ADVERTISEMENT

ಸಂತೋಷದ ಮೂಲವೆಲ್ಲಿದೆ?

ಫಾ.ಚೇತನ್ ಕಾಪುಚಿನ್
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST

ಪ್ರತಿಯೊಬ್ಬನೂ ಜೀವನದಲ್ಲಿ ಸಂತೋಷ, ತೃಪ್ತಿ ಹಾಗೂ ನಿಶ್ಚಿಂತೆಯಿಂದಿರಲು ಬಯಸುತ್ತಾನೆ. ಆದರೆ ಜೀವನದಲ್ಲಿ ಸಂತೋಷದ ಮೂಲವನ್ನು ತಿಳಿಯದೆ ಚಡಪಡಿಸುತ್ತಾನೆ.

ಶ್ರೀಮಂತ ವಿಧವೆಯೊಬ್ಬಳ ಬಳಿ ಬೇಕಾದಷ್ಟು ಸಿರಿ-ಸಂಪತ್ತು ಹಾಗೂ ಆಸ್ತಿಯಿತ್ತು. ಆದರೆ ಅವಳು ತನ್ನ ಬಂಗಲೆಯಲ್ಲಿ ಒಂಟಿತನದಿಂದ ನರಳುತ್ತಿದ್ದಳು. ತನ್ನ ಅರ್ಥವಿಲ್ಲದ ಜೀವನ ಹಾಗೂ ಒಂಟಿತನಕ್ಕೆ ಪರಿಹಾರವನ್ನು ಹುಡುಕಲು ಅವಳು ಮನೋವೈದ್ಯರ ಬಳಿಗೆ ಹೋಗಿ ಜೀವನದಲ್ಲಿ ಸಂತೋಷವನ್ನು ಹೇಗೆ ಪಡೆಯುವುದೆಂದು ವಿಚಾರಿಸಿದಳು. ಮನೋವೈದ್ಯ ತನ್ನ ಕಚೇರಿಯಲ್ಲಿ ಕಸಗುಡಿಸಲು ನೇಮಿಸಿದ್ದ ವೃದ್ಧ ಮಹಿಳೆಯನ್ನು ಕರೆದು, ‘ಈ ಮಹಿಳೆಯು ತನ್ನ ಜೀವನದಲ್ಲಿ ಸಂತೋಷವನ್ನು ಹೇಗೆ ಪಡೆದಳೆಂದು ನಿಮಗೆ ವಿವರಿಸುತ್ತಾಳೆ, ಗಮನವಿಟ್ಟು ಅವಳ ಮಾತುಗಳಿಗೆ ಕಿವಿಗೊಡಿ’ ಎಂದನು.

ವಯಸ್ಸಾದ ಆ ಮಹಿಳೆಯು ತನ್ನ ಜೀವನದ ಕತೆಯನ್ನು ವಿವರಿಸಿದಳು. ಅವಳ ಗಂಡ ಮಲೇರಿಯಾ ಬಂದು ತೀರಿಕೊಂಡ ಮೂರೇ ತಿಂಗಳಲ್ಲಿ ಒಬ್ಬನೇ ಮಗ ಕಾರು ಅಫಘಾತದಲ್ಲಿ ಮೃತಪಟ್ಟ. ಅವಳು ಅನಾಥೆಯಾದಳು, ಅವಳ ಬಳಿ ಏನೂ ಇರಲಿಲ್ಲ. ಊಟ-ತಿಂಡಿ ರುಚಿಸಲಿಲ್ಲ, ಕಣ್ಣಿಗೆ ನಿದ್ದೆ ಸುಳಿಯಲಿಲ್ಲ, ಮುಖದಲ್ಲಿ ನಗು ಇರಲಿಲ್ಲ. ಒಂದೆರಡು ಬಾರಿ ಆತ್ಮಹತ್ಯೆ ಮಾಡುವ ಯೋಚನೆಯೂ ಸುಳಿದಿತ್ತು.

ADVERTISEMENT

ಒಂದು ದಿನ ಕೆಲಸ ಮುಗಿಸಿ ಮನೆಗೆ ಬರುವಾಗ ಒಂದು ಪುಟ್ಟ ಬೆಕ್ಕಿನ ಮರಿ ಅವಳನ್ನು ಹಿಂಬಾಲಿಸಿತು. ಅದನ್ನು ಮನೆಯೊಳಕ್ಕೆ ಸೇರಿಸಿ ಇದ್ದ ಸ್ವಲ್ಪ ಹಾಲನ್ನು ಬೆಕ್ಕಿನ ಮರಿಯ ಮುಂದೆ ಇಟ್ಟಾಗ ಅದನ್ನು ಕುಡಿದು ತಟ್ಟೆಯನ್ನು ಸ್ವಚ್ಛವಾಗಿ ನೆಕ್ಕಿತು. ಅನಂತರ ಅದು ಮಿಯಾಂವ್ ಎಂದು ಕೂಗಿ ಅವಳ ಬಳಿಗೆ ಬಂದು ಅವಳ ಕಾಲಿಗೆ ತನ್ನ ಮೈಯೊರೆಸಿ ಅಕ್ಕರೆಯನ್ನು ತೋರಿತು. ಇದನ್ನು ಗಮನಿಸಿದ ಆಕೆಯ ಮುಖದಲ್ಲಿ ಬಹಳ ಕಾಲದ ನಂತರ ಮಂದಹಾಸ ಮೂಡಿತು. ಒಂದು ಪುಟ್ಟ ಬೆಕ್ಕಿನ ಮರಿಗೆ ತೋರಿಸಿದ ಕಿಂಚಿತ್ ಒಳ್ಳೆಯತನದಿಂದ ತನ್ನ ಮುಖದಲ್ಲಿ ಮಂದಹಾಸ ಮೂಡಬೇಕಾದರೆ, ಇತರರಿಗೆ ಮಾಡಿದ ಒಳಿತು ಖಂಡಿತವಾಗಿಯೂ ತನಗೆ ಹೆಚ್ಚೆಚ್ಚು ಸಂತೋಷ ನೀಡಬಲ್ಲುದು ಎಂಬ ಯೋಚನೆ ಅವಳಿಗೆ ಹೊಳೆದು ಮರುದಿನದಿಂದ ತನ್ನ ಕೈಲಾದ ಸಣ್ಣ ಪುಟ್ಟ ತಿಂಡಿ-ತಿನಸುಗಳನ್ನು ಮಾಡಿ ವಠಾರದ ಬಡವರ ಮತ್ತು ರೋಗಿಷ್ಠರ ಬಳಿಗೆ ಹೋಗಿ ಅವರಿಗೆ ಅದನ್ನು ನೀಡಲಾರಂಭಿಸಿದಾಗ ಅವರ ಮುಖದಲ್ಲಿ ಕಂಡುಬಂದ ಮಂದಹಾಸ ಹಾಗೂ ತೃಪ್ತ ಭಾವವನ್ನು ಕಂಡು ಅವಳು ಬಹಳ ಸಂತೋಷಪಟ್ಟಳು.

ಇದನ್ನು ಆಲಿಸಿದ ಶ್ರೀಮಂತ ಮಹಿಳೆ ತನ್ನಲ್ಲಿ ಹಣ ಇದ್ದು, ಹಣದಿಂದ ಸಂತೋಷ ಕೊಂಡುಕೊಳ್ಳಲು ಸಾಧ್ಯವಿಲ್ಲವೆಂದು ದುಃಖಪಟ್ಟು ಪರಿವರ್ತನೆಗೆ ನಿರ್ಧರಿಸಿದಳು. ನಾವೆಷ್ಟು ಸಂತೋಷ, ತೃಪ್ತಿಯಿಂದ ಇದ್ದೇವೆ ಎನ್ನುವುದರಲ್ಲಿ ಜೀವನದ ರಹಸ್ಯ ಅಡಗಿಲ್ಲ, ಬದಲಾಗಿ ನಮ್ಮಿಂದ ಪರರೆಷ್ಟು ಸಂತೋಷವಾಗಿರಬಹುದು ಮತ್ತು ಅದಕ್ಕಾಗಿ ನಾವು ಮಾಡಬೇಕಾಗಿದ್ದನ್ನು ಮಾಡುವುದರಲ್ಲಿ ಜೀವನದ ಸಾರ್ಥಕತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.