ADVERTISEMENT

ಆಫ್ರಿಕಾ ಕಾಡಿನಲ್ಲಿ ಕಳೆದುಹೋದ ಕುದುರೆ

ದ್ವಾರಕೀಶ್
Published 19 ಜನವರಿ 2013, 19:59 IST
Last Updated 19 ಜನವರಿ 2013, 19:59 IST

ಮದ್ರಾಸ್‌ನ ಚೋಳ ಹೋಟೆಲ್‌ನಲ್ಲಿ ಫಿರೋಜ್ ಖಾನ್ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸುವ ಅವಕಾಶ ನನ್ನದಾಗಿತ್ತು. ಅದಕ್ಕೆ ಕಾರಣ ಧರ್ಮದಾಸ್ ಗುಪ್ತ ಎಂಬ ಫೈನಾನ್ಶಿಯರ್. ಅವರ ಮೂಲಕವೇ ಫಿರೋಜ್ ಖಾನ್ ಪರಿಚಯವಾಗಿದ್ದು. ಲಂಡನ್‌ನಲ್ಲಿ ತಮ್ಮ ಚಿತ್ರದ ಹಾಡುಗಳನ್ನು ರೆಕಾರ್ಡ್ ಮಾಡಿದ ವಿಷಯವನ್ನು ಫಿರೋಜ್ ಖಾನ್ ಹೇಳಿದ್ದೇ ನನ್ನಲ್ಲೂ ಆಸೆ ಚಿಗುರಿತು.

ಬಪ್ಪಿ ಲಹರಿ ಆ ಬಯಕೆಯನ್ನು ಬೆಂಬಲಿಸಿದರು. `ಗಂಗ್ವಾ' ಚಿತ್ರದ ಹಂಚಿಕೆದಾರರಾಗಿದ್ದ ಮುಂಬೈನ `ವಿಐಪಿ ಡಿಸ್ಟ್ರಿಬ್ಯೂಟರ್ಸ್‌'ನವರಿಗೂ ನನ್ನ ಯೋಚನೆ ಇಷ್ಟವಾಯಿತು. `ಟಿಪ್ಸ್' ಕಂಪೆನಿಯ ಗುಲ್ಶನ್ ಕುಮಾರ್ ಕೂಡ ಎಲ್ಲಾ ರೀತಿಯಲ್ಲೂ ಸಹಾಯ ಮಾಡುವುದಾಗಿ ಭರವಸೆ ಕೊಟ್ಟರು.

ನನ್ನ ಕುಟುಂಬ ಹಾಗೂ ಬಪ್ಪಿ ಲಹರಿ ಕುಟುಂಬ ಲಂಡನ್‌ನಲ್ಲಿ ಇಪ್ಪತ್ತು ದಿನ ಠಿಕಾಣಿ ಹೂಡಿದ್ದಾಯಿತು. ಯಾವ ಆಲ್ಬರ್ಟ್ ಹಿಚ್‌ಕಾಕ್ ಸಿನಿಮಾ ಕಂಡು ನಾನು ಪುಳಕಿತನಾಗಿದ್ದೆನೋ ಆತನ ಸ್ಟುಡಿಯೋದಲ್ಲಿ `ದ್ವಾರಕೀಶ್ ಚಿತ್ರ ಸಾಂಗ್ ನಂಬರ್ ಒನ್' ಎಂದು ಅನೌನ್ಸ್ ಮಾಡಿದ್ದನ್ನು ಕೇಳಿ ರೋಮಾಂಚನವಾಯಿತು. ನನಗಿಂತ ಸಾಹುಕಾರ ಇನ್ನೊಬ್ಬ ಇಲ್ಲ ಎಂದು ಮನಸ್ಸಿನಲ್ಲೇ ಹೇಳಿಕೊಂಡು ಬೀಗಿದೆ. ಆ ಕಾಲದ ಅತ್ಯಂತ ದುಬಾರಿ ಹಿನ್ನೆಲೆ ಗಾಯಕಿ ನಜಿಯಾ ಹಸನ್ ಅವರನ್ನು ಕರೆದು ಹಾಡಿಸಿದೆವು. ಆಕೆ ರೋಲ್ಸ್ ರಾಯ್ಸ ಕಾರಲ್ಲಿ ಬಂದಿದ್ದರು. ಎಲ್ಲಿಯ ನಾನು, ಎಲ್ಲಿಯ ಲಂಡನ್, ಎಲ್ಲಿಯ ನಜಿಯಾ ಹಸನ್? ಕಾರು ಮಾಡಿಕೊಂಡು ಲಂಡನ್‌ನ ಹೊರವಲಯದಲ್ಲೆಲ್ಲಾ ನಾವು ಸುತ್ತಾಡಿದೆವು.

ಅದೇ ಸಂದರ್ಭದಲ್ಲಿ ನಾನು `ಅಂಕುಶ್' ಚಿತ್ರವನ್ನು ನೋಡಿ ಕನ್ನಡದಲ್ಲಿ `ರಾವಣ ರಾಜ್ಯ' ಮಾಡುತ್ತಿದ್ದೆ. ನಾನಾ ಪಾಟೇಕರ್ `ಅಂಕುಶ್'ನಲ್ಲಿ ಅಭಿನಯಿಸಿದ್ದರು. ಆ ಅಭಿನಯಕ್ಕೆ ಮನಸೋತ ನಾನು ಮುಂಬೈಗೆ ಅವರನ್ನು ಹುಡುಕಿಕೊಂಡು ಹೋದೆ. ಅವರ ಡೇಟ್ಸ್ ಕೇಳಲು ಹೋದಾಗ ವಠಾರದಲ್ಲಿ ಕ್ರಿಕೆಟ್ ಆಡುತ್ತಿದ್ದರು. ತುಂಬಾ ಕಡಿಮೆ ಸಂಭಾವನೆಗೆ ಅವರನ್ನು ಬುಕ್ ಮಾಡಿದೆ.

`ಆಫ್ರಿಕಾದಲ್ಲಿ ಶೀಲಾ' ನಾಲ್ಕು ಭಾಷೆಯ ಚಿತ್ರ. ಹಾಗಾಗಿ ಎಲ್ಲಾ ಭಾಷೆಗಳ ತಾರಾಬಳಗ ಹಾಗೂ ತಂತ್ರಜ್ಞರು ಸೇರಿ 70 ಜನ ಹೊರಟೆವು. ಜಿಂಬಾಬ್ವೆಯ ಹರಾರೆಯಲ್ಲಿ ಇಳಿದುಕೊಂಡೆವು. ನಮ್ಮನ್ನು ಹರಾರೆಯಲ್ಲಿ ಸ್ವಾಗತಿಸಿದ್ದು ಅಲ್ಲಿ ಭಾರತದ ಅಂಬಾಸಿಡರ್ ಆಗಿದ್ದ ಭಾರ್ಗವ. ಅವರು ನಮಗೆ ಒಂದು ಔತಣಕೂಟ ಕೂಡ ಏರ್ಪಡಿಸಿದ್ದರು. `ಆ್ಯನ್ ಇಂಡಿಯನ್ ಟ್ರೂಪ್ ಹೆಡೆಡ್ ಬೈ ದ್ವಾರಕೀಶ್ ವಿಲ್ ಶೂಟ್ ಇನ್ ಜಿಂಬಾಬ್ವೆ' (ದ್ವಾರಕೀಶ್ ನೇತೃತ್ವದ ಭಾರತೀಯ ತಂಡ ಜಿಂಬಾಬ್ವೆಯಲ್ಲಿ ಚಿತ್ರೀಕರಣ ನಡೆಸಲಿದೆ) ಎಂದು ಅಲ್ಲಿನ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಆಗ ಸುದ್ದಿ ಪ್ರಕಟವಾಗಿತ್ತು.

ಹರಾರೆಯಿಂದ 35 ಕಿ.ಮೀ. ದೂರದಲ್ಲಿದ್ದ ಕಾಡಿನಲ್ಲಿ ನಮ್ಮ ಚಿತ್ರೀಕರಣದ ಲೊಕೇಷನ್‌ಗಳಿದ್ದವು. ಕಾಡಿನಲ್ಲೇ ಇಳಿದುಕೊಳ್ಳಲು ಹೋಟೆಲ್ ರೂಮ್‌ಗಳಿದ್ದವು. ಅಲ್ಲೇ ನಮ್ಮ ಬಿಡಾರ. ಬ್ರಿಸ್ಟೋವ್ ಎಂಬಾತ ಆ ಕಾಡಿನ ಯಜಮಾನ. ಎಂಜಿಎಂ, 20ಎತ್ ಸೆಂಚುರಿ ಫಾಕ್ಸ್ ಮೊದಲಾದ ದೊಡ್ಡ ನಿರ್ಮಾಣ ಸಂಸ್ಥೆಗಳ ಚಿತ್ರಗಳಿಗೆ ಪ್ರಾಣಿಗಳನ್ನು ಒದಗಿಸುತ್ತಿದ್ದುದು ಅದೇ ಬ್ರಿಸ್ಟೋವ್. ಮೊದಲು ಲೊಕೇಷನ್‌ಗಳನ್ನು ನೋಡಲು ಒಮ್ಮೆ ನಾನು ಹರಾರೆ ಕಾಡಿಗೆ ಭೇಟಿ ನೀಡಿದ್ದೆ. ಹಾಗಾಗಿ ಅದು ನನ್ನ ಎರಡನೇ ಭೇಟಿ. ಆಮೇಲೆ ಮತ್ತೊಮ್ಮೆ ಆಫ್ರಿಕಾ ಪ್ರವಾಸ ಮಾಡಿಬಂದೆ.

ನಮಗೆ `ಆಫ್ರಿಕಾದಲ್ಲಿ ಶೀಲಾ' ಚಿತ್ರಕ್ಕೆ ಒಂದು ಜೀಬ್ರಾ ಬೇಕಿತ್ತು. ಅದು ಕೈಗೆ ಸಿಗದ ಪ್ರಾಣಿ. ಬ್ರಿಸ್ಟೋವ್ ಹತ್ತಿರ ಕೂಡ ಯಾವುದೇ ಜೀಬ್ರಾ ಇರಲಿಲ್ಲ. ಅವರು ಪ್ರೀತಿಯಿಂದ ಕುದುರೆಯೊಂದನ್ನು ಸಾಕಿದ್ದರು. ಅದನ್ನೇ ಪಡೆದುಕೊಂಡು, ಅದಕ್ಕೆ ಜೀಬ್ರಾ ರೀತಿ ಕಾಣುವಂತೆ ಬಣ್ಣ ಬಳಿಸಿದೆವು. ಬಣ್ಣ ಬಳಿಸಿಕೊಂಡ ಕುದುರೆ ಸಹಜವಾಗಿ ಇರಲಿಲ್ಲ. ಅದು ಸರಿಯಾಗಿ ತಿನ್ನುತ್ತಿರಲಿಲ್ಲ. ಆಗಾಗ ಜ್ವರದಿಂದ ಬಳಲಲು ಆರಂಭಿಸಿತು. ಜೀಬ್ರಾ ಆಗಿ ನಾವು ಪರಿವರ್ತಿಸಿದ್ದ ಆ ಕುದುರೆಯನ್ನು ಸಂಭಾಳಿಸುವುದು ಮೊದಲ ಸಮಸ್ಯೆ ಆಯಿತು.

ನಾಯಕಿಯಾಗಿ ನಾವು ಆಯ್ಕೆ ಮಾಡಿದ್ದ ಶೈಲಾ ಚೆಡ್ಡಾ ಕೂಡ ನಿರೀಕ್ಷೆಯನ್ನು ತಲೆಕೆಳಗು ಮಾಡಿದರು. ಕುದುರೆ ಸವಾರಿ ಗೊತ್ತು ಎಂದು ಹೇಳಿದ್ದ ಅವರಿಗೆ ಕುದುರೆ ಹತ್ತುವುದೂ ಸಾಧ್ಯವಾಗಲಿಲ್ಲ. ತೂಗುದೀಪ ಶ್ರೀನಿವಾಸ್, ಶ್ರೀನಿವಾಸಮೂರ್ತಿ, ನಾನಾ ಪಾಟೇಕರ್, ಡಿಸ್ಕೋ ಶಾಂತಿ, ಶೈಲಾ ಚೆಡ್ಡಾ ಎಲ್ಲರೂ ಪೀಕಲಾಟಗಳಿಗೆ ಸಾಕ್ಷಿಯಾಗಿದ್ದರು. ದೀಪಕ್ ಬಲರಾಜ್ ಹಿಂದಿಯ `ಶೀಲಾ' ನಿರ್ದೇಶಿಸಿದರು. ನಾನು ಕನ್ನಡ, ತಮಿಳು ಚಿತ್ರೀಕರಣದ ಭಾಗಕ್ಕೆ ಆ್ಯಕ್ಷನ್/ಕಟ್ ಹೇಳುತ್ತಿದ್ದೆ. ಪ್ರತಿನಿತ್ಯ ಸುಮಾರು 20 ಕಿ.ಮೀ.ನಷ್ಟು ಕಾಡಿನ ಒಳಗೆ ಹೋಗಿ ಚಿತ್ರೀಕರಣ ನಡೆಸುತ್ತಿದ್ದೆವು.

ವಿಕ್ಟೋರಿಯಾ ಫಾಲ್ಸ್‌ನಲ್ಲಿ ಚಿತ್ರದ ಒಂದಿಷ್ಟು ಭಾಗವನ್ನು ಚಿತ್ರೀಕರಿಸಬೇಕಿತ್ತು. ಅದು ಇದ್ದದ್ದು ಜಾಂಬಿಯಾದಲ್ಲಿ. ಅಲ್ಲಿಗೇ ಪ್ರತ್ಯೇಕ ವೀಸಾ ಪಡೆಯಬೇಕಿತ್ತು. ಅದಕ್ಕೆ ಸಾಕಷ್ಟು ಅಡೆತಡೆಗಳಿದ್ದವು. ಭಾರ್ಗವ ಶಿಫಾರಸು ಮಾಡಿ ಅಲ್ಲಿಗೆ ಹೋಗಲು ವೀಸಾ ಸಿಗುವಂತೆ ಮಾಡಿದರು. ಬ್ರಿಸ್ಟೋವ್ ಕೊಟ್ಟ ಕುದುರೆಯನ್ನೂ ಅಲ್ಲಿಗೆ ಸಾಗಿಸಬೇಕಿತ್ತು. ಹರಾರೆಯಿಂದ ಜಾಂಬಿಯಾಗೆ 400 ಕಿ.ಮೀ. ದೂರ. ಪ್ರಾಣಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದು ವೀಸಾ ಪಡೆಯುವುದಕ್ಕಿಂತ ಕಷ್ಟ. ಅದಕ್ಕೂ ಹಲವರಿಂದ ಅನುಮತಿ ಪಡೆಯಬೇಕು. ಹವಾನಿಯಂತ್ರಿತ ಬಸ್‌ನಲ್ಲಿ ಕುದುರೆಯನ್ನು ಜಾಂಬಿಯಾಗೆ ತೆಗೆದುಕೊಂಡು ಹೋದೆವು. ಅಲ್ಲಿ ಹೆಲಿಕಾಪ್ಟರ್ ಬಳಸಿ ನಾಲ್ಕೈದು ದಿನ ಚಿತ್ರೀಕರಣ ನಡೆಸಿದೆವು. ಅಲ್ಲಿನ ಘಟನೆಗಳನ್ನು ನೆನಪಿಸಿಕೊಂಡಾಗಲೆಲ್ಲಾ ನನಗೆ ಮೈ ಜುಮ್ಮೆನ್ನುತ್ತದೆ. ಅಲ್ಲಿ ಶೂಟಿಂಗ್ ಮಾಡಿದ್ದು ನಾನೇನಾ ಎನಿಸಿ ಚಕಿತಗೊಳ್ಳುತ್ತೇನೆ.

ಜಾಂಬಿಯಾದಲ್ಲಿ ಕೊನೆಯ ದಿನದ ಚಿತ್ರೀಕರಣ. ಜೀಬ್ರಾ ಶಾಟ್‌ಗಳನ್ನು ತೆಗೆಯುತ್ತಾ ಇದ್ದೆವು. ಒಂದೆರಡು ಶಾಟ್‌ಗಳಾಗಿದ್ದವು ಅಷ್ಟೆ, ಕುದುರೆ ನಾಪತ್ತೆಯಾಯಿತು. ಮಧ್ಯಾಹ್ನ ಒಂದು ಗಂಟೆವರೆಗೆ ಹುಡುಕಿ, ಮತ್ತೆ ತಂದೆವು. ಚಿತ್ರೀಕರಣ ಮುಂದುವರಿಸಿದೆವು. ಮೂರ‌್ನಾಲ್ಕು ಗಂಟೆಯ ಹೊತ್ತಿಗೆ ಅದು ಮತ್ತೆ ತಪ್ಪಿಸಿಕೊಂಡಿತು. ಮುಂಬೈನಿಂದ ಒಬ್ಬ ಡ್ಯೂಪ್ ಆರ್ಟಿಸ್ಟ್ ಬಂದಿದ್ದ. ಅವನು ಕಾಡಿನ ಒಳಹೊಕ್ಕ. ನಾನೂ ಸುಮಾರು ದೂರ ಹೋಗಿ ಹುಡುಕಿದೆ. ಕುದುರೆ ಎಲ್ಲೂ ಕಾಣಲಿಲ್ಲ. ನಾನೇ ತಪ್ಪಿಸಿಕೊಂಡರೆ ಕಷ್ಟ ಎಂಬಂಥ ಕಾಡು ಅದು. ಹಾಗಾಗಿ ಹೇಗೋ ವಾಪಸ್ ಬಂದೆ. ಡ್ಯೂಪ್ ಕಲಾವಿದ ಸುಮಾರು ಎರಡು ಗಂಟೆಯ ನಂತರ ಮರಳಿದ. ಆದರೆ ಕುದುರೆ ಮಾತ್ರ ಸಿಗಲೇ ಇಲ್ಲ.

ಆ ದಿನ ರಾತ್ರಿ ಪಾರ್ಟಿ ಇಟ್ಟುಕೊಂಡಿದ್ದೆ. ಯಾರ ಮುಖದಲ್ಲೂ ಖುಷಿಯಿಲ್ಲ. ರಾಘವೇಂದ್ರ ಸ್ವಾಮಿಯನ್ನು ಪ್ರಾರ್ಥಿಸಿದ್ದೇ ಪ್ರಾರ್ಥಿಸಿದ್ದು. ಕುದುರೆಯ ಮಾಲೀಕ ಬ್ರಿಸ್ಟೋವ್ ಏನನ್ನುತ್ತಾರೋ ಎಂಬ ಆತಂಕ. ಹರಾರೆಯಲ್ಲಿದ್ದ ಬ್ರಿಸ್ಟೋವ್ ಮನೆಗೆ ಹೋದೆ. ಅವರು ಕ್ಲಬ್‌ಗೆ ಹೋಗಿದ್ದರು. ಅದನ್ನೂ ಹುಡುಕಿಕೊಂಡು ಹೋದರೆ ಅಲ್ಲಿ ಇಸ್ಪೀಟ್ ಆಡುತ್ತಾ ಕೂತಿದ್ದರು. ನನ್ನನ್ನು ಕಂಡವರೇ ಚಿತ್ರೀಕರಣ ಸುಸೂತ್ರವಾಗಿ ನಡೆಯಿತೆ ಎಂದೆಲ್ಲಾ ಕೇಳಿದರು. ನಾನು ಒಂದು ಕೆಟ್ಟ ಸುದ್ದಿ ಇದೆ ಎಂದು ಬೇಸರದ ಭಾವದಲ್ಲಿ ಕುದುರೆ ಕಾಣೆಯಾದ ಸಂಗತಿ ಹೇಳಿಬಿಟ್ಟೆ. ಅವರ ಮನಸ್ಸು ಆಗ ಚೆನ್ನಾಗಿತ್ತೋ ಏನೋ, `ಹೋಗಲಿ ಬಿಡಿ, ಯಾವುದಾದರೂ ಸಿಂಹಕ್ಕೆ ಒಳ್ಳೆಯ ಆಹಾರವಾಗಿರುತ್ತದೆ' ಎಂದು ತುಸುವೂ ಕೋಪವಿಲ್ಲದೆ ಪ್ರತಿಕ್ರಿಯಿಸಿದರು. ಹಾಲಿವುಡ್‌ನ `ಬಾರ್ನ್ ಫ್ರೀ' ಸೇರಿದಂತೆ ಅನೇಕ ಚಿತ್ರಗಳಿಗೆ ಪ್ರಾಣಿಗಳನ್ನು ಒದಗಿಸಿದ್ದ ಬ್ರಿಸ್ಟೋವ್ ನನ್ನಿಂದ ಹೆಚ್ಚು ಹಣವನ್ನು ಕೂಡ ಪಡೆಯಲಿಲ್ಲ.

ನಾಲ್ಕು ಭಾಷೆಗಳಲ್ಲಿ ಮಾಡಿದ `ಶೀಲಾ' ಏಕಕಾಲಕ್ಕೆ ಬಿಡುಗಡೆಯಾಯಿತು. ಅದಕ್ಕೂ ಸಾಕಷ್ಟು ಕಷ್ಟಪಟ್ಟೆ. ಭಾರತದ ಉದ್ದಕ್ಕೆ ಸಿನಿಮಾ ಬಿಡುಗಡೆ ಮಾಡಿದಂತೆ, ಸಾಲವೂ ಉದ್ದವಾಯಿತು. ತಾಂತ್ರಿಕ ಕಾರಣಗಳಿಂದಾಗಿ ಸಿನಿಮಾ ಸೋತಿತು. ನಾಲ್ಕು ಭಾಷೆಗಳಲ್ಲಿ ಮಾಡಿರುವ ಯಾವ ಚಿತ್ರವೂ ಉತ್ತಮ ಫಲಿತಾಂಶ ಕೊಟ್ಟಿಲ್ಲವೆಂಬುದು ಸಿನಿಮಾ ಚರಿತ್ರೆಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಅನೇಕರು ಮೊದಲೇ ಎಚ್ಚರಿಸಿದ್ದರೂ ನಾನು ಆ ಸಿನಿಮಾ ತೆಗೆದಿದ್ದೆ.

ಅದೇ ಕಾಲದಲ್ಲಿ ತೆರೆಕಂಡ ನಾಗಾಭರಣ ನಿರ್ದೇಶನದ `ರಾವಣರಾಜ್ಯ' ಕೂಡ ಓಡಲಿಲ್ಲ. ದಾಸರಿ ನಾರಾಯಣರಾವ್ ಜೊತೆ ಸೇರಿ ಮಾಡಿದ್ದ `ಪೊಲೀಸ್ ಪಾಪಣ್ಣ' ಗೆಲ್ಲಲಿಲ್ಲ. ನಾನು ಹಣಕಾಸು ಒದಗಿಸಿದ್ದ `ಬಂದಿ' ಚಿತ್ರವಂತೂ ಇದುವರೆಗೆ ಬಿಡುಗಡೆಯೇ ಆಗಿಲ್ಲ. ಇಷ್ಟೆಲ್ಲಾ ಹೊಡೆತಗಳು ಏಕಕಾಲಕ್ಕೆ ಬಿದ್ದರೂ ಸಿನಿಮಾ ಯೋಚನೆ ಮಾತ್ರ ನನ್ನ ಮನಸ್ಸಿನಿಂದ ಅಳಿಸಿಹೋಗಲೇ ಇಲ್ಲ. 

ಮುಂದಿನ ವಾರ: ಡಾನ್ಸ್ ರಾಜಾ ಡಾನ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.