ADVERTISEMENT

ಗೊಮ್ಮಟನ ನಾಲ್ಕು ಸಂದೇಶ

ಡಾ.ಎಂ.ಎ ಜಯಚಂದ್ರ
Published 22 ಫೆಬ್ರುವರಿ 2018, 19:48 IST
Last Updated 22 ಫೆಬ್ರುವರಿ 2018, 19:48 IST

ಇಡೀ ವಿಶ್ವದಲ್ಲೇ ಭರತ-ಬಾಹುಬಲಿಯ ಕಥಾನಕ ಅತಿ ಅಪೂರ್ವವಾದುದು. ಸುಖ, ಶಾಂತಿ, ಪ್ರಗತಿ, ಹಾಗೂ ಸಿದ್ಧಿಯ ದ್ಯೋತಕವಾಗಿದೆ. ಅಲ್ಲದೆ ಅಹಿಂಸೆ, ತ್ಯಾಗ, ಮೈತ್ರಿ ಹಾಗೂ ಧ್ಯಾನದ ಮಹತ್ವವನ್ನು ಎತ್ತಿ ಹಿಡಿಯುವುದು. ಆರು ಭೂಖಂಡಗಳನ್ನು ಜಯಿಸಿ ಹಿಂದಿರುಗುತ್ತಿದ್ದ ಭರತ ಚಕ್ರಿಗೂ; ಸ್ವರಾಜ್ಯ ಸಂರಕ್ಷಣೆಯ ಇಚ್ಛೆಯುಳ್ಳ ಸ್ವಾಭಿಮಾನಿ ಬಾಹುಬಲಿಗೂ ಯುದ್ಧ ಅನಿವಾರ್ಯವಾಗುವುದು.

ಎರಡೂ ಕಡೆಯ ಜನರ ವಿನಾಶವನ್ನು ತಪ್ಪಿಸಲು ಹಿಂಸಾತ್ಮಕ ಯುದ್ಧವನ್ನು ನಿಷೇಧಿಸಲು ಸಮ್ಮತಿಸುವರು. ಜೊತೆಗೆ ಯಾವುದೇ ಪ್ರಕಾರದ ಅಸ್ತ್ರ-ಶಸ್ತ್ರ ಪ್ರಯೋಗವನ್ನು ಸಹ ನಿಷೇಧಿಸುವರು. ಆಗ ಅಹಿಂಸಾತತ್ವ ವಿಜೃಂಭಿಸುವುದು. ಎರಡೂ ಕಡೆಯ ಪೌರ-ಜಾನಪದರು ಯುದ್ಧ ಭೀತಿಯಿಲ್ಲದೆ, ಸುಖದ ಅನುಭೂತಿ ಹೊಂದುವರು. ದೃಷ್ಟಿ-ಜಲ-ಮಲ್ಲ ಎಂಬ ಅಹಿಂಸಾ ಯುದ್ಧದಲ್ಲಿ ಬಾಹುಬಲಿ ವಿಜಯಿಯಾದ. ಪರಾಜಿತ ಭರತ ಕುಪಿತನಾಗಿ ಚಕ್ರ ಪ್ರಯೋಗಿಸಿದ. ಆ ಚಕ್ರರತ್ನ ಚರಮದೇಹಿ ಹಾಗೂ ವಿಜಯಿಯನ್ನು ಛೇದಿಸಲಾರದೆ ನಿಸ್ತೇಜಗೊಂಡಿತು.

ಭರತನ ಸ್ಥಿತಿ ಚಿಂತಾಜನಕವಾಯಿತು. ಆಗ ಬಾಹುಬಲಿ, "ಯಾರು ಈ ಭರತ? ವೃಷಭ ಪುತ್ರನೇ? ರಾಜ್ಯಮೋಹ ವಿವೇಕಿ ಅಣ್ಣನನ್ನು ಅವಿವೇಕಿ ಮಾಡಿತೇ?"' ಎಂದು ಮಿಂಚಿನಂತೆ ಚಿಂತಿಸಿದ. ವಿಜಯದ ತುತ್ತತುದಿ ಯಲ್ಲಿದ್ದವನು ಎಲ್ಲವನ್ನು ಅಣ್ಣನಿಗೆ ತ್ಯಾಗಮಾಡಿ, ಎಲ್ಲ ಕಡೆ ಶಾಂತಿ ನೆಲಸುವಂತೆ ಮಾಡಿದ. ಇದರಿಂದ ಇಬ್ಬರಲ್ಲು ದಿವ್ಯಮೈತ್ರಿ ವೃದ್ಧಿಸಿತು. ಇದರಿಂದ ತಮ್ಮ ತಮ್ಮ ರಂಗದಲ್ಲಿ ಪ್ರಗತಿ ಸಾಧಿಸುತ್ತಾರೆ. ಭರತ ತಮ್ಮನ ಸಹಕಾರದಿಂದ ಚಕ್ರವರ್ತಿ ಆಗುತ್ತಾನೆ. ಅವನ ಆದರ್ಶ ಪ್ರಭುತ್ವದಿಂದ ಆತನ ಸಾಮ್ರಾಜ್ಯ ಭರತಖಂಡ ಎಂಬ ಪ್ರಸಿದ್ಧಿ ಪಡೆಯಿತು. ಇದು ರಾಜಕೀಯ ರಂಗದಲ್ಲಿ ಭರತನು ಪಡೆದ ಪ್ರಗತಿ.

ADVERTISEMENT

ಇತ್ತ ಬಾಹುಬಲಿ ಮುನಿ ಒಂದು ವರ್ಷಕಾಲ ಶಿಲೆಯಂತೆ ನಿಂತು ತಪಸ್ಸು ಮಾಡಿದರು ಫಲ ದೊರೆಯಲಿಲ್ಲ. ಅದರ ಕಾರಣವನ್ನು ಅರಿತಭರತೇಶ್ವರನು, "ಈ ಭೂಮಿ ಯಾರದೂ ಅಲ್ಲ. ಇದರ ವಸ್ತುಸ್ಥಿತಿಯನ್ನು ಪರಿಭಾವಿಸಿ" ಎಂದು ಪ್ರತಿಬೋಧಿಸಿದಾಗ, ತಪೋರಂಗದಲ್ಲಿ ಪ್ರಗತಿ ಸಾಧಿಸುತ್ತಾರೆ. ಜೈನದರ್ಶನದ ಹನ್ನೆರಡು ತಪಗಳಲ್ಲಿ ಮೊದಲನೆಯದು ಅನಶನ ತಪವಾದರೆ, ಕೊನೆಯದು ಧ್ಯಾನತಪ. ಅನಶನ ತಪವೆಂದರೆ ಉಪವಾಸ ತಪ. ಬಾಹುಬಲಿ ನಿರಂತರವಾಗಿ ಒಂದು ವರ್ಷಕಾಲ ಉಪವಾಸ ತಪ ಆಚರಿಸಿದರು. ಇದರಿಂದ ಅವರ ದೇಹ ಕ್ಷಮತೆಯನ್ನು ಅರಿಯಬಹುದಾಗಿದೆ. ಆದ್ದರಿಂದಲೇ ಬಾಹುಬಲಿ ಎಂಬ ಹೆಸರು ಸಾರ್ಥಕವಾಗಿದೆ. ಅಂತ್ಯದಲ್ಲಿ ಧ್ಯಾನತಪದಿಂದ ಸಿದ್ಧಿಯನ್ನು ಪಡೆಯುತ್ತಾರೆ.

- ಹೀಗೆ ಬಾಹುಬಲಿ ಕಥಾನಕದ ಪ್ರತಿಯೊಂದು ಘಟನೆಗಳನ್ನು ಸೂಕ್ಷ್ಮವಾಗಿ ಪರಿಭಾವಿಸಿದಾಗ, "ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ಧಿ" ಎಂಬ ಅಮರ ಸಂದೇಶ ಮನವರಿಕೆ ಆಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.