ADVERTISEMENT

ಹೊಡೆತದ ಪಾಠಗಳು

ಕಲೀಮ್ ಉಲ್ಲಾ
Published 1 ಅಕ್ಟೋಬರ್ 2014, 19:30 IST
Last Updated 1 ಅಕ್ಟೋಬರ್ 2014, 19:30 IST
ಹೊಡೆತದ ಪಾಠಗಳು
ಹೊಡೆತದ ಪಾಠಗಳು   

ನಾವೆಂದೂ ಶಾಲೆಗೆ ಮರ್ಯಾದೆಯಿಂದ ಹೋದವರಲ್ಲ. ಸಣ್ಣಪುಟ್ಟ ಬೆದರಿಕೆ ಮಾತಿಗಳಿಗೆ ಬಗ್ಗಿದವರೂ ಅಲ್ಲ. ದಿನಾ ಒಂದಿಷ್ಟು ಲಾತ ಇಲ್ಲಾ ಗೂಸಗಳು ವರ್ತನೆಯಾಗಿ ಬೀಳಲೇಬೇಕಿತ್ತು. ಕೊನೆಗೊಂದಿಷ್ಟು ಬೈಗುಳವಾದರೂ ಸಿಗಬೇಕಿತ್ತು. ಇಷ್ಟಿಲ್ಲದಿದ್ದರೆ ಬಗ್ಗುವ ಗಿರಾಕಿಗಳಲ್ಲ ನಾವು. ಶಾಲೆಗೆ ಹೋಗ್ತೀಯೋ ಇಲ್ಲಾ ಬೇಕೋ ಎಂದು  ಎಗರಿ ಬಂದು ಫುಟ್ಬಾಲಿನಂತೆ ಒದೆಯುವ ಅಪ್ಪ, ಗದರಿಸಿ ಹೇಳುವ ನನ್ನಣ್ಣ ಇವರಿಬ್ಬರು ಊರಲ್ಲಿ ಇಲ್ಲವೆಂದರೆ ಅವತ್ತು ಚಕ್ಕರ್ ಖಾಯಂ ಅಂತಾನೇ ಲೆಕ್ಕ. ನಾವೊಲ್ಲದ ಈ ಕೆಂಡದ ಮುಸುಡಿಗಳೆರಡು ಮನೆಯಲ್ಲಿದ್ದ ದಿನ ಅವರ ಮೇಲೆ ವಿಪರೀತ ಸಿಟ್ಟು ಬರುತ್ತಿತ್ತು. ಮನಸ್ಸಲ್ಲೇ ಬೈದುಕೊಂಡು ಪುಸ್ತಕಚೀಲ ಹೆಗಲೇರಿಸಿಕೊಳ್ಳುತ್ತಿದ್ದೆವು. ಸಾವಿನ ಮನೆಗೆ ಹೋಗುವವರ ರೀತಿ  ರಸ್ತೆಯಲ್ಲೇ ರೋಧಿಸುತ್ತಾ ಹೋಗುತ್ತಿದ್ದೆವು.

ಇನ್ನು ಶಾಲೆಗೆ ರಜೆ ಎಂದರೆ ಹಬ್ಬವೋ ಹಬ್ಬ; ಸಡಗರವೋ ಸಡಗರ. ಶಾಲೆಗೆ ರಜೆ ಇದೆ ಎಂದು ಗೊತ್ತಾದರೆ ಇಂದಿಗೂ ಹುಡುಗರು ಅತೀವವಾಗಿ ಸಂಭ್ರಮಿಸುತ್ತಾರೆ. (ಪಾಠ ಹೇಳುವ ಮೇಷ್ಟ್ರುಗಳೂ ಈ ವಿಷಯದಲ್ಲಿ ಕಮ್ಮಿ ಇಲ್ಲ). ನಾನು ಪಾಠ ಮಾಡುತ್ತಿರುವಾಗ ಅಟೆಂಡರ್ ಯಾವುದೇ ಮೆಮೊ ಹಿಡಿದು ತಂದರೂ ಮಕ್ಕಳದನ್ನು ರಜೆಯ ಸಂದೇಶವೆಂದೇ ಭಾವಿಸುತ್ತಾರೆ. ರಜೆಯ ಸೂಚನೆ ಅದಲ್ಲವೆಂದು ತಿಳಿದಾಗ ಬೇಸರದಿಂದ ಟುಸ್ ಪಟಾಕಿಗಳಾಗುತ್ತಾರೆ. ಸಂಜೆ ಶಾಲೆಯಿಂದ ಓಡೋಡಿ ಬರುವ ನನ್ನಿಬ್ಬರು ಮಕ್ಕಳು ರಸ್ತೆಯಲ್ಲಿ ಸಂತೋಷದಿಂದ ಕುಣಿದುಕೊಂಡು ಬರುತ್ತಿದ್ದಾರೆಂದರೆ ಅದರರ್ಥ ನಾಳೆ  ಶಾಲೆಗೆ ರಜೆ. ಅದೇನೋ ಗೊತ್ತಿಲ್ಲ; ರಜಾ ಎಂದರೆ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಹೀಗೇ ಸಂಭ್ರಮಿಸುತ್ತಾರೆ.

ನಾನು ಮಾತ್ರ ರಜೆಯ ಜೊತೆಗೆ ಚಕ್ಕರ್ ದಿನಗಳನ್ನೂ ಕೂಡಿಸಿಕೊಂಡಿದ್ದೆ. ಹೀಗಾಗಿ ನನ್ನ ಕನಸಿನ ಶಾಲೆಗೆ ಯಾವತ್ತೂ ಸುದೀರ್ಘ ರಜೆಯೇ ಇರುತ್ತಿತ್ತು. ನನ್ನ ಪ್ರಕಾರ ವಾರದಲ್ಲಿ ಒಂದೆರಡು ದಿನ ಮಾತ್ರ ಶಾಲೆ ನಡೀತ್ತಿತ್ತು. ಹೀಗಾಗಿ, ನಾನು ಆ ಪ್ರಕಾರವಾಗೇ ಹೋಗುತ್ತಿದ್ದೆ. ಹುಡುಗರು ನನ್ನ ‘ಲೇ ಅಮವಾಸ್ಯೆ ಹುಣ್ಣಿಮೆ’ ಎಂದು ಚುಡಾಯಿಸುತ್ತಿದ್ದರು. ಬಹು ದಿನಗಳ ತನಕ ಈ ಮಾತಿನ ಅರ್ಥ ಗೊತ್ತಿಲ್ಲದ ನಾನು ಅದನ್ನು ಗೆಳೆಯರ ಹೊಗಳಿಕೆ ಎಂದೇ ಭಾವಿಸಿದ್ದೆ.

ನಾವು ಶಾಲೆಗೆ ಹೋಗದಂತೆ ಬಳ್ಳಿ ಬಸ್ಸಿನ ಆಟ, ಲಗೋರಿ, ಚಿನ್ನಿದಾಂಡು, ಮರಕೋತಿ ಆಟಗಳು ನಮ್ಮನ್ನು ಕಟ್ಟಿಹಾಕಿಬಿಟ್ಟಿದ್ದವು. ಜೊತೆಗೆ, ಜೀರುಗುಂಬೆ ಹಿಡಿದು ಹಾರಿಸುವುದು, ಓತಿಕ್ಯಾತವನ್ನು ತೆಂಗಿನ ಗರಿಯ ಗಾಳದಲ್ಲಿ ಹಿಡಿದು ಕುಣಿಸಾಡುವುದು, ಓತಿಕ್ಯಾತಕ್ಕೊಂದು ಬೀಡಿ ಸೇದಿಸಿ ಅದು  ನಶೆಯಿಂದ ಎಗರಾಡುವುದು ನೋಡಿ ಖುಷಿ ಪಡುವುದು, ಹಳ್ಳದಲ್ಲಿ ಮೀನು ಹಿಡಿಯುವುದು, ಹಳ್ಳದ ಹಳುವಿನಲ್ಲಿ ಸಿಗುವ ಕಬಳಿ ಹಣ್ಣು. ಕಾರೆ ಹಣ್ಣು, ಬೋರೆಹಣ್ಣು ತಿನ್ನುವುದು; ಮದುವೆ ಮನೆಗಳಿಗೆ ಹೋಗಿ ಕನ್ನಡ ಸಿನಿಮಾಗಳ ಪೂರ್ತಿ ಚಿತ್ರಕಥೆಯನ್ನು ಕೇಳುವುದು, ಅವಕಾಶ ಸಿಕ್ಕರೆ ಅಲ್ಲೇ ಬಿಟ್ಟಿ ಊಟ ಬಾರಿಸುವ ಸಂಗತಿಗಳೇ ತುಂಬಾ ಹಿತವಾಗಿ ಕಾಣುತ್ತಿದ್ದವು. ಇವುಗಳ ನಡುವೆ ಶಾಲೆ ಪರಪ್ಪನ ಅಗ್ರಹಾರದ ಥರಹ ಕಾಣುತ್ತಿತ್ತು. ಇನ್ನು ಮೇಷ್ಟ್ರುಗಳೋ ಅಗಲ ಮುಖದ ಕತ್ತಿ ಹಿಡಿದು ಚಾಮುಂಡಿ ಬೆಟ್ಟದಲ್ಲಿ ನಿಂತ ಮಹಿಷಾಸುರನಂತೆ ಕಾಣುತ್ತಿದ್ದರು. 

ಮೇಷ್ಟ್ರುಗಳು ಕಲಿಸುವುದಕ್ಕಿಂತ ಹೆಚ್ಚಾಗಿ, ಕಠಿಣ ಶಿಕ್ಷೆಯನ್ನು ಮಕ್ಕಳ ಮೇಲೆ ಜಾರಿಗೆ ತರುವ ವಿಷಯದಲ್ಲೇ ಹೆಚ್ಚು ತರಬೇತಿ ಪಡೆದು ಬಂದವರಂತೆ ಕಾಣುತ್ತಿದ್ದರು. ಇವರ ಭಯಕ್ಕರ್ಧ ಹೆದರೇ ನಾವುಗಳು ಕ್ಲಾಸಿಗೆ ಹೋಗುತ್ತಿರಲಿಲ್ಲ. ಇನ್ನು ಬಡವರ ಮನೆಯ ಮಕ್ಕಳೆಂದರೆ ಅವು ಹೊಡೆತ ತಿನ್ನಲು ಹುಟ್ಟಿದವು ಎಂಬ ಭಾವನೆಯೂ ಆಗ ಕೆಲವರಿಗಿತ್ತು. ನೆಟ್ಟಗೆ ತೊಳೆಯದ ನಮ್ಮ ಮುಸುಡಿ ಕಂಡ ತಕ್ಷಣ ಅವರ ಪಿತ್ಥ ನೆತ್ತಿಗೇರುತ್ತಿತ್ತು. ನಮ್ಮ ಜುಜುಬಿ ಕಾರಣಗಳನ್ನೇ ರಾಷ್ಟ್ರೀಯ ಸಮಸ್ಯೆಗಳ ರೀತಿ ಹಿಗ್ಗಿಸಿ ನೋಡಿ ಬಡಿಯುತ್ತಿದ್ದರು. ಹೀಗಾಗಿ ಐದನೇ ತರಗತಿಯ ತನಕ ನಮಗೆ ಎಲ್ಲಾ ಗುರುಗಳೂ ಭಯೋತ್ಪಾದಕರಂತೆಯೇ ಕಾಣುತ್ತಿದ್ದರು.

ಆರನೆಯ ತರಗತಿಯ ನಂತರ ಮಾನವೀಯತೆಯ ಪ್ರತಿರೂಪಗಳಂತಿರುವ ಒಂದಿಬ್ಬರು ಮೇಷ್ಟ್ರುಗಳು ನಮ್ಮೆಲ್ಲರ ಜೀವನದಲ್ಲಿ ಮೂಡಿ ಬಂದರು. ದೇವರು ಅವರನ್ನು ನಮ್ಮನ್ನು ರಿಪೇರಿ ಮಾಡಲೆಂದೇ ಈ ಭೂಮಿಗೆ ಕಳಿಸಿದಂತಿತ್ತು. ಹಿಂದಿನ ಮೇಷ್ಟ್ರುಗಳು ಸಣ್ಣ ಅಸಹನೆ, ದ್ವೇಷದಲ್ಲಿ ಆಯ್ದ ನಮ್ಮನ್ನಷ್ಟೇ ಹೊಡೆಯುತ್ತಿದ್ದರು. ನಮ್ಮನ್ನೆಂದೂ ಅವರು ಪ್ರೀತಿಸಲಿಲ್ಲ. ಹೊಸದಾಗಿ ಬಂದವರು ಮೊದಲು ನಮ್ಮ ಒಣ ತಲೆಗಳ ನೇವರಿಸಿದರು. ನಮ್ಮನ್ನು ಮುಟ್ಟಿ ಮಾತಾಡಿಸಿದರು. ಪ್ರೀತಿಯಿಂದ ಪಾಠ ಹೇಳಿದರು. ಒಳ್ಳೇ ರೀತಿಯಲ್ಲಿ ತಿದ್ದಿ ಬುದ್ಧಿ ಹೇಳಿದರು. ಇದ್ಯಾವುದಕ್ಕೂ ನಾವು ಕೇರ್ ಮಾಡದೆ ಮೊಂಡಾಟ ಮಾಡಿದಾಗ ಮೊದಲು ಗದರಿಸಿದರು. ದ್ವೇಷವಿಲ್ಲದ ಬೆತ್ತದಲ್ಲಿ ಹೊಡೆದರು. ಹೀಗಾಗಿ ನಮಗವರ  ಮೇಲೆ ಪ್ರೀತಿ, ಗೌರವಗಳು ಮೂಡಿದವು. ಅವರ ನುಡಿ ವೇದವಾಕ್ಯವೆನಿಸತೊಡಗಿತು. ಮೊದಲು ಪ್ರೀತಿಸಿ, ಜೊತೆಗೆ ಕಲಿಸಿ, ಕಲಿಯದಿದ್ದರೆ ಸಣ್ಣಗೆ ಶಿಕ್ಷಿಸಿ, ಯಾಕೆ ಶಿಕ್ಷೆ ಕೊಟ್ಟೆ ಎಂಬುದನ್ನು ವಿವರಿಸಿ, ಪಾಠದಲ್ಲಿ ಮಮತೆಯನ್ನು ವಿಸ್ತರಿಸುವುದೇ ನನ್ನ ಪ್ರಕಾರ ಗುರುವೊಬ್ಬನು ಕಲಿಸುವ ರೀತಿ. ಇದೆಲ್ಲಾ ಸಿಕ್ಕ ಮೇಲೆ ನಾವು ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡೆವು. 

ಆರನೇ ತರಗತಿಯ ತನಕ ನಮ್ಮನ್ನು ಹಿಂದಿನ ಗುರುಗಳು ಯಾವ ಆಧಾರದ ಮೇಲೆ ಪಾಸು ಮಾಡಿದರೋ? ಆ ದೇವರಿಗೇ ಗೊತ್ತು! ಯಾಕೆಂದರೆ ಕನ್ನಡ ಅಕ್ಷರ ಮಾಲೆ ಪೂರ್ಣವಾಗಿ ಬರೆಯುವುದಾಗಲೀ, ಹತ್ತರ ತನಕದ ಮಗ್ಗಿ ಒದರುವುದಾಗಲೀ ನಮಗೆ ಅಕ್ಷರಶಃ ಬರುತ್ತಲೇ ಇರಲಿಲ್ಲ. ಇನ್ನು ಕಾಗುಣಿತ! ಹಾಗಂದರೇನೆಂಬುದೇ ನಮಗೆ ಗೊತ್ತಿರಲಿಲ್ಲ. ಮಗ್ಗಿ ಪುಸ್ತಕ ಇದ್ದೀತಾದರೂ ಅದರಲ್ಲಿನ ಚಿತ್ರಗಳನ್ನು ನೋಡಿ ಸಂತೃಪ್ತಿ ಪಡುತ್ತಿದ್ದೆವು. ಅವರೇನು ಪರೀಕ್ಷೆ ಕೊಟ್ಟರೋ? ನಾವೇನು ಬರೆದವೋ? ಒಂದೂ ನೆನಪಿಲ್ಲ. ಇನ್ನು ಇಂಗ್ಲೀಷು, ಹಿಂದಿಯ ಭಾಷೆಯ ಕಥೆ ಹೇಳದಿರುವುದೇ ವಾಸಿ. ಏಕೆಂದರೆ ನಾನು ನೆಟ್ಟಗೆ ಕನ್ನಡ ಕಲಿತಿದ್ದೇ ಏಳನೇ ತರಗತಿಯಲ್ಲಿ.

ಇಂಗ್ಲೀಷು ಇವತ್ತಿಗೂ ಕಷ್ಟ. ಹಿಂದಿ ನಾನು ಕಲಿತೂ ಕಲಿಯದ ಭಾಷೆ. ತಿಂಗಳಲ್ಲಿ ಒಂದು ದಿನ ಬಂದು ಐದಾರು ಪಾಠ, ಏಳೆಂಟು ಪದ್ಯ ಒಟ್ಟಿಗೆ ಮುಗಿಸುತ್ತಿದ್ದ ನಮ್ಮ ಹಿಂದಿ ಮೇಷ್ಟ್ರಿಂದ ನಾವಾದರೂ ಎಷ್ಟು ಕಲಿಯಲು ಸಾಧ್ಯ. ಕೇಳಿದರೆ ಪ್ರಶ್ನೆ ಪತ್ರಿಕೆಯನ್ನು ಹಿಂದಿನಿಂದ ಬರೀತಾ ಬನ್ನಿ ಅದನ್ನೇ ಹಿಂದಿ ಅಂತಾರೆ ಎಂದು ತಮಾಷೆ ಮಾಡಿ ಸುಮ್ಮನಾಗುತ್ತಿದ್ದರು.  ಹೈಸ್ಕೂಲಿಗೆ ಬಂದ ಮೇಲೂ ನಾಯಿಗೆ ಹೊಡೆದಂತೆ ಹೊಡೆದು ಸೇಡು ತೀರಿಸಿಕೊಳ್ಳುವ ನಾಲ್ಕೈದು ಗುರುಗಳು ಸಿಕ್ಕರು. ಇವರ ದೆಸೆಯಿಂದ ಮತ್ತೆ ಚಕ್ಕರ್ ಹೊಡೆಯುವುದು ಅನಿವಾರ್ಯವಾಗಿ ಹೋಯಿತು. ಶಾಲೆಗೆ ಚಕ್ಕರ್ ಸುತ್ತಿ ಸಿನಿಮಾ ನೋಡುವುದು, ರೈಲ್ವೇ ಸ್ಟೇಷನ್ನಿನಲ್ಲಿ ಕಾಲ ಕಳೆಯುವುದು, ಪುಕ್ಸಟ್ಟೆ ಮದುವೆ ಮನೆಗಳಿಗೆ ಹೋಗುವುದು ಅಭ್ಯಾಸವಾಗಿ ಹೋಗಿತ್ತು. ಅಪ್ಪನ ಹೊಡೆತ ತಿಂದ ಮೇಲೆ ಅನಿವಾರ್ಯವಾಗಿ ಶಾಲೆಯ ಮುಖ ನೋಡುತ್ತಿದ್ದೆ. ಅಪ್ಪ ಹೊಡೆಯುವ ವಿಷಯದಲ್ಲಿ ಎಂದೂ ತಾರತಮ್ಯ ಮಾಡಲಿಲ್ಲ. ಅಪ್ಪನ ದೂರಿಗೆ ತಲೆ ಹಾಕಿದ ಹೆಡ್ಮೇಷ್ಟರ ರೂಲು ದೊಣ್ಣೆಯೂ ನನ್ನ ಕೈಕಾಲುಗಳಿಗೆ ಸೆಟ್ಟಾಗಿ ಬಿಟ್ಟಿತು.  

ಅಪ್ಪ ಹೊಡೆಯುವ ವಿಷಯದಲ್ಲಿ ಎಂದೂ ಚೌಕಾಶಿ ತೋರಿಸಿದವರಲ್ಲ. ಮನೆಯಿಂದ ಶಾಲೆಯ ತನಕ ಥೇಟ್ ದನ ಹೊಡ್ಕೊಂಡು ಬರೋರ್ ಥರ ಬರ್‍ತಿದ್ರು. ರಸ್ತೆಯಲ್ಲಿ ಸಿಕ್ಕವರಿಗೆಲ್ಲಾ ನನ್ನ ಗುಣಗಾನ ನಿವೇದಿಸಿ ನೀವು ಹೊಡೀರಿ ಸ್ವಾಮಿ ಈ ನನ್ಮಗನಿಗೆ ಒಂದಿಷ್ಟು ಬುದ್ಧಿ ಬರಲಿ ಎಂದು ಹೊಡೆತಗಳಿಗೆ ಸಬ್ ಕಂಟ್ರಾಕ್ಟ್ ಕೊಡುತ್ತಿದ್ದರು. ಸದ್ಯ ರಸ್ತೆಯಲ್ಲಿ ಸಿಗುವ ಜನ ನಮ್ಮಪ್ಪನ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರುಗಳೇನಾದರೂ ನಮ್ಮಪ್ಪನ ಆಹ್ವಾನ ಹ್ಞೂ ಎಂದು ಒಪ್ಪಿಕೊಂಡಿದ್ದರೆ ನಾನು ಅವತ್ತೇ ಸತ್ತೇ ಹೋಗುತ್ತಿದ್ದೆ.

ಕೃಷಿ, ಕೂಲಿ, ಕಾರ್ಮಿಕರ ಮಕ್ಕಳಾದವರಿಗೆ ಬೀಳುವ ಹೊಡೆತಗಳ ರಭಸ ಬಲು ಜೋರಾಗಿರುತ್ತದೆ. ಗಟ್ಟಿಕೆಲಸ ಮಾಡುವ ಅವರ ಕೈಗಳು ಸಂಪೂರ್ಣವಾಗಿ ಮರಗಟ್ಟೇ ಹೋಗಿರುತ್ತವೆ. ಅವರು ಬರಿಗೈಯಲ್ಲಿ ಹೊಡೆದರೂ ಹಾಳಾದವು ಕಲ್ಲಿನಲ್ಲಿ ಜಜ್ಜಿದಷ್ಟು ಎಫೆಕ್ಟ್ ಕೊಡುತ್ತದೆ. ರೈತರ ಮಕ್ಕಳಾಗಿ ಬೆಳೆದವರಿಗೆ ಈ ಹೊಡೆತಗಳು ಧಾರಾಳವಾಗಿಯೇ ಸಿಕ್ಕಿರುತ್ತದೆ. ಇನ್ನು ನಮ್ಮಪ್ಪ ಹೇಳಿ ಕೇಳಿ ಕುಲುಮೆ ಕೆಲಸದವನು. ಅವನ ಕೈಗಳೋ ಪಕ್ಕಾ ಕಬ್ಬಿಣ. ಇಪ್ಪತ್ತು ವರ್ಷ ಕಬ್ಬಿಣ ಚಚ್ಚಿ ಪಳಗಿದ ಕೈಗಳವು. ಅಪ್ಪನ ಒಂದು ಹೊಡೆತ ತಲೆಗೆ ಬಿದ್ದರೂ ಅದು ಸುತ್ತಿಗೆ ಏಟಿಗೆ ಸಮ. ಪೆಟ್ಟು ಬಿದ್ದ ಸ್ವಲ್ಪ ಹೊತ್ತು ನೆಲವೇ ಕಾಣುತ್ತಿರಲಿಲ್ಲ.

ಮನೆಯಿಂದ ಅಪ್ಪನ ಭೋಣಿಗೆ ವ್ಯಾಪಾರ ಶುರುವಾದರೆ ಮುಗೀತು. ಅದು ಶಾಲೆಯ ತನಕವೂ ನಿರಂತರವಾಗಿ ನಡೀತ್ತಿತ್ತು. ಹತ್ತಿಪ್ಪತ್ತು ಹೆಜ್ಜೆಗೆ ನಾಲ್ಕು ಬೈಗುಳ, ಮೂವತ್ತು ಹೆಜ್ಜೆಗೆ ಒಂದು ಬಿಗಿಯಾದ ಹೊಡೆತ. ಹೀಗೆ ಲೆಕ್ಕವಿಡಿದರೂ ಶಾಲೆ ತಲುಪುವ ತನಕ ಅದು ನೂರರ ಗಡಿ ದಾಟಿರುತ್ತಿತ್ತು. ರಸ್ತೆಯ ಬದಿ ಸಿಕ್ಕುವ ನಾನಾ ನಮೂನೆಯ ಗಿಡ-ಗಂಟೆಗಳನ್ನೆಲ್ಲಾ ಮುರಿದುಕೊಂಡು ಅವು ಕಿತ್ತು ಹೋಗುವ ತನಕ ಅಪ್ಪ ಬಾರಿಸುತ್ತಿದ್ದರು. ಅಪ್ಪನ ಸಿಟ್ಟಿನ ಹಿಂದೆ ನನ್ನ ಮಗ ನನ್ನಂತೆ ಕಷ್ಟಪಡಬಾರದು, ಓದಿ ಒಳ್ಳೆಯವನಾಗಬೇಕು, ಅವನ ಜೀವನ ಚೆನ್ನಾಗಿರಬೇಕೆಂಬ ಆಸೆಗಳಿದ್ದವು. ಅವನು ಹೊಡೆದ ಒಂದೊಂದು ಏಟಿನ ಹಿಂದೆ ಆತನ ಕನಸುಗಳಿದ್ದವು.

ಅಪ್ಪ ಹಾಗೆಲ್ಲಾ ಹೊಡೆಯದೆ ಹೋಗಿದ್ದರೆ ನಾನೀಗ ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ನನ್ನ ಕೆಲ ಗುರುಗಳು ಪ್ರೀತಿಯಿಂದ ಕಲಿಸಿ, ತಪ್ಪು ಮಾಡಿದಾಗ ಶಿಕ್ಷಿಸದಿದ್ದರೆ ನಾನೂ ಒಬ್ಬ ಗುರುವಾಗುತ್ತಿರಲಿಲ್ಲ. ಆಗ ಶಾಪ ಅನ್ನಿಸಿದ್ದು ಈಗ ವರವಾಗಿ ಕಾಣುತ್ತಿದೆ. ಇತ್ತೀಚಿಗೆ ಸರ್ಕಾರ ಮಕ್ಕಳಿಗೆ ಗುರುಗಳಾಗಲೀ, ಪೋಷಕರಾಗಲೀ. ಹೊಡೆಯಬಾರದು, ಬೈಯ್ಯಬಾರದು. ಫೇಲು ಮಾಡಬಾರದು ಎಂದು ಏನೇನೋ ಕಾನೂನುಗಳನ್ನು ಮಾಡುತ್ತಿದೆ. ಹೆತ್ತವರ ಸಣ್ಣ ಶಿಕ್ಷೆಯೂ ಇಲ್ಲದೆ, ಗುರುಗಳ ಸಣ್ಣ ಭಯ ಭಕ್ತಿಯೂ ಇಲ್ಲದೆ ಶಿಕ್ಷಣ ಸಾಧ್ಯವೇ? ಯೋಚಿಸಬೇಕಿದೆ. 

ಕಬ್ಬಿಣ ಮೆದುವಾಗಲು ಕಾಯಿಸಬೇಕು. ಕಾದಾಗಲೇ ಚಚ್ಚಿ ಬೇಕಾದ ರೂಪಕ್ಕೆ ಪರಿವರ್ತಿಸಿಕೊಳ್ಳಬೇಕು. ಕಾವು ಆರುವ ಮನ್ನವೇ ನೀರು ಕುಡಿಸಿ ಹದಗೊಳಿಸಿಕೊಳ್ಳಬೇಕು ಎಂಬ ಸರಳ ಸತ್ಯವನ್ನು ಅನಕ್ಷರಸ್ಥನಾದ ನನ್ನಪ್ಪನೇ ಅರಿತಿದ್ದ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.