ADVERTISEMENT

ಹೊಸ ಸಾಧ್ಯತೆಗಳ ಜಾಡು ಹುಡುಕುತ್ತಾ...

ಕುಲದೀಪ ನಯ್ಯರ್
Published 13 ಮೇ 2014, 19:30 IST
Last Updated 13 ಮೇ 2014, 19:30 IST
ಹೊಸ ಸಾಧ್ಯತೆಗಳ ಜಾಡು ಹುಡುಕುತ್ತಾ...
ಹೊಸ ಸಾಧ್ಯತೆಗಳ ಜಾಡು ಹುಡುಕುತ್ತಾ...   

ಕೆಲವು ದಿನಗಳ ಹಿಂದೆ ನಾನು ಢಾಕಾ ನಗರಕ್ಕೆ ಹೋಗಿದ್ದೆ. ಭಾರತದಲ್ಲಿ ನಡೆದ ಚುನಾವಣೆ ಪ್ರಕ್ರಿಯೆ ಬಗ್ಗೆ ಅಲ್ಲಿನ ಬಹುತೇಕ ಮಂದಿ ಕುತೂಹಲ ಹೊಂದಿದ್ದರು. ಎಲ್ಲವನ್ನೂ ಆಸಕ್ತಿ­ಯಿಂದ ಗಮನಿಸುತ್ತಿದ್ದರು. ನಮ್ಮ ಚುನಾ­ವಣೆಯ ಬಹಳಷ್ಟು ಸೂಕ್ಷ್ಮ ವಿಚಾರಗಳೆಲ್ಲವೂ ಅವರಿಗೆ ಗೊತ್ತಿತ್ತು. ಯಾವ ಪ್ರದೇಶದ ಜನರ ಅಭಿಪ್ರಾಯ ಎಂತಹದ್ದು, ಜನರ ಒಲವು ಯಾವ ಪಕ್ಷದ ಕಡೆಗಿದೆ ಎಂಬಂತಹ ಸಂಗತಿಗಳೆಲ್ಲವೂ ಅವ­ರಿಗೆ ಗೊತ್ತಿದ್ದಂತಿತ್ತು. ಭಾರತದ ಸುದ್ದಿ ವಾಹಿ­ನಿ­­ಗಳೆಲ್ಲವನ್ನೂ ಬಾಂಗ್ಲಾದೇಶದ ಜನ ಆಸಕ್ತಿ­­ಯಿಂದ ನೋಡುತ್ತಾರೆ. ಸುದ್ದಿಗಳ ಬಗ್ಗೆ ಚರ್ಚಿಸು­ತ್ತಾರೆ. ಆದರೆ ಪಾಕಿಸ್ತಾನದಲ್ಲಿ ಈ ವಾಹಿನಿ­ಗಳ ಪ್ರಸಾರಕ್ಕೆ ಅವಕಾಶವಿಲ್ಲ.

ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ­ದೇಶಿ ಪ್ರಜೆಗಳೆಲ್ಲರೂ ಗಂಟುಮೂಟೆ ಕಟ್ಟಬೇಕಾ­ಗು­­ತ್ತದೆ ಎಂದು ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಯ ಬಗ್ಗೆ ಬಾಂಗ್ಲಾದ ಜನರಲ್ಲಿ ಸಾತ್ವಿಕ ಕೋಪ ಇರುವುದನ್ನೂ ನಾನು ಕಂಡಿ­ದ್ದೇನೆ. ನರೇಂದ್ರ ಮೋದಿ ಪ್ರಧಾನಿಯಾಗುವುದು ಬಾಂಗ್ಲಾದಲ್ಲಿ  ಯಾರಿಗೂ ಇಷ್ಟವಿದ್ದಂತಿಲ್ಲ. ಬಾಂಗ್ಲಾದೇಶ  ಹುಟ್ಟು ಪಡೆದ ದಿನದಿಂದಲೂ ಎರಡೂ ದೇಶಗಳ ನಡುವೆ ಇರುವ ಮಧುರ ಸಂಬಂಧವನ್ನು ಮೋದಿ ಕೆಡಿಸಿ ಬಿಡುತ್ತಾರೇನೋ ಎಂಬ ಆತಂಕ ಬಾಂಗ್ಲಾ ಜನರಲ್ಲಿ ಕಂಡು ಬರುತ್ತಿದೆ.

ಢಾಕಾ ನಗರಕ್ಕೆ ಹೋಗಿ ಬಂದ ಮೇಲೆ ನಮ್ಮ  ಚುನಾವಣೆಯ ಆಗುಹೋಗುಗಳನ್ನು ಬೇರೆಯೇ ದೃಷ್ಟಿಕೋನದಿಂದ ನಾನು ನೋಡುವಂತಾಗಿದೆ. ರಾಜಕಾರಣದೊಳಗೆ ಮತೀಯ ವಿಚಾರಗಳು ಬೆರೆ­­ತಿರು­ವುದನ್ನೂ ನಾನು ಕಂಡಿದ್ದೇನೆ. ಹಲವು ಧರ್ಮ, ಸಂಸ್ಕೃತಿ ಹಾಗೂ ಭಾಷೆಗಳ ಸಮ್ಮಿಲನದ ಪ್ರವಾಹದಂತಿರುವ ಈ ನೆಲದಲ್ಲಿ ಮೋದಿ ಮತ್ತು­ ಬಿಜೆಪಿಯ ಮಂದಿ ಹಿಂದೂ ನಾಮಫಲಕ ಹಿಡಿದುಕೊಂಡು ಜನರನ್ನು ವಿಭಜಿಸುತ್ತಿದ್ದಾರೆ. ಮೋದಿ ಅವರು ಮನುಷ್ಯ ಮನುಷ್ಯರ ನಡುವಣ ಸಂಬಂಧಕ್ಕೆ ಮಾಡಿರುವ ಇಂತಹದ್ದೊಂದು ಹಾನಿ­­­ಯನ್ನು ಸರಿಪಡಿಸಲು ಮುಂದಿನ ದಿನ­ಗಳಲ್ಲಿ ಬಹಳ ಶ್ರಮಪಡಬೇಕಾಗುತ್ತದೆ. ಪ್ರಜಾಸ­ತ್ತೆಯ ಈ ನಾಡಿನಲ್ಲಿ ಜನರು ಸುಖವಾಗಿ ಒಗ್ಗೂಡಿ ಬದುಕುವುದಕ್ಕೆ ಸಂಬಂಧಿಸಿದಂತೆ ಕಂಡಿದ್ದ ಕನಸುಗಳು ಛಿದ್ರಗೊಳ್ಳುತ್ತಿವೆ. ಹಿಂದೂ ಮತ್ತು ಮುಸ್ಲಿಮರ ನಡುವಣ ಸಂಬಂಧ ಹಾಳಾ­ಗ­ದಂತೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನ­ದಿಂದಲೂ ಜಾಗರೂಕತೆಯಿಂದ ಎಲ್ಲರೂ ಹೆಜ್ಜೆ ಇಡುತ್ತಾ ಬಂದಿರುವುದು ಗೊತ್ತಿರುವಂತಹದ್ದೇ. ಆದರೆ ಮೋದಿ ಅವರು ಈಗ ಈ ಎರಡೂ ಧರ್ಮೀಯರ ನಡುವಣ ಬಿರುಕನ್ನು ದೊಡ್ಡ ಮಟ್ಟದಲ್ಲಿಯೇ ಹೆಚ್ಚಿಸಿದ್ದಾರೆ.

ಈ ದೇಶದ ರಾಜಕಾರಣದೊಳಗೆ ಕೋಮು ವಿಷ ಬೀಜ ಬಿತ್ತಿರುವುದನ್ನು ಮುಂದೊಂದು ದಿನ ಸಂಪೂರ್ಣವಾಗಿ ಕಿತ್ತೆಸೆಯಬಹುದು. ಆದರೆ ಜನರ ನಡುವಣ ಪರಸ್ಪರ ಅಪನಂಬಿಕೆ ಮತ್ತು ದ್ವೇಷದ ಭಾವನೆಗಳನ್ನು ಹೋಗಲಾಡಿಸಲು ಅದೆಷ್ಟು ವರ್ಷಗಳು ಬೇಕಾಗಬಹುದೋ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಉಭಯ ಧರ್ಮ­ಗಳಲ್ಲಿರುವ ಉದಾರವಾದಿಗಳ ಎದುರು ಬಲು ದೊಡ್ಡ ಜವಾಬ್ದಾರಿ ಇದೆ. ಇವರು ಜನಸಮುದಾಯದೊಳಗೆ ಜಾತ್ಯತೀತ ಮೌಲ್ಯ­ಗಳ ಬೇರಿಳಿಸುವ ಕೆಲಸಗಳನ್ನು ಮಾಡಲೇ­ಬೇಕಾಗಿದೆ.

ಈ ದೇಶದ ಜನರು ತಮ್ಮ ಮೇಲಿಟ್ಟಿದ್ದ ನಂಬಿಕೆ­ಯನ್ನು ಕಾಂಗ್ರೆಸ್‌ ಹುಸಿಗೊಳಿಸಿದೆ ಎನ್ನು­ವು­ದರಲ್ಲಿ ಎರಡು ಮಾತಿಲ್ಲ. ಸಹಜವಾಗಿಯೇ ಜನ ಬದಲಾವಣೆಯನ್ನು ಬಯಸಿದ್ದಾರೆ. ಆರ್ಥಿ­ಕಾ­ಭಿವೃದ್ಧಿಯೇ ಆಗಲಿ, ದಕ್ಷ ಆಡಳಿತವೇ ಇರಲಿ ಕಾಂಗ್ರೆಸ್‌ ವಿಫಲಗೊಂಡಿದೆ. ಜನ ಕಾಂಗ್ರೆಸ್‌ಗೆ ಪರ್ಯಾಯವನ್ನು ಇಷ್ಟಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಆಮ್‌ ಆದ್ಮಿ ಪಕ್ಷ ಧುತ್ತೆಂದಿದೆ. ಆದರೆ ಇದು ಉತ್ತರ ಭಾರತದ ಕೆಲವು ನಗರ­ಗಳ­ಲ್ಲಷ್ಟೇ ಸುದ್ದಿ ಮಾಡುತ್ತಿದೆ. ಮೋದಿ ನೇತೃ­ತ್ವದ ಬಿಜೆಪಿಯತ್ತ ಸಹಜವಾಗಿಯೇ ಜನ ನೋಡು­ತ್ತಿ­ದ್ದಾರೆನ್ನುವುದೂ ನಿಜ. ಹೀಗಾಗಿ, ಮೋದಿ ನೇತೃತ್ವದ ಬಿಜೆಪಿಗೆ ಸಿಕ್ಕಿರುವುದು ಸಕಾರಾ­ತ್ಮಕ  ಮತಗಳು ಎಂದು ಆ ಪಕ್ಷ ಬೀಗುವ ಅಗತ್ಯವೇನಿಲ್ಲ.

ಮನಮೋಹನ್‌ ಸಿಂಗ್‌ ಅವರ ನೇತೃತ್ವದ ಯುಪಿಎ ಸರ್ಕಾರ ಒಂದು ದಶಕದ ಕಾಲ ಆಡ­ಳಿತ ನಡೆಸಿತ್ತಲ್ಲಾ, ಏನನ್ನು ಸಾಧಿಸಿದೆ ಹೇಳಿ. ಹಿಂತಿ­ರುಗಿ ನೋಡಿದಾಗ ಎಲ್ಲವೂ ನೀರಸ ಎನಿಸು­ತ್ತಿದೆ. ಹತ್ತು ಹಲವು ಹಗರಣಗಳ ಮಾಹಿತಿಗ­ಳಷ್ಟೇ ಸ್ಮೃತಿಪಟಲದಲ್ಲಿ ಮೂಡುತ್ತವೆ.
ಮೋದಿ ಅವರು ಈ ಚುನಾವಣೆಯ ಸಂದರ್ಭ­ದಲ್ಲಿ ಬೇಜವಾಬ್ದಾರಿತನದಿಂದ ನೀಡಿದ ಕೆಲವು ಹೇಳಿಕೆಗಳು ಕಾಂಗ್ರೆಸ್‌ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗಿದೆಯಷ್ಟೆ. ಆದರೆ ರಾಹುಲ್‌ ಗಾಂಧಿ ಅವರ ಅಪಕ್ವ ಅಣಿಮುತ್ತು­ಗಳಿಂದಾಗಿ ಮುಂದೆ ಪ್ರಾದೇಶಿಕ ಪಕ್ಷಗಳ ಜತೆ­ಗೂಡಿ ನಡೆಯುವ ಕಾಂಗ್ರೆಸ್‌ನ ಸಾಧ್ಯತೆಗಳಿಗೆ ತಣ್ಣೀರು ಎರಚಿದಂತಾಗಿದೆ.

ಈ ದೇಶದಲ್ಲಿ ಚುನಾವಣಾ ಆಯೋಗ ಉತ್ತಮ ಕೆಲಸವನ್ನೇ ಮಾಡುತ್ತಿದೆ ನಿಜ. ಅದೊಂದು ಸ್ವಾಯತ್ತ ಸಂಸ್ಥೆಯೂ ಹೌದು. ಆದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ­ಯಾ­ಗಿರುವ ಬಹಳಷ್ಟು ಪ್ರಸಂಗಗಳಲ್ಲಿ ಅದು ಕೈಕಟ್ಟಿ ಕುಳಿತಿರುವುದೂ ನಿಜ ತಾನೆ? ಮೋದಿ ಪ್ರಚೋದನಕಾರಿ ಭಾಷಣ ಮಾಡುತ್ತಾರೆಂಬ ಮಾತಿದೆಯಲ್ಲಾ, ಆ ಬಗ್ಗೆ ಹಲವು ಕಡೆಯಿಂದ ಪ್ರತಿರೋಧ ಕೇಳಿ ಬಂದಿತ್ತು. ಆಗ ‘ಅಂತಹ ಭಾಷಣ ಮಾಡಿದ್ದರೆ ತೋರಿಸಿ’ ಎಂದು ಸ್ವತಃ ಮೋದಿ ಅವರೇ ಚುನಾವಣಾ ಆಯೋಗಕ್ಕೆ ಸವಾಲು ಒಡ್ಡಿದ್ದರು. ಆದರೆ ಚುನಾವಣಾ ಆಯೋಗ ಮುಂದಡಿ ಇಡಲೇ ಇಲ್ಲ.

ಈ ಸಲದ ಸಾರ್ವತ್ರಿಕ ಚುನಾವಣೆಯಲ್ಲಿ ಕಂಡು ಬಂದ ಬೇಸರದ ಸಂಗತಿಯೊಂದಿದೆ. ಅದು ಈ ನಾಡಿನಲ್ಲಿ ಎಡಪಂಥೀಯರ ಬಲ ಕುಗ್ಗಿರು­ವುದು. ಅವರ ಪ್ರಭಾವ ಕಡಿಮೆಯಾಗಿರುವುದು. ಮೂಲಭೂತವಾದಿಗಳ ಚಟುವಟಿಕೆಗಳಿಗೆ ಮೂಗು­­ದಾರ ಹಾಕಲು ಅವರು ಸಮರ್ಥರಿ­ದ್ದರು. ಜತೆಗೆ ಅವರು ಜಾತ್ಯತೀತ ಶಕ್ತಿಗಳ ಜತೆಗೂಡಿ ಎತ್ತರದಿಂದ ಎತ್ತರಕ್ಕೆ ಬೆಳೆಯಬಹು­ದಿತ್ತು. ಆದರೆ ಆ ರೀತಿ ಆಗುತ್ತಿಲ್ಲ. ಭಾರತದ­ಲ್ಲಷ್ಟೇ ಅಲ್ಲ, ಏಷ್ಯಾ ಖಂಡದಲ್ಲಿಯೇ ಎಡಪಂಥೀ­ಯರ ಪ್ರಭಾವ ಈಚೆಗೆ ಮಸುಕಾಗುತ್ತಿರು­ವು­ದೊಂದು ದುರಂತ.

ನಲವತ್ತರ ದಶಕದಲ್ಲಿ ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ, ‘ನಿನಗೆ ವಯಸ್ಸು 25 ದಾಟಿ­ದಾ­ಗಲೂ ನೀನು ಎಡಪಂಥೀಯನಾಗಲಿಲ್ಲ ಎಂದಾ­ದರೆ ವೈದ್ಯರನ್ನು ಭೇಟಿಯಾಗಿ ನಿನ್ನ ಆರೋಗ್ಯ ತಪಾಸಣೆ ನಡೆಸು’ ಎಂಬ ಮಾತು ಬಹಳ ಪ್ರಚ­ಲಿ­ತ­ದಲ್ಲಿತ್ತು. ಆದರೆ ವರ್ಷಗಳು ಉರುಳಿದಂತೆ ಅಂತಹ ಮಾತು ಅರ್ಥ ಕಳೆದುಕೊಳ್ಳುತ್ತಾ ಬಂದಿತು. ಹಿಂದೆಲ್ಲಾ ದ್ವೀಪಗಳಂತಿದ್ದ ಬಲಪಂಥೀ­ಯರ ಸ್ಥಾನ ಬದಲಾಗತೊಡಗಿತು. ಬಲಪಂಥೀ­ಯರು ಶಕ್ತಿಮೀರಿ ಕೆಲಸ ಮಾಡತೊಡಗಿದರು. ಜನಮನ ತಟ್ಟ ತೊಡಗಿದರು. ಯುವಜನರ ಮನ­ಸ್ಸಿಗೆ ಬಲಪಂಥೀಯ ವಿಚಾರಗಳನ್ನು ತುಂಬ­ತೊಡಗಿ, ಅವರ ಮನ ಗೆಲ್ಲತೊಡಗಿದರು. ಇವತ್ತು ಕಾರ್ಲ್‌ ಮಾರ್ಕ್‌್ಸ ವಿಚಾರ ಕೇವಲ ಆಸಕ್ತರ ಓದಿನ ಮಟ್ಟದಲ್ಲೇ ನಿಂತು ಹೋಗಿದೆ. ಮಾರ್ಕ್ಸ್‌ ವಿಚಾರಧಾರೆಯ ಬಗ್ಗೆ ಚರ್ಚಿಸು­ವ­ವರ ಸಂಖ್ಯೆಯೂ ಇಳಿಮುಖವಾಗುತ್ತಿದೆ.

ಇವತ್ತು ಚುನಾವಣಾ ಸಂದರ್ಭದಲ್ಲಿ ಎಡ­ಪಂಥೀಯ ಚಿಂತನೆ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯಲಿಲ್ಲ ಎನ್ನುವುದು ನನಗೆ ಅಚ್ಚರಿ ಉಂಟು ಮಾಡ­ಲಿಲ್ಲ. ಕಮ್ಯುನಿಸ್ಟರೆಂದು ತಮ್ಮನ್ನು ಗುರುತಿ­ಸಿ­­ಕೊಂಡಿರುವವರೇ ಈ ಸಲ ಸಮ ­ಸಮಾಜದ ಬಗ್ಗೆ ಹೆಚ್ಚು ಮಾತನಾಡಲೇ ಇಲ್ಲ. ಮನ­ಮೋಹನ್‌ ಸಿಂಗ್‌ ಅವರ ನೇತೃತ್ವದ ಸರ್ಕಾರ ಉದಾರವಾದಿ ಆರ್ಥಿಕತೆಗೆ ನೀಡಿದ ಮಹತ್ವ ಸರಿಯಾದುದು ಎಂದೇ ಅಂತಹ ಕಮ್ಯುನಿಸ್ಟರೂ ಅಂದುಕೊಂಡಿರಬೇಕೆನಿಸುತ್ತದೆ. ಇವತ್ತು ದೇಶ­ದಲ್ಲಿ ಮುಕ್ತ ಆರ್ಥಿಕತೆಯದೇ ಅಬ್ಬರ. ಇವುಗಳ ನಡುವೆ ಕಟ್ಟಾ ಮಾರ್ಕ್ಸ್‌ವಾದಿಗಳ ಮೌನ ಇನ್ನಷ್ಟು ಅಚ್ಚರಿಗೆ ಕಾರಣವಾಗಿದೆ.

ಮೊದಲ ಸಾರ್ವತ್ರಿಕ ಚುನಾವಣೆ ಲಾಗಾಯ್ತಿ­ನಿಂದಲೂ ಕೇರಳದಲ್ಲಿ ಕಮ್ಯುನಿಸ್ಟರ ಸದ್ದು ಇದ್ದೇ ಇದೆ. ಕೆಲವು ಸಮಯದ ನಂತರ ಪಶ್ಚಿಮ ಬಂಗಾಳ­ ಮತ್ತು ತ್ರಿಪುರಗಳಲ್ಲಿಯೂ ಎಡ­ಪಂಥೀಯ ಸರ್ಕಾರ ಬಂದಿತು. ಆದರೆ ಇವತ್ತು ತ್ರಿಪುರ­ವನ್ನು ಹೊರತು ಪಡಿಸಿದರೆ ಇನ್ನೆಲ್ಲಿಯೂ ಎಡ­­ಪಂಥೀಯರ ಸರ್ಕಾರ ಇಲ್ಲ. ಲೋಕಸಭೆ­ಯಲ್ಲಿ ಎಡಪಂಥೀಯರ ಸಂಖ್ಯೆ ಕಡಿಮೆ­ಯಾಗುತ್ತಲೇ ಇದೆ.

ಭಾರತದಲ್ಲಿ ಎಡಪಂಥೀಯರು ‘ಮಾಸ್ಕೊ’­ವನ್ನೇ ಹೆಚ್ಚು ನೆಚ್ಚಿಕೊಂಡಿದ್ದರೆನ್ನು­ವುದು ನನ್ನ ಗ್ರಹಿಕೆ. ಯಾವಾಗ ಕಮ್ಯುನಿಸ್ಟರ ಸೋವಿ­ಯತ್‌ ಕೋಟೆ ಕುಸಿದು ಬಿದ್ದಿತೋ ಆವಾ­ಗಿ­ನಿಂದ ಭಾರತದ ಕಮ್ಯುನಿಸ್ಟರನ್ನು ತಬ್ಬಲಿತನ ಕಾಡತೊಡಗಿತೆನಿಸುತ್ತದೆ.

ದೇಶದಲ್ಲಿ ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಬಲಪಂಥೀಯರು ಅಧಿಕಾರದ  ಗದ್ದುಗೆ ಏರುವು­ದನ್ನು ತಡೆಯಲು ಯತ್ನಿಸಿವೆ. ಆದರೆ ಆ ಎಡ­ಪಕ್ಷ­ಗಳಿಗೆ ತಮ್ಮದೇ ಆದ ಮಿತಿಗಳಿವೆ. ಅವರು ಕಾಂಗ್ರೆಸ್ಸೇ­ತರ ಮತ್ತು ಬಿಜೆಪಿಯೇತರ ಪಕ್ಷಗಳ­ನ್ನೆಲ್ಲಾ ಒಂದು ವೇದಿಕೆಯಲ್ಲಿ ತರುವ ಯತ್ನ­ದಲ್ಲಿರುವಂತಿದೆ.

ಇಂತಹದ್ದೊಂದು ಯತ್ನ ತಪ್ಪೇನೂ ಅಲ್ಲ. ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ, ಬಿಜೆಪಿ  ಕೋಮು­ವಾದಿ ಚಟುವಟಿಕೆಯಲ್ಲಿ ಮುಳುಗಿ ಹೋಗಿರು­ವಾಗ ಇಂತಹದ್ದೊಂದು ಆ ಎರಡೂ ಪಕ್ಷಗಳನ್ನು ಹೊರತುಪಡಿಸಿದ ಚಟುವಟಿಕೆಗೆ ವೇದಿಕೆ ಸಿದ್ಧಗೊಳಿಸುವುದು ತಪ್ಪೇನೂ ಅಲ್ಲ. ಬಹುಶಃ ಇಂತಹದ್ದೊಂದು ಆಲೋಚನೆ ಚಾಲ್ತಿಯಲ್ಲಿ­ರು­ವು­ದರಿಂದಲೇ ರಾಹುಲ್‌ ಗಾಂಧಿ ಅವರು ತೃತೀಯ ಶಕ್ತಿಯ ಸಾಧ್ಯತೆಗಳನ್ನು ತಿರಸ್ಕಾರದಿಂದ ಕಂಡಿ­ದ್ದಾರೆ. ರಾಹುಲ್‌ ಅವರು ಬಿಜೆಪಿಯೇತರ ಪಕ್ಷಗಳೆಲ್ಲಾ ಕಾಂಗ್ರೆಸ್‌ನ ನೇತೃತ್ವದಲ್ಲಿ ಒಂದು­ಗೂಡ­ಬೇಕೆಂಬ ಆಶಯ ಇರಿಸಿಕೊಂಡಿರುವುದು ಸ್ಪಷ್ಟ.

ಕೋಮುವಾದಿಗಳು ಮತ್ತು ಭ್ರಷ್ಟರನ್ನು ಅಧಿಕಾರದಿಂದ ದೂರವಿಡುವುದಷ್ಟೇ ಪ್ರಮುಖ ಕೈಂಕರ್ಯವಲ್ಲ. ಸಮಸಮಾಜದ ಆಶಯಕ್ಕೆ ಜೀವ ತುಂಬುವವರನ್ನು ಅಧಿಕಾರಕ್ಕೇರಿಸ­ಬೇಕಾದ ಆಶಯ ಇರ ಬೇಕು. ಆದರೆ ಇವತ್ತು ದೇಶದಲ್ಲಿ ಪ್ರಮುಖವಾಗಿರುವ ಎರಡೂ ಕಮ್ಯು­ನಿಸ್ಟ್‌ ಪಕ್ಷಗಳು ಸಮ ಸಮಾಜ ನಿರ್ಮಾಣದ ತಮ್ಮ ಮೂಲ ಆಶಯದಿಂದಲೇ ದೂರ ಆಗಿವೆ­ಯೇನೊ ಎಂಬ ಅನುಮಾನ ಬರುತ್ತಿದೆ. ಅದೇನೇ ಇರಲಿ, ಜಾತ್ಯತೀತ ಧೋರಣೆಯು ಪ್ರವರ್ಧಮಾ­ನಕ್ಕೆ ಬರುವ ಮೂಲಕ ಸಮಾಜವಾದ ಆಶಯದ ಸರ್ಕಾರವನ್ನು ಅಧಿಕಾರಕ್ಕೆ ತರಲು ಸಾಧ್ಯ ಎಂಬಲ್ಲಿಗೆ ಬಂದು ನಿಂತಂತಿದೆ.

ಆದರೆ ಇವತ್ತು ಪ್ರಾದೇಶಿಕ ಪಕ್ಷಗಳೂ ದೊಡ್ಡ ಧ್ವನಿ ಎತ್ತುತ್ತಿವೆ. ಇವೆಲ್ಲದರ ಬೆನ್ನ ಹಿಂದೆ ಕಾರ್ಪೊರೇಟ್‌ ವಲಯವೂ ಪ್ರಬಲವಾಗಿ ನಿಂತಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಹೊಸ ಹೆಜ್ಜೆಗಳನ್ನಿಡುತ್ತಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.