ADVERTISEMENT

ಭಕ್ತಿಲಂಪಟನಯ್ಯಾ ಕೂಡಲ ಸಂಗಮದೇವ

ಸಿದ್ದರಾಮ ಸ್ವಾಮಿಗಳು
Published 3 ಏಪ್ರಿಲ್ 2018, 19:30 IST
Last Updated 3 ಏಪ್ರಿಲ್ 2018, 19:30 IST
ಭಕ್ತಿಲಂಪಟನಯ್ಯಾ ಕೂಡಲ ಸಂಗಮದೇವ
ಭಕ್ತಿಲಂಪಟನಯ್ಯಾ ಕೂಡಲ ಸಂಗಮದೇವ   

ಬಸವಣ್ಣನವರು ಭಕ್ತಿಭಂಡಾರಿಗಳು. ಆದರೂ ಅವರಿಗೆ ತೃಪ್ತಿ ಎಂಬುದಿಲ್ಲ. ಭಕ್ತಿ ಇಲ್ಲದ ಬಡವ ನಾನಯ್ಯ, ಕಕ್ಕಯ್ಯ, ಚನ್ನಯ್ಯ, ದಾಸಯ್ಯಗಳ ಮನೆ ಮುಂದೆ ನಿಂತು ಭಕ್ತಿಯ ಭಿಕ್ಷೆಯನ್ನು ಬೇಡಿದೆ, ಅವರೆಲ್ಲರೂ ನನ್ನ ಪಾತ್ರೆಗೆ ಭಕ್ತಿಯನ್ನು ನೀಡಿ ತುಂಬಿದರು ಎನ್ನುತ್ತಾರೆ. ತಮ್ಮೆಲ್ಲ ಅಹಂಕಾರವನ್ನು ಕಳೆದುಕೊಂಡು ಶ್ರದ್ಧೆ ಮತ್ತು ನಿಷ್ಠೆಯಿಂದ ಭಕ್ತಿಯನ್ನಾಚರಿಸಬೇಕೆಂಬ ಭಾವದಿಂದ ಅವರು ಶಿವಭಕ್ತರ, ಶರಣರ ಮನೆಯ ಮುಂದೆ ನಿಂತು ಬೇಡಿಕೊಳ್ಳುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಅಹಂಕಾರ-ಮಮಕಾರಗಳಿಂದ ಮಾಡುವ ಭಕ್ತಿ ಅರ್ಥಹೀನವಾದುದು. ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು, ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ ಎಂಬ ಶರಣವಾಣಿ ಇದನ್ನು ದೃಢಪಡಿಸುತ್ತದೆ. ಭಗವಂತನೂ ಅಷ್ಟೇ, ಭಕ್ತನನ್ನು ಅಷ್ಟು ಸುಲಭವಾಗಿ ಸ್ವೀಕರಿಸಲಾರನು. ನಚ್ಚಿದೆನೆಂದರೆ, ಮಚ್ಚಿದನೆಂದರೆ ಸಲೆಮಾರುವೋದೆನೆಂದರೆ ತನುವನಲ್ಲಾಡಿಸಿ ನೋಡುವೆ ನೀನು, ಮನವನಲ್ಲಾಡಿಸಿ ನೋಡುವೆ ನೀನು, ಧನವನಲ್ಲಾಡಿಸಿ ನೋಡುವೆ ನೀನು ಎನ್ನುವ ಬಸವಣ್ಣನವರು ಭಗವಂತನ ಪರೀಕ್ಷೆಯ ವಿಧಾನವನ್ನು ತಿಳಿಸುತ್ತಾರೆ. ಭಕ್ತನು ಯಾವುದಕ್ಕೂ ಬೆದರದೆ ಬೆಚ್ಚದೆ ಇದ್ದರೆ, ಭಗವಂತನನ್ನೇ ನಚ್ಚಿ ಮಚ್ಚಿ, ಅವನಿಗೇ ತಮ್ಮನ್ನು ಸಮರ್ಪಿಸಿಕೊಂಡರೆ ಭಕ್ತಿಕಂಪಿತನಾದ ಭಗವಂತನೂ ಭಕ್ತಾಧೀನನಾಗುತ್ತಾನೆ.
ಭಕ್ತಿಯ ಹಿರಿಮೆಯನ್ನು ಸಾರುವ ಅನೇಕ ಶಿವಭಕ್ತರ ಕಥೆಗಳು ಜನಮಾನಸದಲ್ಲಿ ಇಂದಿಗೂ ಪ್ರಚಲಿತವಾಗಿವೆ. ಬಸವಣ್ಣನವರು ಆ ಕಥೆಗಳನ್ನು ನೆನಪಿಸುವ ಮೂಲಕ ಭಕ್ತಿಯ ಉತ್ಕರ್ಷವನ್ನು ಸಾರುತ್ತಾರೆ. ಭಕ್ತಿಯ ಬಲದಿಂದ ದಾಸಿಮಯ್ಯ ತವನಿಧಿಯನ್ನು ಪಡೆದಿರುವ, ಶಿರಿಯಾಳ-ಸಿಂಧುಬಲ್ಲಾಳರು ಪರಮ ಪದವಿಯನ್ನು ಸಾಧಿಸಿರುವ ಮತ್ತು ಬಾಣನು ಶಿವನನ್ನೇ ಬಾಗಿಲ ಕಾಯಲು ಹಚ್ಚಿರುವ ಸಂದರ್ಭೋಚಿತ ಕಥೆಗಳು ಭಕ್ತಿಯ ಹಿರಿಮೆಗೆ ಸಾಕ್ಷಿಯಾಗಿವೆ. ಅವರ ಒಂದು ವಚನ- ಭಕ್ತರೆ ಸಮರ್ಥರು, ಅಸಮರ್ಥರೆನಲುಂಟೆ? ಚೆನ್ನನೆತ್ತ ಚೋಳನೆತ್ತ? ಚೆನ್ನನೊಡನುಂಡ ಶಿವ. ಆಹಾ! ಅಯ್ಯಾ, ಚೆನ್ನ ಚೋಳನ ಮನೆಯ ಕಂಪಣಿಗನಯ್ಯಾ, ಕೂಡಲ ಸಂಗಮದೇವ ಭಕ್ತಿಲಂಪಟನಯ್ಯಾ ಎಂಬುದು ಶ್ರದ್ಧೆ-ನಿಷ್ಠೆಯುಳ್ಳ ಭಕ್ತರು ಅಸಾಮಾನ್ಯರಷ್ಟೇ ಅಲ್ಲ, ಸರ್ವಸಮರ್ಥರು. ಚೋಳ ಮಹಾರಾಜನಾಗಿದ್ದ, ಅವನ ರಾಜ್ಯದಲ್ಲಿ ಹುಲ್ಲು ಹೊರೆ ಕಟ್ಟುವ ಚೆನ್ನ ಶ್ರೇಷ್ಠ ಭಕ್ತನಾಗಿದ್ದ. ಶಿವನು ಮಹಾರಾಜನ ಮೃಷ್ಟಾನ್ನವನ್ನು ತೊರೆದು ಚೆನ್ನನ ಅಂಬಲಿಯನ್ನು ಸವಿದ ಕತೆ ಜನಜನಿತ. ಚೆನ್ನಯ್ಯ ಚೋಳನ ಮನೆಯ ಹುಲ್ಲು ಹೊರೆ ಕಟ್ಟುವ ಆಳಾಗಿರಬಹುದು ಆದರೆ ಭಕ್ತಿಯ ಲಂಟಪ ಅಥವಾ ಲೋಲುಪನಾದ ಶಿವನು ಚೆನ್ನಯ್ಯನಿಗೊಲಿದುದು ಚೆನ್ನಯ್ಯನಂತಹ ಭಕ್ತಿಯ ಸಾಧಕನು ಹೇಗೆ ಎಲ್ಲ ಅಂತಸ್ತುಗಳನ್ನು ಮೀರಿ ನಿಲ್ಲುತ್ತಾನೆ, ಭಕ್ತಿಯ ಸಾಮರ್ಥ್ಯ ಎಂತಹುದೆಂಬುದನ್ನು ಮನಗಾಣಿಸುತ್ತದೆ. ಹಾಗೆಯೇ ಶಿವನೊಲುಮೆಗೆ ಭಕ್ತಿಯೊಂದೇ ಸಾಕು, ಶಿವನು ಭಕ್ತಿಪ್ರಿಯ, ಭಕ್ತಿಲಂಪಟ ಎಂಬುದನ್ನೂ ದೃಢಪಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.