ADVERTISEMENT

ಬಾಂಡ್ ಸಿನಿಮಾ ವಸ್ತು ಹೊಳೆದ ಗಳಿಗೆ

ದ್ವಾರಕೀಶ್
Published 28 ಜುಲೈ 2012, 19:30 IST
Last Updated 28 ಜುಲೈ 2012, 19:30 IST

1967ರಲ್ಲಿ ನನ್ನ ಮದುವೆಯಾಯಿತು. ಅಂಬುಜಾ ನನಗಾಗಿ ಐದಾರು ವರ್ಷ ಕಾದಿದ್ದಳು. ಅವಳ ನನ್ನ ನಡುವೆ ಪ್ರೇಮಪತ್ರಗಳು ವಿನಿಮಯವಾಗಿದ್ದವು. ಬಿ.ಎಂ.ವೆಂಕಟೇಶ್ ಮದ್ರಾಸ್‌ನಲ್ಲಿ ನಾನು ಬರೆದುಕೊಡುತ್ತಿದ್ದ ಪತ್ರಗಳನ್ನು ಪೋಸ್ಟ್ ಬಾಕ್ಸ್‌ಗೆ ಹಾಕುತ್ತಿದ್ದ.
 
ಬೆಂಗಳೂರಲ್ಲಿ ಅಂಬುಜಾಳನ್ನು ನೋಡಲು ಹೋದಾಗಲೆಲ್ಲಾ ಅವನು ನನ್ನ ಜೊತೆ ಇರುತ್ತಿದ್ದ. ಚಿತ್ರದುರ್ಗಕ್ಕೆ ಅವಳೇನಾದರೂ ಹೊರಟರೆ ಬಸ್‌ಗೆ ಹೋಗಿ ನಾನು ಕೊಟ್ಟ ಹೂವನ್ನು ಅವಳಿಗೆ ತಲುಪಿಸಿ ಬರುತ್ತಿದ್ದ. ಒಂದು ವಿಧದಲ್ಲಿ ನಮ್ಮ ಪ್ರೇಮದ ಪೋಸ್ಟ್ ಮಾಸ್ಟರ್ ವೆಂಕಟೇಶ್.

ದಯಾನಂದ ಸಾಗರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಡಬಲ್ ಗ್ರ್ಯಾಜುಯೇಟ್ ಅಂಬುಜಾ ನನ್ನಂಥ ಸಿನಿಮಾ ಕಾಮಿಡಿಯನ್‌ನನ್ನು ಇಷ್ಟಪಟ್ಟ್ದ್ದಿದನ್ನು ಕಂಡು ನಮ್ಮ ಸಂಬಂಧಿಕರು ಅಚ್ಚರಿಗೊಂಡರು. `ಹಹ್ಹಹ್ಹಹ್ಹ ಹ್ಹೊಹ್ಹೊಹ್ಹೊಹ್ಹೋ~ ಎಂದು ಆಡಿಕೊಂಡು ನಕ್ಕರು. ಉಮಾ ಟಾಕೀಸಿನ ಪಕ್ಕದ ಕಲ್ಯಾಣಮಂಟಪದಲ್ಲಿ ನಮ್ಮ ಮದುವೆಯಾಯಿತು.

ಅಂಬುಜಾ ಸಹಪಾಠಿಯಾಗಿದ್ದ ಪ್ರಭಾವತಿ ನಿಜಲಿಂಗಪ್ಪನವರ ಮಗಳು. ಹಾಗಾಗಿ ನಮ್ಮ ಮದುವೆಗೆ ನಿಜಲಿಂಗಪ್ಪನವರೂ ಬಂದಿದ್ದರು. ಅದು ಆಗಿನ ಆಕರ್ಷಣೆ. ರವಿ ಅಣ್ಣ (ಕೆ.ಎಸ್.ಎಲ್ ಸ್ವಾಮಿ) ಸೇರಿದಂತೆ ಚಿತ್ರರಂಗದ ಕೆಲವರು ಕೂಡ ಬಂದು ಆಶೀರ್ವಾದ ಮಾಡಿದರು.

ನಾನು ಮತ್ತೆ ಮದ್ರಾಸ್‌ಗೆ ಹೋಗಿ ಕಿಟ್ಟಣ್ಣನ ಮನೆ ಬಿಟ್ಟು, ತೇನಂಪೇಟೆಯಲ್ಲಿ ಮಹಡಿ ಮೇಲಿನ ಒಂದು ಮನೆ ಮಾಡಿದೆ. ಅದಕ್ಕೆ 120 ರೂಪಾಯಿ ಬಾಡಿಗೆ. ಬೆಂಗಳೂರು, ಮೈಸೂರು, ಮದ್ರಾಸ್‌ನಲ್ಲಿ ಶೂಟಿಂಗ್ ಇದ್ದಿದ್ದರಿಂದ ನನ್ನ ಓಡಾಟ ಹೆಚ್ಚಾಯಿತು.
 
ಆಗ ಒಂದು ಸಿನಿಮಾ ಡಬ್ಬಿಂಗ್ ಮಾಡಲೆಂದು 41 ರೂಪಾಯಿ ಕೊಟ್ಟು ವಿಮಾನದಲ್ಲಿ ಮದ್ರಾಸ್‌ನಿಂದ ಬೆಂಗಳೂರಿಗೆ ಹೋಗಿ ಬಂದದ್ದೂ ಉಂಟು. ಮನೆಯಲ್ಲಿ ನಾನು ದಿನಗಟ್ಟಲೆ ಇರಲಾಗದಿದ್ದಾಗಲೂ ಅಂಬುಜಾ ಸಹಕರಿಸಿದಳು. ಬೇಜಾರು ಮಾಡಿಕೊಳ್ಳಲಿಲ್ಲ. ಎಂದೂ ತನಗೆ ಏನಾದರೂ ಕೊಡಿಸು ಎಂದು ಕೇಳಲೇ ಇಲ್ಲ.

ಚಿತ್ರರಂಗದಲ್ಲಿ ನಾನು ಬಣ್ಣ ಹಚ್ಚಿದ್ದೇ ಗೆದ್ದೆ. ನಟನಾಗಿ ಬೆಳೆದೆ. ನಿರ್ಮಾಪಕನಾಗಿಯೂ ಗೆದ್ದೆ. ಕಾಲೆಳೆಯುವವರು ಆಗಲೂ ಇದ್ದರು. ಅವರ ನಡುವೆಯೇ ನಾನು ಫುಟ್‌ಬಾಲ್ ಆಡಬೇಕಿತ್ತು. ಗೋಲ್ ಹೊಡೆಯಬೇಕಿತ್ತು. ನಾನು ನಂಬಿದ್ದು ನನ್ನ ಬದುಕು, ನನ್ನ ಕ್ಯಾಮೆರಾ, ನನ್ನ ದೇವರು.

ಮೇಯರ್ ಮುತ್ತಣ್ಣ ಸಿನಿಮಾ ಬಿಡುಗಡೆಯಾದಾಗ ನನಗೆ, ರಾಜಣ್ಣನಿಗೆ ಇಬ್ಬರಿಗೂ ಪ್ರಶ್ನೆಗಳಿದ್ದವು. ಸಿನಿಮಾ ಗೆಲ್ಲುತ್ತದೋ ಇಲ್ಲವೋ ಎಂಬ ಆತಂಕವೂ ಇತ್ತು. ಮದ್ರಾಸ್‌ನಿಂದ ಚಿತ್ರದ ಒಂದೆರಡು ರೀಲುಗಳನ್ನು ತಂದು ತ್ರಿವೇಣಿ ಚಿತ್ರಮಂದಿರದ ಮಾಲೀಕರಾದ ನಾರಾಯಣ್ ಅವರಿಗೆ (ಈಗ ಅವರು ಸಂತೋಷ್ ಚಿತ್ರಮಂದಿರದ ಮಾಲೀಕರು) ತೋರಿಸಿದ್ದೆವು. ಅದನ್ನು ನೋಡಿದ ನಂತರವಷ್ಟೇ ಅವರು ತಮ್ಮ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ್ದು.

ಆ ಕಾಲದಲ್ಲಿ ಪ್ರದರ್ಶಕರಿಗೆ ಎಂಥ ಮಹತ್ವವಿತ್ತು ನೋಡಿ. ಸುಮ್ಮನೆ ಯಾವ್ಯಾವುದೋ ಚಿತ್ರವನ್ನು ಬಿಡುಗಡೆ ಮಾಡಲು ಒಪ್ಪುತ್ತಿರಲಿಲ್ಲ. ಜನ ನೋಡುವ ಅಂಶಗಳಿವೆ ಎಂಬುದು ಗೊತ್ತಾದ ನಂತರವಷ್ಟೇ ಬಿಡುಗಡೆಗೆ ಒಪ್ಪುತ್ತಿದ್ದದ್ದು.

ಸಿನಿಮಾ ಬಿಡುಗಡೆಯಾದ ಮೇಲೆ ನನ್ನ ಸ್ನೇಹಿತ ವೀಡಾಲ್ ನಾಗರಾಜ್ ಎಂಬುವರ ಸ್ಟ್ಯಾಂಡರ್ಡ್ ಕಾರಿನಲ್ಲಿ ನಾನು, ರಾಜಣ್ಣ ತ್ರಿವೇಣಿ ಚಿತ್ರಮಂದಿರಕ್ಕೆ ಹೋದೆವು. ಜನವೋ ಜನ.

ನಾವು ಇಳಿಯುತ್ತಿದ್ದಂತೆ ಎಲ್ಲರೂ ಮುತ್ತಿಕೊಂಡರು. ತಕ್ಷಣ ರಾಜ್‌ಕುಮಾರ್ ಅವರನ್ನು ಹೈಲ್ಯಾಂಡ್ಸ್ ಹೋಟೆಲ್‌ಗೆ ಕರೆದುಕೊಂಡು ಹೋಗುವಂತೆ ನಾಗರಾಜ್‌ಗೆ ಹೇಳಿದೆ. ಹೆಚ್ಚು ಹೊತ್ತು ಜನರ ಮಧ್ಯೆ ರಾಜಣ್ಣ ನಿಂತುಕೊಳ್ಳಬಹುದಾದ ಕಾಲ ಅದಾಗಿರಲಿಲ್ಲ.

ರಾಜಣ್ಣ ತುಂಬಾ ಸರಳ ಜೀವಿಯಾಗಿದ್ದರು. ಅವರು ಮನಸ್ಸು ಮಾಡಿದ್ದರೆ ಸದಾ ಪಂಚತಾರಾ ಹೋಟೆಲ್‌ನಲ್ಲೇ ಇಳಿದುಕೊಳ್ಳಬಹುದಿತ್ತು. ಆದರೆ, ಅವರು ಬೆಂಗಳೂರಿನಲ್ಲಿ ಯಾವಾಗಲೂ ಹೈಲ್ಯಾಂಡ್ಸ್ ಹೋಟೆಲ್‌ನ ರೂಮ್ ನಂಬರ್ 18ರಲ್ಲೇ ಇಳಿದುಕೊಳ್ಳುತ್ತಿದ್ದರು. ಒಣ ಪ್ರತಿಷ್ಠೆಗಳಿಗೆ ಅವರು ಆಸೆ ಪಟ್ಟವರೇ ಅಲ್ಲ.

`ಮೇಯರ್ ಮುತ್ತಣ್ಣ~ ಚಿತ್ರೀಕರಣದ ಒಂದು ಘಟನೆಯನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ನಾವು ಬೆಂಗಳೂರಿನ ಎಚ್‌ಎಂಟಿಯ ಈಜುಕೊಳದ ಬಳಿ ಚಿತ್ರೀಕರಣ ಮುಗಿಸಿದ ನಂತರ ರಾಜಣ್ಣನಿಗೆ ಜ್ವರ ಬಂತು. ನಡುರಾತ್ರಿ ಕಾರ್ಪೊರೇಷನ್ ಬಳಿಯ ಕೆಂಪೇಗೌಡ ಪ್ರತಿಮೆಯ ಕೆಳಗೆ ಇನ್ನೊಂದು ದೃಶ್ಯದ ಚಿತ್ರೀಕರಣ ನಿಗದಿಯಾಗಿತ್ತು.
 
ಆದರೆ, ಅವರಿಗೆ ಹುಷಾರಿಲ್ಲದ ಕಾರಣ ಅದನ್ನು ಮುಂದೂಡುವ ಪ್ರಸ್ತಾವನೆಯನ್ನು ನಾನು ಮುಂದಿಟ್ಟೆ. ಆ ಕಾಲದಲ್ಲಿ ಜನರೇಟರ್ ಇರಲಿಲ್ಲ. ಸರ್ಕಾರದಿಂದ ಅನುಮತಿ ಪಡೆದುಕೊಂಡು ಇರುವ ಲೈನ್‌ನಿಂದಲೇ ಸಂಪರ್ಕ ಪಡೆದು ಲೈಟಿಂಗ್ ಮಾಡಿಕೊಳ್ಳಬೇಕಿತ್ತು. ಅದಕ್ಕೆ ನಾವು ಅನುಮತಿ ಪಡೆದಾಗಿತ್ತು.

ಹಾಗಾಗಿ ಅಂದೇ ಚಿತ್ರೀಕರಣವಾದರೆ ಒಳ್ಳೆಯದು ಎಂಬುದು ರಾಜಣ್ಣನ ಭಾವನೆ. `ದ್ವಾರಕೀಶ್, ಈ ಪಾತ್ರಕ್ಕೆ ಸ್ವಲ್ಪ ಜ್ವರ ಕೆಮ್ಮು ಎಲ್ಲಾ ಇರಬೇಕು. ಆಗ ನಟನೆ ಸಹಜವಾಗಿಯೇ ಬರುತ್ತದೆ. ನೀವೇನೂ ವರಿ ಮಾಡ್ಕೋಬೇಡಿ. ನಾನು ರೂಮ್‌ನಲ್ಲಿ ಮಲಗಿದ್ದು ಆಮೇಲೆ ಸಿದ್ಧನಾಗಿರುತ್ತೇನೆ. ಬಂದು ನನ್ನನ್ನು ಕರೆದುಕೊಂಡು ಶೂಟಿಂಗ್‌ಗೆ ಹೋಗಿ. ಚಿಂತೆ ಬೇಡ~ ಎಂದರು.

ಚಿತ್ರೀಕರಣಕ್ಕೆ ಎಲ್ಲಾ ಸಿದ್ಧಪಡಿಸಿಕೊಂಡೆ. ರಾತ್ರಿ ಹನ್ನೊಂದೂವರೆಯ ಸುಮಾರಿಗೆ ಹೈಲ್ಯಾಂಡ್ಸ್ ಹೋಟೆಲ್‌ನ ರೂಮ್ ನಂಬರ್ 18ನ್ನು ಬೆಲ್ ಮಾಡಿದೆ. ತಕ್ಷಣ ಬಾಗಿಲು ತೆರೆಯಿತು. ಪೂರ್ತಿ ಕಾಸ್ಟ್ಯೂಮ್, ಮೇಕಪ್ ಹಾಕಿಕೊಂಡು, ವಿಗ್ ಕೂಡ ಹಾಕಿಕೊಂಡು ರಾಜಣ್ಣ ಚಿತ್ರೀಕರಣಕ್ಕೆ ಸಿದ್ಧರಾಗಿದ್ದರು.

`ದ್ವಾರಕೀಶ್, ನಡೀರಿ ಹೊರಡೋಣ~ ಎಂದು ತಮ್ಮ ಎಂದಿನ ಗತ್ತಿನಲ್ಲೇ ಹೇಳುತ್ತಾ ನನ್ನೊಡನೆ ಶೂಟಿಂಗ್ ಸ್ಪಾಟ್‌ಗೆ ಹೊರಟರು. ಕೆಮ್ಮುತ್ತಲೇ ಅಲ್ಲಿ ಆ ಪಾತ್ರವನ್ನು ಅವರು ಮಾಡಿದಾಗ ನನಗೆ ಸಂಕಟವಾಗುತ್ತಿತ್ತು. ರಾಜ್‌ಕುಮಾರ್ ಹಣಕ್ಕೆ ತಕ್ಕ ಕಜ್ಜಾಯ ಅಲ್ಲ, ಗುಣಕ್ಕೆ ತಕ್ಕ ಕಜ್ಜಾಯ.

ಮದ್ರಾಸ್‌ನ ಅರುಣಾಚಲಂ ಸ್ಟುಡಿಯೋದಲ್ಲಿ `ಮೇಯರ್ ಮುತ್ತಣ್ಣ~ ಚಿತ್ರದ ಡಬ್ಬಿಂಗ್ ನಡೆಯುತ್ತಿತ್ತು. ಆಗ ರಾಜಣ್ಣನ ತಂಗಿ ಹೋಗಿಬಿಟ್ಟರೆಂಬ ಸುದ್ದಿ ಹೊತ್ತ ಟೆಲಿಗ್ರಾಂ ಬಂತು. ಅವರು ಗಾಜನೂರಿಗೆ ಹೊರಡಬೇಕಿತ್ತು. ಇನ್ನೂ ಎಷ್ಟು `ಲೂಪ್~ಗಳಿವೆ ಡಬ್ಬಿಂಗ್ ಮಾಡಲು ಎಂದು ಅವರು ಕೇಳಿದರು.

ಅವನ್ನೆಲ್ಲಾ ಮುಗಿಸಿಕೊಟ್ಟೇ ಹೊರಡುತ್ತೇನೆ ಎಂದು ತೀರ್ಮಾನಿಸಿ, ಅಂತೆಯೇ ನಡೆದುಕೊಂಡರು. ರಾಜ್ಯದ ಚಿತ್ರಾಭಿಮಾನಿಗಳ ಮನಸ್ಸನ್ನು ಗೆದ್ದಿದ್ದ ರಾಜಣ್ಣನಿಗೆ ಇಂಥ ಅಪರೂಪದ ಗುಣಗಳಿದ್ದವು. ಒಣ ಪ್ರತಿಷ್ಠೆ ತುಸುವೂ ಇಲ್ಲದ ಇಂಥ ನಟ ಸಿಗುವುದು ಅಪರೂಪ.

`ಮೇಯರ್ ಮುತ್ತಣ್ಣ~ ಸೂಪರ್ ಡೂಪರ್ ಹಿಟ್ ಆಯಿತು. 120 ರೂಪಾಯಿ ಬಾಡಿಗೆ ಮನೆಯಿಂದ 220 ರೂಪಾಯಿ ಬಾಡಿಗೆಯ ಮನೆಗೆ ನಾನು ಶಿಫ್ಟ್ ಆದೆ. ರಾಜಣ್ಣನ ಜೊತೆಗೆ ಹಿಟ್ ಸಿನಿಮಾ ಕೊಟ್ಟಿದ್ದ, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ನನಗೆ ಅವರ ಕಾಲ್‌ಷೀಟ್ ಸಿಗುವುದು ಕಷ್ಟವೇನೂ ಆಗಲಿಕ್ಕಿಲ್ಲ ಎಂಬ ಭಾವನೆ ಇತ್ತು.

ಒಮ್ಮೆ ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ರಾಜಣ್ಣನ ಸಹೋದರ ವರದಣ್ಣ ಸಿಕ್ಕರು. ಕಾಲ್‌ಷೀಟ್ ಪ್ರಸ್ತಾಪ ಮಾಡಿದೆ. `ಸದ್ಯಕ್ಕೆ ನಿನಗೆ ಕಾಲ್‌ಷೀಟ್ ಇಲ್ಲ~ ಎಂದುಬಿಟ್ಟರು.

ಚಿ.ಉದಯ ಶಂಕರ್ ಬಳಿಗೆ ಹೋಗಿ ಇನ್ನೊಮ್ಮೆ ಯತ್ನಿಸಿದೆ. ಒಂದಾದ ಮೇಲೊಂದರಂತೆ ರಾಜಣ್ಣನಿಗೆ ಸಿನಿಮಾಗಳು ಇರುವುದರಿಂದ ಕಾಲ್‌ಷೀಟ್ ಇಲ್ಲ ಎಂದು ಅವನೂ ಹೇಳಿಬಿಟ್ಟ. ಆಗ ನನಗೆ ಸಿಡಿಲು ಬಡಿದಂತಾಯಿತು. ಗೋಳೋ ಎಂದು ಅತ್ತುಬಿಟ್ಟೆ.

`ಮೇಯರ್ ಮುತ್ತಣ್ಣ~ ಲಕ್ಷಾಂತರ ರೂಪಾಯಿ ಲಾಭ ಮಾಡಿದ್ದರೂ ನನಗೆ ಸಿಕ್ಕಿದ್ದು 50 ಸಾವಿರ ರೂಪಾಯಿ ಲಾಭವಷ್ಟೆ. ಆ ಹಣದಲ್ಲಿ ಇನ್ನೊಂದು ಸಿನಿಮಾ ಮಾಡುವುದು ಸಾಧ್ಯವಿರಲಿಲ್ಲ. ತುಂಬಾ ಯಶಸ್ವಿ ಸಿನಿಮಾ ಕೊಟ್ಟರೂ ಹೀಗಾಗಿಬಿಟ್ಟಿತಲ್ಲ ಎಂದು ನಾನು ಕಂಗಾಲಾದೆ.

ಮದ್ರಾಸ್‌ನ ಪೈಲಟ್ ಚಿತ್ರಮಂದಿರದಲ್ಲಿ ಒಂದು ಸಿನಿಮಾ ನೋಡಿದೆ. `ಆಪರೇಷನ್ ಲವ್‌ಬರ್ಡ್ಸ್~ ಅಂತ ಅದರ ಶೀರ್ಷಿಕೆ. ಮೆಡಿಕಲ್ ರೆಪ್ರೆಸೆಂಟಿಟಿವ್ ಒಬ್ಬನ ಸೂಟ್‌ಕೇಸ್ ಬದಲಾಗಿ ಅವನನ್ನು ಬಾಂಡ್ ಅಂದುಕೊಂಡು, ಅದರ ಸುತ್ತ ನಡೆಯುವ ಘಟನಾವಳಿಗಳ ಸುತ್ತ ಹೆಣೆದುಕೊಂಡ ಚಿತ್ರವದು. ಅದನ್ನು ನೋಡನೋಡುತ್ತಾ ನನ್ನೊಳಗೇ ಒಂದು ಕಥೆ ಹುಟ್ಟಿತು. ಅರವತ್ತು ಸೀನ್‌ಗಳನ್ನು ನಾನೇ ಸಿದ್ಧಪಡಿಸಿಕೊಂಡೆ. ಅದೇ ಮುಂದೆ `ಕುಳ್ಳ ಏಜೆಂಟ್ 000~ ಆದದ್ದು.

ಮುಂದಿನ ವಾರ: ಮೆಜೆಸ್ಟಿಕ್‌ನಲ್ಲಿ ನನ್ನದೂ ಉದ್ದದ ಕಟೌಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT