ADVERTISEMENT

ಸೋಲೊ

ಕೃಪಾಕರ ಸೇನಾನಿ
Published 4 ಫೆಬ್ರುವರಿ 2017, 19:30 IST
Last Updated 4 ಫೆಬ್ರುವರಿ 2017, 19:30 IST
ಸೋಲೊ
ಸೋಲೊ   

ನಮಗೆ ಚೆನ್ನಾಗಿ ಪರಿಚಯವಿದ್ದ ಗುಡ್ಡವನ್ನು ಏರುತ್ತಿದ್ದೆವು. ಅದು ಅಷ್ಟೇನೂ ಕಡಿದಾಗಿರಲಿಲ್ಲ. ಆದರೆ ಆ ಗುಡ್ಡವನ್ನು ಅಸಂಖ್ಯಾತ ಮುಳ್ಳಿನ ಬಳ್ಳಿಗಳು ಆವರಿಸಿಕೊಂಡಿದ್ದವು. ಗಾಳದಂಥ ಮುಳ್ಳುಗಳನ್ನು ಮೈ ತುಂಬಾ ತುಂಬಿಕೊಂಡಿದ್ದ ಅವುಗಳನ್ನು ಅಲಕ್ಷಿಸಿ ಗುಡ್ಡ ಏರುವುದು ಸಾಧ್ಯವೇ ಇರಲಿಲ್ಲ. ಸ್ವಲ್ಪ ಲಕ್ಷ್ಯ ತಪ್ಪಿದರೂ ನಿರ್ದಾಕ್ಷಿಣ್ಯವಾಗಿ ಒಂದಿಷ್ಟು ಚರ್ಮವನ್ನು ಕಳೆದುಕೊಳ್ಳುತ್ತಿದ್ದವು. ನಾಟಿದ ಮುಳ್ಳನ್ನು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಒಂದೆರಡು ಹೆಜ್ಜೆ ಹಿಂದಕ್ಕೆ ಸರಿದಾಗ ಇನ್ನೆರಡು ಮುಳ್ಳುಗಳು ಕುತ್ತಿಗೆಯ ಪಟ್ಟಿಯನ್ನು ಹಿಡಿದಿರುತ್ತಿದ್ದವು. ಇದನ್ನು ನಿಭಾಯಿಸಲು ಇರುವ ಏಕೈಕ ಮಾರ್ಗವೆಂದರೆ, ಚರ್ಮದ ಒಂದಿಷ್ಟು ಭಾಗವನ್ನು ತೆರಿಗೆ ರೂಪದಲ್ಲಿ ಧಾರೆ ಎರೆದು ಮುಂದೆ ಹೋಗುವುದು. ಹಾಗೆ ನೋಡಿದರೆ ಹೋಗಿ ಬರುವ ಅಪರಿಚಿತರನ್ನೆಲ್ಲ ಬಿಗಿದಪ್ಪಿ ಅಷ್ಟು ಗಾಢವಾಗಿ ಪ್ರೀತಿಸುವ ಜೀವಿಗಳನ್ನೇ ನಾವು ನೋಡಿಲ್ಲ. ಹಾಗಾಗಿ ಈ ‘ಬಾಡ ಬಗ್ಗಲು’ ಮುಳ್ಳುಬಳ್ಳಿ ಆಂಗ್ಲ ಭಾಷೆಯಲ್ಲಿ ‘ಲೀವ್ ಮಿ ನಾಟ್’ ಎಂದಾಗಿದೆ.

ಸೂರ್ಯ ಆಗಲೇ ಪ್ರಖರವಾಗಿ ಬೆಳಗುತ್ತಿದ್ದ. ಬೆವರು ಹರಿಯುತ್ತಿತ್ತು. ಕಣ್ಣಿಗೆ ಕಾಣದ ಕಣಗಾತ್ರದ ಉಣ್ಣೆಯ ಮರಿಗಳು ಲಕ್ಷಲಕ್ಷ ಸಂಖ್ಯೆಯಲ್ಲಿ ಹುಲ್ಲು, ಗಿಡಗಂಟೆಗಳಲ್ಲಿ ಕುಳಿತು ಅತ್ತ ಬರುವ ಬಿಸಿ ರಕ್ತದ ಪ್ರಾಣಿಗಳಿಗೆ ಹೊಂಚು ಹಾಕಿದ್ದವು. ಗಿಡಗಳನ್ನು ಸವರಿಕೊಂಡು ಸಾಗುವವರ ಮೈಮೇಲೆ ಮೆಲ್ಲನೆ ಜಾರಿಕೊಂಡು ಒಂದು ತೊಟ್ಟು ರಕ್ತ ಹೀರುವುದು ಇವುಗಳ ಕೆಲಸ. ಅಷ್ಟೇ ಆದರೆ, ಈ ಕ್ಷುದ್ರ ಜೀವಿಗಳಿಗೇಕೆ ಅಂಜಬೇಕು ಎನಿಸಬಹುದು. ಆದರೆ ಅವುಗಳ ಸಂಖ್ಯೆ, ಆಕ್ರಮಣ ನಡೆಸುವ ವಿಧಾನ, ಅವು ಆಯ್ಕೆ ಮಾಡಿಕೊಳ್ಳುವ ಜಾಗ ಹಾಗೂ ಆನಂತರದ ಪರಿಣಾಮಗಳನ್ನು ನೆನಪಿಸಿಕೊಂಡಾಗ ಮಾತ್ರ ದಿಗಿಲಾಗುತ್ತದೆ. ಅವು ಕಾರ್ಯಾಚರಣೆ ನಡೆಸಿದ ಸ್ಥಳಗಳಲ್ಲಿ ಕೆಂಪು ಚುಕ್ಕೆಯೊಂದು ಮೂಡಿ ಕೆರೆತ ಶುರುವಾಗುತ್ತದೆ. ನಿಂತಲ್ಲಿ ಕೂತಲ್ಲಿ ಬೆರಳುಗಳು ನಮ್ಮ ತಿಳಿವಳಿಕೆಗೆ ಬಾರದಂತೆ ತಮ್ಮ ಕೆಲಸ ಶುರುಮಾಡಿರುತ್ತವೆ. ಆ ನಂತರ ಜಂಟಲ್‌ಮ್ಯಾನ್ ನಡವಳಿಕೆ ಮಾಯವಾಗಿ ಮದುವೆ, ಸೆಮಿನಾರ್‌ಗಳಂತಹ ಸಾರ್ವಜನಿಕ ಸಮಾರಂಭಗಳಿಗೆ ಕಡ್ಡಾಯವಾಗಿ ಗೈರುಹಾಜರಾಗಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತದೆ.

ಬದುಕುಳಿಯಲು ಮತ್ತು ತಮ್ಮ ಸಂಕುಲವನ್ನು ಮುಂದುವರಿಸಲು ಉಣ್ಣೆಗಳಿಗೆ ರಕ್ತ ಹೀರುವುದು ಅಗತ್ಯ. ಹಾಗಾಗಿ ಅವುಗಳ ವರ್ತನೆಯನ್ನು ನಮ್ಮ ಮೇಲಿನ ದಾಳಿಯೆಂದು ಪರಿಗಣಿಸಲು ಸಾಧ್ಯವಿಲ್ಲ. ಕಾಡನ್ನೇ ಬದುಕಾಗಿಸಿಕೊಂಡಾಗ ಇದನ್ನೆಲ್ಲಾ ದೂರೆಂದು ಪಟ್ಟಿಮಾಡುವುದು ತಪ್ಪಾಗುತ್ತದೆ. ಆದರೆ, ಈ ಉಷ್ಣವಲಯದ ಕಾಡುಗಳ ಧಗೆ, ಸುರಿಯುವ ಬೆವರು, ಜೊತೆಗೆ ಉಣ್ಣೆಗಳ ಕಡಿತ, ಮತ್ತದರ ತುರಿತವಿಲ್ಲದ ಕಾಡಿನ ಅನುಭವಗಳು ಅಪೂರ್ಣವೇ.
ಆ ದಿನ, ನಾವು ಅಧ್ಯಯಿಸುತ್ತಿದ್ದ ಕಾಡು ನಾಯಿಗಳ ಗುಂಪಿನ ಗೂಡನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದೆವು.

ಮರಿ ಮಾಡಲೆಂದು ಆ ಗುಡ್ಡದಲ್ಲೆಲ್ಲೊ ಅವು ಗೂಡು ಮಾಡಿರುವ ಸುಳಿವು ನಮಗಿತ್ತಾದರು, ಅಲ್ಲಿದ್ದ ಅನೇಕ ಬಂಡೆಗಳ ಪೈಕಿ ಯಾವ ಬಂಡೆಯ ಪೊಟರೆಯಲ್ಲಿ ಮರಿ ಇರಿಸಿರಬಹುದೆಂಬುದನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಇದಕ್ಕಾಗಿ ನಾವು ಮೂರು ಬಾರಿ ಪ್ರಯತ್ನಿಸಿದ್ದೆವಾದರೂ, ಕಾವಲು ನಾಯಿ ನಮ್ಮನ್ನು ಗಮನಿಸಿದ್ದರಿಂದ ನಾವು ವಾಪಸ್ಸಾಗಿದ್ದೆವು. ಬಹುಶಃ ನೂರಾರು ವರ್ಷಗಳಿಂದ ಮನುಷ್ಯ ಅವುಗಳನ್ನು ನಿರಂತರವಾಗಿ ಹಿಂಸಿಸಿ ಕಾಡಿದ್ದರಿಂದಲೇನೊ, ಮರಿ ಮಾಡುವಾಗ ಅವು ಅತ್ಯಂತ ಎಚ್ಚರಿಕೆ ವಹಿಸುತ್ತವೆ. ಮರಿಗಳು ಸಣ್ಣವಿದ್ದಾಗ ಆ ಸ್ಥಳದ ರಹಸ್ಯವನ್ನು ಬಿಟ್ಟುಕೊಡುವುದಿಲ್ಲ. ಜೊತೆಗೆ ಆ ಅವಧಿಯಲ್ಲಿ ಗೂಡಿಗೆ ತೀರ ಹತ್ತಿರದಲ್ಲಿ ಮನುಷ್ಯರು ತಿರುಗಾಡಿದ ಸುಳಿವು ಸಿಕ್ಕರು ಕೂಡ, ಪುಟ್ಟಮರಿಗಳನ್ನು ಬಾಯಿಯಲ್ಲಿ ಹಿಡಿದು ಬೇರೊಂದು ಗೌಪ್ಯ ಸ್ಥಳದತ್ತ ಕೊಂಡೊಯ್ದು ಬಚ್ಚಿಡುತ್ತವೆ. ಹಾಗಾಗಿ ನಾವೆಂದೂ ಅವುಗಳ ಗೂಡುಗಳ ಸಮೀಪ ಹೋಗುವುದೇ ಇಲ್ಲ.

ನಮ್ಮ ವಾಸನೆ ಅವುಗಳಿಗೆ ಸಿಗದಂತೆ ಬೀಸುವ ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಾ, ನಾವು ಗೂಡನ್ನು ಅಂದಾಜಿಸಿದ್ದ ದಿಕ್ಕಿಗೆ ಸಾಗಿದೆವು. ಐದಾರು ಅಡಿ ಎತ್ತರಕ್ಕೆ ಬೆಳೆದಿದ್ದ ಲಂಟಾನಾ ಪೊದೆಗಳಿಗೆ ಹಬ್ಬಿದ್ದ ಮುಳ್ಳಿನ ಬಳ್ಳಿಗಳಿಂದಾಗಿ ನಿಧಾನವಾಗಿ ಸಾಗುತ್ತಿದ್ದೆವು. ಪೊದರುಗಳಡಿಯಲ್ಲಿ ಸಣ್ಣ ಸಣ್ಣ ಪ್ರಾಣಿಗಳು ತಿರುಗಾಡಿ ಸವೆದಿದ್ದ ಜಾಡುಗಳು ಕಂಡುಬರುತ್ತಿದ್ದವು. ಆದರೆ ನಮ್ಮ ಎದೆಯ ಮಟ್ಟದಲ್ಲಿ ಮುಳ್ಳು ಪೊದೆಗಳು ದಟ್ಟವಾಗಿದ್ದು, ನಮಗೆ ಮುಂದುವರಿಯಲು ಸುಲಭವಿರಲಿಲ್ಲ. ಆ ಪೊದರುಗಳನ್ನು ಪ್ರಯಾಸದಿಂದ ದಬ್ಬಿ ಮುನ್ನಡೆಯಬೇಕಿತ್ತು. ಅದೃಷ್ಟವೆಂದರೆ, ಆಗ ಕಟ್ಟುಮಸ್ತಾಗಿದ್ದ ಸಹಾಯಕ ಮೂರ್ತಿ ಈ ಸವಾಲನ್ನು ಜಾಣ್ಮೆಯಿಂದ ನಿಭಾಯಿಸುತ್ತಾ ನಮ್ಮ ಮುಂದೆ ನಡೆದಿದ್ದ.

ತುಸು ದೂರ ಸಾಗಿದ ಬಳಿಕ ನಾಯಿಯ ಗೂಡಿರಬಹುದೆಂದು ಊಹಿಸಿದ್ದ ಸ್ಥಳದ ಹತ್ತಿರದಿಂದ ಯಾವುದೋ ದುರ್ವಾಸನೆ ಬಂದಂತಾಯ್ತು. ಇದು ನಾಯಿಗಳು ಮರಿಮಾಡುವ ಸ್ಥಳದಲ್ಲಿ ಎಂದೂ ವ್ಯಕ್ತಗೊಳ್ಳದ ಲಕ್ಷಣ. ಏಕೆಂದರೆ ಇತರೆ ಬೇಟೆಗಾರ ಪ್ರಾಣಿಗಳು ವಾಸನೆ ಬರುವ ಸ್ಥಳವನ್ನು ಪರೀಕ್ಷಿಸಿ ನೋಡುವ ಸಂಭವಗಳು ಹೆಚ್ಚು. ಈ ಹಿನ್ನೆಲೆಯಲ್ಲಿ ಕಾಡು ನಾಯಿಗಳು ಮರಿ ಇರಿಸುವ ಪ್ರದೇಶವನ್ನು ಸದಾ ಸ್ವಚ್ಛವಾಗಿಟ್ಟುಕೊಂಡಿರುತ್ತವೆ.
ಬಹಳ ಎಚ್ಚರಿಕೆಯಿಂದ ಪೊದರುಗಳನ್ನು ಸರಿಸುತ್ತಾ ನೂರು ಮೀಟರ್ ದೂರ ಸಾಗಿದಾಗ ವಾಸನೆ ಇನ್ನಷ್ಟು ದಟ್ಟವಾಯಿತು. ಆ ಕ್ಷಣ ಅಲ್ಲಿ ಏನೋ ಎಡವಟ್ಟಾಗಿರಬಹುದೆನ್ನಿಸಿತು. ತುಸು ಕಾಲ ಅಲ್ಲೇ ನಿಂತೆವು. ನಮ್ಮ ಎದುರಿಗೆ ಬಂಡೆಯೊಂದಿತ್ತು. ವಿವರವಾಗಿ ಎಲ್ಲವನ್ನೂ  ಪರೀಕ್ಷಿಸುವ ಉದ್ದೇಶದಿಂದ ಬಂಡೆ ಏರಿದೆವು. ಯಾವುದೂ ಸ್ಪಷ್ಟವಾಗದಿದ್ದಾಗ ಮುಂದಿದ್ದ ಬಂಡೆಗೆ ಹಾರಿ ನಿಂತೆವು. ಆ ನಮ್ಮ ಪ್ರಯತ್ನದಲ್ಲಿ ಅದುರಿದ ಗಿಡಬಳ್ಳಿಗಳಿಂದ ಕಾಡು ಎಚ್ಚರಗೊಂಡಿತು. ಪೊದೆಗಳಲ್ಲಿ ಕುಳಿತಿದ್ದ ನಾಲ್ಕಾರು ಹಕ್ಕಿಗಳು ಬೆಚ್ಚಿ ಹಾರಿದ್ದವು. ಹೀಗೆ ಬೆದರಿ ಹಾರಿದ ಹಕ್ಕಿಗಳ ರೆಕ್ಕೆಗಳ ಬಡಿತ, ಕಾಡಿನ ಎಲ್ಲಾ ಕಿವಿಗಳನ್ನು ಎಚ್ಚರಿಸಿಬಿಡುತ್ತವೆ.

ಇದಕ್ಕಾಗಿ ಕಾಡು ಮತ್ತೆ ಮೌನವಾಗುವವರೆಗೆ ಕಾಯುತ್ತಾ ಕುಳಿತುಕೊಂಡೆವು. ಅನಂತರ ಯಾವುದೋ ಸದ್ದು ಕೇಳಿದಂತಾಯಿತು. ಅದು ಕಾಡಿನಲ್ಲಿ ನಾವು ಎಂದೂ ಕೇಳಿರದ ಸದ್ದು. ಅಲುಗದೆ ಕುಳಿತಲ್ಲೇ ಕುಳಿತೆವು. ಮತ್ತೆ ಸದ್ದು ಮೂಡಿತು. ಗೊರಕೆ ಹೊಡೆದಂತಹ ಸಣ್ಣ ಧ್ವನಿ ನಮ್ಮ ತಳಭಾಗದಿಂದ ಮೂಡಿಬರುತ್ತಿತ್ತು. ಕೆಲವೇ ಮೀಟರ್‌ಗಳ ಅಂತರದಲ್ಲಿ ದಟ್ಟ ಪೊದರುಗಳಿಂದ ಹೊರಹೊಮ್ಮುತ್ತಿದ್ದ ಆ ಅಪರಿಚಿತ ಸದ್ದು ಭಯ ಹುಟ್ಟಿಸುವಂತಿತ್ತು. ಸದ್ದಿನ ಮೂಲವನ್ನು ಖಚಿತವಾಗಿ ಅರಿಯಲು ಎದುರು ಬಂಡೆಗಳ ನಡುವಿನ ಇಕ್ಕಟ್ಟಾದ ಕೊರಕಲಿನೆಡೆಗೆ ಮೂರ್ತಿ ನಿಧಾನವಾಗಿ ತೆವಳಿ ಇಣುಕಿ ನೋಡಿದ. ನಂತರ ಆತ ನಮ್ಮತ್ತ ಮೆಲ್ಲನೆ ತಿರುಗಿದ. ಅವನ ಮುಖ ಪೇಲವವಾಗಿತ್ತು. ಆತ ನೀಡಿದ ಸನ್ನೆಯನ್ನು ಆಧರಿಸಿ ನಾವು ಕುಳಿತಿದ್ದ ಬಂಡೆಯ ಇನ್ನೊಂದು ಭಾಗಕ್ಕೆ ಸರಿದು, ಕಿರಿದಾದ ಕೊರಕಲ ಸಂದಿಯಿಂದ ಬಂಡೆಯ ಬುಡದೆಡೆಗೆ ಕಣ್ಣಾಯಿಸಿದೆವು. ಸಿಡಿಲೆರೆಗಿದಂತಾಯಿತು.

ನಮ್ಮಿಂದ ಕೇವಲ ಐದು ಅಡಿ ದೂರವಿದ್ದ ಪೊಟರೆಯ ಬಾಯಿಯಲ್ಲಿ ಕಾಡು ನಾಯಿಯೊಂದು ಮಲಗಿತ್ತು. ಅದರ ಕಿವಿ ಮಾತ್ರ ನಮಗೆ ಕಾಣುತ್ತಿತ್ತು. ನಮಗೆ ಕೇಳುತ್ತಿದ್ದ ಗೊರಕೆಯ ಸದ್ದು ಕೂಡ ಅಲ್ಲಿಂದಲೇ ಮೂಡಿ ಬರುತ್ತಿತ್ತು. ಆ ಕಾಡು ನಾಯಿ ಇನ್ನೂ ಜೀವಂತವಾಗಿತ್ತು. ಆದರೆ ಅಲ್ಲಿ ಏನೋ ಗಂಭೀರ ಅವಘಡ ಸಂಭವಿಸಿರುವುದು ಖಚಿತವಾಗಿತ್ತು. ಶೇಕ್ಸ್‌ಪಿಯರ್‌ನ ದುರಂತ ನಾಟಕವೊಂದರ, ಕೊನೆಯ ಅಂಕದ, ಅಂತಿಮ ದೃಶ್ಯ ನಡೆಯುತ್ತಿದ್ದಾಗ ನಾವು ರಂಗಭೂಮಿಯ ಪರದೆಯ ಹಿಂದಿನಿಂದ ಇಣುಕಿನೋಡಿದಂತಿತ್ತು.

ಸಾಮಾನ್ಯವಾಗಿ ಮನುಷ್ಯರಾರಿಗೂ ಕಾಡು ನಾಯಿಗಳನ್ನು ಅವುಗಳಿಗೆ ತಿಳಿಯದಂತೆ ಅಷ್ಟು ಸಮೀಪದಿಂದ ನೋಡಲು ಸಾಧ್ಯವಿಲ್ಲ. ಅದರಲ್ಲೂ ಮರಿಗಳಿರಿಸಿರುವ ಗೂಡಿನ ಬಳಿ ಸದಾ ಕಾವಲು ಕುಳಿತಿರುವ ನಾಯಿಯ ಕಿವಿ, ಕಣ್ಣು, ಮೂಗುಗಳನ್ನು ವಂಚಿಸುವುದು ಅಸಾಧ್ಯದ ಕೆಲಸವೇ.
ಅಂದಿನವರೆಗೂ, ಅವುಗಳ ಸೂಕ್ಷ್ಮ ಸ್ವಭಾವಕ್ಕೆ ಎಂದೂ ಧಕ್ಕೆ ತರದಂತೆ ನಾವು ನಡೆದುಕೊಂಡಿದ್ದೆವು. ಅವುಗಳ ಖಾಸಗಿ ಬದುಕಿಗೆ ಕಿಂಚಿತ್ತೂ ತೊಂದರೆ ಮಾಡದಂತೆ ಬಹುದೂರದಲ್ಲಿ ಕುಳಿತು, ಬೈನಾಕ್ಯುಲರ್‌ಗಳಿಂದ ಅವುಗಳ ಚಟುವಟಿಕೆಗಳನ್ನು ಗಮನಿಸುತ್ತಿದ್ದೆವು. ಆದರೆ ಈ ಹೊತ್ತಿನಲ್ಲಿ ನಮಗರಿವಿಲ್ಲದೆ ನಾವು ತಪ್ಪು ಮಾಡಿದ್ದೆವು. ಅವು ಗೂಡು ಮಾಡಿದ್ದ ಬಂಡೆಯ ಮೇಲೆಯೆ ಕುಳಿತು, ನಾವೇ ಹಾಕಿಕೊಂಡಿದ್ದ ಆ ನಿರ್ಬಂಧವನ್ನು ಉಲ್ಲಂಘಿಸಿದ್ದೆವು.
ಅಲ್ಲಿ ದುರ್ವಾಸನೆ ಗಾಢವಾಗಿ ಹರಡಿತ್ತು. ವಾತಾವರಣದಲ್ಲಿ ಸಾವಿನ ಸೂತಕವಿತ್ತು. ನಾವು ಕೂಡಲೇ ಹಿಂದೆ ಸರಿಯಲು ನಿರ್ಧರಿಸಿದೆವು. ಸ್ವತಂತ್ರವಾಗಿ ಹುಟ್ಟಿ ಬೆಳೆದ ಕಾಡಿನ ಜೀವವೊಂದು, ಬದುಕಿನ ಎಂತಹ ಕಠಿಣ ಸಂದರ್ಭಗಳಲ್ಲೂ ಕೂಡ ಮಾನವನ ಭಾವನಾತ್ಮಕ ಆರೈಕೆಗಾಗಲಿ, ಅಧೀನತೆಗಾಗಲಿ ಒಳಗಾಗಲು ಇಚ್ಛಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಅದು ಶಾಂತವಾಗಿ ಕೊನೆಯುಸಿರು ಎಳೆಯುವುದೇ ಲೇಸೆಂದು ತೀರ್ಮಾನಿಸಿ ವಾಪಸ್ಸಾದೆವು.

ಒಂದೆರಡು ದಿನಗಳ ಬಳಿಕ ಹತ್ತಾರು ಜನರ ದೊಡ್ಡ ತಂಡವನ್ನು ಕಟ್ಟಿಕೊಂಡು ಗುಡ್ಡವನ್ನು ವಿವರವಾಗಿ ಶೋಧಿಸಲು ಮುಂದಾದೆವು. ಗೂಡಿನ ದ್ವಾರದಲ್ಲಿ ಎರಡು ದಿನಗಳ ಹಿಂದೆ ಕಷ್ಟದಿಂದ ಉಸಿರಾಡುತ್ತಿದ್ದ ನಾಯಿ ಸತ್ತು ಮಲಗಿತ್ತು. ನೂರಾರು ನೊಣಗಳು ನಾಯಿಯನ್ನು ಮುತ್ತಿದ್ದವು. ನಾಯಿಯ ಮುಂಗಾಲುಗಳನ್ನು ಹಿಡಿದು ಪೂರ್ತಿ ಹೊರಕ್ಕೆಳೆದಾಗ ಅದರ ಬಾಯಿಯಿಂದ ರಕ್ತ ಹೊರಚೆಲ್ಲಿತು. ಕೂಲಂಕಷವಾಗಿ ಪರೀಕ್ಷಿಸುವಾಗ ನಾಯಿಯ ಗುರುತು ಸ್ಪಷ್ಟವಾಗತೊಡಗಿತು. ಅದು ನಾವು ನಾಲ್ಕು ವರ್ಷಗಳ ಕಾಲ ಕಾಡಿನಲ್ಲಿ ಹಿಂಬಾಲಿಸುತ್ತಿದ್ದ ಗುಂಪಿನ ನಾಯಕನಾಗಿದ್ದ ನಾಯಿ. ತನ್ನ ತಂಡವನ್ನು ಯಶ್ವಸಿಯಾಗಿ ಮುನ್ನಡೆಸಿದ್ದ, ನಮ್ಮನ್ನು ಕಾಡಿದ್ದ ನಾಯಿ. ಎರಡು ದಿನಗಳ ಹಿಂದೆ ನಾವು ಅದನ್ನು ಕಂಡಾಗ ಅದು ತನ್ನ ಬದುಕಿನ ಕಡೆಯ ಕ್ಷಣಗಳಲ್ಲಿತ್ತು.

ಗೂಡಿನ ಒಳಗೆ ಇಣುಕಿದಾಗ ಸತ್ತ ಒಂದು ತಿಂಗಳ ವಯಸ್ಸಿನ ಮರಿಗಳ ಅವಶೇಷಗಳಿದ್ದವು. ಮಾಂಸಖಂಡಗಳೆಲ್ಲ ಕರಗಿ ಅವುಗಳ ರೋಮಗಳಷ್ಟೆ ಅಲ್ಲಿ ಉಳಿದಿದ್ದವು. ಗುಂಪಿನ ಉಳಿದ ನಾಯಿಗಳ ಯಾವ ಸುಳಿವೂ ಸಿಗಲಿಲ್ಲ. ಆದರೆ ಅವು ಗೂಡಿನ ಬಳಿ ವಿಶ್ರಮಿಸುತ್ತಿದ್ದ ಸ್ಥಳಗಳಲ್ಲಿ ಕಾಡು ನಾಯಿಗಳ ಲದ್ದಿಗಳಿದ್ದವು. ಇದೂ ಸಹ ಅವುಗಳ ಸಹಜ ಸ್ವಭಾವಕ್ಕೆ ವಿರುದ್ಧವಾಗಿತ್ತು. ಈ ಎಲ್ಲಾ ವಿವರಗಳು, ಗುಂಪು ಸರ್ವನಾಶಗೊಂಡಿರುವುದನ್ನು ಪುಷ್ಟೀಕರಿಸುತ್ತಿದ್ದವು.

ಬಂಡೀಪುರದ ಕಾಡಿನಲ್ಲಿ ಇದೊಂದು ಪ್ರಬಲ ತಂಡವಾಗಿತ್ತು. ಆರು ದೊಡ್ಡ ನಾಯಿಗಳು, ಆರು ಒಂದು ವರ್ಷದ ಮರಿಗಳೂ ಇದ್ದ ಆ ಗುಂಪಿನಲ್ಲಿ ಆಗಷ್ಟೇ ಹುಟ್ಟಿದ್ದ ಮರಿಗಳು ಸಹ ಸೇರ್ಪಡೆಯಾಗಿದ್ದವು. ಐದು ವರ್ಷಗಳ ಕಾಲ ಅವುಗಳೊಂದಿಗೆ ಕಾಡು ಸುತ್ತಿದ್ದ ನಮಗೆ ಗುಂಪಿನ ಎಲ್ಲಾ ಸದಸ್ಯರ ಪರಿಚಯವಿತ್ತು. ಅವುಗಳನ್ನು ವೈಯಕ್ತಿವಾಗಿ ಯಾರು ಯಾರೆಂದು ಗುರುತಿಸುತ್ತಿದ್ದೆವು, ಹಾಗೂ ಅವುಗಳ ಪರಸ್ಪರ ಸಂಬಂಧಗಳ ಸಂಪೂರ್ಣ ಅರಿವಿತ್ತು.
ಈ ದುರಂತ ನಮಗೆ ಆಘಾತವನ್ನುಂಟು ಮಾಡಿತ್ತು. ಅವುಗಳೊಂದಿಗಿನ ಭಾವನಾತ್ಮಕ ಅನುಬಂಧ ನಮ್ಮ ವಿವೇಕಕ್ಕೆ ಕುರುಡು ತಂದಿತ್ತು. ಹಾಗಾಗಿ ಅವುಗಳ ಸಾವಿಗೆ ಕಾರಣವೇನೆಂದು ತಿಳಿಯಲು ಮರಣೋತ್ತರ ಪರೀಕ್ಷೆಮಾಡಿಸಲು ಸಹ ನಾವು ಮುಂದಾಗಲಿಲ್ಲ.

ದುರಂತದಲ್ಲಿ ಕೆಲವು ನಾಯಿಗಳಾದರೂ ಬದುಕುಳಿದಿರಬಹುದೆಂಬ ಆಸೆಯಿಂದ ಅನೇಕ ದಿನಗಳ ಕಾಲ ಶೋಧನೆ ಮುಂದುವರೆಸಿದೆವು. ಅದು ಯಾವ ಉಪಯೋಗಕ್ಕೂ ಬರಲಿಲ್ಲ. ಆದರೆ ಕೆಲವು ದಿನಗಳ ಬಳಿಕ ಯಾವುದೋ ಜಾಡಿನಂಚಿನಲ್ಲಿ ಮಣ್ಣಾಗಿ ಕರಗಿದ್ದ ಎರಡು ನಾಯಿಗಳ ಅವಶೇಷಗಳು ದೊರೆತವು. ಬಳಿಕ ಆ ಗುಂಪು ಸಂಪೂರ್ಣ ನಶಿಸಿಹೋಯಿತೆಂಬ ತೀರ್ಮಾನಕ್ಕೆ ಬಂದೆವು. ಈ ಘಟನೆಯಿಂದ ನಮ್ಮ ಆತ್ಮಸ್ಥೈರ್ಯ ಸಂಪೂರ್ಣವಾಗಿ ಕುಸಿದಿತ್ತು.

ಹೆಚ್ಚು ಕಡಿಮೆ ಎರಡು ತಿಂಗಳ ನಂತರ, ಅದೇ ವಲಯದ ಕಾಡಿನಲ್ಲಿ ಒಂಟಿಯಾಗಿ ಅಲೆಯುತ್ತಿದ್ದ ಗಂಡು ನಾಯಿಯೊಂದು ಕಾಣಲಾರಂಭಿಸಿತು. ದೈಹಿಕವಾಗಿ ಬಳಲಿದಂತೆ ಕಂಡರೂ ಅದು ದೃಢವಾಗಿತ್ತು. ಮೈಯಲ್ಲಿ ಕೆಲವೆಡೆ ಉದುರಿದ್ದ ರೋಮಗಳು ಮತ್ತೆ ಮೂಡುತ್ತಿದ್ದವು. ಎದುರಾದಾಗ ಅದು ನಮ್ಮನ್ನು ಸಂಶಯದಿಂದ ನೋಡಿ ಕಣ್ಮರೆಯಾಗುತ್ತಿತ್ತು. ಅಂತಿಮವಾಗಿ ಅದರ ಚಿತ್ರಗಳನ್ನು ತೆಗೆದು ನಮ್ಮ ಹಳೆಯ ದಾಖಲೆಗಳೊಂದಿಗೆ ಹೋಲಿಸಿ, ದತ್ತಾಂಶಗಳೊಂದಿಗೆ ಪರಿಶೀಲಿಸಿದಾಗ ರೋಮಾಂಚನಗೊಂಡೆವು.

ನಮ್ಮ ಅಧ್ಯಯನದ ದಾಖಲೆಗಳಲ್ಲಿ ‘ಬಿಬಿ–27’ ಸಂಕೇತದಿಂದ ಇದು ದಾಖಲಾಗಿತ್ತು. ನಶಿಸಿಹೋದ ಗುಂಪಿನಲ್ಲಿದ್ದ ಆ ನಾಯಿ ಪವಾಡವೆಂಬಂತೆ ಬದುಕುಳಿದಿತ್ತು. ಏಕೆಂದರೆ ಕೇವಲ ಒಂದು ವರ್ಷ ಪ್ರಾಯದ, ಅನನುಭವಿ ಕಾಡು ನಾಯಿಯೊಂದು, ಹುಲಿ ಚಿರತೆಗಳಿರುವ ನಮ್ಮ ಕಾಡಿನಲ್ಲಿ ಒಬ್ಬಂಟಿಯಾಗಿ ಬದುಕುಳಿಯುವುದು ನಿಜವಾಗಲೂ ಒಂದು ಪವಾಡವೇ ಸರಿ.

ಆದರೆ ಅದರ ವಿಶ್ವಾಸ ಪುನರ್ ಗಳಿಸಲು ನಮಗೆ ಸುಲಭವಾಗಲಿಲ್ಲ. ಬಲಶಾಲಿಯಾಗಿದ್ದ ಅದರ ಮೂಲ ಗುಂಪು ನಮ್ಮನ್ನು ಒಪ್ಪಿಕೊಂಡಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಈ ನಾಯಿ ಆ ಎಲ್ಲಾ ವಿಶ್ವಾಸ, ನಂಬಿಕೆಗಳನ್ನು ಕಳೆದುಕೊಂಡಿತ್ತು.

ಹಲವು ತಿಂಗಳ ನಿರಂತರ ಪ್ರಯತ್ನದ ಬಳಿಕ, ಅದು ನಮ್ಮ ಹಾಜರಿಯನ್ನು ಸ್ವಲ್ಪಮಟ್ಟಿಗೆ ಸಹಿಸಿಕೊಳ್ಳಲಾರಂಭಿಸಿತು. ತನ್ನನ್ನು ಗಮನಿಸಲು ಆಸ್ಪದ ನೀಡಲಾರಂಭಿಸಿತು. ತುಸು ದೂರದಲ್ಲಿ ಕುಳಿತು ಅದನ್ನು ಗಮನಿಸುವಾಗ ಅಷ್ಟೇನೂ ಕಳವಳಗೊಳ್ಳುತ್ತಿರಲಿಲ್ಲ. ಬಹುಶಃ ಅದರ ಶಂಕೆ ಕ್ರಮೇಣ ಶಮನಗೊಂಡಿರುಬಹುದೆಂದು ನಾವು ನಂಬಿದೆವು. ಅದಕ್ಕೆ ನಮ್ಮ ಗುರುತು ಸಿಕ್ಕಿರಬಹುದೆಂದು ಭಾವಿಸಿದೆವು.

ನಾವು ಅಧ್ಯಯಿಸುತ್ತಿದ್ದ ಕಾಡು ನಾಯಿಗಳನ್ನು ಸಾಮಾನ್ಯವಾಗಿ ಅಂಕೆ–ಸಂಖ್ಯೆಗಳಲ್ಲಿ ಗುರುತಿಸುತ್ತಿದ್ದೆವು. ಆದರೆ ಈ ಕಾಡು ನಾಯಿ ನಮಗೆ ವಿಶೇಷವಾಗಿತ್ತು. ಹಾಗಾಗಿ ‘ಹ್ಯೂಗೊ ವ್ಯಾನ್‌ಲ್ಯಾವಿಕ್‌’ನ ಕತೆಯನ್ನಾಧರಿಸಿ ಅದನ್ನು ‘ಸೋಲೊ’ ಎಂಬ ಹೆಸರಿನಿಂದ ಕರೆಯಲಾರಂಭಿಸಿದೆವು.
ಅದು ಕಾಡಿನಲ್ಲಿ ತನಗಿಂತ ಬಹಳಷ್ಟು ಬಲಿಷ್ಠವಾದ ಹುಲಿ–ಚಿರತೆಗಳೊಂದಿಗೆ ಒಬ್ಬೊಂಟಿಯಾಗಿ ಸ್ಪರ್ಧಿಸಿ ಬದುಕಬೇಕಿತ್ತು.

ಕಾಡು ನಾಯಿಗಳ ಗುಂಪು, ಸಣ್ಣಮರಿಗಳಿಲ್ಲದ ಸಮಯದಲ್ಲಿ ಹುಲಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸೋಲೊ ಇದ್ದ ಪರಿಸ್ಥಿತಿ ಬೇರೆಯದೇ ಆಗಿತ್ತು. ಹಾಗಾಗಿ, ಅನೇಕ ಬಾರಿ ಕೇವಲ ಹುಲಿಯ ವಾಸನೆಗೇ ಅದು ಜಾಗ ಬದಲಿಸುತ್ತಿತ್ತು. ಆದರೆ, ಅದೇ ಸೋಲೊ – ಹುಲಿಯ ಕಣ್ಣಿಗೆ ಬೀಳದಂತೆ, ಅದಕ್ಕೆ ಸುಳಿವು ಕೊಡದಂತೆ, ಹುಲಿ ಬೇಟೆಯಾಡಿದ್ದ ಪ್ರಾಣಿಯ ಮಾಂಸವನ್ನು ಕಳ್ಳತನ ಮಾಡುತ್ತಿತ್ತು.

ಆದರೆ ಚಿರತೆಯ ಇರುವಿಕೆಯ ಕುರುಹು ದೊರೆತಾಗಲ್ಲೆಲ್ಲ ಅದರ ಬೆನ್ನಟ್ಟಿ ಹೋಗುತ್ತಿತ್ತು. ಅನೇಕ ಬಾರಿ ಚಿರತೆ ವೇಗವಾಗಿ ಓಡಿ, ಮರವೇರಿ ಕುಳಿತುಬಿಡುವುದನ್ನು ನಾವು ಕಂಡಿದ್ದೆವು. ಬಹುಶಃ ಚಿರತೆ ಒಂಟಿ ನಾಯಿಯನ್ನು ಕಂಡಾಗ ಕೂಡ ಅದರ ಬೆನ್ನ ಹಿಂದೆ ದೊಡ್ಡ ಗುಂಪೇ ಆಗಮಿಸುತ್ತಿರಬಹುದೆಂದು ಭಯಬೀಳುತ್ತಿತ್ತೇನೊ. ಚಿರತೆಯ ಆ ಹುಸಿನಂಬಿಕೆಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಚಾಕಚಕ್ಯತೆ ಸೋಲೊನಲ್ಲಿತ್ತು. ಇದರೊಂದಿಗೆ ಸೋಲೊನ ಬೇಟೆಯಾಡುವ ಕೌಶಲ್ಯ ದಿನದಿಂದ ದಿನಕ್ಕೆ ವೃದ್ಧಿಸುತ್ತಿತ್ತು. ಆದರೆ ಕೆಲವೊಮ್ಮೆ ಅತ್ಯಂತ ಅಪಾಯಕಾರಿ ಸನ್ನಿವೇಶಗಳಿಗೆ ಸಿಕ್ಕು ಕೂದಲೆಳೆಯಷ್ಟರಲ್ಲಿ ಜೀವ ಉಳಿಸಿಕೊಂಡಿದ್ದು ನಮಗೆ ಆತಂಕಕಾರಿಯಾಗಿ ಕಾಣುತ್ತಿತ್ತು. ಆದರೆ ಕಾಡಿನ ಬದುಕೇ ಹಾಗೆ...

ಮುಂದೊಂದು ದಿನ ನೆರೆಯ ಕಾಡು ನಾಯಿಗಳ ವಲಯದಲ್ಲಿ ಸೋಲೊ ಪ್ರತ್ಯಕ್ಷಗೊಂಡು ಅಚ್ಚರಿಮೂಡಿಸಿತ್ತು. ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ತನ್ನ ಇರುವಿಕೆಯನ್ನು ಪ್ರಕಟಪಡಿಸಲು ಹಲವು ಗುರುತುಗಳನ್ನು ತನ್ನ ಭಾಷೆಯಲ್ಲಿ ನಮೂದಿಸುತ್ತಿತ್ತು. ಆಗ ಎದುರಾಳಿ ಗುಂಪಿಗೆ ಸಿಕ್ಕಿಬಿದ್ದರೆ ಅವು ಇದನ್ನು ಕೊಂದೇ ಹಾಕಬಹುದೆಂದು ನಮಗೆ ದಿಗಿಲಾಗುತ್ತಿತ್ತು. ಆಗೊಂದು ದಿನ ನಾವು ಸೋಲೊನನ್ನು ಪತ್ತೆ ಹಚ್ಚಿದಾಗ ಅದು ಮತ್ತೆ ಪಕ್ಕದ ಕಾಡುನಾಯಿ ಗುಂಪಿನ ವಲಯದಲ್ಲಿ ತಿರುಗುತ್ತಿತ್ತು. ಕೆಲ ಸಮಯದ ನಂತರ ನಾಲ್ಕಾರು ಬಾರಿ ಸೀಟಿ ಹಾಕಿತು.

ಈ ಕಾಡು ನಾಯಿಗಳು ನಮ್ಮ ಊರು ನಾಯಿಗಳಂತೆ ಬೊಗಳುವುದಿಲ್ಲ. ಆದರೆ ಸೀಟಿ ಊದಿದಂತಹ ಸದ್ದನ್ನು ಹೊರಡಿಸುತ್ತವೆ. ಬಹುಶಃ ತಾನು ಏನು ಮಾಡುತ್ತಿದ್ದೇನೆಂಬ ಅರಿವು ಸೋಲೊಗೆ ಸ್ಪಷ್ಟವಾಗಿ ಇದ್ದಿರಬಹುದು. ಹೀಗೆ ಸ್ವಲ್ಪ ಸಮಯ ಬಿಟ್ಟು ಬಿಟ್ಟು ಸೋಲೊ ಸೀಟಿ ಹಾಕಿ, ಏನನ್ನೋ ಕೇಳಿಸಿಕೊಳ್ಳಲು ಸ್ವಲ್ಪ ಕಾಲ ಕಾಯುತ್ತಿತ್ತು. ಆಗ ಇದ್ದಕ್ಕಿದ್ದಂತೆ ಮಳೆ ಕಾಲೂರಿ ಬರುತ್ತಿರುವ ಶಬ್ದ; ಹತ್ತಾರು ಜೀಪಿನ ಚಕ್ರಗಳು ಮರಳ ಮೇಲೆ ಉರುಳಿದಂತಹ ಶಬ್ದ. ಅದೇನೆಂದು ಅರಿಯುವ ಮುನ್ನವೇ ನಮ್ಮ ಹಿಂಬದಿಯಿಂದ ಪ್ರತ್ಯಕ್ಷಗೊಂಡ ಹಲವಾರು ಕಾಡು ನಾಯಿಗಳು ಬಿರುಗಾಳಿಯಂತೆ ಓಡಿ ಬರುತ್ತಿದ್ದವು. ಸೋಲೊ ಮಿಂಚಿನಂತೆ ಓಡಿ ಪೊದರುಗಳಲ್ಲಿ ಕಣ್ಮರೆಯಾಯಿತು. ಅದನ್ನು ಹಿಂಬಾಲಿಸಿದ ಗುಂಪು ಕೂಡ ಅದೇ ವೇಗದಲ್ಲಿ ಸೋಲೊನ ಬೆನ್ನು ಹತ್ತಿ ಕಾಡಿನಲ್ಲಿ ಮರೆಯಾಯಿತು. ಬಳಿಕ ನಮಗೇನೂ ಕಾಣಲಿಲ್ಲ. ಸೋಲೊ ಕತೆ ಅಲ್ಲಿಗೆ ಮುಗಿಯಿತೆಂದು ಭಾವಿಸಿದೆವು.

ಇದಾದ ಸ್ವಲ್ಪ ಹೊತ್ತಿನಲ್ಲಿ ಪೊದರುಗಳ ಹಿಂದೆ ಏನೋ ಗಲಾಟೆ ನಡೆಯುತ್ತಿರುವುದು ಅಸ್ಪಷ್ಟವಾಗಿ ಗೋಚರಿಸಿತು. ಕೆಲವು ನಿಮಿಷಗಳ ಬಳಿಕ ಬೆನ್ನಟ್ಟಿದ್ದ ಗುಂಪು ವಾಪಸಾಯಿತು. ಕಿವಿಗಳನ್ನು ನಿಮಿರಿಸಿ, ಬಾಲಗಳನ್ನು ಮೇಲೆತ್ತಿದ್ದ ಅವು, ಸೋಲೊ ತಮ್ಮ ಪ್ರಾಂತ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಕೆಂಡಾಮಂಡಲವಾಗಿದ್ದವು. ಸೊಲೊ ನಮೂದಿಸಿದ್ದ ಗುರುತುಗಳನ್ನು ಮತ್ತೆ ಮತ್ತೆ ಪರಿಶೀಲಿಸಿ, ತುಸು ಹೊತ್ತಿನ ಬಳಿಕ ಆಗಮಿಸಿದ ದಾರಿಯಲ್ಲೇ ಗುಂಪು ಹಿಂದಿರುಗಿತು.

ಇದಾದ ಬಳಿಕ ಒಂದು ಕಾಡು ನಾಯಿ ಮಾತ್ರ ಗುಂಪಿನಿಂದ ಹಿಂದುಳಿದು, ಕೆಲವೆಡೆ ತನ್ನ ಗುರುತುಗಳನ್ನು ನಮೂದಿಸಿತು. ಬಳಿಕ ಓಡುತ್ತಾ, ನಡುನಡುವೆ ಹಿಂದಿರುಗಿ ನೋಡುತ್ತ ದೂರ ಸರಿದಿದ್ದ ಗುಂಪನ್ನು ಸೇರಿಕೊಂಡಿತು. ನಮಗೆ ಅದು ಹದಿಹರೆಯದವರು, ಅಪ್ಪ ಅಮ್ಮಂದಿರ ಕಣ್ಣು ತಪ್ಪಿಸಿ, ಗುಟ್ಟಾಗಿ ತನ್ನ ಮೊಬೈಲ್ ನಂಬರ್ ಬೀಳಿಸಿಕೊಂಡು ಹೋದಂತೆ ಕಂಡಿತ್ತು.

ಕೆಲವೇ ನಿಮಿಷಗಳಲ್ಲಿ ಪೊದರುಗಳಿಂದ ಹೊರಬಂದ ಸೋಲೊ, ಕಾಡಿನ ಕಾಲುದಾರಿಯಲ್ಲಿ ಸಿಕ್ಕ ವಿವರಗಳನ್ನು ಹೆಕ್ಕುತ್ತಾ, ಉದ್ವೇಗಗೊಂಡಂತೆ ಕಂಡಿತು. ಬಳಿಕ ಕೊಲ್ಲಲು ಬೆನ್ನಟ್ಟಿ ಬಂದಿದ್ದ ಗುಂಪನ್ನೇ ಹಿಂಬಾಲಿಸಿ ಸಾಗಿತು. ಸೋಲೊನ ಈ ಹುಚ್ಚು ಸಾಹಸ ನಮಗರ್ಥವಾಗಲಿಲ್ಲ. ಸೋಲೊ ಹತಾಶನಾಗಿ, ಒಂಟಿ ಜೀವನದಿಂದ ಬಸವಳಿದು ಮತ್ತೊಂದು ಗುಂಪನ್ನು ಸೇರುವ ಪ್ರಯತ್ನ ನಡೆಸಿತ್ತೇ ಎಂದು ನಮಗೆ ಸಂದೇಹವಾಯಿತು.

ಆದರೆ, ಇದಾದ ಹಲವು ದಿನಗಳ ಬಳಿಕ ಸೋಲೊನನ್ನು ಕಂಡಾಗ ಅದು ತನ್ನ ಮೂಲ ವಲಯಕ್ಕೆ ಹಿಂದಿರುಗಿತ್ತು. ಅದರೊಟ್ಟಿಗೆ ಮತ್ತೊಂದು ಕಾಡು ನಾಯಿ ಕೂಡ ಇತ್ತು. ಅದು ಸಹ ಬಹುಶಃ ಸೋಲೊನ ವಯಸ್ಸಿನದೇ. ಸ್ವಲ್ಪ ಹೊತ್ತು ಸೂಕ್ಷ್ಮವಾಗಿ ಅವಲೋಕಿಸಿದಾಗ ಗುರುತು ಹತ್ತಿತು... ಅದೇ ಹುಡುಗಿ! ಮೊನ್ನೆ ಫೋನ್ ನಂಬರ್ ಬೀಳಿಸಿಕೊಂಡು ಓಡಿಹೋಗಿದ್ದ ಹುಡುಗಿ!

ಇದು ಸೋಲೊ ಎಂಬ ಕಾಡು ನಾಯಿಯೊಂದಿಗೆ ನಮ್ಮ ಪ್ರೀತಿ ಮತ್ತು ಅಪನಂಬಿಕೆಯ ವಿಚಿತ್ರ ಸಂಬಂಧದ ಆರಂಭ ಮಾತ್ರ. ಈ ದೀರ್ಘ ಪ್ರಯಾಣದಲ್ಲಿ ಸೋಲೊ ಕಾಡುನಾಯಿಗಳ ಬದುಕಿನ ಒಳನೋಟವನ್ನು ನಮಗೆ ತೆರೆದಿಟ್ಟರು ಕೂಡ, ತನ್ನ ಖಾಸಗಿ ಬದುಕಿನ ಗುಟ್ಟುಗಳನ್ನು ಮಾತ್ರ ಬಿಟ್ಟುಕೊಡಲೇ ಇಲ್ಲ. ಮುಂದೆ ತನ್ನ ಗುಂಪಿನ ಎಲ್ಲಾ ಕಾಡು ನಾಯಿಗಳು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡರೂ ಸೋಲೊ ಮಾತ್ರ ನಮ್ಮನ್ನು ಎಂದಿಗೂ ಸಂಪೂರ್ಣವಾಗಿ ನಂಬಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.