ADVERTISEMENT

ಪ್ರಾದೇಶಿಕತೆಯ ಹೆಚ್ಚುಗಾರಿಕೆಗೆ ಒತ್ತು

ಕುಲದೀಪ ನಯ್ಯರ್
Published 13 ನವೆಂಬರ್ 2012, 19:30 IST
Last Updated 13 ನವೆಂಬರ್ 2012, 19:30 IST
ಪ್ರಾದೇಶಿಕತೆಯ ಹೆಚ್ಚುಗಾರಿಕೆಗೆ ಒತ್ತು
ಪ್ರಾದೇಶಿಕತೆಯ ಹೆಚ್ಚುಗಾರಿಕೆಗೆ ಒತ್ತು   

ಮುಂದಿನ ಸಾರ್ವತ್ರಿಕ ಚುನಾವಣೆ ಹೇಗಿರುತ್ತದೆ ಎಂಬ ಬಗ್ಗೆ ಈಗಾಗಲೆ ಊಹಾಪೋಹಗಳು ಕೇಳಿ ಬರುತ್ತಲೇ ಇವೆ. ಅದೇನೇ ಇರಬಹುದು, ಮುಂದಿನ ದಿನಗಳಲ್ಲಿ ಭಾರತವನ್ನು ರಾಜಕೀಯ ಏಳುಬೀಳುಗಳ ನೆಲೆಯಲ್ಲಿ ನೋಡುವುದಾದರೆ ಅದು ಒಡೆದ ಮನೆಯಾಗಿರುತ್ತದೆ ಎನ್ನುವುದಂತೂ ನಿಜ. ಸಾಮಾನ್ಯವಾಗಿ ಈ ದೇಶದಲ್ಲಿ ಪ್ರಬಲವಾಗಿ ಎದ್ದು ಕಾಣುವ ಪಕ್ಷಗಳೆಂದರೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳೇ ಹೌದು. ಈ ಎರಡೂ ಪಕ್ಷಗಳು ಬಹುತೇಕ ಮತಗಳನ್ನು ಪಡೆಯಲಿವೆ ಎಂಬುದೊಂದು ಸಾಮಾನ್ಯ ನಂಬಿಕೆ ತಾನೆ. ಆದರೆ ಈಚೆಗೆ ಈ ಎರಡೂ ಪಕ್ಷಗಳು ಜನರ ನಂಬಿಕೆ ಕಳೆದುಕೊಂಡಂತಿವೆ. ಈ ಎರಡೂ ಪಕ್ಷಗಳು ಸ್ಥಾನಗಳಿಕೆಯಲ್ಲಿ ಮೂರರ ಸಂಖ್ಯೆಯನ್ನು ದಾಟುವುದೇ ಕಷ್ಟ ಎಂಬಂತಿದೆ.

ಎಂದಿನಂತೆ ಮತೀಯ ವಿಚಾರ, ತಾತ್ವಿಕ ವಿಷಯಗಳ ಹಣೆಪಟ್ಟಿಗಳನ್ನು ಇಟ್ಟುಕೊಂಡ ಹಲವು ರಾಜಕೀಯ ಪಕ್ಷಗಳೂ ಕಣದಲ್ಲಿರುತ್ತವೆ. ಮತಗಳು ಹೆಚ್ಚು ಹೆಚ್ಚು ಹಂಚಿ ಹೋಗುವುದೂ ನಿಜ. ಕೇವಲ ಐವತ್ತು ಸ್ಥಾನಗಳನ್ನು ಪಡೆಯಲು ಶಕ್ತವಾದ ರಾಜಕೀಯ ಪಕ್ಷ ಕೂಡ ಪ್ರಬಲವಾಗಿ ಎದ್ದು ನಿಂತು, ಕಡಿಮೆ ಸ್ಥಾನಗಳನ್ನು ಹೊಂದಿರುವ ಇತರರನ್ನು ಜತೆಗಿಟ್ಟುಕೊಂಡು ಅಧಿಕಾರದ ಗದ್ದುಗೆ ಏರಲು ಸ್ಪರ್ಧೆಗಿಳಿದರೆ ಅಚ್ಚರಿ ಏನಿಲ್ಲ. 546 ಸದಸ್ಯಬಲದ ಲೋಕಸಭೆಯಲ್ಲಿ ಈ ರೀತಿ ಒಂದೇ ವೇದಿಕೆಯಲ್ಲಿ ವಿಭಿನ್ನ ಪಕ್ಷಗಳ 273 ಸದಸ್ಯರು ನಿಂತರೆಂದರೆ ಅಂತವರು ಅಧಿಕಾರದ ಕೀಲಿಕೈ ಪಡೆಯಲು ಸಾಧ್ಯವಿದೆಯಲ್ಲಾ.

ಕಾಂಗ್ರೆಸ್ ಮತ್ತು ಬಿಜೆಪಿಗಳ ಮೈಮೇಲೆ ಭ್ರಷ್ಟಾಚಾರದ ಹಲವು ಹತ್ತು ಹಗರಣಗಳು ಮೆತ್ತಿಕೊಂಡಿವೆ. ಸ್ವತಃ ಬಿಜೆಪಿಯ ಅಧ್ಯಕ್ಷ ನಿತಿನ್ ಗಡ್ಕರಿಯವರೇ ಹಲವು ಬೇನಾಮಿ ಕಂಪೆನಿಗಳನ್ನು ಹೊಂದಿರುವುದು ಜಗಜ್ಜಾಹೀರಾಗಿದೆ. ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರು ಸಿಲುಕಿಕೊಂಡಿರುವ ಭೂಹಗರಣವೂ ಸೇರಿದಂತೆ ಹತ್ತಾರು ಹಗರಣಗಳು ಕಾಂಗ್ರೆಸ್‌ನ ಪ್ರತಿಷ್ಠೆಯನ್ನು ಮಸುಕಾಗಿಸಿದೆ. ಪರಿಸ್ಥಿತಿ ಹೀಗಿದ್ದರೂ, ಈ ಎರಡೂ ರಾಜಕೀಯ ಪಕ್ಷಗಳು ಅತ್ಯಂತ ಭಂಡತನದಿಂದ ನಡೆದುಕೊಳ್ಳುತ್ತಿರುವುದನ್ನು ಕಂಡು ಜನರಿಗೆ ಹೇಸಿಗೆ ಉಂಟಾಗುವಂತಿದೆ.

ಇಂತಹ ಭ್ರಷ್ಟಾಚಾರದ ಭೂತಗಳು ಮುಂದಿನ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷವನ್ನು ಇನ್ನಿಲ್ಲದಂತೆ ಕಾಡಲಿರುವುದಂತು ನಿಜ. ಎಲ್ಲವೂ ತಮ್ಮ ಮೂಗಿನ ಅಡಿಯಲ್ಲಿಯೇ ನಡೆದರೂ ತಮಗೇನೂ ಗೊತ್ತಿಲ್ಲದಂತಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಭ್ರಷ್ಟಾಚಾರದ ಕೆಸರಿನಿಂದ ಪಾರಾಗಿದ್ದೇನೆಂದು ಹೇಳಿ ಕೊಳ್ಳುವಂತಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಈ ಬಗ್ಗೆ ಪ್ರಧಾನಮಂತ್ರಿಗಳ ಕಾರ್ಯಾಲಯ ಕ್ರಮ ಕೈಗೊಳ್ಳಲೂ ಅವಕಾಶವಿದೆ.

ಇದೀಗ ನಡೆದಿರುವ ಕೇಂದ್ರ ಸಂಪುಟದ ಪುನರ್‌ರಚನೆಯ ಕಸರತ್ತು ಕೂಡಾ ಸಾರ್ವಜನಿಕರ ನಂಬಿಕೆ ಗಳಿಸಲು ಸಾಧ್ಯವಿಲ್ಲ. ಏಕೆಂದರೆ ಕಾಂಗ್ರೆಸ್ ಆ ಮಟ್ಟಿಗೆ ಭ್ರಷ್ಟಾಚಾರದ ಕೆಸರಲ್ಲಿ ಹೂತು ಹೋಗಿದೆ. ಪ್ರಸಕ್ತ ಕೇಂದ್ರ ಸಂಪುಟದಲ್ಲಿರುವವರಲ್ಲಿ ಬಹುತೇಕ ಮಂದಿ ಒಂದೋ ಭ್ರಷ್ಟರಾಗಿದ್ದಾರೆ ಇಲ್ಲವೇ ಅದಕ್ಷರಾಗಿದ್ದಾರೆ. ಇತರರಿಗೆ ಹೋಲಿಸಿದರೆ ಸ್ಪಲ್ಪಮಟ್ಟಿಗೆ ಪ್ರಾಮಾಣಿಕ ಎನ್ನಬಹುದಾದ ಜೈಪಾಲ ರೆಡ್ಡಿಯವರಿಂದ ಪೆಟ್ರೋಲಿಯಂ ಖಾತೆಯನ್ನು ಕಿತ್ತುಕೊಳ್ಳಲಾಗಿದೆ. ಕಾರ್ಪೋರೇಟ್ ಶಕ್ತಿಗಳ ಎದುರು ಕಾಂಗ್ರೆಸ್ ಅಸಹಾಯಕ ಮತ್ತು ಅಂತಹ ಉದ್ಯಮಪ್ರಭುಗಳ ಎದುರು ಕಾಂಗ್ರೆಸ್ ಕೈಕಟ್ಟಿ ನಿಂತುಕೊಂಡಿದೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ. ಮುಂದಿನ ಚುನಾವಣೆಯ ಖರ್ಚುವೆಚ್ಚಕ್ಕೆ ಹಣವನ್ನು ಈಗಿನಿಂದಲೇ ಸಂಗ್ರಹಿಸಬೇಕಲ್ಲ !

ಹಾಗೆ ನೋಡಿದರೆ ಹೊರನೋಟಕ್ಕೆ ಬಿಜೆಪಿಯವರು ಕಾಂಗ್ರೆಸ್‌ನಷ್ಟು ಕೆಟ್ಟಂತೆ ಕಾಣುತ್ತಿಲ್ಲ. ಇದರಲ್ಲಿ ವಿಶೇಷವೇನಿಲ್ಲ. ಏಕೆಂದರೆ ಕಳೆದ ಎಂಟು ವರ್ಷಗಳಿಂದ ಬಿಜೆಪಿಯವರ ಕೈಗೆ ಅಧಿಕಾರ ಸಿಕ್ಕಿಲ್ಲವಲ್ಲ. ಆದರೆ ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ಬಿಜೆಪಿಗೆ ಅದೆಷ್ಟು ಕೆಟ್ಟ ಹೆಸರು ತರಬೇಕೋ, ಅಷ್ಟನ್ನೂ ತಂದಿದೆ. ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಹಗರಣಗಳು ಪ್ರಮುಖ ಪಾತ್ರ ವಹಿಸುವುದಿಲ್ಲ ಎಂಬುದನ್ನೂ ನಾವು ನೆನಪಲ್ಲಿಟ್ಟುಕೊಳ್ಳಬೇಕು."

ನಿತಿನ್ ಗಡ್ಕರಿ ಮೇಲೆ ಇಷ್ಟು ದೊಡ್ಡ ಮಟ್ಟದ ಹಗರಣದ ಆರೋಪವಿದ್ದರೂ ಬಿಜೆಪಿ ಪಕ್ಷವು ಅವರನ್ನೇ ಬೆಂಬಲಿಸುತ್ತಿದೆ. ಆರ್‌ಎಸ್‌ಎಸ್ ಬೆಂಬಲವಿದ್ದರೆ ಎಂತಹವರನ್ನೂ ಬಿಜೆಪಿಯಲ್ಲಿ ಅಲ್ಲಾಡಿಸಲು ಸಾಧ್ಯವಿಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಈ ವಿಷಯಗಳನ್ನೆಲ್ಲಾ ಬದಿಗಿಟ್ಟು ನರೇಂದ್ರ ಮೋದಿಯ ವಿಷಯವನ್ನೇ ನೋಡಿ. ಗುಜರಾತ್‌ನಲ್ಲಿ ದಶಕದ ಹಿಂದೆ ಒಂದು ಕೋಮಿನ ಜನರ ಮಾರಣಹೋಮ ನಡೆಸಲೆತ್ನಿಸಿದ ನರೇಂದ್ರ ಮೋದಿಯವರನ್ನೇ ಪ್ರಧಾನ ಮಂತ್ರಿ ಸ್ಥಾನಕ್ಕೆ ತನ್ನ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದರೆ ಅಚ್ಚರಿ ಇಲ್ಲವೇ ಇಲ್ಲ.

ಕಾಂಗ್ರೆಸ್ ಇವತ್ತಿಗೂ ಜಾತ್ಯತೀತ ಧೋರಣೆ ಹೊಂದಿರುವ ಪಕ್ಷ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಇದು ಈ ಪಕ್ಷಕ್ಕೆ ಅನುಕೂಲಕರವಾದ ಸಂಗತಿಯೇ ಹೌದು. ಆದರೆ ರಾಜ್ಯಗಳಲ್ಲಿ ಅಥವಾ ಪ್ರಾದೇಶಿಕ ನೆಲೆಯಲ್ಲಿ ಮುಸ್ಲಿಮರು ಕಾಂಗ್ರೆಸ್‌ನಿಂದ ದೂರವಾಗುತ್ತಿದ್ದಾರೆ. ಬಿಜೆಪಿಗೆ ಪ್ರಬಲ ಪರ್ಯಾಯವೆನಿಸುವ ಪಕ್ಷಗಳತ್ತ ಮುಸ್ಲಿಮರು ವಾಲುತ್ತಿರುವುದು ವಾಸ್ತವ ಸಂಗತಿಯಾಗಿದೆ. ನೇರ ಸ್ಪರ್ಧೆಗಳು ಕಂಡು ಬರುವಲ್ಲೆಲ್ಲಾ ಮುಸ್ಲಿಮ್ ಮತದಾರರು ಕಾಂಗ್ರೆಸ್‌ನ ಜತೆಗೆ ನಿಲ್ಲುತ್ತಾರೆ. ಆದರೆ ಬಹುಪಕ್ಷಗಳು ಪೈಪೋಟಿ ನಡೆಸುವ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರಗಳಲ್ಲಿ ಪರಿಸ್ಥಿತಿ ಆ ತೆರನಾಗಿಲ್ಲವಲ್ಲ. ಸೋನಿಯಾ ಗಾಂಧಿಯ ಒತ್ತಡದಿಂದಾಗಿ, ಅವರ ಆಟದ ಬೊಂಬೆಯಂತೆ ನಡೆದುಕೊಳ್ಳುತ್ತಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ಪ್ರಜ್ಞಾವಂತ ಮತದಾರರು ಭ್ರಮನಿರಸನಗೊಂಡಿದ್ದಾರೆ. ಹೀಗಾಗಿ ಮೂರನೇ ಪರ್ಯಾಯದ ಬಗ್ಗೆ ಹುಡುಕಾಟ ಹೆಚ್ಚಾಗತೊಡಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳು ಜನಸಾಮಾನ್ಯರ ನಂಬಿಕೆ ಕಳೆದುಕೊಂಡಿರುವುದು ಎದ್ದುಕಾಣುತ್ತಿರುವ ಈ ಸಂದಿಗ್ಧ ಕಾಲಘಟ್ಟದಲ್ಲಿಯೇ ರಾಜ್ಯಗಳಲ್ಲಿ ತಮ್ಮ ಬಲವಾದ ಬೇರುಗಳನ್ನು ಇಳಿಸಿಕೊಂಡಿರುವ ಕೆಲವು ಪಕ್ಷಗಳು ಅಲ್ಲಿನ ಮಟ್ಟಿಗೆ ಎತ್ತರದಿಂದ ಎತ್ತರಕ್ಕೇರುತ್ತಿವೆ. ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಲ್ಲಿ ನಡೆದ ಚುನಾವಣೆಗಳ ಫಲಿತಾಂಶಗಳೇ ಈಚೆಗೆ ಮತದಾರರ ಒಲವು ನಿಲುವುಗಳಿಗೆ ಹಿಡಿದ ಕೈಗನ್ನಡಿಯಂತಿವೆ. ಇಂತಹ ವಾತಾವರಣವೇ ಇವತ್ತು ದೇಶದಾದ್ಯಂತ ಕಂಡು ಬರುತ್ತಿದೆ.

ಮತದಾರರ ಈ ಧೋರಣೆ ಅವರು ಪ್ರಾಂತೀಯ ಭಾವನೆಗಳಿಗೆ ಹೆಚ್ಚು ಸ್ಪಂದಿಸುತ್ತಿರುವುದರ ದ್ಯೋತಕ ಎಂದು ನಾವಂದುಕೊಳ್ಳಬೇಕಿಲ್ಲ. ಆದರೆ ಅಖಿಲ ಭಾರತ ಮಟ್ಟದ ಪಕ್ಷಗಳು ಒಕ್ಕೂಟ ಭಾರತದ ಮೌಲ್ಯಗಳಿಗೆ ಸಮರ್ಥವಾಗಿ ಸ್ಪಂದಿಸುವಲ್ಲಿ ವೈಫಲ್ಯ ಕಂಡಿವೆ ಎಂದು ನಾವು ಭಾವಿಸಬೇಕಾಗುತ್ತದೆ. ಹೀಗಾಗಿ, ಮುಂದಿನ ಸಾರ್ವತ್ರಿಕ ಚುನಾವಣೆಯು ಹತ್ತು ಹಲವು ಸಣ್ಣಪುಟ್ಟ ಪಕ್ಷಗಳ ಆಡುಂಬೊಲವಾಗಲಿದೆ. ಅತೀ ಸಣ್ಣ ಪಕ್ಷವೊಂದು ದೇಶದ ರಾಜಕಾರಣಕ್ಕೆ ಹೊಸ ತಿರುವು ನೀಡುವಂತಹ ಶಕ್ತಿಯಾಗಿಯೂ ಕಂಡು ಬರುವ ಸಾಧ್ಯತೆ ಇದೆ. ಜಾಟರು, ದಲಿತರು ಅಥವಾ ರಜಪೂತರು, ಯಾದವರು ತಮ್ಮ ಸಾಮಾಜಿಕ ನೆಲೆಯ ಶಕ್ತಿಯನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪರಿಣಾಮಕಾರಿಯಾಗಿ ಬಳಸಿಕೊಳ್ಳಲೂಬಹುದು. ಇಂತಹ ಸಂಗತಿಗಳೆಲ್ಲಾ ದೇಶವನ್ನು ಒಡೆಯುತ್ತಿದೆ ಎಂದು ನಾವೆಂದುಕೊಳ್ಳಲೇ ಬೇಕಿಲ್ಲ. ಏಕೆಂದರೆ ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ ಎನ್ನುವುದನ್ನೂ ನಾವು ಮರೆಯುವಂತಿಲ್ಲ.

 ಪ್ರಾದೇಶಿಕ ನೆಲೆಯ ಅಸ್ತಿತ್ವನ್ನು ಎತ್ತಿತೋರುವ ನಿಟ್ಟಿನ ಧ್ವನಿ ಮತ್ತು ಪ್ರಾದೇಶಿಕ ಮಟ್ಟದ ಬೇಡಿಕೆಗಳು ಮುಂದಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡಲಿರುವುದೂ ನಿಜ. ಇಂತಹ ಧ್ವನಿಗಳನ್ನು ರಾಷ್ಟ್ರವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ನೋಡುವ ಕಾಲವಂತೂ ಹೊರಟು ಹೋಗಿದೆ. ಅಂತಹ ಶಕ್ತಿಗಳ ಸದ್ದಡಗಿಸುವುದು ಸುಲಭವಲ್ಲ. ಆದರೆ ಅಧಿಕಾರ ವಿಕೇಂದ್ರಿಕರಣವನ್ನೇ ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ದಿಸೆಯಲ್ಲಿ ಹೆಜ್ಜೆ ಇಡಬೇಕಿದೆ. ಕೇಂದ್ರ ಸರ್ಕಾರದಲ್ಲಿ ಅತ್ಯಂತ ಹೆಚ್ಚಿನ ಅಧಿಕಾರವಿದೆ ಎನ್ನುವುದಂತೂ ನಿಜ. ಇದು ಈ ನಾಡಿನ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳಿಗೆ ವಿರುದ್ಧವಾದಂತಹದ್ದು. ಈ ಹಿನ್ನೆಲೆಯಲ್ಲಿಯೇ ಬಿಹಾರ ರಾಜ್ಯದವರು ತಮಗೆ ವಿಶೇಷ ಸ್ಥಾನಮಾನ ನೀಡಬೇಕೆಂದು ಧ್ವನಿ ಎತ್ತಿರುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜ್ಯಗಳು ಬಿಹಾರದಂತೆಯೇ ಸದ್ದು ಮಾಡಬಹುದು. ಸಾರ್ವತ್ರಿಕ ಚುನಾವಣೆಯ ನಂತರ ಇಂತಹ ಧ್ವನಿ ಹೆಚ್ಚಾಗಲಿವೆಯಷ್ಟೇ ಅಲ್ಲ, ಪ್ರಾದೇಶಿಕ ಮೌಲ್ಯಗಳನ್ನು ಒಡಲಲ್ಲಿಟ್ಟುಕೊಂಡಿರುವವರೇ ರಾಷ್ಟ್ರ ರಾಜಕಾರಣದ ಮುಂಚೂಣಿಗೆ ಬರಲೂಬಹುದು.

ಭಾರತದ ಸಂವಿಧಾನದಲ್ಲಿ ರಾಜ್ಯಗಳಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಬಹಳ ಜಾಗರೂಕತೆಯ ನಡೆಗಳನ್ನು ಕಾಣಬಹುದಾಗಿದೆ. ಹೀಗಾಗಿ ರಾಜ್ಯಗಳಿಗೆ ಇನ್ನಷ್ಟು ಅಧಿಕಾರ ನೀಡುವ ಬಗ್ಗೆ ಮರುಚಿಂತನೆ ನಡೆಸಲು ಇದು ಸಕಾಲವಾಗಿದೆ.

ಸಂವಿಧಾನದ 370ನೇ ಕಲಮಿನ ಪ್ರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಇದೊಂದು ತಾತ್ಕಾಲಿಕ ಅವಕಾಶವಷ್ಟೇ. ಇದು ಅನಿರ್ದಿಷ್ಟ ಕಾಲದವರೆಗೂ ಮುಂದುವರಿಯಲೇ ಬೇಕಾದ ಪರಿಸ್ಥಿತಿ ಇದೆ. ಇದೇ ಸ್ಥಾನಮಾನವನ್ನು ಇತರ ರಾಜ್ಯಗಳಿಗೂ ನೀಡಬಾರದೇಕೆ ಎಂಬ ಪ್ರಶ್ನೆ ಇದೀಗ ಧುತ್ತೆನ್ನತೊಡಗಿದೆ.

ಕೇಂದ್ರ ಸರ್ಕಾರ ರಕ್ಷಣಾ ಖಾತೆ, ವಿದೇಶ ವ್ಯವಹಾರ, ಕರೆನ್ಸಿ ಮತ್ತು ಯೋಜನೆ, ಸಂಪರ್ಕ ಖಾತೆಗಳನ್ನು ತನ್ನಲ್ಲಿಯೇ ಇಟ್ಟುಕೊಳ್ಳಬೇಕು, ನಿಜ. ಇದಲ್ಲದೆ ಇನ್ನೂ ಒಂದೆರಡು ಪ್ರಮುಖ ಖಾತೆಗಳನ್ನು ತನ್ನಲ್ಲಿರಿಸಿಕೊಳ್ಳಲಿ. ಪರವಾಗಿಲ್ಲ. ಆದರೆ ಅದಕ್ಕಿಂತ ಹೆಚ್ಚು ಬೇಡ. ಇದರಿಂದ ಕೇಂದ್ರ ತೀರಾ ಶಕ್ತಿಶಾಲಿಯಾಗುವುದು ತಪ್ಪುತ್ತದೆ. ಆಗ ಕೇಂದ್ರ ಸರ್ಕಾರ ತನ್ನಷ್ಟೇ ಸಮರ್ಥರಾಗಿರುವ ಇತರರ ನಡುವೆ ಒಬ್ಬ ಅರ್ಥಪೂರ್ಣ ಮುಖಂಡನಾಗಿರಬಹುದು. ಈ ನಡುವೆ ಒಂದು ಮಾತನ್ನು ನಾವು ಗಮನದಲ್ಲಿಟ್ಟುಕೊಳ್ಳಲೇಬೇಕು. ಅಧಿಕಾರ ವಿಕೇಂದ್ರೀಕರಣ ಎನ್ನುವುದು ಕೇವಲ ದೆಹಲಿಯಿಂದ ರಾಜ್ಯಗಳ ರಾಜಧಾನಿಗಳಿಗಷ್ಟೇ ಸೀಮಿತಗೊಳ್ಳಬಾರದು.

ಜಿಲ್ಲಾಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ, ಗ್ರಾಮ ಪಂಚಾಯತಿಗಳ ಮಟ್ಟದವರೆಗೂ ಅಧಿಕಾರ ವಿಕೇಂದ್ರೀಕರಣ ಎನ್ನುವುದು ಅತ್ಯಂತ ಪರಿಣಾಮಕಾರಿಯಾಗಿರಬೇಕು. ಆಗ ಮಾತ್ರ ಜನರಿಗೆ ತಮ್ಮನ್ನು ತಾವೇ ಆಳಿಕೊಳ್ಳುತ್ತಿದ್ದೇವೆ ಎಂದೆನಿಸಲು ಸಾಧ್ಯ. ಆಗಲೇ ಪ್ರಜಾಪ್ರಭುತ್ವದ ನಿಜಮೌಲ್ಯಗಳು ಜೀವ ತುಂಬಿಕೊಳ್ಳುತ್ತವೆ. ಪ್ರಾದೇಶಿಕ ಪಕ್ಷಗಳು ಇಂತಹ ಸತ್ಯಗಳನ್ನು ಅರಿತುಕೊಂಡು, ಪ್ರಜಾಸತ್ತೆಯ ನಿಜಮೌಲ್ಯಗಳನ್ನು ತಮ್ಮಲ್ಲಿ ಆಳವಡಿಸಿಕೊಂಡಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಆಗ ಮಾತ್ರ ಅವು ಪ್ರಸಕ್ತ ಅಖಿಲ ಭಾರತ ಮಟ್ಟದ ಪಕ್ಷಗಳು ಜಾರುತ್ತಿರುವ ದುರಂತದತ್ತ ಬೀಳುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ.


ನಿಮ್ಮ ಅನಿಸಿಕೆ ತಿಳಿಸಿ:

(editpagefeedback@prajavani.co.in)

 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.