ADVERTISEMENT

ಅಮ್ಮಾ ನನ್ನನ್ನು ಉಳಿಸಿಕೋ...

ಕಲೀಮ್ ಉಲ್ಲಾ
Published 28 ಜನವರಿ 2015, 19:30 IST
Last Updated 28 ಜನವರಿ 2015, 19:30 IST

ರಾಜು ಹುಟ್ಟಿದಾಗ ಆ ಮನೆಯಲ್ಲಿ ಸಂಭ್ರಮ, ಸಡಗರ ಮೂಡಿತ್ತು. ಹೇಳಿಕೇಳಿ ಅವನು ಕುಟುಂಬದ ಮೊದಲ ಕುಡಿ. ಹೀಗಾಗಿ ಅಪ್ಪಿ ಮುದ್ದಾಡಿ ಅವನನ್ನು ಬೆಳೆಸಿದರು. ಎಲ್ಲ ಮಕ್ಕಳಂತೆ ಸಹಜವಾಗಿ ಆಡಿ ನಲಿದ ರಾಜು ಶಾಲೆಗೆ ಸೇರಿದ. ರಾಜುಗೆ ಓದು ಯಾಕೋ ಸಲೀಸು ಎನ್ನಿಸಲಿಲ್ಲ. ತನ್ನ ಓರಗೆಯ ಮಕ್ಕಳಿಗಿಂತ ಆತ ಹಿಂದೆ ಬೀಳತೊಡಗಿದ. ಶಾಲೆಯಲ್ಲಿ ಪಾಠಗಳು ಅವನ ತಲೆಯ ಸಮೀಪಕ್ಕೂ ಬಾರದಾದವು. ಅವನೆಷ್ಟು ತಿಪ್ಪರಲಾಗ ಹಾಕಿ ಕಲಿತರೂ ಶಾಲೆಯ ಕಲಿಕೆ ಅವನೊಳಗೆ ಉಳಿಯದೆ ಇಂಗಿ ಹೋಗುತ್ತಿತ್ತು. ಆದರೆ, ರಾಜು ಬಣ್ಣದ ಚಿತ್ರಗಳನ್ನು ಅದ್ಭುತವಾಗಿ ಬರೆಯುತ್ತಿದ್ದ. ಹಾಡು, ಕುಣಿತಗಳಿಗೆ ತಲೆದೂಗುತ್ತಿದ್ದ.  ಕಥೆಗಳೆಂದರೆ ಅವನಿಗೆ ಪಂಚಪ್ರಾಣ. ಪುಸ್ತಕದ ಪಾಠಗಳೆಂದರೆ ಅಪ್ಪಟ ಶತ್ರುಗಳು.

ಸ್ಕೂಲಿಗೆ ಹೋಗಿ ವಾಪಸ್ಸು ಬರುವಾಗ ರಾಜು ತಲೆ ಸಂಪೂರ್ಣ ಖಾಲಿಯಾಗಿರುತ್ತಿತ್ತು. ಅದನ್ನವನು ಅಮ್ಮನ ಹತ್ತಿರ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಿದ್ದ. ‘ಅಮ್ಮ ಶಾಲೆಯಲ್ಲಿ ಟೀಚರ್ ಹೇಳೋ ಪಾಠ ಯಾಕೋ ನೆನಪಲ್ಲೇ ಇರಲ್ಲಮ್ಮ. ಅವರು ಏನೇನೋ ಹೇಳ್ತಾರಮ್ಮ. ಅದೆಲ್ಲಾ ನನಗೆ ಗೊತ್ತೇ ಆಗಲ್ಲಮ್ಮ. ಅಆಇಈ, ಎಬಿಸಿಡಿ, ಒಂದು, ಎರಡು, ಮೂರೆಲ್ಲಾ ಕಲೆಸಿದಂತೆ ಆಗುತ್ತಮ್ಮ. ನಾನು ಮನೇಲೆ ಇರ್ತಿನಮ್ಮ. ಪ್ಲೀಸ್ ನನಗೆ ಶಾಲೆ ಬೇಡ ಕಣಮ್ಮ’ ಎಂದು ರಾಜು ಕ್ಯಾತೆ ತೆಗೆಯತೊಡಗಿದ. ತರಗತಿಯ ಓದು, ಅವನ ಕಿವಿಗೆ ಬಂದರೂ ಮನಸ್ಸಿನ ತನಕ ತಲುಪುತ್ತಲೇ ಇರಲಿಲ್ಲ. ಗಾಳಿಯಲ್ಲೇ ಆವಿಯಾಗಿ ಬಿಡುತ್ತಿದ್ದವು. ಎಲ್ಲಾ ಪಾಠಗಳನ್ನು ಪಟಪಟಾಂತ ಕಲಿತು ಒಪ್ಪಿಸುವ ಶಾಲೆಯ ಮಕ್ಕಳ ನಡುವೆ ರಾಜು ಮಾತ್ರ ಒಂಟಿಯಾಗತೊಡಗಿದ. ಪಾಠ ಬಿಟ್ಟು ಚಿತ್ರಗಳನ್ನು ಗೀಚತೊಡಗಿದ.

ಕಲಿಕೆಯಲ್ಲಿ ಹಿಂದೆ ಬಿದ್ದ ರಾಜುವನ್ನು ಗೆಳೆಯರು ದಡ್ಡ ಎಂದು ಹಂಗಿಸಲು ಶುರುಮಾಡಿದರು. ಟೀಚರ್‌ಗಳು ರಾಜುವನ್ನು ಕ್ಲಾಸಿನಲ್ಲಿ ನಿಲ್ಲಿಸಿ ಬೈಯುವುದು ಒಂದು ಸಾಮಾನ್ಯ ಸಂಗತಿಯಾಯಿತು. ಎಲ್ಲರೂ ತನ್ನನ್ನು ಹೆಡ್ಡ ಎಂದು ಹೀಯಾಳಿಸುವಾಗೆಲ್ಲಾ ರಾಜು ತೀವ್ರವಾಗಿ ನೊಂದುಕೊಳ್ಳುತ್ತಿದ್ದ. ಓದಿನ ಭಾರ ಹೊರುವ ರೀತಿ ಅರಿಯದೆ ತನ್ನ ತಲೆಯನ್ನು ಚಚ್ಚಿಕೊಳ್ಳುತ್ತಿದ್ದ. ಸರೋಜ ಟೀಚರ್ ಒರಟಾಗಿ ಬೈತಿದ್ರೆ ತಲೆ ತಗ್ಗಿಸಿಕೊಂಡು ಕಣ್ಣೀರು ಸುರಿಸುತ್ತಿದ್ದ. ಅವನಿಗೆ ಶಾಲೆಯಲ್ಲಿ ತನ್ನ ಸಂಕಟ ಹೇಳಿಕೊಳ್ಳಲು ಸಾಗರ್ ಎಂಬ ಹಾರ್ಟ್ ಪೇಷೆಂಟ್ ಗೆಳೆಯ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಆ ಸಾಗರ್ ಹೃದಯಕ್ಕೋ ಒಂದು ಭಾರಿ ರಂಧ್ರವಾಗಿತ್ತು. ಅವನೂ ಹೆಚ್ಚು ದಿನ ಬದುಕುವ ಗೆಳೆಯನಾಗಿರಲಿಲ್ಲ.

ಇತ್ತ, ಪ್ರೈವೇಟ್ ಶಾಲೆಯವರಿಗೆ ರಾಜು ಬಿಸಿ ತುಪ್ಪವಾಗಿದ್ದ. ಇಂಥ ದಡ್ಡ ಹುಡುಗನನ್ನು ನಾವೇಕೆ ಶಾಲೆಗೆ ಸೇರಿಸಿಕೊಂಡೆವೋ? ಎಂಬ ಚಡಪಡಿಕೆಯಲ್ಲಿ ಅವರಿದ್ದರು. ರಾಜುವಿನ ತಂದೆ ತಾಯಿಗೆ ವಾರಕ್ಕೊಮ್ಮೆ ಕರೆಸಿ ಗಂಟೆಗಟ್ಟಲೆ ಕೊರೆಯು ತ್ತಿದ್ದರು. ಬೇರೆ ಕಡೆ ಕರೆದುಕೊಂಡು ಹೋಗಿ ಸೇರಿಸಿ ಎಂದು ಒತ್ತಾಯಿಸುತ್ತಿದ್ದರು. ಇತ್ತ ರಾಜುವಿನ ಕಂಪ್ಲೇಂಟ್ ಕೇಳಿಕೇಳಿ ಅಪ್ಪ ಅಮ್ಮ ಇಬ್ಬರೂ ಸುಸ್ತಾಗಿದ್ದರು. ದಿಕ್ಕೇ ತೋಚದಂತಾಗಿದ್ದರು. ಅಮ್ಮ ಕಣ್ಣೀರು ಹಾಕುತ್ತಿದ್ದರೆ, ಅಪ್ಪ ಕ್ಷುದ್ರರಾಗತೊಡಗಿದರು. ‘ನಿನ್ನಂಥ ಮಗ ಹುಟ್ಟೋ ಬದಲು, ಸತ್ತೋಗಿದ್ರೆ ಚೆನ್ನಾಗಿತ್ತು ಕಣೋ. ಎಂಥ ದರಿದ್ರ ಶನಿ ಹುಟ್ಟಿಬಿಟ್ಟಿಯೋ?’ ಎಂದು ಮಗನನ್ನು ಮಾತಿನಲ್ಲೇ ಚುಚ್ಚತೊಡಗಿದರು. ಅವಕಾಶ ಸಿಕ್ಕಾಗೆಲ್ಲಾ ಹಂಗಿಸತೊಡಗಿದರು. ಅವರಿಗೆ ವ್ಯವಧಾನ ಎಂಬುದೇ ಇರಲಿಲ್ಲ. ಎಲ್ಲರಿಂದ ಕ್ಷಣಕ್ಷಣಕ್ಕೂ ಘಾಸಿಗೊಳ್ಳುತ್ತಿದ್ದ ರಾಜು ನಿಧಾನಕ್ಕೆ ಮೌನಿಯಾಗತೊಡಗಿದ. ಅವನ ಗೆಳೆಯ ಸಾಗರ್ ಹೋದ ಮೇಲಂತೂ ರಾಜು ಅಕ್ಷರಶಃ ಒಂಟಿಯಾಗಿ ಬಿಟ್ಟ. ಮನೆಯಲ್ಲಿ ಅಮ್ಮನ ಪ್ರೀತಿ ಬಿಟ್ಟರೆ ಬೇರೇನೂ ಇರಲಿಲ್ಲ. ಹೊರ ಜಗತ್ತು ಅವನ ಪಾಲಿಗೆ ಕಗ್ಗತ್ತಲ ಖಂಡವಾಗಿತ್ತು. ದಿನಗಳು ಹೀಗೆ ಸರಿಯುತ್ತಾ ಹೋದವು.

ಮಗನ ಸಂಕಟ ಕಂಡ ತಾಯಿ ಮೀನಾರ ಕರುಳು ಚುರುಗುಟ್ಟುತ್ತಿತ್ತು. ಅವನ ಕಡೆ ಇನ್ನೂ ಹೆಚ್ಚಿನ ಗಮನ ತಾನು ನೀಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಕೊರಗು ಮೀನಾರನ್ನು ಬಾಧಿಸತೊಡಗಿತು. ತಮಗೆ ಸಿಗುವ ಎಲ್ಲಾ ಸಮಯವನ್ನು  ಅವನಿಗಾಗಿ ಮೀಸಲಾಗಿಟ್ಟರು. ಅವನ ಹಿಡಿದು ಮುದ್ದಾಡಿ, ತಾಯಿ ಪ್ರೀತಿ ಕಡಿಮೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದರು. ಅವನಿಗೆ ಕೈಲಾದಷ್ಟು ಕಲಿಸುತ್ತಿದ್ದರು. ಆದರೂ, ದುಡಿಯಲು ಹೊರಗೆ ಹೋಗಿ, ಸಂಜೆ ಬಂದು ಅಡುಗೆ ಕೆಲಸ, ಮನೆ ಕೆಲಸಗಳಲ್ಲಿ ಹೈರಾಣಾಗುತ್ತಿದ್ದ ಮೀನಾರಿಗೆ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸಾಕಾಗುತ್ತಿರಲಿಲ್ಲ. ಅಸಡ್ಡೆಯ ಗಂಡನ ಕಟ್ಟಿಕೊಂಡು ಓದಿನಲ್ಲಿ ಹಿಂದುಳಿದ ಮಗನನ್ನು ನಿರ್ವಹಿಸುವುದು ಅವರಿಗೆ ಅಕ್ಷರಶಃ ಕಷ್ಟವಾಗುತ್ತಿತ್ತು. ‘ದುಡಿಮೆಗೆ ಹೊರಗೆ ಹೋಗುವ ದಂಪತಿಗಳ ಸಂಸಾರದ ನಾಯಿ ಪಾಡು ಎಂದರೆ ಇದೇನಾ, ಯಾಕಾದರೂ ನಾನು ಹಾಳು ಕೆಲಸಕ್ಕೆ ಸೇರಿದೆನೋ, ತಾಯಿಯಾಗಿ ನಾನು ಮನೆಯಲ್ಲೇ ಉಳಿದಿರುತ್ತಿದ್ದರೆ ನನ್ನ ಕಂದ ಹೀಗಾಗುತ್ತಿರಲಿಲ್ಲ ಅಲ್ಲವೇ?’ ಎಂದು ಮೀನಾ ರೋಧಿಸತೊಡಗಿದರು. ಬಾಲ್ಯದಲ್ಲಿ ಅತ್ತೆ ಜೊತೆ ಲವಲವಿಕೆಯಿಂದ ಇದ್ದ ರಾಜುವನ್ನು ತಮ್ಮ ಜೊತೆ ಕರ್ಕೊಂಡು ಬಂದಿದ್ದೇ ತಪ್ಪಾಯಿತಾ? ಅಜ್ಜಿ ಹತ್ರ ಕಥೆ ಕೇಳ್ಕೊಂಡು, ಆಕೆಯ ಮಡಿಲಲ್ಲಿ ಬೆಚ್ಚಗಿದ್ದ ಮಗುವನ್ನು ಕಿತ್ಕೊಂಡು ಬಂದಿದ್ದೇ ಎಡವಟ್ಟಾಯಿತಾ?. ನಮ್ಮ ವರ್ಗಾವಣೆಗಳ ಹಾವಳಿಯಲ್ಲಿ ಅವನ ಶಾಲೆಗಳು, ಗೆಳೆಯರು, ಗುರುಗಳೂ ಬದಲಾಗುತ್ತಿದ್ದಾರೆ.

ಈ ವಿಷಯಗಳೂ ಅವನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿರಬಹುದೇ? ಒಂದು ಕಡೆ ನಾವು ನೆಲೆ ನಿಂತರೆ, ಅವನ ಸಮಸ್ಯೆ ಅರ್ಥಮಾಡಿಕೊಂಡು ಕಲಿಸುವ ಪುಣ್ಯಾತ್ಮ ಗುರು ಯಾರಾದರೂ ಸಿಗಬಹುದೇನೋ? ಎಂಬ ನೂರು ಆಲೋಚನೆಗಳು ಮೀನಾ ಅವರ ತಲೆಯಲ್ಲಿ ಸುಳಿದು ಹೋದವು.

ಮಕ್ಕಳು ತಮ್ಮ ಜತೆಗೇ ಇರಲಿ. ಅವರ ಬಾಲ್ಯವನ್ನು ನಾವು ನೋಡಿ ಆಸ್ವಾದಿಸೋಣ ಎಂಬ ಹಂಬಲ ನೆಲೆಯಿಲ್ಲದ ನೌಕರಿಯಲ್ಲಿರುವ ತಂದೆ ತಾಯಿಗಳಿಗೆ ಇದ್ದೇ ಇರುತ್ತದೆ. ಮಕ್ಕಳನ್ನು ಬೇರೆ ಕಡೆ ಬಿಟ್ಟು ಸಾಕುವ ಗಟ್ಟಿ ಧೈರ್ಯವೂ ಅವರಿಗಿರುವುದಿಲ್ಲ. ಇದಕ್ಕೆ ಅವರ ಮನಸ್ಸು ಒಪ್ಪಿಗೆ ನೀಡುವುದಿಲ್ಲ. ಮೊಮ್ಮಕ್ಕಳನ್ನು ಜೋಪಾನವಾಗಿ ಸಾಕಿ ಸಂಸ್ಕರಿಸುವ ಅಜ್ಜ ಅಜ್ಜಿಗಳು ಖಾಲಿಯಾಗಿರುವ ಕಾಲವಿದು. ಈಗಿನ ರ್‍್ಯಾಗಿಂಗ್ ಹಾಸ್ಟೆಲ್‌ಗಳಲ್ಲಿ ಎಳೆಯ ಮಕ್ಕಳನ್ನು ಬಿಟ್ಟು ಸಾಕುವುದು ಅಷ್ಟು ಕ್ಷೇಮವಲ್ಲ. ಹೀಗಾಗಿ, ವರ್ಗಾವಣೆಯ ಚಕ್ರದಲ್ಲಿ ಸಿಲುಕಿದ ಪೋಷಕರು ಮಕ್ಕಳನ್ನು ಬಗಲಲ್ಲಿ ಇರಿಸಿಕೊಂಡೇ ಓಡಾಡುತ್ತಾರೆ. ಇಂಥ ಸುಳಿಯ ಕುಟುಂಬದಲ್ಲಿ ಸಿಕ್ಕವನು ರಾಜು.

‘‘ನಾನೊಬ್ಬಳೇ ಏನು ಮಾಡಲಿ, ಗಂಡ, ಮನೆ, ಕಚೇರಿ, ಮಕ್ಕಳನ್ನೆಲ್ಲಾ ಏಕಕಾಲದಲ್ಲಿ ಹೇಗೆ ನಿಭಾಯಿಸಲಿ? ಮಗನಿಗೆ ಒಳ್ಳೆ ಮನಶಾಸ್ತ್ರಜ್ಞರ ಹತ್ತಿರ ತೋರಿಸೋಣ ಅಂದ್ರೂ ಮನೆಯಲ್ಲಿ ಯಾರೂ ಒಪ್ಪುತ್ತಿಲ್ಲ. ಹೀಗೆಲ್ಲಾ ಮಾಡಿದರೆ ವಂಶಕ್ಕೆ ಕೆಟ್ಟ ಹೆಸರು ಬರುತ್ತೆ ಅಂತ ವಾದಿಸುತ್ತಾರೆ. ‘ಅವನಿಗೇನಾಗಿದೆ ಧಾಡಿ. ನಿನ್ನ ಪ್ರೀತಿ ಹೆಚ್ಚಾಗಿ ಅವನು ಹಾಳಾಗಿ ಹೋಗಿದ್ದಾನೆ’ ಅಂತ ಹಂಗಿಸುತ್ತಾರೆ. ಥೂ, ಯಾವ ಶತ್ರುವಿಗೂ ಇಂಥ ಅವಿವೇಕಿ ಕುಟುಂಬಗಳ ಸಂಬಂಧ ಸಿಗಬಾರದಪ್ಪಾ’’ ಎಂದು ಮೀನಾ ಒಬ್ಬರೇ ರೋಧಿಸು ತ್ತಿದ್ದರು. ತೀವ್ರ ಒತ್ತಡಕ್ಕೆ ಒಳಗಾದರು. ಸದಾ ಮಗನನ್ನು ಹೀಯಾಳಿಸುತ್ತಾ, ಹೆಂಡತಿಯ ಕರ್ತವ್ಯಗಳಲ್ಲಿ ಹುಳುಕುಗಳನ್ನು ಹುಡುಕುತ್ತಾ, ವಿರೋಧ ಪಕ್ಷದ ನಾಯಕನಂತೆ ವರ್ತಿಸುವ ಗಂಡನನ್ನು ಕಟ್ಟಿಕೊಂಡ ಮೀನಾ ವಿಲಿವಿಲಿ ಒದ್ದಾಡತೊಡಗಿದರು.

ರಾಜು ಮೂರನೇ ಕ್ಲಾಸಿನಲ್ಲಿರುವಾಗ ಮೀನಾ ಅವರ ಕರುಳಿನಲ್ಲಿ ಮತ್ತೊಂದು ಜೀವ ರೂಪು ತಳೆದಿತ್ತು. ಅಂದಿನಿಂದ ಸದಾ ಅಮ್ಮನ ಪಕ್ಕ ಮಲಗುವ ರಾಜು, ಬೇರೆ ಕಡೆ ಮಲಗುವ ಪ್ರಸಂಗ ಬಂತು. ತಾಯಿಯ ಸಂಪರ್ಕದಿಂದ ಹೀಗೆ ದೂರವಾಗುವುದು ರಾಜುವಿಗೆ ಇಷ್ಟವಿರಲಿಲ್ಲ. ಹೀಗಾಗಿ ಅವನು ಬಾಯಿಬಿಟ್ಟು ಕೇಳಿಯೇ ಬಿಟ್ಟ. ‘ಯಾಕಮ್ಮ ನನ್ನ ದೂರ ಮಾಡ್ತಿದ್ದೀಯಾ’ ಎಂದು. ‘ಇಲ್ಲ ಕಂದ ಇನ್ನೊಂದು ಪಾಪು ನನ್ನ ಹೊಟ್ಟೆ ಯಲ್ಲಿದೆ. ನೀನು ಮಲಗಿದ್ದಾಗ ಅಕಸ್ಮಾತ್ ಕಾಲಲ್ಲಿ ಒದ್ದರೆ ಅದಕ್ಕೆ ನೋವಾಗುತ್ತಲ್ವ? ಅದಕ್ಕೆ ಮರಿ’ ಎಂದು ಗಲ್ಲ ಹಿಡಿದು, ಕೆನ್ನೆಗೆ ಮುತ್ತು ಕೊಟ್ಟು ಹೇಳಿದರು.

ತೀರಾ ಗೊಂದಲದಲ್ಲಿದ್ದ ರಾಜು ‘ಅಮ್ಮಾ ಮತ್ತೊಂದು ಚಿಣ್ಣಮರಿ ಬೇಡಮ್ಮ. ಅದು ಹೊಟ್ಟೆಲೇ ಇರಲಿ ಬಿಡಮ್ಮ.  ಅದು ಈಚೆ ಬಂದ್ರೆ ನೀನು ನನ್ನ ದೂರ ಮಾಡ್ತಿಯಲ್ಲಮ್ಮ’ ಎಂದು ಅಳುತ್ತಾ ಕುಳಿತುಬಿಟ್ಟ. ‘ಇಲ್ಲ ಚಿನ್ನಾ. ನಿನ್ನನ್ನ ಹಿಂದೆ ಹೆಂಗೆ ನೋಡ್ಕೋತಿ ದ್ದನೋ ಹಂಗೆ ನೋಡ್ಕೋತೀನಿ’ ಎಂದು ಮೀನಾ ಸಮಾಧಾನ ಹೇಳಿದರು. ಆದರೂ ರಾಜುಗೆ ಇದು ಇಷ್ಟವಾಗಲಿಲ್ಲ. ಜಗತ್ತಿನಲ್ಲಿ ತನ್ನನ್ನು ಪ್ರೀತಿಸುವ ಏಕಮಾತ್ರ ಜೀವ ಎಂದರೆ ಅಮ್ಮಾ. ಅವಳೂ ದೂರ ಮಾಡಿದರೆ ನಾನೇಕೆ ಬದುಕಬೇಕು ಎಂದು ರಾಜು ಚಿಂತಿಸತೊಡಗಿದ. ತಾಯಿಯಿಂದ ದೂರವಾಗುವುದು ಅವನಿಗೆ ಇಷ್ಟವಿರಲಿಲ್ಲ.

ರಾಜು ತಮ್ಮನಾಗಿ ಬಂದ ಮನೋಹರ ಓದಿನಲ್ಲಿ ಚುರುಕಾಗಿದ್ದ. ನಡವಳಿಕೆಯಲ್ಲಿ ಸಹಜವಾಗಿದ್ದ. ಶಾಲೆ ಬಯಸುವ ಬಾಯಿಪಾಠದಲ್ಲಿ, ಪರೀಕ್ಷೆ, ಮಾರ್ಕ್ಸ್‌ ಕಾರ್ಡ್‌ಗಳಲ್ಲಿ ಆತ ಮುಂದಿದ್ದ. ರಾಜು, ಮನೋಹರ ಇಬ್ಬರೂ ಒಂದೇ ಶಾಲೆಗೆ ಹೋಗುತ್ತಿದ್ದರು. ಒಂದು ಕಡೆ ಮನೋಹರ ಭೇಷ್ ಎನಿಸಿಕೊಂಡು ಬಂದರೆ, ರಾಜು ಎಲ್ಲರಿಂದ ಉಗಿಸಿಕೊಂಡು, ಮುಖ ಸಪ್ಪೆ ಮಾಡಿಕೊಂಡು ಖಿನ್ನನಾಗಿ ಮನೆಗೆ ಬರುತ್ತಿದ್ದ. ಇದರ ಜತೆಗೆ ಅಪ್ಪ ಮನೆಯಲ್ಲಿ ಇಬ್ಬರೂ ಮಕ್ಕಳ ನಡುವೆ ಇರುವ ವ್ಯತ್ಯಾಸಗಳನ್ನು ಎತ್ತಾಡಿಸತೊಡಗಿದರು. ‘ಓದೋದಕ್ಕೆ ನಿನಗೇನಾಗಿದೆಯೋ ರೋಗ, ನಿನ್ನಂಥ ದಂಡಪಿಂಡ ಯಾಕಾದ್ರೂ ಹುಟ್ಟಿದೆಯೋ, ಆ ಮನೋಹರನ್ನ ನೋಡಿ ಕಲಿಯೋ? ಅವನ ಕಾಲಕೆಳಗೆ ನುಸುಳು. ನಿನ್ನ ಲದ್ದಿ ತಲೆಗೆ ಅವನ ಬುದ್ಧಿನಾದ್ರೂ ಮೆತ್ಕೊಳ್ಳಲಿ?’ ಎಂದು ಕಾಡತೊಡಗಿದರು. ಮನೋಹರ ಹುಟ್ಟಿದ ಮೇಲೆ ರಾಜು ಮನೆಯ ಕಸವಾಗಿ ಹೋಗಿ ಬಿಟ್ಟ. ‘ಈ ಮನೋಹರ ಹುಟ್ಟದಿದ್ದರೇ ಚೆನ್ನಾಗಿತ್ತು. ಹಾಳಾದವನು ಹುಟ್ಟಿ ನನ್ನ ದಡ್ಡತನವನ್ನು ಇನ್ನೂ ಎತ್ತೆತ್ತಿ ತೋರಿಸುತ್ತಿದ್ದಾನಲ್ಲಾ?’ ಎಂದು ರಾಜು ಕುದಿಯತೊಡಗಿದ. ನಂಬಿದ್ದ ಅಮ್ಮನ ಪ್ರೀತಿಯನ್ನೂ ಮನೋಹರ ಕಸಿದುಕೊಂಡ ಕಾರಣ ರಾಜು ಕಣ್ಣಲ್ಲಿ ಮನೋಹರ ವಿಲನ್ ಆಗಿಬಿಟ್ಟ.

ರಾಜು ಖಿನ್ನತೆಗೆ ಹೆದರಿದ ಮೀನಾ ರಾಜುವನ್ನು ಕರೆದುಕೊಂಡು ಅನೇಕ ಡಾಕ್ಟರ್‌ಗಳ ಬಳಿ ಅಲೆದಾಡಿದರು. ಕೌನ್ಸಿಲಿಂಗ್ ಮಾಡಿಸಿದರು. ಅಷ್ಟರಲ್ಲಾಗಲೇ ರಾಜು ತೀವ್ರ ಖಿನ್ನತೆಯ ಕಡೆ ವಾಲಿದ್ದ. ಹೆದರಿದ ಮೀನಾ ಮಗನ ಆರೋಗ್ಯ ಮತ್ತು ಓದಿಗಾಗಿ ಬ್ಯಾಂಕಿನಿಂದ ಮೂರು ವರ್ಷಗಳ ಸಬಾಟಿಕಲ್ ರಜೆ ಪಡೆದರು. ‘ನನ್ನ ಮಗ ದಡ್ಡನಲ್ಲ. ನಾನು ಕುಡಿಸಿದ ಹಾಲು ಕಳಪೆಯಲ್ಲ. ನನ್ನ ರಾಜುವನ್ನು ಮತ್ತೆ ಎಲ್ಲರಂತೆ ಮಾಡುತ್ತೇನೆ’ ಎಂದು ಪಣತೊಟ್ಟ ಅವರು ರಾಜು ಏಳಿಗೆಗೆ ಟೊಂಕಕಟ್ಟಿ ನಿಂತರು. ತಾವೇ ಟೀಚರ್ ಆದರು. ಮೂರು ವರ್ಷದ ಕಲಿಕೆ, ಆರೈಕೆಯ ದೆಸೆಯಿಂದ ರಾಜು ಎಸ್ಸೆಸೆಲ್ಸಿ ಪೂರೈಸಿಕೊಂಡ. ಇನ್ನು ನನ್ನ ಮಗ ಮುಂದೆ ದಡ ಸೇರುತ್ತಾನೆ ಎಂಬ ನಂಬಿಕೆ ಹುಟ್ಟಿಸಿಕೊಂಡ ತಾಯಿ ಮೀನಾ ಮತ್ತೆ ಕೆಲಸಕ್ಕೆ ಮರಳಿದರು. ರಾಜುವಿನ ವಿಷಯದಲ್ಲಿ ಎಂದಿನಂತೆ ಅಪ್ಪನ ಅಸಡ್ಡೆ ಮುಂದುವರೆದಿತ್ತು.

ಮೀನಾ ಮನೆಯಲ್ಲಿ ಇಲ್ಲದಾಗ ಅಪ್ಪನ ವಾಗ್ದಾಳಿ ನಡೆಯುತ್ತಿತ್ತು. ಇನ್ನೂ ಹೀಗೆ ಬಿಟ್ಟರೆ ಗಂಡ ಮಾತಿನಲ್ಲೇ ಮಗನನ್ನು ಇರಿದು ಕೊಲ್ಲುತ್ತಾರೆಂದು ಭಾವಿಸಿದ ಮೀನಾ ರಾಜುವನ್ನು ಕರೆದುಕೊಂಡು ಹೋಗಿ ಕರಾವಳಿಯ ಪ್ರತಿಷ್ಠಿತ ವಸತಿ ಕಾಲೇಜೊಂದಕ್ಕೆ ಸೇರಿಸಿ ಬಂದರು. ಅಲ್ಲಿ ಇರಲು ಇಷ್ಟವಿಲ್ಲದಿದ್ದರೂ ರಾಜು ಅಮ್ಮನ ಬಲವಂತಕ್ಕೆ ಸೇರಿಕೊಂಡ. ಅಮ್ಮನ ದೆಸೆಯಿಂದ ಒಂದಿಷ್ಟು ಓದಿನಲ್ಲಿ ಚಿಗುರಿಕೊಂಡಿದ್ದ ರಾಜು ಅಲ್ಲಿ ಮತ್ತೆ ಇಳಿಮುಖನಾಗತೊಡಗಿದ. ಬುದ್ಧಿವಂತ ಹುಡುಗರ ಸ್ವರ್ಗವಾಗಿದ್ದ ಆ ಕಾಲೇಜಿನಲ್ಲಿ ರಾಜು ದಡ್ಡತನ ಮೊದಲ ಪರೀಕ್ಷೆಯಲ್ಲೇ ಬಯಲಾಗಿ ಹೋಯಿತು. ಅಲ್ಲಿ ಅವನಿಗೆ ಯಾವ ಗೆಳೆಯರೂ ಹುಟ್ಟಲಿಲ್ಲ. ಬದಲಿಯಾಗಿ ಪೀಡಿಸಿ, ಕಾಡಿಸಿ, ಗೋಳಾಡಿಸಿ, ರ್‍್ಯಾಗಿಂಗ್ ಮಾಡುವ ಸಿಂಗಳೀಕರ ಕೈಗೆ ರಾಜು ಸಿಕ್ಕಿಕೊಂಡ. ರಾಜು ಜೀವನ ಬರ್ಬರವಾಗತೊಡಗಿತು.

ಮೀನಾ ಮೊದಲ ಸಲ ಮಗನ ನೋಡಲು ಹೋದಾಗ ರಾಜು ಕೈ ಮೇಲೆ ಬ್ಲೇಡಿನಲ್ಲಿ ಗೀಚಿಕೊಂಡ, ಮುಖ ಪರಚಿಕೊಂಡ, ಹಸಿ ಗಾಯಗಳನ್ನು ಕಂಡು ಕಂಗಾಲಾದರು. ತನ್ನ ಮಗ ದಾರಿ ತಪ್ಪಿರುವುದು ಅವರ ಅರಿವಿಗೆ ಬಂತು. ಬಟ್ಟೆ ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದ ರಾಜು ನೀಟಾಗಿ ಬಿಡಿಸಿದ ಚಿತ್ರಗಳನ್ನಷ್ಟೇ  ಜೋಡಿಸಿಟ್ಟಿದ್ದ. ಮೀನಾ ಅಳುತ್ತಾ ಹೇಳಿದರು. ‘ರಾಜು ಮರಿ ನಿನಗೆ ಈ ಓದು ಇಷ್ಟವಿಲ್ಲದಿದ್ದರೆ ಬಿಟ್ಟು ಬಿಡು.  ಚಿತ್ರ ಬಿಡಿಸುವ ಬಿ.ಎಫ್.ಎ. ಕೋರ್ಸ್ ಅದ್ರೂ ಸೇರು. ನಿನ್ನ ಜೊತೆ ನಾನಿದ್ದೇನೆ. ಅಪ್ಪನ ಮಾತನ್ನೆಲ್ಲಾ ಮರೆತು ಬಿಡು’ ಎಂದು ಮೀನಾ ಅಂಗಲಾಚಿದರು. ಆಗ ರಾಜು ಹೇಳಿದ್ದು ಒಂದೇ ಮಾತು. ‘ನನ್ನ ಇಲ್ಲಿಂದ ಮೊದಲು ಕರ್ಕೊಂಡು ಹೋಗು’. 


ಹೀಗಾಗಿ ರಾಜು ಮತ್ತೆ ಮನೆ ಸೇರಿದ. ಅಪ್ಪನ ಬೈಗುಳ ನಿಲ್ಲಲಿಲ್ಲ. ಅಮ್ಮನ ಬಲವಂತಕ್ಕೆ ಕಂಪ್ಯೂಟರ್ ಕ್ಲಾಸ್ ಸೇರಿದ. ಅಲ್ಲಿ ಅವನಿಗೆ ಸಿಗರೇಟ್ ಸೇದುವ, ಸಂಜೆಯಾದರೆ ಕುಡಿದು ಮೋಜು ಮಾಡುವ ಗೆಳೆಯರ ಗ್ಯಾಂಗ್ ಸಿಕ್ಕಿತು. ಈಗ ರಾಜು ಮನೆಯಲ್ಲಿನ ಕಾಸನ್ನು ಎಗರಿಸಿತೊಡಗಿದ. ಆತ ರಾತ್ರಿ ಬಂದು ಮಲಗಿದರೆ ಬೆಳಿಗ್ಗೆ ಹತ್ತು ಗಂಟೆಯಾದರೂ ಏಳುತ್ತಿರಲಿಲ್ಲ. ಯಾರು ಬೈದರೂ ಕ್ಯಾರೆ ಎನ್ನುತ್ತಿರಲಿಲ್ಲ. ‘ನಿನಗೆ ತಿಂಡಿ ಮಾಡಿಟ್ಟಿದ್ದೀನಿ. ಎದ್ದು ಮುಖ ತೊಳೆದು ಸ್ನಾನ ಮಾಡಿ ತಿನ್ನು ಮರಿ’ ಎಂದು ಹೇಳಿ ಹೋದ ತಾಯಿ ಸಂಜೆ ವಾಪಸ್ಸು ಬಂದಾಗಲೂ ರಾಜು ಮಲಗೇ ಇರುತ್ತಿದ್ದ. ಇಟ್ಟ ತಿಂಡಿ ಹಳಸಿ ಹೋಗಿರುತ್ತಿತ್ತು. ನಿದ್ರೆ, ನೆಮ್ಮದಿ ಇಲ್ಲದೆ, ಯಾರ ಮಾತಿನ ನೇವರಿಕೆಗೂ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ರಾಜು ಕೊನೆಗೆ ಪೂರಾ ಖಿನ್ನತೆಗೆ ಒಳಗಾದ. ಪರೀಕ್ಷಿಸಿದ ವೈದ್ಯರು ಇವನಿಗೆ ಸ್ಕಿಜಾಯಿರ್ಡ್್ ಸಮಸ್ಯೆ ಇದೆ ಎಂದರು. ಔಷಧಿ, ಮಾತ್ರೆಗಳ  ಜಾಲಕ್ಕೆ ಬಂದು ನಿಂತ ರಾಜು ದಿನೇದಿನೇ ಕರಗತೊಡಗಿದ.

ಒಂದು ದಿನ ಮನೆಗೆ ರಾಜು ಬೀಗ ಹಾಕಿಕೊಂಡು ಎಲ್ಲೋ ಹೊರಗೆ ಹೋಗಿದ್ದ. ಬ್ಯಾಂಕಿನಿಂದ ಬಂದ ಮೀನಾ, ಶಾಲೆಯಿಂದ ಬಂದ ಮನೋಹರ ಅವನಿಗಾಗಿ ಕಾದರು. ಅಮ್ಮ ಮನೋಹರನ ಬ್ಯಾಗು ತೆಗೆದು ಕಟ್ಟೆ ಅಂಗಳದಲ್ಲೇ ಹೋಮ್ ವರ್ಕ್ಸ್ ಮಾಡಿಸತೊಡಗಿದರು. ರಾತ್ರಿಯಾದರೂ ರಾಜು ಪತ್ತೆ ಇರಲಿಲ್ಲ. ಶಂಕೆಗೊಂಡು ಮನೆ ಕದ ಮುರಿದು ಒಳಗೆ ಹೋಗಿ ನೋಡಿದರೆ ರಾಜು ಹಗ್ಗದಲ್ಲಿ ನೇತಾಡುತ್ತಿದ್ದ. ಅವನ ಕಳಚಿದ ನಾಲಿಗೆ ಮೇಲೆ ಹಿತ್ತಲ ಮಾವಿನ ಮರದಲ್ಲಿ ಗೂಡು ಕಟ್ಟಿದ ಗೊದ್ದಗಳು ಸಾಲುಗಟ್ಟಿದ್ದವು. ಶಾಲೆಯ ಕಲಿಕೆಯೇ ಜೀವನ, ಉತ್ತಮ ಅಂಕಗಳೇ ಆಸ್ತಿ ಎಂದು ಭಾವಿಸಿರುವ ಈ ಜಗತ್ತಿನಲ್ಲಿ ರಾಜು ಥರದ ಮಕ್ಕಳು ಬದುಕುವುದಾದರೂ ಹೇಗೆ? ನನ್ನ ಮಗನ ನಾನೇ ಕೊಂದೆ ಎಂದು ಹಂಬಲಿಸುವ ಈ ತಾಯಿಗೆ ಸಮಾಧಾನ ಹೇಳುವುದಾದರೂ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT