ADVERTISEMENT

ಅನುಭೋಗತತ್ವ

ಎಸ್.ಜಿ.ಸಿದ್ದರಾಮಯ್ಯ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ಅನುಭೋಗತತ್ವ
ಅನುಭೋಗತತ್ವ   

ಕೆಲವರಿರುತ್ತಾರೆ ಮಾತೆತ್ತಿದ್ದರೆ ನಾನು ನಾನು ಎಂದು ಬೀಗುತ್ತಾ ಅಹಂಕರಿಸಿ ನುಡಿಯುತ್ತಾರೆ. ಅವರು ಎಷ್ಟೆಲ್ಲ ಓದಿರುತ್ತಾರೆ ಏನೆಲ್ಲ ಬರೆದಿರುತ್ತಾರೆ ಜಗತ್ತನ್ನು ಸುತ್ತಿರುತ್ತಾರೆ ಎಲ್ಲ ಬಗೆಯ ಜನರನ್ನು ಕಂಡಿರುತ್ತಾರೆ, ಒಡನಾಡಿದಂತೆ ಮಾತು ಬೆಳೆಸಿರುತ್ತಾರೆ - ಇಷ್ಟೆಲ್ಲ ಆಗಿಯೂ ಅವರಲ್ಲಿ ಲೋಕ ವಿಸ್ತಾರದ ಅರಿವು ಮೂಡಿರುವುದಿಲ್ಲ. ಕಂಡದ್ದು ಓದಿದ್ದು ನಡೆದದ್ದು ನುಡಿದಿದ್ದು ಕಣ್ಣ ನೋಟವಾಗಿರುತ್ತದೆಯೇ ಹೊರತು ಬಗೆಯ ಮಾಟದ ಮೇಲೆ ಅದೇನೂ ಪರಿಣಾಮವನ್ನು ಬೀರಿರುವುದು ಕಾಣುವುದಿಲ್ಲ. ಇಂಥವರಲ್ಲಿ ನಾನು ಎಂಬ ಅಹಂಕಾರ ಮಾತಿಗೆ ಮುನ್ನ ಹೂಂಕರಿಸಿ ಮುನ್ನುಗ್ಗುತ್ತದೆ. ಇದೆಲ್ಲ ತನ್ನಿಂದಾ
ಯಿತು ತನ್ನಿಂದ ಹೋಯಿತು ತಾನೇ ಆದಿ ತಾನೇ ಬೋಧಿ ಎಂಬ ಆತ್ಮರತಿಯ ಅಹಂಕಾರ ಭಾವದಲ್ಲಿ ಅವರ ನಡೆ ನುಡಿ ಠೇಂಕರಿಸಿ ಬೀಗುತ್ತದೆ. ಇಂಥ ಅಹಂಕಾರಿಗಳನ್ನು ಕುರಿತು ಶರಣ ಸಿದ್ಧರಾಮಣ್ಣನ ಒಂದು ವಚನ ಇಂತಿದೆ.
ಪಶುಗಳಿಗೆಲ್ಲ ಪೃಷ್ಠದಲ್ಲಿ ಬಾಲವಿದ್ದಡೆ
ಮಾಡುವೆನೆಂಬವನ ಮುಖದಲ್ಲಿ ಬಾಲ ನೋಡಾ
ಪಶುಗಳಿಗೆಲ್ಲ ಮಸ್ತಕದಲ್ಲಿ ಶೃಂಗವಿದ್ದಡೆ
ಮಾಡಿದ ಪೂಜೆಕೈಕೊಂಬವನ
ಮನದ ಕೊನೆಯ ಮೇಲೆ ಶೃಂಗ ನೋಡಾ
ಮಾಡಿದೆನೆಂಬುದುಳ್ಳನ್ನಕ್ಕ ಭಕ್ತನೆಂಬನೆ ಅಯ್ಯಾ
ಮಾಡಿಸಿಕೊಂಡೆನೆಂಬುದುಳ್ಳನ್ನಕ್ಕ
ನಿರುಪಾದಿ ನಿರಂಜನ ಜಂಗಮವೆಂಬೆನೆ ಅಯ್ಯಾ
ಎಲೆ ಕಪಿಲಸಿದ್ಧ ಮಲ್ಲಿಕಾರ್ಜುನಾ.

ಇಲ್ಲಿ ದಾಸಿಮಯ್ಯನವರ ಒಂದು ವಚನ ನೆನಪಾಗುತ್ತದೆ. ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ ಸುಳಿದು ಸೂಸುವ ಗಾಳಿ ನಿಮ್ಮ ದಾನ ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥ - ಎಂದು ದಾಸಿಮಯ್ಯ
ಪ್ರಶ್ನಿಸುತ್ತಾರೆ. ಈ ಪ್ರಶ್ನೆಯ ಆಂತರ್ಯದಲ್ಲಿರುವ ಜೀವನತತ್ವಕ್ಕೂ ಸಿದ್ಧರಾಮಣ್ಣನ ವಚನದಲ್ಲಿರುವ ಮಾಡುವ - ಮಾಡಿಸಿಕೊಂಬುವ ಭಕ್ತ ಜಂಗಮರ ಮನ
ಸ್ಸಿನ ವಿಚಾರಶೀಲತೆಗೂ ಸಮಾನ ಸಂಬಂಧವಿದೆ. ಬದುಕನ್ನು ಸಹಜ ಭಾವ
ದಲ್ಲಿ ಸ್ವೀಕರಿಸಬೇಕು. ಸಹಜಗತಿಯಲ್ಲಿ ನಿರ್ವರ್ತಿಸಬೇಕು ಅದು ಕೃತ್ಯ ಕಾಯಕದ ಸ್ವರೂಪ. ಮಾಡುವ ಕಾಯಕದಲ್ಲಿ ಅಹಂಕಾರ ಮುಂದಾಗ
ಬಾರದು, ನಿಷ್ಠೆ ಶ್ರದ್ಧೆ ಸತ್ಯಶುದ್ಧ ಮಾರ್ಗಗಳು ಮುಂದಾಗಬೇಕು. ಆಗ ತಾನು ಮಾಡುವ ಕಾಯಕ ತನ್ನ ವ್ಯಕ್ತಿತ್ವವನ್ನು ರೂಪಿಸುವ ಕ್ರಿಯಾ ಭೂಮಿಕೆಯಾಗು
ತ್ತದೆ. ರೂಪುಗೊಳ್ಳುವುದೆಂದರೆ ಆಗುವುದು. ಆಗುತ್ತಾ ಮಾಗುವುದು. ಮಾಗಿದ ಮನಸ್ಸು ಬಾಗುತ್ತದೆ. ಬಾಗುವುದು ಭಕ್ತ ಭಾವವೆಂದರೆ ಅದು ದಾಸ್ಯದ ಜೀತದ ಸೋಲಿನ ಶೋಷಣೆಯ ಮನೋಸ್ಥಿತಿಯಲ್ಲ; ಅರಿವಿನ ಫಲ
ಭಾರದಲ್ಲಿ ತೆನೆಹೊತ್ತ ಬೆಳೆಯ ಬಾಗುವಿಕೆ. ಗೊನೆಹೊತ್ತ ಬಾಳೆಯ ಬಾಗುವಿಕೆ. ಅದನ್ನು ಪಡೆವ ಜಂಗಮದ ಕೃತಕೃತ್ಯ ಭಾವವೆಂದರೆ ತಾಯ ಎದೆಹಾಲನುಂಡ ನಿರುಪಾದಿ ನಿರಂಜನ ಭಾವದ ಪರಿಣಾಮ. ಇದು ಲಿಂಗಾಯತದ ಬದುಕಿನ ಅನುಭೋಗ ತತ್ವದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT