ADVERTISEMENT

ಒಬ್ಬ ಅತ್ತೆಮ್ಮನಿಗೆ 96 ಸಾವಿರ ಸೊಸೆಯರು

ನಲ್ದಾಣ

ಪ್ರಜಾವಾಣಿ ವಿಶೇಷ
Published 4 ಮೇ 2013, 19:59 IST
Last Updated 4 ಮೇ 2013, 19:59 IST

ಕವಿ ರತ್ನಾಕರ ವರ್ಣಿ “ಭರತೇಶ ವೈಭವ” ವನ್ನು ಬರೆಯುವಾಗ “ಶೃಂಗಾರಕ್ಕಾಗಿ ಕಷ್ಟರ ಕಥೆಗೇಳ್ದು ಜನಂಗಳು” ಕೆಟ್ಟುಹೋಗುತ್ತಿದ್ದಾರೆ, ನಾನು ಮಾತ್ರ ಹಾಗಾಗದಿರಲಿ ಅಂತ ಏನೋ “ಕಾವ್ಯವನಿಷ್ಟು ಶೃಂಗಾರ ಕಟ್ಟಿ” ಹೇಳುತ್ತಿದ್ದೇನೆ ಎಂದು ಆರಂಭದಲ್ಲೇ ಮುನ್ನೆಚ್ಚರಿಕೆ ಪ್ರದರ್ಶಿಸುತ್ತಾನೆ. ಅವನ ಕಾವ್ಯ ನಾಯಕ ಭರತೇಶನಿಗೆ 96 ಸಾವಿರ ಹೆಂಡತಿಯರು. ಆದರೂ ಏನೋ ಒಂದಿಷ್ಟು ಶೃಂಗಾರ ಕಟ್ಟಿ ಹೇಳ್ದ್ದಿದೇನೆ ಎಂದರೆ ಏನೋ ನಂಬಬೇಕು! ಆ “ಒಂದಿಷ್ಟು” ಹೇಳಿದ್ದಕ್ಕೇ ಅವನಿಗೆ “ಶೃಂಗಾರ ಕವಿ” ಎಂಬ ಬಿರುದು ಸಿಕ್ಕಿತು.

ರತ್ನಾಕರ ಗಂಡ ಹೆಂಡತಿಯರ, ಸವತಿಯರ ಸಂಬಂಧಗಳನ್ನು ಮನದುಂಬಿ ವರ್ಣಿಸಿರುವ ಹಾಗೆ ಅತ್ತೆ ಸೊಸೆಯರ ಸಂಬಂಧ ಕುರಿತೂ ಹೇಳಿದ್ದಾನೆ.  ಚಕ್ರವರ್ತಿಯಾದವನು ಹೆಂಡಿರ ಜೊತೆ ಬರೀ ಲೋಲಾಪ್ತಿಯಲ್ಲಿ ಇದ್ದುಬಿಟ್ಟರೆ ಅವನ ಶೌರ್ಯ, ಪ್ರತಾಪ ಲೋಕಕ್ಕೆ ತಿಳಿಯುತ್ತದೆಯೇ? ಒಂದು ದಿನ ಭರತನ ಆಯುಧಾಗಾರದಲ್ಲಿ ಚಕ್ರರತ್ನ ಹುಟ್ಟಿ ಅವನು ದಿಗ್ವಿಜಯಕ್ಕೆ ಹೊರಡುತ್ತಾನೆ.

ಅವನ ಜೊತೆ 96 ಸಾವಿರ ಹೆಂಡತಿಯರ ಮಹಾಸೇನೆಯೂ ಹೊರಡುತ್ತದೆ. ಊರು ಬಿಡುವ ಮುನ್ನ ಭರತೇಶ ತನ್ನ ತಾಯಿ ಯಶಸ್ವತೀ ದೇವಿಯ ಆಶೀರ್ವಾದ ಪಡೆಯಲು ಬಂದ. ಸೊಸೆಯರೆಲ್ಲ  ಸಾಲುಗಟ್ಟಿ ಅತ್ತೆಯ ಕಾಲಿಗೆ ಬಿದ್ದು ನಮಸ್ಕರಿಸಿದಾಗ ಅತ್ತೆ ಕಕ್ಕುಲಾತಿಯಿಂದ “ಅಯ್ಯೋ ಕಷ್ಟ ಅನ್ನುವುದು ನಿಮಗೆ ಕನಸಿನಲ್ಲೂ ಗೊತ್ತಿಲ್ಲ, ಈಗ ಪರರಾಜ್ಯಗಳಿಗೆ ಹೋಗುತ್ತಿದ್ದೀರಲ್ಲಾ, ಸರಿ, ನನ್ನ ಮಗನ ಜೊತೆ ಸುಖವಾಗಿ ಓಲಾಡಿಬನ್ನಿ” ಎಂದು ಹರಸುತ್ತಾಳೆ. ಅವರು ಹೊರಟಿರುವುದು ದಿಗ್ವಿಜಯಕ್ಕೋ ದಿಬ್ಬಣಕ್ಕೋ ಅದು ಮುಖ್ಯವಲ್ಲ.

“ಏನಾದರೂ ಬುದ್ಧಿಮಾತು ಹೇಳಿ ಅತ್ತೆಮ್ಮಾ” ಅಂದಾಗ “ಎಲ್ಲರೂ ಗಂಡ ಹೇಳಿದಂತೆ ಕೇಳಿಕೊಂಡಿರಿ” ಅಂತಲ್ಲದೆ ಬೇರೇನು ತಾನೇ ಹೇಳುತ್ತಾಳೆ? ಆ ಸೊಸೆಯರಿಗೋ ಅತ್ತೆ ಅಂದರೆ ಬಹಳ ಭಕ್ತಿ. ದಿಗ್ವಿಜಯ ಯಾತ್ರೆ ಎಷ್ಟು ತಿಂಗಳೋ ಎಷ್ಟು ವರ್ಷವೋ ಗೊತ್ತಿಲ್ಲ. ಮರಳಿ ಬಂದು ಅತ್ತೆಯ ಅಡಿದಾವರೆಗಳನ್ನು   ನೋಡುವವರೆಗೆ ಏನಾದರೂ ವ್ರತ ಹಿಡಿಯಬೇಕು ಅಂತ ಅವರಿಗೆ ಅನ್ನಿಸಿತು. ಅತ್ತೆ ಬೇಡ ಅಂದರೂ ಕೇಳದೆ ಎಲ್ಲರೂ ತಲಾ ಒಂದೊಂದು ವ್ರತ ಘೋಷಿಸತೊಡಗಿದರು: ಮತ್ತೆ ಅತ್ತೆಯ ಪಾದ ನೋಡುವವರೆಗೆ ನಾನು ಮಲ್ಲಿಗೆಯನ್ನು ಮುಡಿಯುವುದಿಲ್ಲ ಎಂದೊಬ್ಬ ಸೊಸೆ ಹೇಳಿದರೆ, ನಾನು ಜಾಜಿಯನೊಲ್ಲೆ ಎಂದು ಇನ್ನೊಬ್ಬಳು, ನನಗೆ ಮೊಲ್ಲೆ ಬೇಡ ಎಂದು ಮಗದೊಬ್ಬಳು ಹೇಳಿದಳು.

ಇನ್ನೊಬ್ಬ ಸೊಸೆ ನಾನು ಫೇಣಿ ತಿನ್ನುವುದಿಲ್ಲ ಎಂದರೆ, ಇನ್ನೊಬ್ಬಳು ನಾನು ತಾಂಬೂಲ ಮೆಲ್ಲುವುದಿಲ್ಲ ಅಂದಳು. ಒಬ್ಬಳು ಗೋರೋಚನವನ್ನು, ಮತ್ತೊಬ್ಬಳು ಕಸ್ತೂರಿಯನ್ನು ಪೂಸಿಕೊಳ್ಳುವುದಿಲ್ಲ ಎಂದು ವ್ರತ ತೊಟ್ಟರು. ಇನ್ನೊಬ್ಬ ಸೊಸೆ ಹೊಸ ಸೀರೆ ಉಡುವುದಿಲ್ಲ ಅಂದುಕೊಂಡರೆ ಮತ್ತೊಬ್ಬಳು ಪಟ್ಟೆ ವಸ್ತ್ರ ಬಿಟ್ಟೆ ಎಂದಳು. ಅವರೆಲ್ಲ ಪುನಃ ಅತ್ತೆಯನ್ನು ನೋಡಿದ ಮೇಲೇ ಅವುಗಳನ್ನು ಮುಟ್ಟಿದ್ದು ಎಂದು ಹೇಳುತ್ತಾನೆ ಕವಿ. ಇಂಥ ಗೌರವ ಪಡೆದ ಅತ್ತೆ ಯಶಸ್ವತೀ ದೇವಿ ದೀಕ್ಷೆ ಪಡೆದಾಗ ಸೊಸೆಯರೆಲ್ಲ ಅವರ ಅರಮನೆಗಳಲ್ಲಿ ಬಿಕ್ಕಿ ಬಿಕ್ಕಿ ಅತ್ತರಂತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.