ADVERTISEMENT

ಎಲ್ರೂ ಮೇಲೆ ಬಿದ್ರೆ ಹೇಗೆ ಸಾರ್?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 6 ಅಕ್ಟೋಬರ್ 2013, 19:30 IST
Last Updated 6 ಅಕ್ಟೋಬರ್ 2013, 19:30 IST
ಎಲ್ರೂ ಮೇಲೆ ಬಿದ್ರೆ ಹೇಗೆ ಸಾರ್?
ಎಲ್ರೂ ಮೇಲೆ ಬಿದ್ರೆ ಹೇಗೆ ಸಾರ್?   

‘ಇವರಿಗೆ ಬೆಂಕಿ ಹಾಕ, ಇವರ ಮುಖಕ್ಕೆ ಮಂಗಳಾರತಿ ಎತ್ತ...’ ಎಂದು ಖ್ಯಾತ ಕವಿ ಮಹಾಶಯರು ಎರಡೂ ಕೈ ಜೋಡಿಸಿ ಎಲ್ಲ ಬೆರಳುಗಳಿಂದ ಲಟಲಟ ಅಂತ ಲಟಿಕೆ ಮುರಿದು, ನಿತ್ಯೋತ್ಸವದಲ್ಲಿ ಸುಪ್ರಭಾತ ಹೇಳುವಂತೆ ಶಪಿಸಲಾರಂಭಿಸಿದ್ದು ಕಂಡು ಪೆಕರ ಅವರ ಬಳಿ ಬಂದ.

‘ಸಾರ್, ನೀವು ಕೋಪ ಮಾಡ್ಕೊಂಡಿದ್ದೇ ಕನ್ನಡ ಸಾಹಿತ್ಯಲೋಕ ನೋಡಿಲ್ಲ. ಸದಾ ಸೈಲೆಂಟಾಗಿರೋವ್ರು ನೀವು. ಜೋಗದ ಸಿರಿ ಬೆಳಕನ್ನು ಸೀರಿಯಲ್‌ಸೆಟ್ ಲೈಟ್ ಹಾಕಿಕೊಂಡು ನೋಡವ್ರು ನೀವು. ಇವತ್ತ್ಯಾಕೋ ರಾಂಗ್ ಬಿರಾಂಗ್ ಆಗಿ ಬೆಂಕಿಕಾರ್ತಾ ಇದೀರಲ್ಲಾ ಕ್ಯಾಬಾತ್ ಹೈ ಸಾಬ್’ ಎಂದು ಕವಿಗಳನ್ನು ಪೆಕರ ಪ್ರಶ್ನಿಸಿದ.

‘ನನಗೆ ಮೈಯೆಲ್ಲಾ ಉರೀತಿದೆ ಪೆಕರ ಅವರೇ, ಹಣದ ಹೊಳೆ ಹರಿಯುವ ಸಂಸ್ಥೆಗಳಿಗೆಲ್ಲಾ ಬೇಗಬೇಗ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಆದರೆ ಎರಡು ವರ್ಷಗಳಿಂದ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರನ್ನೇ ನೇಮಿಸಿಲ್ಲ. ಅಯ್ಯ ಅವರಿಗೆ ಪಟ್ಟಾಭಿಷೇಕ ಆದ ದಿನವೇ ಹೊಸ ಜುಬ್ಬ ಹೊಲಿಸಿಕೊಂಡು, ನಾವೇ ಅಯ್ಯ ಅವರ ‘ಥಿಂಕ್ ಟ್ಯಾಂಕ್’ ಎಂದು ಪೋಸು ಕೊಡುತ್ತಾ ಓಡಾಡ್ತಾ ಇರೋ ಸಾಹಿತಿಗಳು ಎಷ್ಟು ದಿನಾ ಅಂಥಾ ಕಾಯಬೇಕು? ಬೇಗ ಅವರಿಗೆಲ್ಲಾ ಒಂದೊಂದು ಚೇರ್ ಕೊಟ್ಟು ಚೇರ್ಮನ್ ಮಾಡ್ಬಾರ್ದೆ? ಇವರಿಗೆ ಬೆಂಕಿಹಾಕ...’ ಎಂದು ಕವಿಗಳು ಮತ್ತೆ ಗುನುಗಿದರು.

‘ಎಲ್ರೂ ಹೀಗೆ ಅಯ್ಯ ಅವರನ್ನು ಬೆದರಿಸಿದರೆ ಹೇಗೆ ಸಾರ್? ಡಾಜಿಪ ಅವರು ನೇರವಾಗಿ ಸರ್ಕಾರದ ಮೇಲೆ ಎಗರಿ ಬಿದ್ದಿದ್ದಾರೆ, ಒಬ್ರು ದೇಶ ಬಿಟ್ಟು ಹೋಗ್ತೀನಿ ಅಂತಿದ್ದಾರೆ, ನೀವು ನೋಡಿದ್ರೆ ಬೆಂಕಿಹಾಕ ಅಂತ ಬೈತಿದ್ದೀರಿ, ಸ್ವಾತಂತ್ರ್ಯ ಹೋರಾಟಗಾರ ರಾಜಸ್ವಾಮಿಗಳು ಡಿಕುಶಿ ಮಾರ ಅವರನ್ನು ಸಂಪುಟಕ್ಕೆ ತಗಬಾರ್‍್ದು ಅಂತ ಕಟ್ಟಪ್ಪಣೆ ಮಾಡಿದ್ರು, ಈಗ ಕಳಂಕಿತ ಸಂಲಾಡ ಸಾಹೇಬ್ರನ್ನು ಸಂಪುಟದಿಂದಲೇ ತೆಗೆದುಹಾಕಿ ಅಂತ ಹಠ ಹಿಡಿದಿದ್ದಾರೆ. ಸಾಹಿತಿಗಳು, ಗಣ್ಯರು ಹೀಗೆ ಮೇಲೆ ಬಿದ್ರೆ ನಮ್ಮ ಅಯ್ಯ ಅವರು ಕೆಲ್ಸ ಮಾಡೋದು ಯಾವಾಗ? ಮೈಸೂರಿಗೆ ಬುಲೆಟ್ ರೈಲು ಬಿಡೋದು ಯಾವಾಗ? ದಸರಾ ಮಹೋತ್ಸವ ಸಖತ್ತಾಗಿ ಮಾಡೋದು ಯಾವಾಗ?

ವರ್ಗಾವಣೆಯಲ್ಲಿ ಕೈಯಾಡಿಸೋದು ಯಾವಾಗ?’
‘ನೀವು ಹೇಳ್ತಾ ಇರೋದು ಸರಿ ಪೆಕರ ಅವರೇ, ಅದರೆ ಆಡಳಿತ ಡೆಡ್ ಆಗಬಾರದು ನೋಡಿ’
‘ಏನ್ಸಾರ್ ಹೀಗ್ಹೇಳ್ತಾ ಇದೀರಾ? ಇವತ್ತು ಅಯ್ಯ ಅವರು ಚಾಮರಾಜನಗರಕ್ಕೆ ಟೂರ್ ಹೋಗ್ತಾ ಇದಾರೆ ನೋಡಿ, ಮೂಢನಂಬಿಕೆಯನ್ನು ಮೂಲೆಗುಂಪು ಮಾಡಿ ಬಂದು, ಎಂಥಾ ಕ್ರಾಂತಿ ಮಾಡ್ತಾರೆ ನೋಡ್ತಾ ಇರಿ’ ಎಂದು ಪೆಕರ ಎದೆ ಉಬ್ಬಿಸಿ ಹೇಳಿದ.

‘ಏನ್ ಮಾಡ್ತಾರೋ ಏನ್ ಕತೇನೋ, ಅಲ್ಲಿಗೆ ಹೋಗಿ ಬಂದ್ರೆ ಅಧಿಕಾರಾನೇ ಹೋಗುತ್ತೆ ಅಂತ ಜನ ಹೇಳ್ತಾ ಇದಾರೆ’
‘ಏನೂ ಆಗಲ್ಲ ಬಿಡಿ ಸಾರ್, ಅಯ್ಯ ಅವರ ಅಭಿಮಾನಿಗಳು ಕಂಟಕ ನಿವಾರಣೆಗಾಗಿ ಹೋಮ ಮಾಡಿ, ಅಯ್ಯ ಅವರ ರಿಸ್ಕ್ ನಿವಾರಣೆಗೆ ಮುಂದಾಗಿದ್ದಾರೆ. ಇಂತಹ ಸಮಯದಲ್ಲಿ ಬೈಯೋದೆಲ್ಲಾ ಬೇಡಾ ಸಾರ್’ ಎಂದು ಪೆಕರ ಸಮಾಧಾನ ಮಾಡಲು ಮುಂದಾದ.

‘ಅಯ್ಯೋ ಬ್ರೇಕಿಂಗ್ ನ್ಯೂಸ್ ತರ ಏನೇನೋ ಫ್ಲ್ಯಾಷ್ ಮಾಡಬೇಡಿ, ನಾನು ಶಾಪ ಹಾಕಿಲ್ಲ, ಈ ಆಸ್ಥಾನ ಸಾಹಿತಿಗಳು ದಿನಾ ಮನೆಗೆ ಬಂದು ಅಯ್ಯ ಅವರಿಗೆ ಒಂದ್‌ಮಾತ್ ಹಾಕಿ ಅಂತ ಅಡ್ಡ ಬೀಳ್ತಾರೆ, ಅದನ್ನು ತಡೀಲಾರ್ದೆ ಬೆಂಕಿಹಾಕ ಅಂದೆ ಅಷ್ಟೇ’ ಅಡ್ಡ ಅನ್ನುವ ಪದ ಕೇಳಿ ಕೂಡಲೇ ಪೆಕರ ಬೆಚ್ಚಿಬಿದ್ದ.

‘ಬುಡ್ತು ಅನ್ನಿ ಸಾರ್, ನೀವು ‘ಅಡ್ಡ’ ಬೀಳ್ತಾರೆ ಅಂದ ಕೂಡಲೇ ನನಗೆ ಅಡ್ಡ ಪಲ್ಲಕ್ಕಿ ನೆನಪಾಗ್ತಾ ಇದೆ. ‘ಅಡ್ಡ’ ಎನ್ನುವ ಪದ ಹಿಡ್ಕೊಂಡು ಜೇವರ್ಗಿಯಲ್ಲಿ ಗಲಾಟೆ ಮಾಡ್ತಿದ್ದಾರೆ.

ಅಯ್ಯ ಅವರ ಮನೆ ಮುಂದೆ ಧರಣಿ ಮಾಡಿದ್ದೂ ಆಯಿತು. ಒಳ್ಳೆಯ ಕೆಲಸಗಳಿಗೆ ಅಡ್ಡ ನಿಲ್ಲೋದು, ಎಡವಟ್ಟು ಮಾಡಿಕೊಂಡು ನಂತರ ಫಜೀತಿ ಮಾಡಿಕೊಳ್ಳೋದು ಕಾಮನ್ ಆಗಿಬಿಟ್ಟಿದೆ...’ ಪೆಕರ ತನ್ನ ಗಾಬರಿಗೆ ಕಾರಣ ಹೇಳಲಾರಂಭಿಸಿದ.

‘ಹೌದು ಬಿಡಿ ಪೆಕರ ಅವರೇ, ಇವತ್ತು ಇಡೀ ದೇಶದಲ್ಲಿ ಅಡ್ಡಪಲ್ಲಕ್ಕಿ ನಡೀತಿದೆ’ ಎಂದು ಕವಿಗಳು ಒಂದು ಕವಿಸಂದರ್ಭವೊಂದನ್ನು ಹೇಳಿದರು.

‘ಹೌದು ಸಾರ್, ನೀವು ಹೇಳಿದ್ದು, ಒಂದು ಅರ್ಥದಲ್ಲಿ ನಿಜ. ಬಿಹಾರದಲ್ಲಿ ಲಾಲೂ ಮತ್ತು ೪೫ ಮಂದಿ ಘನಂದಾರಿಗಳನ್ನು ಅಡ್ಡಪಲ್ಲಕ್ಕಿ ಮೂಲಕ ತಿಹಾರ ಜೈಲಿಗೆ ಸೇರಿಸಲಾಯಿತು. ‘ಖಳ’ಂಕಿತರನ್ನು ರಕ್ಷಿಸುವ ಸುಗ್ರೀವಾಜ್ಞೆಗೆ ನಮ್ಮ ಯುವರಾಜರೇ ‘ಅಡ್ಡ’ಗಾಲಾಕಿದರು. ಲೋಕಸಭೆ ಚುನಾವಣೇಲಿ ‘ಲಾಭ’ ನಿರೀಕ್ಷಿಸಿ ತೆಲಂಗಾಣ ವಿಭಜನೆಗೆ ‘ಕೈ’ಹಾಕಿದ ಕಾಂಗ್ರೆಸ್‌ಗೆ ತಿರುಪತಿನಾಮ ಬೀಳುವ ಸಂಭವವೇ ಹೆಚ್ಚಾಗಿದೆ’  ಎಂದು ರಾಜಕೀಯ ಪಂಡಿತರು ‘ಅಡ್ಡ’ ಭವಿಷ್ಯ ಹೇಳ್ತಾ ಇದ್ದಾರೆ.

ಅಮೆರಿಕದಲ್ಲೂ ‘ಅಡ್ಡ’ ಇದೆ ಸಾರ್, ಒಬಾಮ ಅವರನ್ನೇ ‘ಕೇರ್’ ಮಾಡದ ರಿಪಬ್ಲಿಕನ್ನರು ಅಮೆರಿಕ ಸರ್ಕಾರವನ್ನೇ ಅಡ್ಡಗಾಲಾಕಿ ಸ್ಥಗಿತ ಮಾಡಿಬಿಟ್ಟಿದ್ದಾರೆ. ಅಯ್ಯ ಅವರ ಸುಗಮದಾರಿಗೆ ಸಮನ್ವಯ ಸಮಿತಿ ಎಂಬ ‘ಅಡ್ಡ’ಗೋಡೆ ಕಟ್ಟಲಾಗಿದೆ. ಹೀಗೆ ಇಡೀ ದೇಶವೇ ಅಡ್ಡಪಲ್ಲಕ್ಕಿಯ ಮೇಲೆ ಕುಳಿತು ಅಡ್ಡಡ್ಡ ಹೋಗ್ತಾ ಇದೆ ಸಾರ್...’ ಪೆಕರ ದೊಡ್ಡ ವಿಶ್ಲೇಷಣೆಯನ್ನೇ ಮುಂದಿಟ್ಟ.

‘ಅಡ್ಡ ಪಲ್ಲಕ್ಕಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಸಾರ್?’ ಎಂಬ ಪ್ರಶ್ನೆಯನ್ನೂ ಜೊತೆಗಿಟ್ಟ.
‘ಅಯ್ಯೋ ಬಿಡಪ್ಪ, ಮನುಷ್ಯ ಸವಾರಿ ಇವತ್ತಿನದಲ್ಲ, ಜನಸಾಮಾನ್ಯರ ಮೇಲೆ ರಾಜಕಾರಣಿಗಳು ಸವಾರಿ ಮಾಡುವುದು ಮೊದಲು ನಿಲ್ಲಬೇಕು...’ ಎಂದು ಕವಿಗಳು ಮಾತನಾಡಲಾರಂಭಿಸಿದರು.

ಅಷ್ಟರಲ್ಲಿ ಪೆಕರನ ಮೊಬೈಲ್ ರಿಂಗಣಿಸಲಾರಂಭಿಸಿತು.
‘ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆ ಆಗಿದೆ, ಇನ್ನು ಮುಂದೆ ಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಇದು.

ನಿಮ್ಮ ಅಮೂಲ್ಯ ವಿಶ್ಲೇಷಣೆ ಬೇಕು, ಕರ್ನಾಟಕದ ಜನಾ ಎಲ್ಲಾ ಬಹಳ ನಿರೀಕ್ಷೆ ಮಾಡ್ತಾ ಇದಾರೆ. ರೆಡಿಯಾಗಿ’ ಎಂದು ಸಂಪಾದಕರು ಅತ್ತಕಡೆಯಿಂದ ಆದೇಶ ಮಾಡಿದರು.

‘ಸಾರ್. ಈ ರಾಜ್ಯಗಳಿಗೆ ಹೋಗಿ, ಮೋದಿ ಅವರ ಐದ್ರೂಪಾಯಿ ಭಾಷಣ ಕೇಳೋದಿಕ್ಕೆ ಬೋರ್ ಆಗುತ್ತೆ ಸಾರ್’ ಎಂದು ಪೆಕರ ರಾಗ ಎಳೆದ.

‘ಚುನಾವಣೇಲಿ ಭಾಷಣಗಳನ್ನು ಮಾಡದೆ, ನಂಗಾನಾಚ್ ಮಾಡ್ತಾರೇನ್ರಿ? ನೀರಿಗಿಳಿದ ಮೇಲೆ ಚಳಿ ಏನು, ಮಳೆ ಏನು? ರೆಡಿಯಾಗಿ’ ಎಂದು ಒತ್ತಾಯ ಬಂದ ಮೇಲೆ ‘ಯಸ್ ಸಾರ್ ಐಯಾಮ್ ರೆಡಿ ’ಎಂದು ಪೆಕರ ಸಜ್ಜಾದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.