ADVERTISEMENT

ಆತ್ಮ ನಿಯಂತ್ರಣ

ಡಾ.ಎಂ.ಎ ಜಯಚಂದ್ರ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಆತ್ಮ ನಿಯಂತ್ರಣ
ಆತ್ಮ ನಿಯಂತ್ರಣ   

ನೀರಿನಿಂದ ಕೆಸರಾಗುತ್ತದೆ, ಕೆಸರಾದ ಆ ಕೈಯನ್ನು ತೊಳೆಯಲು ಮತ್ತೆ ನೀರೇ ಬೇಕು. ಇದೇ ಪ್ರಕಾರ ಮನಸ್ಸಿನಿಂದ ಕೆಡುಕಾಗುತ್ತದೆ, ಆ ಕೆಡುಕನ್ನು ಹೋಗಲಾಡಿಸಲು ಮತ್ತೆ ಮನಸ್ಸಿಗೇ ಶರಣಾಗಬೇಕು. ಅಂದರೆ ಮನಸ್ಸು ಬಹಳ ಮುಖ್ಯವಾದುದು. ಇದರಿಂದಲೇ ಒಳಿತು-ಕೆಡುಕುಗಳಾಗುತ್ತವೆ.

ಕೆಡುಕಿನ ಕಡೆಗೆ ಮನಸ್ಸು ಬಹು ಶೀಘ್ರವಾಗಿ ಧಾವಿಸುತ್ತದೆ, ಆದರೆ ಒಳಿತಿನ ಕಡೆಗೆ ಅದನ್ನು ಬಲವಂತವಾಗಿ ಎಳೆದು ತರಬೇಕಾಗುತ್ತದೆ. ಈ ಪ್ರಯತ್ನವನ್ನೇ ಆತ್ಮ ನಿಯಂತ್ರಣ ಎನ್ನುವುದು. ಇಂದ್ರಿಯಗಳನ್ನು, ಭಾವನೆಗಳನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವುದೇ ಆತ್ಮ ನಿಯಂತ್ರಣ.

ಯಾರು ತಮ್ಮ ವಶದಲ್ಲಿರುವರೋ ಅವರಿಗೆ ಪೇಚಾಟ, ವ್ಯಾಕುಲತೆಗಳಿಲ್ಲ; ಆದರೆ ಯಾರು ತಮ್ಮ ವಶದಲ್ಲಿ ತಾವಿಲ್ಲವೋ ಅವರಿಗೆ ವ್ಯಾಕುಲತೆಯಲ್ಲದೆ ಬೇರೆ ಏನೂ ಇರುವುದಿಲ್ಲ. ಆದ್ದರಿಂದ ತಮ್ಮ ಚಿತ್ತವನ್ನು ಸ್ವಾಧೀನದಲ್ಲಿಟ್ಟುಕೊಳ್ಳವುದೇ ಒಳ್ಳೆಯ ಗೃಹಸ್ಥನ ಗುಣವಾಗಿದೆ.

ADVERTISEMENT

ಪಶು ಮತ್ತು ಮನುಷ್ಯರಿಗೆ ಇರುವ ಅಂತರವೇನು? ಯಾರ ಲಗಾಮು ಪರರ ಕೈಯಲ್ಲಿರುವುದೋ ಅವರು ಪಶುಗಳು; ಯಾರ ಲಗಾಮು ತಮ್ಮ ಕೈಯಲ್ಲಿರುವುದೋ ಅವರು ಮನುಷ್ಯರು. ಯಾರು ಮನವನ್ನು ಗೆಲ್ಲುವರೋ ಅವರೇ ಜಗವನ್ನು ಗೆಲ್ಲುವರು. ಆದರೆ ಮನವನ್ನು ಗೆಲ್ಲುವುದು ಹೇಗೆ? ಈ ಪ್ರಶ್ನೆಯನ್ನು ಭಗವಾನ್ ಮಹಾವೀರರ ಮುಂದೆ ಇಟ್ಟಾಗ ಅವರು, "ಮನಸ್ಸನ್ನು ದುಷ್ಟ ಅಶ್ವಕ್ಕೆ ಹೋಲಿಸಿದರು. ಅದು ವೇಗವಾಗಿ ಓಡುತ್ತದೆ. ತನ್ನ ಸವಾರನನ್ನು ಅಪಾಯಕ್ಕೆ ತಳ್ಳುತ್ತದೆ. ಅದನ್ನು ಧರ್ಮ-ಶಿಕ್ಷಣದ ಮೂಲಕ ನಿಯಂತ್ರಿಸಬೇಕು" ಎಂದರು.

ನೀತಿಯ ನೆಲೆಗಟ್ಟಿನಲ್ಲಿ, ಕಾನೂನಿನ ಕಟ್ಟಿನಲ್ಲಿ, ಧರ್ಮಶಾಸ್ತ್ರದಲ್ಲಿ ಯಾವುದನ್ನು ಅನಿಷ್ಟವೆಂದು ನಿಷೇಧಿಸಿರುವರೋ, ಅವುಗಳನ್ನು ನಮ್ಮ ಜೀವನದಲ್ಲೂ ನಿಷೇಧಿಸಬೇಕು. ನಮ್ಮ ಬದುಕಿಗೆ "ಮರ್ಯಾದೆ"ಯ ಬೌಂಡರಿಯನ್ನು ಹಾಕಿಕೊಳ್ಳಬೇಕು. ಅದೇ ರೀತಿ ಜೀವನದಾಟವೂ ನಡೆಯಬೇಕು. ಆಗ ನಮ್ಮ ಭಾವನೆ ಮತ್ತು ವರ್ತನೆಗಳು ಪವಿತ್ರವಾಗುತ್ತವೆ.

ಎಲ್ಲಿ ನಿಷೇಧವಿರುವುದೋ ಅಲ್ಲಿ ಅದನ್ನು ಉಲ್ಲಂಘಿಸುವ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ. ಅವುಗಳನ್ನು ತಡೆಯಬೇಕು. ತಡೆಯುವುದು ಹೇಗೆ? ಸತತವಾಗಿ ಮನಸ್ಸಿಗೆ/ಸುಪ್ತ ಮನಸ್ಸಿಗೆ ಒಳ್ಳೆಯ ಸಲಹೆಗಳನ್ನು ನೀಡುವುದರ ಮೂಲಕ ತಡೆಯಬೇಕು.

"ಈ ದುಷ್ಟ ವ್ಯವಹಾರಗಳನ್ನು ನಾನು ಮಾಡುವುದಿಲ್ಲ ಎಂದರೆ ಮಾಡುವುದೇ ಇಲ್ಲ''-ಎಂಬ ದೃಢ ಸಂಕಲ್ಪ ಆತನಲ್ಲಿ ಉಂಟಾಗಬೇಕು. ಸರಿಯಾದ ನೀತಿ ನಿಯಮಗಳಿಲ್ಲದೆ ನಮ್ಮ ಜೀವನ ಉನ್ನತಗೊಳ್ಳದು ಎಂಬ ಭಾವನೆ ಅವನಲ್ಲಿ ಬೇರೂರಬೇಕು. ಆಗ ಮನುಷ್ಯನ ಜೀವನ ಶುದ್ಧಗೊಳ್ಳುವುದು. ಶುದ್ಧಗೊಂಡ ಜೀವ, ಸಿದ್ಧಿಯನ್ನು ಹೊಂದುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.