಲಿ ಇಳಿದಾಗ ನಮಗೆ ಅಲ್ಲಿ ಆತ್ಮೀಯ ಸ್ವಾಗತ ಕಾದಿತ್ತು. ಯು.ಕೆ. ಬಳಗದ ಅಧ್ಯಕ್ಷೆ ಡಾ.ಭಾನುಮತಿ, ಡಾ.ಅಪ್ಪಾಜಿಗೌಡ, ಕಾರ್ಯದರ್ಶಿ ರಾಮ­ಮೂರ್ತಿ ಹಾಗೂ ಇನ್ನಿತರ ಪದಾಧಿಕಾರಿಗಳ ತಂಡವೇ ಇತ್ತು. ಡಾ. ಅಪ್ಪಾಜಿಗೌಡ ನಮ್ಮ ಬ್ಯಾಗ್‌ಗಳನ್ನೆಲ್ಲ ತೆಗೆದು ವಾಹನಗಳಿಗೆ ತುಂಬಿ­ದರು. ನಮಗೆ ಅವುಗಳನ್ನು ಮುಟ್ಟಲು ಬಿಡಲೇ ಇಲ್ಲ. ಇಂಗ್ಲೆಂಡ್‌ನ ಚಳಿ ಎದುರಿಸಲು ಹತ್ತಾರು ಕೋಟ್‌ಗಳನ್ನು ತಂದು ಎಲ್ಲರಿಗೂ ಒಂದೊ­ಂ­ದನ್ನು ತೊಡಿಸಿದರು. ಆದರೆ, ಸಾಲಿಗ್ರಾಮ ಮಕ್ಕಳ ಅಳತೆಯ ಕೋಟ್‌ಗಳು ಮಾತ್ರ ಇರಲಿಲ್ಲ.

ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ಮಾತನಾಡಿಸಿ ಬೇಕು–ಬೇಡಗಳನ್ನು ತಿಳಿದುಕೊಂಡು ಹತ್ತಿರದ ಸಂಬಂಧಿಕರಿಗಿಂತ ತುಸು ಹೆಚ್ಚಾಗಿಯೇ ವಿಚಾರಿಸಿ­ಕೊಂಡರು. ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯ ಕ್ಯಾಂಪ­ಸ್ಸಿನಲ್ಲಿ ಎಲ್ಲರಿಗೂ ಉಳಿಯಲು ವ್ಯವಸ್ಥೆ­ಯಾಗಿತ್ತು. ಕಾರ್ಯಕ್ರಮವಿದ್ದುದೂ ಅದೇ ಕ್ಯಾಂಪಸ್ಸಿನಲ್ಲಿ.

ನಮಗಿಂತ ಮೂರುದಿನ ಮುಂಚೆ ಬಂದಿದ್ದ ಎಸ್‌. ಕೃಷ್ಣಮೂರ್ತಿಯವರು ಪ್ರಚಾರಕ್ಕೆ ತಂದಿದ್ದ ಸಾಮಗ್ರಿಗಳನ್ನು ಕಸ್ಟಮ್ಸ್‌ ವಿಭಾಗದಿಂದ ಬಿಡಿಸಿಕೊಳ್ಳಲು ಓಡಾಡುತ್ತಿದ್ದರು. ಭಾನುಮತಿ ಅವರು ಸುಮಾರು 4–5 ಸಾವಿರ ಪೌಂಡ್‌ಗಳ ಬ್ಯಾಂಕ್‌ ಗ್ಯಾರಂಟಿ ಕೊಟ್ಟ ನಂತರವೇ ಅವುಗಳಿಗೆ ಮುಕ್ತಿ ಸಿಕ್ಕಿತು. ಗೋಡೆಗೆ ಮೊಳೆ ಹೊಡೆದು ತಗಲು ಹಾಕಲು ಸರ್ಕಾರದ ಪ್ರಚಾರ ಸಾಮಗ್ರಿ ತರಲಾಗಿತ್ತು. ಅಲ್ಲಿ ಗೋಡೆಗಳಿಗೆ ಮೊಳೆ ಹೊಡೆ­ಯುವಂತೆ ಇರಲಿಲ್ಲ! ಅವುಗಳನ್ನು ಸರಿಯಾಗಿ ಪ್ರದರ್ಶಿಸಲು ಡಿಸ್‌ಪ್ಲೇ ಬೋರ್ಡ್‌ಗಳು ಬೇಕಿ­ದ್ದವು. ಸ್ಥಳೀಯ ಅಧಿಕಾರಿಗಳು ಕೃಷ್ಣಮೂರ್ತಿ­ಯವರಿಗೆ ಕನಿಕರ ತೋರಿಸಿ ಏನೋ ವ್ಯವಸ್ಥೆ ಮಾಡಿದರು. ಗೋಡೆಗೆ ಮೊಳೆ ಹೊಡೆಯಲೇ­ಬೇಕು ಎಂಬ ಹಠ ಹಿಡಿದವರಂತಿದ್ದ ಕೃಷ್ಣ­ಮೂರ್ತಿ ಅವರನ್ನು ಕಂಡು ನನಗೆ ನಗು ತಡೆ­ಯ­ಲಾಗಲಿಲ್ಲ.

ನಮ್ಮೂರಿನಲ್ಲಿ ನಾವು ಬಹು ಅದ್ಭುತ ಎನ್ನುವ ಪ್ರಚಾರ ಸಾಮಗ್ರಿಗಳು, ಬೇರೆಕಡೆ ಪ್ರಸ್ತುತತೆ ಕಳೆದುಕೊಂಡು ಬಹು ಸಾಮಾನ್ಯ ಎನಿಸುತ್ತವೆ. ನಮ್ಮ ಮುಖ್ಯಮಂತ್ರಿಗಳು, ಮಂತ್ರಿ­ಗಳಿ­ರುವ ಫಲಕಗಳು ಹೊರದೇಶಗಳಲ್ಲಿ ಅಪ್ರಸ್ತು­ತವೆಂದು ಅರಿವಾಯ್ತು. ಪ್ರವಾಸಿ ತಾಣಗಳ ಫಲಕಗಳು ಮಾತ್ರ ಆಸಕ್ತಿ ಉಂಟುಮಾಡಿದವು. ಹೊರದೇಶದ ಮೊದಲ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಗೆ ಸರ್ವ ಸಿದ್ಧತೆಗಳು ಹಬ್ಬದ ಸಡಗರದೊಂದಿಗೆ ನಡೆಯುತ್ತಿದ್ದವು. ಯು.ಕೆ. ಬಳಗದ ಆಪ್ತತೆ, ಆತ್ಮೀಯತೆ, ಊಟೋ­ಪಚಾರ ನಮ್ಮ ಕಲಾವಿದರಿಗಂತೂ ವಿಶೇಷ ಅನುಭವ ನೀಡಿತ್ತು. ಗೆಳೆಯ ಅಶ್ವತ್ಥ್‌ ಅವರಂತೂ ‘ಏನ್‌ ಸಾರ್‌, ಏನ್‌ ಉಪ್ಪಿಟ್ಟು, ಏನ್‌ ಸಾರು–ಅನ್ನ, ಉಪ್ಪಿನಕಾಯಿ’ ಎಂದು ಚಪ್ಪರಿಸಿ ಸವಿಯುತ್ತಿದ್ದರು. ರಿಚರ್ಡ್ಸ್‌, ‘ಸಾರ್‌ ಈ ಉಪ್ಪಿಟ್ಟನ್ನು ಯಾರು ಸಾರ್‌ ಕಂಡು ಹಿಡಿ­ದವರು, ಇಂಗ್ಲೆಂಡಿಗೆ ಬಂದ್ರೂ ಇದರ ಸಹವಾಸ ತಪ್ಪಲಿಲ್ಲ’ ಎಂದು ಎಲ್ಲರನ್ನು ನಗೆಯ ಅಲೆಯಲ್ಲಿ ತೇಲಿಸುತ್ತಿದ್ದರು. 

ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯದ ಸಭಾಂಗಣ ಸುಸಜ್ಜಿತವಾಗಿತ್ತು. ಧ್ವನಿ ಮುದ್ರಿತ ಟ್ರ್ಯಾಕ್‌ ಹಾಕಿ ಅಶ್ವತ್ಥ್‌ ಮತ್ತು ರೋಹಿಣಿ ರಿಹರ್ಸಲ್‌ ಆರಂಭಿಸಿದರು. ಅಶ್ವತ್ಥ್‌ ತುಂಬಾ ರೋಮಾಂಚನಗೊಂಡು ‘ಏನ್‌ ಸಾರ್‌, ನಮ್ಮ ಯೋಗ್ಯತೆಗೆ ನಮ್ಮೂರಿನಲ್ಲಿ ಇಂಥದ್ದೊಂದು ಸಭಾಂಗಣ ಇಲ್ಲವಲ್ಲ’ ಎಂದು ಉದ್ಗಾರ ತೆಗೆ­ದರು. ಧ್ವನಿ ವ್ಯವಸ್ಥೆ ನಿರ್ವಾಹಕರಿಗೂ ಮತ್ತು ಅಶ್ವತ್ಥ್‌ಗೂ ಸಮನ್ವಯ ಏರ್ಪಡಿಸುವಲ್ಲಿ ನನಗೆ ಸಾಕಾಗಿ ಹೋಯ್ತು. ಅವನ ಉಚ್ಚಾರಣೆ ಇವ­ರಿಗೆ ತಿಳಿಯಲಿಲ್ಲ. ಇವರ ಮಾತು ಅವನಿಗೆ ಅರ್ಥ­ವಾಗಲಿಲ್ಲ. ಕೊನೆಗೆ ಒಂದು ಒಪ್ಪಂದಕ್ಕೆ ಬಂದು ಇಬ್ಬರೂ ಸಂಜ್ಞೆಗಳ ಮೂಲಕ ವ್ಯವಹರಿ­ಸಲು ಸಮ್ಮತಿಸಿದರು.

ಉದ್ಘಾಟನೆ ಸಮಯ ಬಂದೇ ಬಿಟ್ಟಿತು. ಮ್ಯಾಂಚೆ­ಸ್ಟರ್‌ನ ಮೇಯರ್‌ ಮತ್ತು ಇನ್ನಿತರ ಗಣ್ಯರು, ಕರ್ನಾಟಕದಿಂದ ಬಂದ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ (ಆ ವೇಳೆಗೆ ಹೆಗಡೆ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿ­ದ್ದರು), ಸಚಿವ ಜೆ.ಎಚ್‌. ಪಟೇಲ್‌, ಎಂ.ಪಿ. ಪ್ರಕಾಶ್‌, ಡಾ.ಶಿವರಾಮ ಕಾರಂತ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು.

ಕಾರಂತರ ಮುಖ್ಯ ಭಾಷಣದ ಸಮಯ. ಎಲ್ಲರೂ ಕಾತರದಿಂದ ನಿರೀಕ್ಷಿಸುತ್ತಿದ್ದ ಭಾಷಣ. ಕಾರಂತರು  ಗಂಭೀರವಾಗಿ ಮಾತು ಪ್ರಾರಂಭಿ­ಸಿ­ದರು. ಕರ್ನಾಟಕ ಎಂದರೆ ಕರುನಾಡು, ಕಪ್ಪು ಭೂಮಿಯ ನಾಡು, ಹನುಮನುದಿಸಿದ ನಾಡು ಎಂದರು. ಹನುಮ ಎಂದರೆ ಮಂಕಿ, ಮಂಗ ಎಂದು ಮಂಗಗಳಲ್ಲಿ ವಿವಿಧ ತಳಿಯ, ರೂಪದ ಮಂಗ, ಮುಷ್ಯಗಳ ವಿವರಣೆಯಲ್ಲಿ ತೊಡಗಿ­ದರು. ಕಾರಂತರಿಗಿದ್ದ ಪ್ರಾಣಿಶಾಸ್ತ್ರದ ಅಪಾರ ಜ್ಞಾನದ ಅರಿವಾಗಿದ್ದು ಅಂದೇ. ನಿರರ್ಗಳವಾಗಿ 8–10 ನಿಮಿಷಗಳ ಕಾಲ ಅದೇ ವಿಷಯ ಮಾತ­ನಾಡುತ್ತಿದ್ದರು. ಇಂಗ್ಲಿಷ್‌, ಕನ್ನಡ ಎರಡೂ ಭಾಷೆ­ಗಳಲ್ಲಿ ಭಾಷಣ ಮುಂದುವರಿದಿತ್ತು. ನಮ್ಮ ಭಾಷೆ, ಸಂಸ್ಕೃತಿ, ಪರಂಪರೆ ಇತ್ಯಾದಿಗಳ ಸಾಂಪ್ರದಾಯಿಕ ಕೊರೆತವಿರಲಿಲ್ಲ. ಬಹಳಷ್ಟು ಜನ ತದೇಕಚಿತ್ತರಾಗಿ ಭಾಷಣ ಕೇಳುತ್ತಿದ್ದರು. ಕನ್ನಡ ಬಳಗದ ಪದಾಧಿಕಾರಿಗಳು ಮತ್ತು ನನ್ನಂಥ­ವರು, ಕಾರಂತರು ಈ ಮಂಗಗಳ ವಿಷಯದಿಂದ ಮನುಷ್ಯರ ವಿಷಯಕ್ಕೆ ಯಾವಾಗ ಬರುತ್ತಾರೆಂದು ಕಾಯ್ದು ಕಾಯ್ದು ಸಾಕಾಯ್ತು.

ಹೊಸಪೀಳಿಗೆಯ ಅನಿವಾಸಿ ಕನ್ನಡಿಗರಿಗೆ ಕರ್ನಾಟಕದ ಹೆಮ್ಮೆಯ ವಿಷಯ ತಿಳಿಸುತ್ತಾ­ರೆಂಬ ನಿರೀಕ್ಷೆಯಲ್ಲಿದ್ದ ಸಂಘಟಕರಿಗೆ ನಿರಾಶೆ­ಯಾಯ್ತು. ಆದರೆ, ಅದ್ಭುತ ಭಾಷಣಕಾರರಾದ ಜೆ.ಎಚ್‌. ಪಟೇಲ್‌ ಮತ್ತು ಎಂ.ಪಿ. ಪ್ರಕಾಶ್‌ ನಿರಾಸೆ ಮಾಡಲಿಲ್ಲ. ನಿರೀಕ್ಷೆಗೆ ತಕ್ಕಂತೆ ಮಾತನಾಡಿ ಎಲ್ಲರನ್ನೂ ಖುಷಿಗೊಳಿಸಿದರು. ನಾವು ಮ್ಯಾಂಚೆಸ್ಟರ್‌ಗೆ ಹೊರಡುವ ಮುನ್ನವೇ ಡಾ.ಮಾಯಾ ರಾವ್‌ ಮತ್ತು ಶ್ರೀನಿವಾಸ್‌ ಕಪ್ಪಣ್ಣ ನಮ್ಮ ತಂಡದ ಸದಸ್ಯರಿಗೆ ತಾಲೀಮು ನಡೆಸಿದ್ದರು. ಯಾವುದೇ ಶಿಫಾರ­ಸಿ­ಲ್ಲದೆ ಸ್ವಯಂ ಪ್ರತಿಭೆಯಿಂದ ಸ್ಥಾನ ಪಡೆದು­ಕೊಂಡಿದ್ದ ಕಲಾವಿದರು ಹೆಮ್ಮೆ ಹಾಗೂ  ಹುಮ್ಮಸ್ಸಿ­ನಿಂದ ಇದ್ದರು. ಅದ್ಭುತವಾದ ಕಾರ್ಯ­ಕ್ರಮಗಳಿಂದ ಎಲ್ಲರನ್ನೂ ರಂಜಿಸಿದರು. ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ನ್ಯಾಯ ಒದಗಿಸಿದರು.

ಕನ್ನಡ ಬಳಗದ ಕಲಾವಿದರು ಪ್ರಭಾ ಅಪ್ಪಾಜಿ ಅವರ ನೇತೃತ್ವದಲ್ಲಿ ನೀಡಿದ ಪ್ರದರ್ಶನ ಮನಸೂರೆ­ಗೊಂಡಿತು. ನಮ್ಮನೆಲ್ಲ ಬೀಳ್ಕೊಡುವಾಗ ಆಪ್ತ ಬಂಧುಗಳನ್ನು ಕಳುಹಿಸುವವರಂತೆ ಯು.ಕೆ. ಬಳಗದ ಸದಸ್ಯರು ಭಾವುಕರಾಗಿದ್ದರು. ಮ್ಯಾಂಚೆ­ಸ್ಟರ್‌ ಸಮ್ಮೇಳನ ಒಂದು ಹೊಸ ಸಾಂಸ್ಕೃತಿಕ ಸಂಬಂಧಕ್ಕೆ ನಾಂದಿಯಾಯ್ತು. ಸ್ನೇಹ ಮತ್ತು ಬಾಂಧವ್ಯ ಗಾಢವಾಯ್ತು. ಹೊರನಾಡ ಕನ್ನಡಿಗರ ಪ್ರೀತಿಯಿಂದ ನಡೆದ ಕಾರ್ಯಕ್ರಮ ಇದಾಗಿತ್ತು. ದೂರದ ಇಂಗ್ಲೆಂಡ್‌­ನಲ್ಲಿ ಈ ಸಮ್ಮೇಳನ ನಡೆದರೂ ಕನ್ನಡವನ್ನು ಹೃದ­ಯದ ಹತ್ತಿರಕ್ಕೆ ತಂದಿದ್ದರಿಂದ ಅಪ್ಪಟ ಅವಿಸ್ಮರಣೀಯ ಹಬ್ಬವಾಗಿ ಸಾರ್ಥಕ್ಯ ಪಡೆದಿತ್ತು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.