ADVERTISEMENT

ಕಾಯುವ ತಪಸ್ಸು

ಡಾ.ಎಂ.ಎ ಜಯಚಂದ್ರ
Published 19 ಅಕ್ಟೋಬರ್ 2017, 19:27 IST
Last Updated 19 ಅಕ್ಟೋಬರ್ 2017, 19:27 IST

ಒಂದು ಕಾಡಿನಲ್ಲಿ ಒಬ್ಬ ಬೇಡತಿ ಇದ್ದಳು. ಬೇಡತಿಯನ್ನು ಶಬರಿ, ಭೀಲಿನಿ ಎಂದೂ ಸಹ ಕರೆಯುತ್ತಾರೆ. ಆಕೆ ತನ್ನ ಕುಟೀರವನ್ನುಹಾಗೂ ಅದರ ಮುಂದೆ ಹಾದು ಹೋಗುವ ಹಾದಿಯನ್ನು ಚೆನ್ನಾಗಿ ಗುಡಿಸಿ, ಸಾರಿಸಿ. ರಂಗೋಲಿ ಹಾಕಿ ಸ್ವಚ್ಛವಾಗಿಟ್ಟುಕೊಂಡಿದ್ದಳು. ಆಕೆ ಶ್ರೀರಾಮನ ಭಕ್ತೆ. ಆತನ ಆಗಮನದ ನಿರೀಕ್ಷೆಯಲ್ಲಿದ್ದಳು. ಆತ ಯಾವಾಗ ಬರುವನೆಂದು ಆಕೆಗೆ ಗೊತ್ತಿರಲಿಲ್ಲ. ಯಾವಾಗ ಬೇಕಾದರು ಬರಬಹುದು ಎಂದು ಎದುರು ನೋಡುತ್ತಿದ್ದಳು.

ಆದುದರಿಂದ ತನ್ನ ಪುಟ್ಟ ಕುಟೀರವನ್ನು, ಮನೆಮುಂದಿನ ಮಾರ್ಗವನ್ನು ಪ್ರತಿದಿನವೂ ಅಂದ ಚಂದವಾಗಿ ಇಡುತ್ತಿದ್ದಳು. ತನ್ನ ಶ್ರಮ ವ್ಯರ್ಥವಾಯಿತು ಅಂತ ಎಂದೂ ಅವಳಿಗೆ ಅನಿಸಿರಲಿಲ್ಲ. ಅವಳಿಗೆ ಓದು ಬರಹ ತಿಳಿಯದು, ಆದರೆ ವಿವೇಕವಿತ್ತು. ತನ್ನ ಕೊನೆ ಉಸಿರು ಇರುವವರೆಗೂ ಶ್ರೀರಾಮನ ಬರುವಿಕೆಯನ್ನು ಎದುರು ನೋಡುತ್ತಿರ ಬೇಕೆಂದು ನಿಶ್ಚಯಿಸಿದ್ದಳು. ಆದ್ದರಿಂದ ದಿನದ ಇಪ್ಪತ್ತನಾಲ್ಕು ತಾಸೂ ತನ್ನ ಕುಟೀರದ ಮೂಲೆಮೂಲೆಗಳಲ್ಲಿ, ಸುತ್ತ ಮುತ್ತ ಹಾಗೂ ಮುಂದಿನ ರಸ್ತೆಯಲ್ಲಿ ಯಾವುದೇ ರೀತಿಯ ಕಸ ಕಡ್ಡಿ, ಕೊಳಕು ಸೇರದಂತೆ ಯಾವಾಗಲೂ ಎಚ್ಚರ ವಹಿಸುತ್ತಿದ್ದಳು. ತನ್ನ ಜೀವಿತದ ಬಹಳಷ್ಟು ವರ್ಷ ಇದೇ ಕೆಲಸ ಮಾಡಿ ಕೊಂಡಿದ್ದಳು. ಕಾಲ ಕೂಡಿ ಬಂದಿತು. ಶ್ರೀರಾಮ ಆಗಮಿಸಿದ. ಬಹಳ ಭಯ ಭಕ್ತಿಯಿಂದ ಆತನ ದರ್ಶನ ಪಡೆದಳು. ತನ್ನ ಜೀವನ ಸಾರ್ಥಕವಾಯಿತು ಎಂದು ಭಾವಿಸಿದಳು. ಅವಳ ಪ್ರತೀಕ್ಷೆಯ ತಪಸ್ಸು ಫಲಿಸಿತು. ಅವಳ ತಪ ಮುಮುಕ್ಷುಗಳಿಗೆ ಉತ್ತಮ ನಿದರ್ಶನವಾಯಿತು.

ಪ್ರತಿಯೊಂದು ಆತ್ಮವೂ ಸ್ವಯಂಭೂ. ತಮ್ಮ ತಮ್ಮ ಪುರುಷಾರ್ಥದಿಂದ ಪುರುಷರೆಲ್ಲರೂ ಸ್ವಯಂಭೂ ಆಗಬಲ್ಲರು. ತಮ್ಮ ತಮ್ಮ ಉನ್ನತ ವ್ಯಕ್ತಿತ್ವ ನಿರ್ಮಾಣಕ್ಕೆ ತಾವೇ ಸೃಷ್ಟಿಕರ್ತರು. ತಾನು ಒಳ್ಳೆಯವನಾಗಬೇಕಾದರೆ, ತಾನು ಆತ್ಮದರ್ಶನ ಪಡೆಯ ಬೇಕಾದರೆ, ತನ್ನ ಒಳಗಿರುವ ಕೊಳಕನ್ನು - ಅಂದರೆ ಕ್ರೋಧ, ಮಾನ, ಮಾಯಾ, ಲೋಭವೆಂಬ ಕಷಾಯಗಳ ಕೊಳಕನ್ನು - ಗುಡಿಸಿ ಹೊರಹಾಕಬೇಕು.

ಚೈತನ್ಯ ರೂಪಿಯಾದ ಆತ್ಮ ಬೇರೆ, ಜಡ ರೂಪಿಯಾದ ದೇಹಾದಿಗಳು ಬೇರೆ ಎಂಬ ಭೇದವಿಜ್ಞಾನ ತಿಳಿದಿರಬೇಕು. ಆತನಿಗೆ ಸಂಬಂಧಿಸದ
ಅನ್ಯ ಪದಾರ್ಥಗಳನ್ನು, ಅನ್ಯ ಸಂಗತಿಗಳನ್ನು ಪರಿತ್ಯಜಿಸಬೇಕು. ಆಗ ಮನ ಶುದ್ಧವಾಗುವುದು. ಅಂತರಂಗದ ಸಂಪೂರ್ಣ ನಿರ್ಮಲತೆಯನ್ನು
ನಿರೀಕ್ಷಿಸಬೇಕು. ಹೀಗೆ ನಿರೀಕ್ಷೆ ಮಾಡುವುದು ಹಾಗೂ ಆ ಸಮಯದಲ್ಲಿ ಶಬರಿಯಂತೆ ಧೈರ್ಯವಾಗಿರುವುದು ತುಂಬ ಕಷ್ಟ. ಅನೇಕರು
ಧ್ಯಾನವೆಂಬ ಉತ್ಕೃಷ್ಟ ತಪವನ್ನು ಆಚರಿಸುತ್ತಾ, ತತ್ಕ್ಷಣ ಫಲವನ್ನು ಅಪೇಕ್ಷಿಸುತ್ತಾರೆ. ಅದು ಅಸಾಧ್ಯ. ಶಬರಿಯಂತೆ ಕಾಯಬೇಕು. ಶ್ರದ್ಧೆಯಿಂದ ಕಾಯುವುದೇ ತಪಸ್ಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT