ADVERTISEMENT

Ask ಅಮೆರಿಕ | ಯು.ಎಸ್.ಕಾನ್ಸುಲೇಟ್, ಚೆನ್ನೈ

ಯು.ಎಸ್.ಕಾನ್ಸುಲೇಟ್, ಚೆನ್ನೈ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

1. ಕೃಷ್ಣಕುಮಾರ್, ಲಿಂಗಸಗೂರು, ರಾಯಚೂರು ಜಿಲ್ಲೆ
ಅಮೆರಿಕದಲ್ಲಿ ಆಡಳಿತ ಸೇವೆಗೆ ಸೇರಲು ಬೇಕಾದ ವಿದ್ಯಾರ್ಹತೆಗಳೇನು?
ಆಡಳಿತ ಸೇವೆಯ ಬಹುತೇಕ ಹುದ್ದೆಗಳನ್ನು ಸ್ಪರ್ಧಾತ್ಮಕ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ. ಔಪಚಾರಿಕ ಶಿಕ್ಷಣ ಹಾಗೂ ವೃತ್ತಿಪರ ಅನುಭವಗಳೂ ಸೇರಿದಂತೆ ಇನ್ನಿತರ ಅಂಶಗಳನ್ನು ಈ ಸ್ಪರ್ಧಾತ್ಮಕ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತದೆ. ಕೆಲ ಕ್ಷೇತ್ರಗಳಲ್ಲಿ ಉದಾಹರಣೆಗೆ ಅಂಚೆ ಇಲಾಖೆಯಲ್ಲಿ, ಲಿಖಿತ ಪರೀಕ್ಷೆಗಳನ್ನೂ ಅರ್ಜಿ ಪ್ರಕ್ರಿಯೆ ಒಳಗೊಂಡಿರುತ್ತದೆ. ಈ ಸೇವೆಗಳಿಗೆ ಸೇರಲು ಸಾಮಾನ್ಯವಾಗಿ ಯಾವುದೇ ನಿರ್ದಿಷ್ಟವಾದ ವಿದ್ಯಾರ್ಹತೆಗಳನ್ನು ನಿಗದಿ ಪಡಿಸಲಾಗಿರುವುದಿಲ್ಲ. ಆದರೆ, ಆಯ್ಕೆಯ ಸಾಧ್ಯತೆಗಳನ್ನು ಅಭ್ಯರ್ಥಿಯ ವಿದ್ಯಾರ್ಹತೆ ಹೆಚ್ಚಿಸುತ್ತದೆ. ಆಡಳಿತ ಸೇವೆಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ಪದವಿ ಹಂತದವರೆಗೂ ವ್ಯಾಸಂಗ ಮಾಡಿರುವುದು ಕಂಡು ಬರುತ್ತದೆ. ಆರಂಭಿಕ ಅಧಿಕ ವೇತನ ನಿಗದಿಯ ಸಾಧ್ಯತೆಯನ್ನು ಅಭ್ಯರ್ಥಿಯ ಹೆಚ್ಚಿನ ವಿದ್ಯಾರ್ಹತೆ ಹೆಚ್ಚಿಸಬಲ್ಲದು.

2. ಸೈಮನ್ ಭಾಸ್ಕರ್, ಬೀದರ್
ಆಂಗ್ಲಭಾಷೆ ಬಾರದೇ ಇದ್ದವರಿಗೆ ವೀಸಾ ಸಿಗಬಹುದೇ ?
ಖಂಡಿತವಾಗಿಯೂ! ವಲಸೆ ವೀಸಾಗಳೂ ಸೇರಿದಂತೆ ಬಹುತೇಕ ಅಮೆರಿಕ ವೀಸಾಗಳನ್ನು ಪಡೆಯಲು ಭಾಷೆಯ ಅರ್ಹತೆಗಳಿಲ್ಲ. ವಿದ್ಯಾರ್ಥಿ ಹಾಗೂ ಕೆಲಸ ವೀಸಾಗಳಂಥ ಕೆಲವು ವರ್ಗಗಳ ವೀಸಾಗಳಿಗೆ ಇಂಗ್ಲಿಷ್ ಭಾಷಾ ಜ್ಞಾನದ ಅಗತ್ಯವುಂಟು. ಅಮೆರಿಕದ ರಾಯಭಾರ ಕಚೇರಿ ಹಾಗೂ ದೂತಾವಾಸಗಳಲ್ಲಿ ವೀಸಾ ಸಂದರ್ಶಗಳನ್ನು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ನಡೆಸಲಾಗುತ್ತದೆ. ಹೊಸ ವೀಸಾ ವ್ಯವಸ್ಥೆ ಕಳೆದ ವಾರವಷ್ಟೇ ಜಾರಿಗೊಂಡಿದ್ದು, ಅರ್ಜಿದಾರರು ಸಹಾಯಕ್ಕಾಗಿ ಕರೆ ಕೇಂದ್ರಗಳಿಗೆ ಕರೆ ಮಾಡಿದರೆ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿಯೂ ಉತ್ತರ ಪಡೆಯಬಹುದು!

3. ಎನ್. ವಿ. ಸುರೇಶ್, ಚಾಮರಹಳ್ಳಿ
ಭಾರತದ ಸಂವಿಧಾನಕ್ಕೂ,ಅಮೆರಿಕ ಸಂವಿಧಾನಕ್ಕೂ ಇರುವ ವ್ಯತ್ಯಾಸಗಳೇನು. ಎರಡೂ ದೇಶಗಳಲ್ಲಿನ ಆಡಳಿತ ವೈಖರಿಯ ವ್ಯತ್ಯಾಸಗಳೇನು ?
ಭಾರತ ಹಾಗೂ ಅಮೆರಿಕ ಸಂವಿಧಾನಗಳಲ್ಲಿ ಅನೇಕ ಸಾಮ್ಯತೆಗಳುಂಟು. ಸಮಾನತೆ, ಸ್ವಾತಂತ್ರ್ಯ ಹಾಗೂ ಸಾಂವಿಧಾನಿಕ ಪರಿಹಾರೋಪಾಯದ ಹಕ್ಕುಗಳನ್ನು ಉಭಯ ರಾಷ್ಟ್ರಗಳ ಸಂವಿಧಾನಗಳೂ ತಮ್ಮ ನಾಗರಿಕರಿಗೆ ಖಾತರಿಪಡಿಸುತ್ತವೆ. ಒಂದು ಅತಿ ದೊಡ್ಡ ವ್ಯತ್ಯಾಸ ಎಂದರೆ, ಸಂವಿಧಾನದ ಗಾತ್ರ. ವಿಶ್ವದ ಸಾರ್ವಭೌಮ ರಾಷ್ಟ್ರಗಳಲ್ಲಿಯೇ ಅತಿ ದೊಡ್ಡದಾದ ಸಂವಿಧಾನ ಹೊಂದಿದ ಹೆಗ್ಗಳಿಕೆ ಭಾರತದ್ದು. ಇದು 444 ಅನುಚ್ಛೇದಗಳು, 12 ಪರಿಶಿಷ್ಟಗಳು ಹಾಗೂ 97 ತಿದ್ದುಪಡಿಗಳನ್ನು ಒಳಗೊಂಡಿದೆ. ಆದರೆ, ಅಮೆರಿಕದ್ದು ಅತ್ಯಂತ ಚಿಕ್ಕ ಸಂವಿಧಾನವಾಗಿದ್ದು, ಅದು ಕೇವಲ 7 ಅನುಚ್ಛೇದಗಳು ಹಾಗೂ 27 ತಿದ್ದುಪಡಿಗಳನ್ನು ಒಳಗೊಂಡಿದೆ.

ಅಮೆರಿಕದ ಫೆರಡಲ್ ಸರ್ಕಾರವು ಮೂರು ಮುಖ್ಯ ಅಂಗಗಳನ್ನು ಹೊಂದಿದೆ. ಅವುಗಳೆಂದರೆ, ಶಾಸಕಾಂಗ ಅಂದರೆ ಕಾಂಗ್ರೆಸ್, ರಾಷ್ಟ್ರಾಧ್ಯಕ್ಷರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಾಂಗ ಹಾಗೂ ಫೆಡರಲ್ ನ್ಯಾಯಾಂಗ- ಸುಪ್ರೀಂಕೋರ್ಟು. ಫೆಡರಲ್ ಸರ್ಕಾರ ಹಾಗೂ ರಾಜ್ಯಗಳ ನಡುವಿನ ಅಧಿಕಾರ ಹಂಚಿಕೆ ಸ್ಪಷ್ಟವಾಗಿದೆ. ಪ್ರತಿ ರಾಜ್ಯವೂ ತನ್ನದೇ ಆದ ಸಿವಿಲ್ ಹಾಗೂ ಕ್ರಿಮಿನಲ್ ಕಾನೂನುಗಳನ್ನು ಹೊಂದಿದೆ. ಆದರೆ, ರಾಜ್ಯಗಳ ಸಂವಿಧಾನಗಳು ಹಾಗೂ ಕಾನೂನುಗಳು ಅಮೆರಿಕದ ಫೆಡರಲ್ ಕಾನೂನು ಹಾಗೂ ಸಂವಿಧಾನಗಳಿಗೆ ವಿರುದ್ಧವಾಗಿರಬಾರದು ಅಷ್ಟೇ.

4.ರವಿ ಭಟ್, ಬೆಂಗಳೂರು
ನನಗೆ ಬಿ1/ ಬಿ2 ವೀಸಾ ಇದ್ದು, ಅದರ ಅವಧಿ 2017ರವರೆಗೂ ಉಂಟು. ಈಚೆಗಷ್ಟೇ ನನ್ನ ಪಾಸ್‌ಪೋರ್ಟ್‌ನ್ನು ನವೀಕರಿಸಿದೆ. ಹೊಸ ಪಾಸ್‌ಪೋರ್ಟ್ ಗಾಗಿ ವೀಸಾವನ್ನು ಮತ್ತೆ ಮಾಡಿಸಬೇಕಾ ಅಥವಾ ಹಳೆ ಪಾಸ್‌ಪೋರ್ಟನ್ನು ಹೊಸತರೊಂದಿಗೆ ಕೊಂಡೊಯ್ದರೆ ಆದೀತಾ?
ನೀವು ಹೊಸ ವೀಸಾ ಪಡೆಯುವ ಅಗತ್ಯವಿಲ್ಲ. ಪ್ರಯಾಣದ ಸಂದರ್ಭದಲ್ಲಿ ಎರಡೂ ಪಾಸ್‌ಪೋರ್ಟುಗಳನ್ನು ಒಟ್ಟಿಗೆ ಕೊಂಡೊಯ್ದರೆ ಸಾಕು. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನಮ್ಮ ಹೊಸ ವೆಬ್‌ಸೈಟಿನಲ್ಲಿ www.ustraveldocs.com/in ಪಡೆಯಬಹುದು.

5. ದೀಪಕ್ ಕಟಕಧೊಂಡ್, ಇಂಡಿ ತಾಲೂಕು
ನಾನೊಬ್ಬ ಭಾರತೀಯ ನಾಗರಿಕ. ನಾನೂ ಅಮೆರಿಕದಲ್ಲಿ ಸ್ಥಿರಾಸ್ತಿ ಖರೀದಿಸಬಹುದೆ? ಅದಕ್ಕಿರುವ ನಿಯಮಗಳೇನು ? ಅಮೆರಿಕದ ಷೇರು ಮಾರುಕಟ್ಟೆಗಳಲ್ಲಿ (ಡೋ ಜೋನ್ಸ್, ನಾಸ್ಡಾಕ್) ನಾವೂ ಹೂಡಬಹುದೇ ?
ಸಾಮಾನ್ಯವಾಗಿ, ಅಮೆರಿಕದ ರಿಯಲ್ ಎಸ್ಟೇಟ್ ಕ್ಷೇತ್ರವೂ ವಿದೇಶಿ ಬಂಡವಾಳಕ್ಕೆ ಮುಕ್ತವಾಗಿದೆ. ಅಮೆರಿಕದಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡಲು SelectUSA ಎಂಬ ವಿಶೇಷ ಯೋಜನೆಯನ್ನು ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.selectusa.gov ವೆಬ್‌ಸೈಟ್‌ಗೆ ಭೇಟಿ ನೀಡಿ.

6. ಇಂದು, ತಿಪಟೂರು
 ಅಮೆರಿಕ ದೇಶವು ಕ್ರೀಡೆಗೆ ಎಷ್ಟು ಪ್ರಾಶಸ್ತ್ಯ ನೀಡಿದೆ ಒಲಿಂಪಿಕ್ಸ್, ವಿಶ್ವ ಅಥ್ಲೆಟಿಕ್ಸ್ ಮುಂತಾದ ಕ್ರೀಡಾಕೂಟಗಳಿಗೆ, ಆಟಗಾರರನ್ನು ಯಾವ ರೀತಿ ತರಬೇತಿ ಕೊಟ್ಟು ತಯಾರು ಮಾಡುತ್ತದೆ. ಶಾಲಾ, ಕಾಲೇಜುಗಳಲ್ಲಿ ಕ್ರೀಡೆ ಕಡ್ಡಾಯವೇ ಅಥವಾ ಸ್ವಇಚ್ಛೆಯಿಂದ ಆಡುವವರಿಗೆ ಮಾತ್ರ ತರಬೇತಿಯೇ ?
ಕ್ರೀಡೆಗಳಿಗೆ ಅಮೆರಿಕದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆರೋಗ್ಯ ಹಾಗೂ ದೈಹಿಕ ಪಟುತ್ವದ ಹಿನ್ನೆಲೆಯಲ್ಲಿಯೂ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೀಗಾಗಿ, ಅಮೆರಿಕದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಮಾತ್ರವಲ್ಲದೆ ಖಾಸಗೀ ಸಂಸ್ಥೆಗಳೂ ಕ್ರೀಡೆಗೆ ಪ್ರೋತ್ಸಾಹ ನೀಡುತ್ತವೆ. ಅಮೆರಿಕದ ಎಲ್ಲ ಶಾಲೆಗಳಲ್ಲಿಯೂ ಕ್ರೀಡೆ ಹಾಗೂ ಕಸರತ್ತಿನ ಮಹತ್ವದ ಕುರಿತು ಮಕ್ಕಳಿಗೆ ದೈಹಿಕ ಶಿಕ್ಷಣದ ತರಗತಿಗಳಲ್ಲಿ ಮನವರಿಕೆ ಮಾಡಿಕೊಡಲಾಗುತ್ತದೆ. ಕ್ರೀಡಾ ಕೌಶಲ್ಯವಿರುವ ಮಕ್ಕಳು, ತಮ್ಮ ಶಾಲಾ ತಂಡಗಳಲ್ಲಿ ಭಾಗಿಯಾಗುತ್ತಾರೆ. ಈ ಶಾಲಾ ಮಕ್ಕಳ ಪಂದ್ಯಾವಳಿಗಳು ಸ್ಥಳೀಯ ಸಮುದಾಯಗಳಲ್ಲಿ ಸಾಕಷ್ಟು ಜನಪ್ರಿಯ. ಆರೋಗ್ಯ ಹಾಗೂ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಅಧ್ಯಕ್ಷರ ದೈಹಿಕ ಪಟುತ್ವ ಹಾಗೂ ಕ್ರೀಡೆಗಳ ಪರಿಷತ್ತು (The President~s Council on Physical Fitness and Sports) ಮಹತ್ವದ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳ ದೈಹಿಕ ಪಟುತ್ವವನ್ನು ಮೌಲ್ಯಮಾಪನ ಮಾಡಿ, ಹಲವಾರು ಪ್ರಶಸ್ತಿಗಳನ್ನೂ ನೀಡುವುದು ಈ ಪರಿಷತ್ತಿನ ಕಾರ್ಯ. ಮಕ್ಕಳು ಮತ್ತು ಹದಿ ಹರೆಯದವರು ದಿನಂಪ್ರತಿ ಅರವತ್ತು ನಿಮಿಷ ಅಥವಾ ಅದಕ್ಕೂ ಹೆಚ್ಚು ಕಾಲದ ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಅಮೆರಿಕದ ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆಯು ಶಿಫಾರಸು ಮಾಡುತ್ತದೆ.
ಮಕ್ಕಳಿಗಾಗಿ ಹಲವಾರು ಕ್ರೀಡಾ ಲೀಗ್‌ಗಳನ್ನು ಅನೇಕ ನಗರಗಳ ಸಾರ್ವಜನಿಕ ಪಾರ್ಕ್ ಹಾಗೂ ಜಿಮ್ಮುಗಳಲ್ಲಿ ಸ್ಥಳೀಯ ಸಮುದಾಯಗಳು ರೂಪಿಸಿವೆ. ಸಾಕರ್, ಬ್ಯಾಸ್ಕೆಟ್ ಬಾಲ್, ಅಮೆರಿಕನ್ ಫುಟ್ ಬಾಲ್, ಮತ್ತು ಬೇಸ್ ಬಾಲ್ ಅಥವಾ ಸಾಫ್ಟ್‌ಬಾಲ್ ಅಮೆರಿಕದಲ್ಲಿ ಜನಪ್ರಿಯ. ಪ್ರತಿಯೊಬ್ಬರ ಭಾಗವಹಿಸುವಿಕೆಗೆ ಹೆಚ್ಚಿನ ಒತ್ತನ್ನು ಈ ಲೀಗುಗಳು ನೀಡುತ್ತವೆ. ಅನೇಕ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಂಡದಲ್ಲಿ ಕಡಿಮೆ ಕೌಶಲ್ಯ ಹೊಂದಿದ್ದರೂ, ಆಡಲೇಬೇಕು ಎಂದು ಕಡ್ಡಾಯ ಮಾಡಲಾಗುತ್ತದೆ. ಇದರ ಮುಖ್ಯ ಉದ್ದೇಶ ಎಂದರೆ, ಮಕ್ಕಳಿಗೆ ಕ್ರೀಡೆಗಳಲ್ಲಿನ ಖುಷಿಯನ್ನು ಕಲಿಸುವುದು ಮತ್ತು ಅದನ್ನು ಅವರು ಜೀವನದುದ್ದಕ್ಕೂ ಅಳವಡಿಸಿಕೊಳ್ಳಲು ಆಸಕ್ತಿ ಮೂಡಿಸುವುದು. ಅಧ್ಯಕ್ಷರ ದೈಹಿಕ ಪಟುತ್ವದ ಪರಿಷತ್ತಿನ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ವೆಬ್‌ಸೈಟ್‌ಗೆ ಭೇಟಿ ನೀಡಿ: www.presidentschallenge.org/celebrate/physical-fitness.shtml.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT