ADVERTISEMENT

ವಿಷ್ಣು ಇಲ್ಲದ ಸಿನಿಮಾ

ದ್ವಾರಕೀಶ್
Published 15 ಸೆಪ್ಟೆಂಬರ್ 2012, 19:30 IST
Last Updated 15 ಸೆಪ್ಟೆಂಬರ್ 2012, 19:30 IST
ವಿಷ್ಣು ಇಲ್ಲದ ಸಿನಿಮಾ
ವಿಷ್ಣು ಇಲ್ಲದ ಸಿನಿಮಾ   

ನಾವು ಸಿಂಗಪೂರ್‌ನಿಂದ ಹೊರಡುವ ಮುನ್ನಾದಿನ ಎಲ್ಲಾ ಲಗೇಜನ್ನು ತೂಕ ಹಾಕಿಸುವಂತೆ ಸ್ನೇಹಿತ ನಾಗರಾಜ್‌ಗೆ ಹೇಳಿ, ವಿಮಾನ ನಿಲ್ದಾಣಕ್ಕೆ ಕಳುಹಿಸಿದೆ. ಅದಕ್ಕೆ ಕಟ್ಟಬೇಕಾದ ಹಣ ಕಟ್ಟಿ, ಉಳಿದಿದ್ದರಲ್ಲಿ ಒಂದಿಷ್ಟು ವಸ್ತುಗಳನ್ನು ಖರೀದಿ ಮಾಡಬೇಕೆಂಬುದು ನನ್ನ ಉದ್ದೇಶ. ನಾಗರಾಜ್ ಲಗೇಜ್‌ಗೆ ಇಷ್ಟು ದುಡ್ಡು ಆಗುತ್ತದಂತೆ ಎಂದು ಒಂದು ಮೊತ್ತ ಹೇಳಿದ. ನಾನು ಅಷ್ಟನ್ನು ಮಾತ್ರ ಇಟ್ಟುಕೊಂಡು, ಮಿಕ್ಕೆಲ್ಲಾ ಹಣವನ್ನು ಶಾಪಿಂಗ್‌ಗೆ ವಿನಿಯೋಗಿಸಿದೆ. ಸಿನಿಮಾಗೆ ಬೇಕಾದ ಡಮ್ಮಿ ಗನ್‌ಗಳು, ಚೆಂದಚೆಂದದ ಬಟ್ಟೆಗಳನ್ನು ಖರೀದಿಸಿದೆ. ಎಲ್ಲಾ ವಸ್ತುಗಳು ಒಂದು ಮೂಟೆಯಷ್ಟಾದವು.

ಮರುದಿನ ವಿಮಾನ ನಿಲ್ದಾಣಕ್ಕೆ ಹೋದೆವು. ನಾಗರಾಜ್ ಹೇಳಿದ ಮೊತ್ತಕ್ಕಿಂತ ಒಂದೂವರೆ ಸಾವಿರ ಡಾಲರ್ ಹೆಚ್ಚು ಹಣವನ್ನು ನಾವು ಅಲ್ಲಿ ಕೊಡಬೇಕಾಗಿತ್ತು. ಜೇಬಿನಲ್ಲಿ ತಡಕಿದರೂ ನಯಾಪೈಸೆ ಇಲ್ಲ. ಯಾರೊಬ್ಬರ ಬಳಿಯೂ ಹಣ ಇರಲಿಲ್ಲ.

ಹದಿನೈದು ನಿಮಿಷ ಕಾಲಾವಕಾಶ ಕೊಟ್ಟ ವಿಮಾನ ನಿಲ್ದಾಣದವರು, ಅಷ್ಟರೊಳಗೆ ಹಣ ಕಟ್ಟದೇ ಹೋದಲ್ಲಿ ಲಗೇಜನ್ನೆಲ್ಲಾ ಹೊರಗೆಹಾಕುತ್ತೇವೆ ಎಂದು ನಿಷ್ಠುರವಾಗಿ ಹೇಳಿಬಿಟ್ಟರು. ನನಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ತಕ್ಷಣಕ್ಕೆ ರಾಘವೇಂದ್ರ ಸ್ವಾಮಿಯನ್ನು ನೆನಪಿಸಿಕೊಂಡೆ. ವಿಷ್ಣುವರ್ಧನ್, ಮಂಜುಳಾ ಎಲ್ಲರೂ ಪೆಚ್ಚುಮೋರೆ ಹಾಕಿಕೊಂಡು ಕುಳಿತರು. ಮೂವತ್ತೆರಡು ಟಿಕೆಟ್‌ಗಳನ್ನು ನಾವು ಬುಕ್ ಮಾಡಿಸಿದ್ದರಿಂದ ನಮಗಾಗಿಯೇ ಒಂದಿಷ್ಟು ಹೆಚ್ಚು ಹೊತ್ತು ಮಲೇಷ್ಯಾ ಏರ್‌ಲೈನ್ಸ್ ವಿಮಾನ ಕಾಯತೊಡಗಿತು.

ಆತಂಕದಲ್ಲಿ ಬಾಡಿದ ಮುಖ ಹೊತ್ತ ನನಗೆ ಆಗ ದಿಢೀರನೆ ಸೋದರಸಂಬಂಧಿ ಕೇಶವ ಕಂಡ. ಅವನು ಅಲ್ಲೇ ನೆಲೆಸಿದ್ದವನು. ಅವನು ಕಾರಿನಿಂದ ಇಳಿಯುತ್ತಿದ್ದುದನ್ನು ಕಂಡವನೇ ಅವನಲ್ಲಿಗೆ ಬಿರಬಿರನೆ ಹೋದೆ. ಮಲಗಿದ್ದ ಅವನು ನನ್ನನ್ನು ಬೀಳ್ಕೊಡಲೆಂದೇ ಎಚ್ಚರ ಮಾಡಿಕೊಂಡು ಬಂದಿದ್ದ. ಆಪದ್ಬಾಂಧವನಂತೆ ಕಾಣಿಸಿದ ಕೇಶವನಿಗೆ ತಕ್ಷಣಕ್ಕೆ ಒಂದೂವರೆ ಸಾವಿರ ಡಾಲರ್ ಕಟ್ಟಬೇಕಾದ ತುರ್ತು ಹೇಳಿದೆ. ಅವನು ಕೂಡ ಚಿಕ್ಕಾಸನ್ನೂ ತಂದಿರಲಿಲ್ಲ; ಪರ್ಸಿನಲ್ಲಿದ್ದದ್ದು ಕ್ರೆಡಿಟ್ ಕಾರ್ಡ್ ಅಷ್ಟೆ.

ನಾವು ಪ್ರಯಾಣ ಮಾಡಬೇಕಿದ್ದ ಮಲೇಷ್ಯಾ ಏರ್‌ಲೈನ್ಸ್ ವಿಮಾನ ಸಂಸ್ಥೆಯವರು ಆ ಕಾಲದಲ್ಲಿ ವಹಿವಾಟಿಗೆ ಕ್ರೆಡಿಟ್ ಕಾರ್ಡ್ ಸ್ವೀಕರಿಸುತ್ತಿರಲಿಲ್ಲ. ಪುಣ್ಯಕ್ಕೆ ಕೇಶವನಿಗೆ ಅಲ್ಲಿನ ಅಧಿಕಾರಿಯೊಬ್ಬರ ಪರಿಚಯವಿತ್ತು. ಅವರಿಂದ ವಿಶೇಷ ಶಿಫಾರಸು ಮಾಡಿಸಿ, ಕ್ರೆಡಿಟ್ ಕಾರ್ಡ್ ಮೂಲಕವೇ ನಮ್ಮ ಸಮಸ್ಯೆ ಬಗೆಹರಿಯುವಂತೆ ಮಾಡಿದ. ಕೊನೆಗೂ ನಮ್ಮ ಲಗೇಜ್ ವಿಮಾನ ಸೇರಿತು. ಬಾಡಿದ್ದ ನಮ್ಮ ತಂಡದವರಿಂದ ನೆಮ್ಮದಿಯ ನಿಟ್ಟುಸಿರು. ರಾಘವೇಂದ್ರ ಸ್ವಾಮಿಯೇ ನನ್ನನ್ನು ಕಾಪಾಡಿದರೆಂಬ ಭಾವ ನನ್ನದು.

ಬೆಂಗಳೂರಿನ ಪಲ್ಲವಿ ಚಿತ್ರಮಂದಿರದಲ್ಲಿ ಪ್ರೀಮಿಯರ್ ಪ್ರದರ್ಶನ ಏರ್ಪಡಿಸಿದಾಗ ಗಾಂಧಿನಗರದ ಪ್ರಮುಖರೆಲ್ಲಾ ಬಂದು `ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ನೋಡಿ ಮೆಚ್ಚಿಕೊಂಡರು. ಬಿಡುಗಡೆಯಾದ ಮೇಲೆ ಅದು ತೆಲುಗು, ತಮಿಳು, ಹಿಂದಿ ಭಾಷೆಗಳಿಗೆ ಡಬ್ ಆಯಿತು. ಡಬಿಂಗ್ ಹಕ್ಕಿನಿಂದಲೇ ಇಪ್ಪತ್ತು ಇಪ್ಪತ್ತೈದು ಲಕ್ಷ ರೂಪಾಯಿ ಹಣ ಬಂದಿತು. `ಆಪ್ತಮಿತ್ರ~ ಸಿನಿಮಾ ಮಾಡಿದಾಗ ನನಗೆ ಯಾವ ರೀತಿ ಹೆಸರು ಬಂದಿತೋ, ಆಗ `ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ಬಂದಾಗಲೂ ಅಷ್ಟೇ ಹೆಸರು ನನಗೆ ಸಿಕ್ಕಿತು. ವಿದೇಶದಲ್ಲಿ ಸಿನಿಮಾ ತೆಗೆದದ್ದು ಸಾಧನೆ ಎಂದು ಅನೇಕರು ಮೆಚ್ಚಿಕೊಂಡರು. 

ಆ ಚಿತ್ರ ಸಿನಿಮಾಸ್ಕೋಪ್. ಅದನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ವಿಶೇಷ ಲೆನ್ಸ್ ಬೇಕಿತ್ತು. ಅದನ್ನು ವೀರಾಸ್ವಾಮಿಯವರು ಆಮದು ಮಾಡಿ ತರಿಸಿ, ಬಾಡಿಗೆಗೆ ಬಿಟ್ಟರು. ಚಿತ್ರ ಅವರು ನಿರೀಕ್ಷಿಸಿದ್ದಂತೆಯೇ ಚೆನ್ನಾಗಿ ಹೋಯಿತು. ಆ ಕಾಲದಲ್ಲಿ ಕೆಲವು ಪತ್ರಿಕೆಗಳು ನನ್ನನ್ನು `ರೀಮೇಕ್ ರಾಜ~ ಎಂದೆಲ್ಲಾ ಬಣ್ಣಿಸಿದವು. `ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ಪಕ್ಕಾ ರೀಮೇಕ್ ಚಿತ್ರ ಆಗಿರಲಿಲ್ಲ. ಸಾಕಷ್ಟು ಚರ್ಚಿಸಿ ಅದಕ್ಕೆ ಚಿತ್ರಕತೆ ಮಾಡಿದ್ದೆವು.

ಆ ಸಿನಿಮಾ ಬಂದಮೇಲೆ ಒಂದು ವಿಧದಲ್ಲಿ ನಾನು ಅವಕಾಶಗಳ ರಾಜ ಎನಿಸಿಕೊಂಡೆ. ಅನೇಕ ಆಫರ್‌ಗಳು ನನಗೆ ಬರತೊಡಗಿದವು. ನನಗೆ ಹಣ ಕೊಟ್ಟರೆ ಸಿನಿಮಾ ಮೇಲೆಯೇ ತೊಡಗಿಸುತ್ತೇನೆ ಎಂದು ನಿರ್ಮಾಪಕರು ನಂಬಲಾರಂಭಿಸಿದರು. ಅದಕ್ಕಿಂತ ಮುಖ್ಯವಾಗಿ ನನ್ನ, ವಿಷ್ಣುವರ್ಧನ್ ಕಾಂಬಿನೇಷನ್ ಜನಪ್ರಿಯ ಎಂಬುದನ್ನು ಅನೇಕರು ಮನಗಂಡರು.

`ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ಯಶಸ್ಸಿನ ಗುಂಗಿನಲ್ಲಿರುವಾಗಲೇ ನಾನು `ಪ್ರೀತಿ ಮಾಡು ತಮಾಷೆ ನೋಡು~ ಎಂಬ ಚಿತ್ರವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಅದಕ್ಕೂ ಸಿ.ವಿ.ರಾಜೇಂದ್ರನ್ ನಿರ್ದೇಶಕ. ನಂದಾ ಚಿತ್ರಮಂದಿರದಲ್ಲಿ `ಕಾದಿಲ್ಲಿಕ್ಕು ನೇರಮಿಲ್ಲೈ~ ಎಂಬ ತಮಿಳು ಸಿನಿಮಾ ನೋಡಿದ ಮೇಲೆ ಹುಟ್ಟಿದ ಯೋಚನೆಯೇ `ಪ್ರೀತಿ ಮಾಡು...~ ಆಗಿ ಜೀವತಳೆದಿತ್ತು. ವಿಷ್ಣುವರ್ಧನ್, ಶ್ರೀನಾಥ್ ಕಾಂಬಿನೇಷನ್ ಎಂದೂ ನಾನು ತೀರ್ಮಾನಿಸಿದೆ. ವಿಷ್ಣು ನಮ್ಮ ಹುಡುಗನೇ ಆದ್ದರಿಂದ ಕಾಲ್‌ಷೀಟ್ ಸಮಸ್ಯೆ ಇರಲಾರದೆಂಬುದು ನನ್ನ ಭಾವನೆಯಾಗಿತ್ತು.

ಸಿನಿಮಾ ಸಿದ್ಧತೆಯಲ್ಲಿರುವಾಗಲೇ ನಾನು ಮದ್ರಾಸ್‌ಗೆ ಹೋಗಿದ್ದೆ. ಅಲ್ಲಿಗೆ ವೀರಾಸ್ವಾಮಿಯವರು ಫೋನ್ ಮಾಡಿದರು. ಶ್ರೀಧರ್ ಎಂಬುವರು ಅಮೆರಿಕದಲ್ಲಿ ಚಿತ್ರೀಕರಣ ಮಾಡಿ ಒಂದು ಸಿನಿಮಾ ತೆಗೆಯಲು ನಿರ್ಧರಿಸಿದ್ದಾರೆಂದೂ ಅದಕ್ಕೆ ವಿಷ್ಣು ಕಾಲ್‌ಷೀಟ್ ಕೇಳಿದ್ದಾರೆಂದೂ ಹೇಳಿದರು. ವಿಷ್ಣು ಕಾಲ್‌ಷೀಟ್ ಕೊಡಿಸಲು `ಪ್ರೀತಿ ಮಾಡು ತಮಾಷೆ ನೋಡು~ ಚಿತ್ರೀಕರಣವನ್ನು ಮುಂದಕ್ಕೆ ಹಾಕುವಂತೆ ಅವರು ತಾಕೀತು ಮಾಡಿದರು. ಅಷ್ಟು ಹೊತ್ತಿಗಾಗಲೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದ ನಾನು ಅದಕ್ಕೆ ಒಪ್ಪಲಿಲ್ಲ. ವಿಷ್ಣು ಕಾಲ್‌ಷೀಟ್ ಬಿಟ್ಟುಕೊಡುವುದು ಸಾಧ್ಯವೇ ಇಲ್ಲ ಎಂದೆ. ವೀರಾಸ್ವಾಮಿಯವರ ಜೊತೆ ಮಾತನಾಡಿದ ಅರ್ಧ ಗಂಟೆಯ ನಂತರ ವಿಷ್ಣು ಫೋನ್ ಮಾಡಿದ. ಅವನೂ ವೀರಾಸ್ವಾಮಿ ಮಾತನ್ನೇ ಪುನರುಚ್ಚರಿಸಿದ. ಆ ಸಿನಿಮಾ ಮುಗಿದ ಮೇಲೆ `ಪ್ರೀತಿ ಮಾಡು ತಮಾಷೆ ನೋಡು~ ಮಾಡಬಹುದಲ್ಲ ಎಂದು ಅವನೂ ಸಲಹೆ ನೀಡಲು ಬಂದ. ಕಾಲ್‌ಷೀಟ್ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಆಗಲೇ ಹೇಳಿದ್ದಾಗಿದೆ ಎಂದು ಕಡ್ಡಿತುಂಡುಮಾಡಿದಂತೆ ಹೇಳಿ ಮಾತು ಮುಗಿಸಿದೆ.

ಮದ್ರಾಸ್‌ನಿಂದ ಬೆಂಗಳೂರಿಗೆ ನಾನು ಬಂದಮೇಲೆ ಪರಿಸ್ಥಿತಿ ಬೇರೆಯೇ ಆಗಿತ್ತು. ವೀರಾಸ್ವಾಮಿಯವರಿಗೆ ವಿಷ್ಣು ಕಾಲ್‌ಷೀಟ್ ಸಿಕ್ಕಿತ್ತು. ವಿದೇಶಿ ಸಿನಿಮಾ ಮಾಡಲು ಶ್ರೀಧರ್ ಸಿದ್ಧತೆ ನಡೆಸುತ್ತಿರುವ ವಿಷಯ ಕಿವಿಮೇಲೆ ಬಿತ್ತು. ವಿಷ್ಣು ನೆಚ್ಚಿಕೊಂಡು `ಪ್ರೀತಿ ಮಾಡು...~ ಸಿನಿಮಾ ತೆಗೆಯುವುದು ಸಾಧ್ಯವಿಲ್ಲ ಎಂಬುದು ತಕ್ಷಣ ಸ್ಪಷ್ಟವಾಯಿತು. ತಲೆಯಲ್ಲಿ ಸಿನಿಮಾ ಮಾಡಿ ಮುಗಿಸಲೇಬೇಕೆಂಬ ಸಂಕಲ್ಪ.

ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ `ಸೀತಾರಾಮು~ ಚಿತ್ರದ ಡಬ್ಬಿಂಗ್ ನಡೆಯುತ್ತಿತ್ತು. ಅಲ್ಲಿ ನನ್ನ ಕಿವಿಮೇಲೆ ಶಂಕರ್‌ನಾಗ್ ಧ್ವನಿ ಬಿತ್ತು. ತಕ್ಷಣ ಯಾಕೆ ಆತನನ್ನೇ ನನ್ನ ಚಿತ್ರಕ್ಕೆ ಹಾಕಿಕೊಳ್ಳಬಾರದು ಎನ್ನಿಸಿತು. ಅವನಿಗೆ ಚಿತ್ರದ ಬಗೆಗೆ ಹೇಳಿದೆ. ಪಾತ್ರ ಮಾಡಲು ಒಪ್ಪಿದ. ಒಂದೇ ಪೇಮೆಂಟ್‌ನಲ್ಲಿ ಅವನ ಸಂಭಾವನೆ ಕೊಡಲು ನಾನೂ ಒಪ್ಪಿದೆ. ವಿಷ್ಣು ಇಲ್ಲದೆಯೇ `ಪ್ರೀತಿ ಮಾಡು...~ ಸಿದ್ಧವಾಯಿತು. ಬಹುಶಃ ತನ್ನನ್ನು ಬಿಟ್ಟು ನಾನು ಹಟಕ್ಕೆ ಬಿದ್ದು ಆ ಸಿನಿಮಾ ಮಾಡಿದೆ ಎಂಬ ಬೇಸರ ವಿಷ್ಣುವರ್ಧನ್‌ಗೆ ಇತ್ತೇನೋ, ನನಗೆ ಗೊತ್ತಿಲ್ಲ. ಕೆಮ್ಮಣ್ಣುಗುಂಡಿಯಲ್ಲಿ ಸುಮಾರು 20 ದಿನ `ಪ್ರೀತಿ ಮಾಡು...~ ಚಿತ್ರೀಕರಣ ನಡೆಸಿದೆವು. ಆ ಚಿತ್ರವೂ ಚೆನ್ನಾಗಿ ಓಡಿತು.

ನನ್ನ ತಂಗಿಯ ಗಂಡ ಭಾರ್ಗವ ರೀಮೇಕ್ ಚಿತ್ರಗಳನ್ನು ಮಾಡಲು ಒಪ್ಪುತ್ತಿರಲಿಲ್ಲ; ಕಾದಂಬರಿ ಆಧರಿಸಿದ ಚಿತ್ರಗಳನ್ನು ಮಾಡಬೇಕೆಂಬುದು ಅವನ ಬಯಕೆ. `ಭಾಗ್ಯವಂತರು~ ಮಾಡಿದ ನಂತರ ನನ್ನ ಸಿನಿಮಾಗಳಲ್ಲಿ ಅವನು ಕೆಲಸ ಮಾಡಿರಲಿಲ್ಲ. ಅವನಿಗೆ ರಾಜ್‌ಕುಮಾರ್ ಅಭಿನಯದ `ಒಲವು ಗೆಲುವು~ ಚಿತ್ರ ನಿರ್ದೇಶಿಸುವ ಅವಕಾಶ ಸಿಕ್ಕಿತ್ತು. ಆದರೆ, ಆ ಚಿತ್ರ ಚೆನ್ನಾಗಿ ಓಡಲಿಲ್ಲ.

ಚಿ.ಉದಯಶಂಕರ್ ಆ ಚಿತ್ರದ ಕತೆಯನ್ನು ನನಗೆ ಹೇಳಿದ್ದರು. ಸೆಕೆಂಡ್ ಹಾಫ್‌ನಲ್ಲಿ ದಮ್ ಇಲ್ಲ ಎಂದು ಅವರಿಗೆ ಮೊದಲೇ ಹೇಳಿದ್ದೆ. ಅದನ್ನು ಉದಯಶಂಕರ್ ಯಾರ‌್ಯಾರಿಗೋ ಮುಟ್ಟಿಸಿದ್ದ. ಅದಕ್ಕೆ ಕೆಲವರು ಒಗ್ಗರಣೆ ಹಾಕಿ, ರಾಜ್‌ಕುಮಾರ್ ಚಿತ್ರವೇ ಡಬ್ಬ ಎಂದು ದ್ವಾರಕೀಶ್ ಹೇಳಿದ್ದಾನೆಂದು ಇಲ್ಲಸಲ್ಲದ್ದನ್ನು ಮಾತನಾಡಿಕೊಂಡಿದ್ದರು. ನಾನು ಚಿತ್ರಕತೆಯ ಬಗೆಗೆ ಪ್ರಾಮಾಣಿಕ ಅನಿಸಿಕೆ ವ್ಯಕ್ತಪಡಿಸಿದ್ದನಷ್ಟೆ. ಈ ಅಂಕಣ ಬರಹಗಳನ್ನು ನೋಡಿ ಕೆಲವರು, `ಅವರ ಹೆಸರು ಬಿಟ್ಟುಹೋಗಿದೆ, ಇವರ ಬಗೆಗೆ ಬರೆಯಬೇಕಿತ್ತು~ ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ. ನಾನು ಪ್ರಾಮಾಣಿಕವಾಗಿ ನನ್ನ ಮನಸ್ಸಿನಲ್ಲಿ ಉಳಿದಿರುವ ನೆನಪುಗಳನ್ನಷ್ಟೇ ಇಲ್ಲಿ ದಾಖಲಿಸುತ್ತಿರುವುದು. ಪೂರ್ವಗ್ರಹವಾಗಲೀ ರಾಜಕೀಯವಾಗಲೀ ನಾನು ಮಾಡುತ್ತಿಲ್ಲ. ನಾನು ಇಲ್ಲಿ ಹೆಸರಿಸದ ಅನೇಕರು ಬದುಕಿನಲ್ಲಿ ನೆರವಾಗಿದ್ದಾರೆಂಬುದು ನನಗೂ ಗೊತ್ತಿದೆ. ಭಾರ್ಗವನಿಗೆ ಮೊದಲು ಒಂದು ಚಿತ್ರ ಕೊಡಿ ಎಂದು ಹೇಳಿದ್ದು ಸಿ.ವಿ. ರಾಜೇಂದ್ರನ್. ಆಗ ನನ್ನ ತಲೆಯಲ್ಲಿ ಹುಟ್ಟಿದ ಯೋಚನೆ `ಕುಳ್ಳ ಕುಳ್ಳಿ~. ಅದರ ನಿರ್ದೇಶಕ ಭಾರ್ಗವ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT