ADVERTISEMENT

ವೈದ್ಯಕೀಯ ನಿರ್ಲಕ್ಷ್ಯ: ಎಚ್ಚರಿಕೆಯ ಪಾಠ

ಡಿ.ಮರಳೀಧರ
Published 5 ನವೆಂಬರ್ 2013, 19:30 IST
Last Updated 5 ನವೆಂಬರ್ 2013, 19:30 IST
ವೈದ್ಯಕೀಯ ನಿರ್ಲಕ್ಷ್ಯ: ಎಚ್ಚರಿಕೆಯ ಪಾಠ
ವೈದ್ಯಕೀಯ ನಿರ್ಲಕ್ಷ್ಯ: ಎಚ್ಚರಿಕೆಯ ಪಾಠ   

ಅನಿವಾಸಿ ಭಾರತೀಯ ವೈದ್ಯೆಯ ಆರೋಗ್ಯ ರಕ್ಷಣೆಯಲ್ಲಿ ತೋರಿದ ನಿಷ್ಕಾಳಜಿಗೆ ಸುಪ್ರೀಂ ಕೋರ್ಟ್ ದುಬಾರಿ ದಂಡ ವಿಧಿಸಿ ನೀಡಿದ ತೀರ್ಪು ದೇಶಿ ವೈದ್ಯಲೋಕವೂ ಸೇರಿ ದಂತೆ ಎಲ್ಲರಿಗೂ ಎಚ್ಚರಿಕೆಯ ಪಾಠವಾಗಿದೆ.

ಅಮೆರಿಕದ ನಿವಾಸಿಯಾಗಿರುವ ಡಾ. ಕುನಾಲ್  ಸಹಾ, 1998ರಲ್ಲಿ ಭಾರತಕ್ಕೆ ಬಂದಿ ದ್ದಾಗ, ಮಕ್ಕಳ ಮನಃ­ಶಾಸ್ತ್ರಜ್ಞೆ­ಯಾಗಿದ್ದ ತಮ್ಮ ಪತ್ನಿ ಅನುರಾಧಾ ಸಹಾ ಅವರನ್ನು ಕೋಲ್ಕತ್ತದ ಎಎಂಆರ್ಐ (ಅಡ್ವಾನ್ಸ್ಡ್‌ ಮೆಡಿಕೇರ್‌ ಆ್ಯಂಡ್‌  ರಿಸರ್ಚ್‌ ಇನ್‌ಸ್ಟಿಟ್ಯೂಟ್‌) ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಚರ್ಮದ ಅಲರ್ಜಿಗೆ  ಚಿಕಿತ್ಸೆ ನೀಡುವಾಗ ಅವರಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಟಿರಾಯ್ಡ್ ನೀಡಿದ್ದರಿಂದ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತ ಪಟ್ಟಿದ್ದರು.

ರೋಗಿಯ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆ ಮತ್ತು ವೈದ್ಯರ ನಿರ್ಲಕ್ಷ್ಯದ ವಿರುದ್ಧ ಸಹಾ ಅವರು ಪರಿಹಾರ ಕೋರಿ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು.

ಅಕ್ಟೋಬರ್ 24ರಂದು ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ದುಬಾರಿ ಮೊತ್ತ ಎನ್ನಲಾದ ಒಟ್ಟು  ₨ 6.08   ಕೋಟಿಗಳಷ್ಟು ದಂಡ ಪಾವತಿ­ಸಲು ಆಸ್ಪತ್ರೆ ಆಡಳಿತ ಮಂಡಳಿ ಮತ್ತು ಚಿಕಿತ್ಸೆ ನೀಡುವಲ್ಲಿ ಕರ್ತವ್ಯಲೋಪ ಎಸಗಿದ್ದ ವೈದ್ಯರಿಗೆ ಆದೇಶಿಸಿದೆ (ಪ್ರಕರಣ ದಾಖಲಾದ ದಿನದಿಂದ ಶೇಕಡಾ 6ರಷ್ಟು ಬಡ್ಡಿ  ಸೇರಿಸಿದರೆ ಒಟ್ಟು ದಂಡದ ಮೊತ್ತ  ₨ 11.41 ಕೋಟಿಗಳಷ್ಟು ಆಗುತ್ತದೆ). ದೇಶದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ವಿಧಿಸಿದ ಅತಿದೊಡ್ಡ ಪ್ರಮಾಣದ ದಂಡ ಇದಾಗಿದೆ. ಪರಿಹಾರ ಮೊತ್ತದ ಅತಿ ಹೆಚ್ಚಿನ ಮೊತ್ತವನ್ನು ಆಸ್ಪತ್ರೆ ಭರಿಸಬೇ­ಕಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ವೈದ್ಯರು ತಲಾ ₨ 10 ಲಕ್ಷಗಳನ್ನಷ್ಟೇ ಪಾವತಿಸ ಬೇಕಾಗಿದೆ.

2009ರಲ್ಲಿ ಹೈದರಾಬಾದ್‌ನ ನಿಜಾಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆ, ಇಂತ­ಹದೇ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣದಲ್ಲಿ ಸಾಫ್ಟ್‌ವೇರ್ ಎಂಜಿನಿ­ಯರ್‌ನ ಕುಟುಂಬಕ್ಕೆ ₨ 1 ಕೋಟಿ ಪರಿಹಾರ ನೀಡಬೇಕಾಗಿ ಬಂದಿತ್ತು. ವೈದ್ಯರ ನಿರ್ಲಕ್ಷ್ಯದಿಂದ ರೋಗಿಯ ಬೆನ್ನುಹುರಿಗೆ  ಅಪಾಯ ಉಂಟಾಗಿತ್ತು. ಈ ಪ್ರಕರಣ ದಲ್ಲಿಯೂ ರೋಗಿಯು ಚಿಕಿತ್ಸೆಗೆ ಸ್ಪಂದಿಸದೇ 2011ರಲ್ಲಿ ಮೃತಪಟ್ಟಿದ್ದ.  ಸುಪ್ರೀಂ ಕೋರ್ಟ್, ಇತ್ತೀಚಿಗೆ ನೀಡಿರುವ ತೀರ್ಪಿ ನಲ್ಲಿನ ಪರಿಹಾರದ ಮೊತ್ತವು ಈ ಹಿಂದಿನ ಪ್ರಕರಣದ ಮೊತ್ತಕ್ಕಿಂತ ಆರು ಪಟ್ಟು ಹೆಚ್ಚಿಗೆ ಇದೆ.

ಸುರ್ಪೀಂ ಕೋರ್ಟ್‌ನ ತೀರ್ಪು ಸ್ವಾಗತಾರ್ಹ ವಾದರೂ, ಇಲ್ಲಿ ಹಲ­ವಾರು ಪ್ರಶ್ನೆಗಳು ಉದ್ಭವಿ ಸಿವೆ. ಡಾ. ಸಹಾ ಅವರು ಆಸ್ಪತ್ರೆ ವಿರುದ್ಧ 15 ವರ್ಷಗಳ ಕಾಲ ಕಾನೂನು ಸಮರ ನಡೆಸಿದ್ದಾರೆ. ಈ ಸಮರವನ್ನು ಯಾವುದೇ ಹಂತದಲ್ಲಿ ಕೈಬಿಡಲು ಅವರು ಸಿದ್ಧರಿರಲಿಲ್ಲ. ಕಾನೂನು ಹೋರಾಟಕ್ಕೆ ಅವರ ಬಳಿ ಸಾಕಷ್ಟು ಸಂಪನ್ಮೂಲ, ಸಮಯ  ಮತ್ತು ದೃಢ­ವಾದ ಮನೋಬಲವೂ ಇತ್ತು. ಎಲ್ಲ ಪ್ರತಿಕೂಲಗಳ ಮಧ್ಯೆಯೂ ಅವರು ತಮ್ಮ ಹೋರಾಟ ಕೈಬಿಟ್ಟಿರಲಿಲ್ಲ.  ಪಶ್ಚಿಮ ಬಂಗಾಳ ವೈದ್ಯಕೀಯ ಮಂಡಳಿ ಮತ್ತು ಕಲ್ಕತ್ತಾ ಹೈಕೋರ್ಟ್, ಡಾ. ಸಹಾ ಅವರ  ಪರಿಹಾರ ಅರ್ಜಿಯನ್ನು ತಳ್ಳಿ ಹಾಕಿದ್ದವು, ಆದರೆ, ಪತ್ನಿಯ ಸಾವಿಗೆ ನ್ಯಾಯ ಪಡೆಯಲೇಬೇಕೆಂಬ ದೃಢ ನಿಶ್ಚ ಯವು ಅವರಿಗೆ ಕೊನೆಗೂ ನ್ಯಾಯ ಒದಗಿಸಿದೆ.

ಸಾಮಾನ್ಯ ನಾಗರಿಕನಾಗಿದ್ದರೆ ಇಂತಹ ಪ್ರಕರಣವನ್ನು ಯಾವತ್ತೋ ಕೈಬಿಡುತ್ತಿದ್ದ. ನೊಂದ, ಅನ್ಯಾಯಕ್ಕೆ ಒಳಗಾದ ನಾಗರಿಕರಿಗೆ ಇಂತಹ ಪ್ರಕ­ರಣ­ಗಳಲ್ಲಿ ತ್ವರಿತವಾಗಿ ನ್ಯಾಯ ಸಿಗುವ ವ್ಯವಸ್ಥೆ ತುರ್ತಾಗಿ ಜಾರಿಗೆ ಬರ­ಬೇಕಾಗಿದೆ.

ದೇಶದಲ್ಲಿ  ವೈದ್ಯರ ಸೇವೆ ಮತ್ತು ಆರೋಗ್ಯ ರಕ್ಷಣೆ ವ್ಯವಸ್ಥೆಯು ಕ್ರಮೇಣ ಖಾಸಗಿ ವಲಯದ ಕೈವಶವಾಗುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಯ ಬಗ್ಗೆ ಅನಾದರ, ಚಿಕಿತ್ಸೆಯಲ್ಲಿ ಲೋಪ ಎಸಗುವ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಚಿಕಿತ್ಸೆಗೆ ದುಬಾರಿ ಶುಲ್ಕ ವಸೂಲಿ ಮಾಡು­ವುದೂ ಎಗ್ಗಿ ಲ್ಲದೇ ಸಾಗಿದೆ. ಆರೋಗ್ಯ ಸೇವೆ ವಲಯದಲ್ಲಿನ ನಿಯಂತ್ರಣ ವ್ಯವಸ್ಥೆಯೇ ಸಮರ್ಪಕವಾಗಿಲ್ಲ. ಅಲ್ಲೊಂದು, ಇಲ್ಲೊಂದರಂತೆ ಅಪರೂಪಕ್ಕೆ ವರದಿಯಾಗುವ ದುಬಾರಿ ದಂಡ, ಪರಿಹಾರ ನೀಡುವ ಪ್ರಕರಣಗಳು ಮೂಲ ಸಮಸ್ಯೆಯ ಗಂಭೀರತೆಯತ್ತ ಗಮನ ಹರಿಸಲಾರವು. ಆರೋಗ್ಯ ರಕ್ಷಣೆ ವಲಯದಲ್ಲಿನ ಇಂತಹ ಹಲವಾರು ಗಂಭೀರ ಸ್ವರೂಪದ ಲೋಪ ದೋಷಗಳ ವಿರುದ್ಧ ಹಲವು ‘ಲಾಭರಹಿತ ಉದ್ದೇಶದ ಸ್ವಯಂ ಸೇವಾ ಸಂಘಟನೆ­ಗಳು’ ನಿರಂತರವಾಗಿ ಹೋರಾಟ ನಡೆಸುತ್ತಿವೆ. ಆದರೆ, ಅವುಗಳ ಪ್ರಯತ್ನಕ್ಕೆ ಸೂಕ್ತ ಪ್ರತಿಕ್ರಿಯೆ ಸಿಗುತ್ತಿಲ್ಲ.

ರೋಗಿಯ ಮತ್ತು ವೈದ್ಯರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಸ್ವತಂತ್ರ ವ್ಯವಸ್ಥೆ ಯೊಂದು ರೂಪುಗೊಳ್ಳಬೇಕಾದ ತುರ್ತು ಅಗತ್ಯ ಇದೆ. ಕೆಲ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ರೋಗಿಗಳ ಅಹವಾಲುಗಳನ್ನು ಆಲಿಸಲು ಪ್ರತ್ಯೇಕ ವಿಭಾಗ ಹೊಂದಿವೆ. ತೀವ್ರ ಸ್ವರೂಪದ ಲೋಪ ಸಂಭವಿ ಸಿದ ಪ್ರಕರಣಗಳಲ್ಲಿ ವೈದ್ಯರು ಅಥವಾ ಆಸ್ಪತ್ರೆ ವಿರುದ್ಧವೇ ಗಂಭೀರ ಸ್ವರೂಪದ ಕ್ರಮ ಕೈಗೊಂಡ ಘಟನೆಗಳು ತೀರ ವಿರಳ ಎಂದೇ ಹೇಳಬೇಕು.

ಕೆಲವೇ ಕೆಲ ಆಸ್ಪತ್ರೆಗಳನ್ನು ಹೊರತುಪಡಿಸಿ ದರೆ, ದೇಶದಲ್ಲಿ ವೈದ್ಯಕೀಯ ಸೇವೆಯು ಸಂಪೂರ್ಣವಾಗಿ ಅಸಂಘ­ಟಿತ ವಲಯದಲ್ಲಿ ಇದೆ.  ಈ ವಲಯ­ದಲ್ಲಿನ ವಿವಿಧ ಸೇವೆಗಳ ಕಾರ್ಯನಿರ್ವ­ಹಣೆ ಬಗ್ಗೆ ನಿಶ್ಚಿತ ಸ್ವರೂಪದ ಗುಣಮಟ್ಟದ ಮಾನದಂಡಗಳೇ ಇಲ್ಲ. ಆಸ್ಪತ್ರೆ ಗಳ ದಾಖಲೆಗಳ ಬಗ್ಗೆಯಂತೂ ಹೇಳುವಂತೆಯೇ ಇಲ್ಲ. ಚಿಕಿತ್ಸಾ ಲೋಪ, ಪ್ರಮಾದಗಳ ಬಗೆಗಿನ ದಾಖಲೆಗಳ ಮಾಹಿತಿಯೇ ಆಸ್ಪತ್ರೆಗಳ ಬಳಿ ಇರುವುದಿಲ್ಲ.

ವೈದ್ಯಕೀಯ ಸೇವೆಯಲ್ಲಿನ ನಿರ್ಲಕ್ಷ್ಯ ಮತ್ತು ಅದರಿಂದ ಆದ ದುಷ್ಪರಿಣಾಮ­ಗಳು, ರೋಗಿಯ ಆರೋಗ್ಯದ ಮೇಲೆ ಬೀರಿದ ಪ್ರತಿಕೂಲ ಪರಿಣಾಮಗಳ ಬಗ್ಗೆ ರಾಜ್ಯ ಇಲ್ಲವೇ ರಾಷ್ಟ್ರ ಮಟ್ಟದ ವೈದ್ಯಕೀಯ ಸಂಘ - ಸಂಸ್ಥೆಗಳೂ ದಾಖಲೆಗಳನ್ನು ಇಟ್ಟಿಲ್ಲ.
ಅಮೆರಿಕದಲ್ಲಿಯೇ ವರ್ಷಕ್ಕೆ 10 ಸಾವಿರ ದಷ್ಟು ಸಾವುಗಳು ವೈದ್ಯಕೀಯ ನಿರ್ಲಕ್ಷ್ಯದಿಂದ ಸಂಭವಿಸುತ್ತವೆ ಎಂದು ಅಂದಾಜು ಮಾಡಲಾ ಗಿದೆ. ಹಾಗಿದ್ದರೆ, ನಮ್ಮಂತಹ ದೇಶದಲ್ಲಿ ವೈದ್ಯರ ಚಿಕಿತ್ಸಾ ಲೋಪದಿಂದ ಸಾಯುವವರ ಸಂಖ್ಯೆ ಯನ್ನು ಓದುಗರೇ ಅಂದಾಜಿಸಬಹುದು. ವೈದ್ಯರ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವಿನ ಪ್ರಕರಣ ಗಳಲ್ಲಿ ಕೆಲವೇ ಕೆಲವು ವರದಿಯಾಗುತ್ತವೆ. ಅವುಗಳ ಪೈಕಿ ಅತಿ ವಿರಳ ಪ್ರಕರಣಗಳು ಮಾತ್ರ ತಾರ್ಕಿಕ ಅಂತ್ಯ ಕಾಣುತ್ತವೆ.

ಆಸ್ಪತ್ರೆಗಳ ನಿರ್ಮಾಣ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಿ­ಕೊಡಲು ಭಾರೀ ಮೊತ್ತದ ಹಣ ತೊಡಗಿಸಿದ್ದರೂ ಆಸ್ಪತ್ರೆ ಸಿಬ್ಬಂದಿಯ ಮತ್ತು ವೈದ್ಯರ ನಿರ್ಲಕ್ಷ್ಯದಿಂದ ರೋಗಿಯ ದೇಹ ಮತ್ತು ಜೀವಕ್ಕೆ ಆಗುವ ಅಪಾಯಗಳ ಬಗ್ಗೆ ಆಸ್ಪತ್ರೆಗಳ ಆಡಳಿತ ಮಂಡಳಿಗಳು ತೀರಾ ನಿರ್ಲಕ್ಷ್ಯ ಧೋರಣೆ ತಳೆದಿವೆ.

ತಮ್ಮ ಹಕ್ಕುಗಳ ಬಗ್ಗೆ ರೋಗಿಗಳಿಗೆ ಇರುವ ನಿರ್ಲಕ್ಷ್ಯ ಮತ್ತು ತಮಗೆ ಸೇವೆ ಸಲ್ಲಿಸುವಲ್ಲಿ ಲೋಪ ಎಸಗಿದ ಮತ್ತು ಎಲ್ಲ ಭಾರವನ್ನು ‘ದೇವರ’ ಮೇಲೆ ಹಾಕುವ ವೈದ್ಯರ ವರ್ತನೆ ಪ್ರಶ್ನಿಸದ ಮನೋಭಾವವೂ ಇಂತಹ ಪ್ರಕರಣ ಗಳ ಸಂಖ್ಯೆ ಹೆಚ್ಚಲು ಕಾರಣವಾಗುತ್ತದೆ. ವೈದ್ಯ ಕೀಯ ಸೇವೆ ಒದಗಿಸುವಲ್ಲಿ ಕನಿಷ್ಠ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಸೂಕ್ತ ಮಾರ್ಗದರ್ಶನ ಗಳ ಕೊರ­ತೆಯೂ ನಮ್ಮಲ್ಲಿ ಸಾಕಷ್ಟಿದೆ.

ದುಬಾರಿ ದಂಡ ವಿಧಿಸಿ, ಸುಪ್ರೀಂ ಕೋರ್ಟ್ ನೀಡಿರುವ ಈ  ತೀರ್ಪು, ದೇಶಿ ವೈದ್ಯಕೀಯ ಲೋಕದಲ್ಲಿ ಆತ್ಮಾವ­ಲೋಕನಕ್ಕೆ ಎಡೆ ಮಾಡಿ ಕೊಡುವುದೇ? ಕಾದು ನೋಡಬೇಕು. ವೈದ್ಯ ಕೀಯ ರಂಗದಿಂದ ಈ ಪ್ರಕರಣಕ್ಕೆ ಉದಾಸೀನದ ಪ್ರತಿಕ್ರಿಯೆ ವ್ಯಕ್ತವಾಗಿರುವುದನ್ನು ನೋಡಿದರೆ, ತಪ್ಪು ಎಸಗಿದ ಆಸ್ಪತ್ರೆಗಳು ಮತ್ತು ವೈದ್ಯರ ವಿರುದ್ಧ ಇಂತಹ  ದುಬಾರಿ ದಂಡವನ್ನು ಒಳ ಗೊಂಡ  ಇನ್ನಷ್ಟು ತೀರ್ಪುಗಳು ಪ್ರಕಟಗೊಂಡರೆ ಮಾತ್ರ ವೈದ್ಯ ಲೋಕ ಎಚ್ಚೆತ್ತುಕೊಳ್ಳಬಹುದು ಎನಿಸುತ್ತದೆ.

ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು, ವೈದ್ಯಕೀಯ ರಂಗದಲ್ಲಿನ ಚಿಕಿತ್ಸಾ ವೆಚ್ಚವು ಇನ್ನಷ್ಟು ದುಬಾರಿ­ಯಾಗಲು ಕಾರಣವಾಗುವ ಸಾಧ್ಯತೆ­ಗಳಿವೆ. ವೈದ್ಯರ ಹೊಣೆಗಾರಿಕೆ ವೈಫಲ್ಯದ ವಿರುದ್ಧದ ವಿಮೆ ಪರಿಹಾರ ಪ್ರಕರಣ­ಗಳು ಇನ್ನು ಮುಂದೆ ಹೆಚ್ಚಾಗಿ ವರದಿ­ಯಾಗಲಿವೆ ಎಂದು ಹಿರಿಯ ವೈದ್ಯರು ಅಭಿಪ್ರಾಯಪಡುತ್ತಾರೆ. ವಾಸ್ತವದಲ್ಲಿ ಅನೇಕ ವೈದ್ಯರು ತಮ್ಮ ಸೇವೆ ಯಲ್ಲಿ ಕನಿಷ್ಠ ಅಗತ್ಯವಾದ ವಿಮೆ ಸೌಲಭ್ಯವನ್ನೇ ಪಡೆದುಕೊಂಡಿರುವುದಿಲ್ಲ. ಆದರೆ, ಇನ್ನು ಮುಂದೆ ಈ ಪರಿಸ್ಥಿತಿ ಆಮೂಲಾಗ್ರವಾಗಿ ಬದಲಾಗುವ ಸಾಧ್ಯತೆಗಳಿವೆ.

ಕಾಯಿಲೆ ಪತ್ತೆ ಹಚ್ಚುವ ವಿಧಾನ­ಗಳೂ ಇನ್ನಷ್ಟು ಹೆಚ್ಚಲಿವೆ. ವೈದ್ಯರು ತಮ್ಮನ್ನು ಕಾನೂನು ಸಮರದಿಂದ ರಕ್ಷಿಸಿಕೊಳ್ಳಲು ಹೆಚ್ಚೆಚ್ಚು ವೈದ್ಯಕೀಯ ಪರೀಕ್ಷೆಗಳಿಗೆ ಪಟ್ಟು ಹಿಡಿಯಬಹುದು. ಈ ಎಲ್ಲ ಹೆಚ್ಚುವರಿ ಮತ್ತು ಅನೇಕ ಸಂದರ್ಭಗಳಲ್ಲಿ ಅನಗತ್ಯವಾದ ಪರೀಕ್ಷೆ ಗಳಿಗೆ ರೋಗಿಗಳು ಹೆಚ್ಚು ಹಣ ಪಾವತಿಸ ಬೇಕಾ ಗುತ್ತದೆ. ಇಂತಹ ವ್ಯವಸ್ಥೆ ಜಾರಿಯಲ್ಲಿ ಇರುವ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ಹೆಚ್ಚುವರಿ ಪರೀಕ್ಷೆ, ದುಬಾರಿ ಮತ್ತು ಅನಗತ್ಯ ವೆಚ್ಚ­ಗಳನ್ನು ಬಲವಾಗಿ ಸಮರ್ಥಿಸಿ­ಕೊಳ್ಳುತ್ತಾರೆ.

ಸರ್ಕಾರವು ಮಧ್ಯ ಪ್ರವೇಶಿಸಿ ಕನಿಷ್ಠ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ. ಉದ್ದಿಮೆ ಸ್ವರೂಪ ಪಡೆದು ಕೊಂಡಿರುವ ವೈದ್ಯ­ಕೀಯ ರಂಗವು ತ್ವರಿತವಾಗಿ ಬೆಳೆ­ಯುತ್ತಿದ್ದು, ಸಾಗರೋತ್ತರ ವಿಮೆ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ಗಾಗಿ ಭಾರತಕ್ಕೆ ಕಳಿಸಲು ಉದ್ದೇಶಿಸಿವೆ.  ವಿದೇಶ ಗಳಿಗೆ ಹೋಲಿಸಿದರೆ ನಮ್ಮಲ್ಲಿ ಸದ್ಯಕ್ಕೆ ಸ್ಪರ್ಧಾ­ತ್ಮಕ ದರಗಳಿಗೆ ದೊರೆ­ಯುತ್ತಿರುವ ಜಾಗತಿಕ ಗುಣ ಮಟ್ಟದ ವೈದ್ಯಕೀಯ ಸೇವೆಯು ಕಾನೂನು ಸಮರದ ಪ್ರಕರಣಗಳಿಗಾಗಿ ಮೂಲೆಗುಂಪಾಗ ಬಾರದು.

ಆರೋಗ್ಯ ರಕ್ಷಣೆಯು, ಕ್ರಮೇಣ ಗ್ರಾಹಕರು ಖರೀದಿಸುವ ಸರಕಿನ ಸ್ವರೂಪ ಪಡೆದು ಕೊಳ್ಳು ತ್ತಿದೆ. ಆರೋಗ್ಯ ಸೇವೆ ಪಡೆದುಕೊಳ್ಳುವ ಕಾಯಿಲೆ ಪೀಡಿತರು, ತಾವು ಕೊಟ್ಟ ಹಣಕ್ಕೆ ಸೂಕ್ತ ಸೇವೆ ಪಡೆಯಲು ಬಯಸುತ್ತಾರೆ. ಹೀಗಾಗಿ ಒಟ್ಟಾರೆ ಇಡೀ ಪ್ರಕ್ರಿಯೆಗೆ ಸರಿಯಾದ ಕಾನೂನಿನ ಚೌಕಟ್ಟು ಇರುವುದು ಅಪೇಕ್ಷಣೀಯ.

ನ್ಯಾಯಾಂಗ ವ್ಯವಸ್ಥೆಗಿಂತ ಸಂಪೂರ್ಣ ಭಿನ್ನ ವಾದ, ಸರಳ, ತ್ವರಿತ ಮತ್ತು ಮಿತವ್ಯಯಕಾರಿ ಯಾದ ದೂರುಗಳ ಪರಿಹಾರ ವ್ಯವಸ್ಥೆಯು ಜಾರಿಗೆ ಬರಬೇಕಾಗಿದೆ. ಇಂತಹ ವ್ಯವಸ್ಥೆಯಲ್ಲಿ ರೋಗಿ, ಆಸ್ಪತ್ರೆ, ವೈದ್ಯರು, ವಿಮೆ ಪರಿಹಾರ ಸಂಸ್ಥೆ ಸೇರಿದಂತೆ ಎಲ್ಲರಿಗೂ ಸೂಕ್ತ ನ್ಯಾಯ ಒದಗಲಿದೆ. ಜತೆಗೆ, ದೀರ್ಘಕಾಲದ ಕೋರ್ಟ್ ವಿಚಾರ­ಣೆಗೂ ತಡೆ ಬೀಳಲಿದೆ. ಒಟ್ಟಾರೆಯಾಗಿ ವೈದ್ಯಲೋಕಕ್ಕೆ ಈಗ ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಯುವ ಅಗತ್ಯವಂತೂ  ಉದ್ಭವಿಸಿದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.