ಸರ್, ನನಗೆ ವಿಪರೀತ ಕೋಪ ಬರುತ್ತದೆ. ಸಿಟ್ಟು ಸಕಾರಣವಾದರೂ, ಹೊಡೆಯುವಷ್ಟು, ಕೆಟ್ಟದಾಗಿ ಬೈದುಕೊಳ್ಳುವಷ್ಟು ಕೋಪ ಬರುತ್ತದೆ. ಬದುಕಿನುದ್ದಕ್ಕೂ ಅನುಭವಿಸಿದ ಹತಾಶೆಗಳು, ಸೋಲು, ಅವಮಾನ. ಹತಾಶೆ ಮತ್ತು ಕೋಪ ಒಟ್ಟೊಟ್ಟಿಗೆ ನನ್ನನ್ನು ವ್ಯಗ್ರ್ಯಳನ್ನಾಗಿ ಮಾಡುತ್ತಿದೆ. ಇದರಿಂದ ನಿಜಕ್ಕೂ ಹೊರಬರುವುದು ಹೇಗೆ?
‘ಕೋಪ ಬರುವುದು ತಪ್ಪಾ?’ ಅಂತ ಮೊದಲು ಒಂದು ಜಿಜ್ಞಾಸೆ ಮಾಡೋಣ. ಕೋಪ ಒಂದು ಕೆಟ್ಟ ವಿಷಯ ಅಂತ ಒಂದು ತಪ್ಪು ಕಲ್ಪನೆ ಅನೇಕರಲ್ಲಿದೆ. ಕೋಪ ಬರುತ್ತದೆ ಅಂತಾದಾಗ ಜನರು ಅದನ್ನು ಒಂದು ಋಣಾತ್ಮಕ ಅಂಶವಾಗಿ ಪರಿಗಣಿಸುತ್ತಾರೆ. ಎಷ್ಟೋ ಬಾರಿ, ಕೋಪವನ್ನು ತಮ್ಮೊಳಗೇ ಅದುಮಿಟ್ಟುಕೊಳ್ಳುತ್ತಾರೆ. ಸಮಾಧಾನಿಗಳು ಅಥವಾ ತಾಳ್ಮೆ ಇರುವವರು ಅಂತ ಹೊರ ಪ್ರಪಂಚಕ್ಕೆ ಬಿಂಬಿಸುತ್ತಾರೆ. ಆದರೆ, ಇದನ್ನು ಮನಃಶ್ಶಾಸ್ತ್ರೀಯ ನೆಲೆಯಲ್ಲಿ ಪ್ಯಾಸಿವ್ ಅಗ್ರೆಷನ್ (passive aggression) ಕರೆಯುತ್ತೇವೆ.
ಇಂತಹ ವ್ಯಕ್ತಿಗಳು ತಮ್ಮ ಅಸಮಾಧಾನವನ್ನು ಅಸಹಕಾರ ತೋರಿಸಿ, ಮಾತಾಡದೇ ವ್ಯಕ್ತಪಡಿಸುತ್ತಾರೆ. ಎಷ್ಟೋ ಬಾರಿ ಇದು ಹೊರ ಪ್ರಪಂಚಕ್ಕೆ ತಿಳಿಯದೇ ಹೋದರೂ, ಅಂತಹವರ ಜೊತೆ ಇರುವವರಿಗೆ ಸಂಕಟವನ್ನುಂಟುಮಾಡುತ್ತದೆ. ತಮ್ಮ ಬಗ್ಗೆಯೇ ಪ್ರಶ್ನೆ ಕೇಳಿಕೊಳ್ಳುವಂತೆ ಮಾಡುತ್ತದೆ. ಪ್ಯಾಸಿವ್ ಅಗ್ರೆಷನ್ ಇರುವವರು ತಮ್ಮೊಳಗೇ ಜ್ವಾಲಾಮುಖಿಯನ್ನು ಪೋಷಿಸುತ್ತಿರುತ್ತಾರೆ. ಆಮೇಲೆ ಇನ್ಯಾವುದೋ ಒಂದು ದಿನ ಅದು ಒಂದು ಸಣ್ಣ ವಿಷಯಕ್ಕೆ ಹೊರಬರಬಹುದು. ಅಥವಾ ಅದು ಅವರ ಆರೋಗ್ಯದ ಮೇಲೆಯೇ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಪ್ಯಾಸಿವ್ ಅಗ್ರೆಷನ್ ಒಳ್ಳೆಯ ವಿಚಾರವಲ್ಲ.
ಕೋಪವನ್ನು ತೀಕ್ಷ್ಣವಾಗಿ ಬಿಂಬಿಸಿದರೆ ಅದು ಸರಿಯಾದ ವರ್ತನೆಯೇ? ಕೆಟ್ಟದಾಗಿ ಬೈದು, ಹೊಡೆದು ತೋರಿಸುವುದೂ ಸಮಸ್ಯಾತ್ಮಕವೇ. ಕೋಪಕ್ಕೆ ತುತ್ತಾದವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೋಪಿಷ್ಠರನ್ನು ದ್ವೇಷಿಸಲು ಅಥವಾ ದೂರವಿರಲು ಆರಂಭಿಸಬಹುದು. ಸಾಮಾಜಿಕ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತದೆ. ಅದರ ಜೊತೆಗೆ, ಜನರು ತಪ್ಪು ಅವರದ್ದೇ ಇದ್ದರೂ, ತಮ್ಮದೇ ಆದಂತಹ ಪ್ರತಿರೋಧವನ್ನು ತೋರಿಸುತ್ತಾರೆ. ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಬದಲು, ಸಮರ್ಥಿಸಲು ತೊಡಗುತ್ತಾರೆ. ಇದರಿಂದ ಸಮಸ್ಯೆ ಪರಿಹಾರವಾಗುವ ಬದಲು, ಇನ್ನೂ ಜಟಿಲವಾಗುತ್ತದೆ.
ಮುಂದಿನವಾರಕ್ಕೆ ಸಾತ್ವಿಕ ಕೋಪ ತೋರಿಸುವುದು ಹೇಗೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.