ಸಾಹಿತ್ಯದ ಓದು, ಒಡನಾಟ ಕುರಿತು ಈ ಬಾರಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಕವಿ, ನಾಟಕಕಾರ ಸತ್ಯನಾರಾಯಣರಾವ್ ಅಣತಿ.
ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ನಿಮಗೆ ಸಾಹಿತ್ಯದ ನಂಟು ಬೆಳೆದದ್ದು ಹೇಗೆ?
ಸ್ಕೂಲ್ ಮಾಸ್ಟರ್ ಆಗಿದ್ದ ನನ್ನ ತಂದೆ ದಸರೆ ಮತ್ತು ಬೇಸಿಗೆ ರಜೆಯಲ್ಲಿ `ಜೈಮಿನಿ ಭಾರತ' ಮತ್ತು `ಕುಮಾರವ್ಯಾಸ ಭಾರತ'ವನ್ನು ನಿತ್ಯ ಸಂಜೆ ಗಮಕದಲ್ಲಿ ಓದುತ್ತಿದ್ದರು. ನನ್ನ ಹೈಸ್ಕೂಲ್‌ವರೆಗಿನ ಬಾಲ್ಯದಲ್ಲಿ ನಮ್ಮ ಆಟದ ನಡುವೆ ನನ್ನನ್ನು ಕೂರಿಸಿಕೊಂಡು ಅದರ ಅರ್ಥವನ್ನು ವಿವರಿಸುತ್ತಿದ್ದರು. ಕೆಲವೊಮ್ಮೆ ನನಗೆ ತಿಳಿದಂತೆ ಓದಿಕೊಳ್ಳುತ್ತಿದ್ದೆ. ಹೈಸ್ಕೂಲಿನಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಹರಿಹರನ `ಬಸವರಾಜದೇವರ ರಗಳೆ'ಯ ಒಂದು ಭಾಗವಿತ್ತು. ಅದನ್ನು ಕಂಠಪಾಠ ಮಾಡಿ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದೆ. ಈ ಕಾವ್ಯಗಳ ನಾದ ಲಯ ನನ್ನಲ್ಲಿ ಇನ್ನೂ ಅನುರಣಿಸುತ್ತಿದೆ. ಮತ್ತು ಆ ಕಾಲದಲ್ಲಿ ಪ್ರಕಟವಾಗುತ್ತಿದ್ದ `ಕತೆಗಾರ' ಪತ್ರಿಕೆ ಪ್ರತಿ ತಿಂಗಳು ನಮ್ಮ ಮನೆಗೆ ಬರುತ್ತಿತ್ತು. ಸಾಹಿತ್ಯದ ಓದಿನ ರುಚಿ ಹಿಡಿಸಿತು.
ಅನಕೃ, ತರಾಸು, ಕಟ್ಟೀಮನಿ; ಪತ್ತೇದಾರಿ ಪುರುಷೋತ್ತಮನ ಸಾಹಸ ಕಥೆಗಳನ್ನು ಓದುತ್ತಾ ವೈಚಾರಿಕತೆಗೆ ತೆರೆದುಕೊಂಡೆ. ಬಿ.ಕಾಂ.ನಲ್ಲಿ ಇದ್ದಾಗ ಶೇಕ್ಸ್‌ಪಿಯರನ ನಾಟಕಗಳು, ಇಂಗ್ಲಿಷ್ ಕಾದಂಬರಿ ಮತ್ತು ಪ್ರಬಂಧಗಳ ಓದು ನನ್ನ ಸಾಹಿತ್ಯಾಸಕ್ತಿಯನ್ನು ಬೆಳೆಸಿದವು. ಬಿ.ಕಾಂ., ಮುಗಿಸಿ ಲೆಕ್ಕ ಬರೆಯುವ ವೃತ್ತಿಯಲ್ಲಿ ಹೊನ್ನಾವರದಲ್ಲಿದಾಗ ಕವಿ ಹಾಗೂ ರ‌್ಯಾಡಿಕಲ್ ವ್ಯಕ್ತಿಯೂ ಆಗಿದ್ದ ಜಿ.ಆರ್. ಪಾಂಡೇಶ್ವರ್ ಅವರ ಪರಿಚಯ ಓದಿನ ಹವ್ಯಾಸವನ್ನು ಹಿಗ್ಗಿಸಿತು.
ಮಿಗಿಲಾಗಿ ಕೆರೆಮನೆ ಶಿವರಾಮ ಹೆಗ್ಗಡೆಯವರ ಯಕ್ಷಗಾನದ ಆಟಗಳನ್ನು ನೋಡುತ್ತಿದೆ. ಪುರಾಣ ಕಾವ್ಯಗಳ ಪ್ರಸಂಗಗಳು ನನ್ನ ಅಭಿರುಚಿಯನ್ನು ವಿಸ್ತರಿಸಿದವು. ಶ್ರವಣ -ದೃಶ್ಯ ಪ್ರಸಂಗಗಳು ನನ್ನಲ್ಲಿ ಒಂದುರೀತಿಯಾದ ಅಭ್ಯಾಸದ ಅನುಭವವನ್ನೇ ಉಂಟುಮಾಡುತ್ತಿತ್ತು. ಅಲ್ಲಿಗೆ ಒಂದು ದಿನ ತಡವಾಗಿ ಬರುತ್ತಿದ್ದ `ಪ್ರಜಾವಾಣಿ'ಯ ಸಾಪ್ತಾಹಿಕ ಪುರವಣಿಯನ್ನು ಇಡೀ ವಾರವೆಲ್ಲಾ ಮತ್ತೆ ಮತ್ತೆ ಓದುತ್ತಿದ್ದೆ. ಆಗ ಕವಿತೆ ಬರೆಯುವುದು ಆರಂಭವಾಯಿತು.( ಅಲ್ಲಿಯ ಮೋಹಕ ಪ್ರಕೃತಿ, ಸುಂದರವಾದ ಹುಡುಗಿಯರು, ರಾತ್ರಿಹೊತ್ತಿನ (ಆಗ ಅಲ್ಲಿ ವಿದ್ಯುತ್ ಇರಲಿಲ್ಲ) ಚಂದ್ರ ನಕ್ಷತ್ರಗಳ ವಿಸ್ಮಯಲೋಕ, ಸಮುದ್ರದ ಮೊರೆತ, ಶರಾವತಿನದಿಯ ಹರಿವು, ದೋಣಿಯಲ್ಲಿ ತಿರುಗಾಟ, ಗಾಳಿಯ ಸುಯ್ ನಾದ ನನ್ನಲ್ಲಿ ತಡವಾಗಿಯಾದರೂ ಸೃಜನಶೀಲತೆಯನ್ನು ಬಿತ್ತಿ ಬೆಳೆಸಿದವು. ನಾನೇನು ಹುಟ್ಟಿನೊಡನೆ ಸೃಜನಕಲೆಯನ್ನು ಪಡೆದುಬಂದವನಲ್ಲ. ಸಂದರ್ಭಗಳಿಂದ ಒದಗಿಬಂದ ಅಭಿರುಚಿ ನನ್ನಲ್ಲಿ ಸೃಜನಶೀಲತೆಯನ್ನು ಚಿಗುರಿಸಿತು. ಪರಿಶ್ರಮದಿಂದ ರೂಢಿಸಿಕೊಂಡಿದ್ದೇನೆ.)
ಯಾವ ಸಾಹಿತ್ಯ ಕೃತಿ ಅಥವಾ ಕೃತಿಗಳು ನಿಮ್ಮ ಮೇಲೆ ತೀರಾ ಪ್ರಭಾವ ಬೀರಿವೆ? ಅದು ಅಥವಾ ಅವು ನಿಮ್ಮ ಬದುಕು ಸಾಹಿತ್ಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿದೆ/ವೆ ಅನ್ನಿಸಿದೆಯೆ?
ಪ್ರಗತಿಶೀಲರ ಕಾದಂಬರಿಗಳು ನನ್ನನ್ನು ವೈಚಾರಿಕ ಬದುಕಿನತ್ತ ಸೆಳೆದವು. ಆಲೋಚನೆಗಳನ್ನು ಹರಿತಗೊಳಿಸಿದವು. ಆದರೆ ಬೇಂದ್ರೆಯವರ ಲಯ ನಾದ ಮಾಧುರ್ಯ ನನ್ನ ಮೊದಲ ಕವಿತೆಗಳಲ್ಲಿ ಗೋಚರಿಸಿತು. ನಂತರ ಗೋಪಾಲಕೃಷ್ಣ ಅಡಿಗರ ಕಾವ್ಯಾಭ್ಯಾಸ ಗದ್ಯ ಲಯದ ಕಡೆಗೆ ಸೆಳೆಯಿತು, ರೂಪಕನಿರ್ಮಿತಿಯನ್ನು ವೈಚಾರಿಕ ಚಿಂತನೆಯನ್ನು ಬೆಳೆಸುತ್ತಲೇ ಇದೆ.
ಕುವೆಂಪು ಬೇಂದ್ರೆ ಅವರ ಪ್ರಕೃತಿ ಗೀತೆಗಳು ನನ್ನ ಕವಿತೆಗಳಲ್ಲಿ, ಪ್ರಕೃತಿಯೊಂದಿಗಿನ ಮನುಷ್ಯ ಸಂಬಂಧದ ಅನುಸಂಧಾನವನ್ನು ಬೆಳೆಸಲು ಕಾರಣವಾಗಿವೆ. ಎಂ.ಎ. ಓದುತ್ತಿದ್ದಾಗ `ದಿ ಔಟ್‌ಸೈಡರ್', `ಮೆಟಾಮಾರ್‌ಫೊಸಿಸ್'ನಂಥ ಕಾದಂಬರಿಗಳನ್ನೋದಿ `ಹೀಗೂ ಉಂಟಾ' ಎಂದು ಚಕಿತನಾಗಿದ್ದೇನೆ. ಏಲಿಯಟ್ , ಬ್ರೆಕ್ಟ್, ಟಾಲ್ಸ್‌ಟಾಯ್, ಶೇಕ್ಸ್‌ಪಿಯರ್ ಇಂಥವರ ಸಾಹಿತ್ಯದ ಪರಿಚಯ ನನ್ನ ಸಂವೇದನೆಯನ್ನು ವಿಸ್ತರಿಸಿದವು.
ನಿಮ್ಮ ಪ್ರಕಾರ ಅತ್ಯುತ್ತಮ ಸಾಹಿತ್ಯ ಕೃತಿ ಎಂದರೆ ಯಾವುದು?
ಇದೇ ಅತ್ಯುತ್ತಮ ಕೃತಿ ಎಂದು ಹೇಳುವುದು ಹೇಗೆ? ಕೃತಿ ಕಟ್ಟಿಕೊಡುವ ಜೀವನಾನುಭವ ಓದುಗನಲ್ಲಿ ಉಂಟುಮಾಡಬಹುದಾದ ಬೆರಗು, ತವಕ ತಲ್ಲಣಗಳು, ಕನಸು ಕಾಣ್ಕೆ, ಮತ್ತು ದರ್ಶನಕ್ಕೆ ಅನುಗುಣವಾಗಿ ಅದರ ಉತ್ತಮಿಕೆಯನ್ನು ಕಾಣಬಹುದಲ್ಲವೇ? ಬೇಂದ್ರೆಯವರ ಒಲವಿನನುಭೂತಿ, ಅಡಿಗರ ಸಂಸ್ಕೃತಿಯೊಂದಿಗಿನ ಅನುಸಂಧಾನ, ಕುವೆಂಪುರವರ ಸಾಂಸ್ಕೃತಿಕ ವೈಚಾರಿಕ ನಿಲುವುಗಳು ಕಟ್ಟಿಕೊಡುವ ದರ್ಶನ, ಕೃತಿಯ ಉತ್ತಮಾಂಶಗಳೆನ್ನಬಹುದು. ಅನಂತಮೂರ್ತಿಯವರು ಆಧುನಿಕ ಬದುಕನ್ನು ಬಗೆಯುವ ರೀತಿ, ಕಾರಂತರ ಕೃತಿಗಳಲ್ಲಿ ಕಾಣಬಹುದಾದ ಬಾಳ್ವೆಯ ಬೆಳಕು, ಮಾಸ್ತಿಯವರ ಜೀವನ ಪ್ರೀತಿ. ಮನುಷ್ಯನ ಗುಣ ಸ್ವಭಾವಗಳನ್ನು, ನಡವಳಿಕೆಗಳನ್ನು ಅನ್ವೇಷಿಸುವ ಬಗೆ, ಮಾನವೀಯವಾದ ಸಂವೇದನೆಯನ್ನು ಆಕೃತಿಯಾಗಿ ಕಟ್ಟಿಕೊಡುವ ಸಮರ್ಥ ಭಾಷೆ, ಬಂಧ ಇವೆಲ್ಲವೂ ಸಾಹಿತ್ಯ ಕೃತಿಯೊಂದನ್ನು ಅತ್ಯುತ್ತಮವಾಗಿಸುವ ಉತ್ತಮಾಂಶಗಳೆಂದು ಹೇಳಬಹುದು.
ಯಾವ ಸಾಹಿತ್ಯ ಕೃತಿ ನಿಮಗೆ ಇಷ್ಟ?
ನಾನು ಮೇಲೆ ಹೇಳಿದಂತಹ ಸಂವೇದನಾಶೀಲವಾದ ಕೃತಿಗಳೆಲ್ಲಾ ನನಗೆ ಇಷ್ಟವೇ. ಆದ್ದರಿಂದ ಮೇಲೆ ಹೆಸರಿಸಿದವರನ್ನೆಲ್ಲಾ ಮತ್ತೆ ಮತ್ತೆ ಓದುತ್ತಿರುತ್ತೇನೆ.
ಈಗ ಏನನ್ನು ಓದುತ್ತಿದ್ದೀರಿ? ಬರೆಯುತ್ತಿದ್ದೀರಿ?
ಈಗ ಒಂದಿಷ್ಟು ಗದ್ಯ ಸಾಹಿತ್ಯವನ್ನು ಹೆಚ್ಚು ಓದುತ್ತಿದ್ದೇನೆ. ಹಾಗೆಂದಮಾತ್ರಕ್ಕೆ ಕಾವ್ಯವನ್ನು ಬಿಡಲಾರೆ. `ಸ್ವಾತಂತ್ರ್ಯದ ಓಟ' ಓದಿಸಿಕೊಂಡಿತು. ಸ್ವತಂತ್ರ ಭಾರತದ ಸಾಂಸೃತಿಕ ಕಥನ `ಒಂದು ಜೀವನ ಸಾಲದು' ಮತ್ತು `ಎದೆಗೆ ಬಿದ್ದ ಅಕ್ಷರ'- ಹೀಗೆ ಓದುತ್ತಿದ್ದೇನೆ.
ಒಂದಿಷ್ಟು ಗದ್ಯ ಲೇಖನಗಳನ್ನು ಬರೆಯುತ್ತಾ, ಕವಿತೆಗಳ ಜೊತೆಜೊತೆಯ್ಲ್ಲಲೇ ಸ್ವಂತದ ಕಥೆಯೊಂದನ್ನು ಆಗಾಗ ಬರೆಯುತ್ತಾ ಇರುವುದರಿಂದ ಓದು ಒಂದಿಷ್ಟು ಹಿಂದೆಸರಿಯುವುದು ಸಹಜ ತಾನೆ? ಮೇಲೆ ಹೆಸರಿಸಿರುವವರ ಗದ್ಯ ಪದ್ಯಗಳನ್ನು ಮತ್ತೆ ಮತ್ತೆ ಓದುತ್ತಲೇ ಇರುತ್ತೇನೆ.
ವಿಮರ್ಶಕರ ಉತ್ಸಾಹದಿಂದ ಕೆಲವು ಪುಸ್ತಕಗಳು ಹೆಚ್ಚಿನ ಮನ್ನಣೆ ಪಡೆಯುತ್ತವೆ ಎನಿಸುತ್ತದೆಯೆ? ಹಾಗೆ ಮನ್ನಣೆ ಪಡೆಯದೆ ಹಿನ್ನೆಲೆಗೆ ಸರಿದ ಯಾವುದಾದರೂ ಪುಸ್ತಕದ ಬಗ್ಗೆ ಹೇಳಲು ಸಾಧ್ಯವೆ?
ತಮ್ಮ ವಿಮರ್ಶೆಯಿಂದಲೆ ಸೃಜನಶೀಲ ಚಟುವಟಿಕೆ ನಡೆಯುತ್ತಿದೆ ಎಂಬ ಧೋರಣೆಯಿಂದ ಇದ್ದಕಾಲ ಒಂದಿತ್ತು. ಆದರೆ ಪಕ್ಷಪಾತವಿಲ್ಲದ, ಸಹೃದಯನ ವಸ್ತುನಿಷ್ಠ ವಿಮರ್ಶೆ ಕ್ರಿಯೇಟಿವಿಟಿಗೆ ಪೂರಕವಾದುದು. ಮನ್ನಣೆ ಎನ್ನುವುದು ಅನೇಕ ಕಾರಣಗಳಿಂದ ಮಹತ್ವವನ್ನು ಪಡೆಯುತ್ತದೆ. ಕೆಲವು ಪುಸ್ತಕಗಳಿಗೆ ಹೆಚ್ಚು. ವಿಮರ್ಶೆ ಸಾಹಿತ್ಯಸಂದರ್ಭವನ್ನು ಕಲುಷಿತಗೊಳಿಸಬಾರದು. ಸಹೃದಯನಾಗಿ ಪ್ರಾಂಜಲ ಮನಸ್ಸಿನಿಂದ ನಡೆಸುವ ವಿಮರ್ಶಾ ಕಾರ್ಯ ಸೃಜನಶೀಲ ಸಂದರ್ಭವನ್ನು ಕ್ರಿಯಾಶೀಲವಾಗಿ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬಲ್ಲದು. ಸೃಜನಶೀಲತೆ ಮತ್ತು ವಿಮರ್ಶೆ ಒಂದಕ್ಕೊಂದು ಪೂರಕವಾದ ಚಟುವಟಿಕೆಗಳು. ವಿಮರ್ಶೆಗಾಗಿಯೇ ಯಾರೂ ಬರೆಯುವುದಿಲ್ಲ, ಬರೆಯಬಾರದು. ಲೇಖಕನು ತನ್ನೊಳಗಿನ ವಿಮರ್ಶಕನಿಗೆ ನಿಷ್ಠನಾಗಿ ಶ್ರದ್ಧೆಯಿಂದ ಕೃತಿ ರಚಿಸುವುದು ಮುಖ್ಯ. ಮನ್ನಣೆ ಪಡೆಯದ ಕೃತಿಯನ್ನಾಗಲಿ ಕೃತಿಕಾರರನ್ನಾಗಲಿ ಹೆಸರಿಸುವುದು ಸಾಧುವಲ್ಲ.
ಅಧ್ಯಾಪಕರಾಗಿಯೂ ಕೆಲಸ ಮಾಡಿದವರು ನೀವು. ಕಲಿಸುವುದಕ್ಕಾಗಿ ಅಗತ್ಯವಾದ ಅಕಾಡೆಮಿಕ್ ಓದು ಹಾಗೂ ಸ್ವಂತ ಖುಷಿಯ ಓದನ್ನು ಹೇಗೆ ನೋಡುತ್ತೀರಿ?
ಅಧ್ಯಾಪಕನಾಗಿ ಕಾಲೇಜಿನಲ್ಲಿ ಕಲಿಸಲು ಕೆಲವು ನಿರ್ದಿಷ್ಟ ಪಠ್ಯಗಳಿರುತ್ತವೆ. ಅವುಗಳಲ್ಲಿ ಕೆಲವು ಸ್ವಂತ ಖುಷಿಗೂ ಓದಬಹುದಾದವು ಇರುತ್ತಿದ್ದವು. ಅಂಥವುಗಳನ್ನು ಖುಷಿಗೆ ಒಮ್ಮೆ ಓದಿಕೊಂಡು ಪಾಠಕ್ಕೆಂದು ಸಿದ್ಧವಾಗುವುದು ಅಷ್ಟೇನು ಶ್ರಮವೆನಿಸುತ್ತಿರಲಿಲ್ಲ. ಹೆಚ್ಚಿನ ಪಠ್ಯಗಳು ಕಲಿಸುವುದಕ್ಕಾಗಿ ಮಾತ್ರ ಓದಬೇಕಾಗಿ ಬರುತ್ತಿತ್ತು. ಅಂಥವುಗಳನ್ನು ಓದಿ ಪಾಠಕ್ಕೆ ಸಿದ್ದವಾಗುವುದು ಅಷ್ಟೇನು ಖುಷಿಯ ಕೆಲಸವಾಗಿರುತ್ತಿರಲಿಲ್ಲ. ಆದರೂ ವಿದ್ಯಾರ್ಥಿಗಳ ದೃಷ್ಟಿಯಿಂದ ಪರಿಶ್ರಮಿಸುತ್ತಿದ್ದೆ.
ವಿವಿಧ ಮಾಧ್ಯಮಗಳ ಸಂಗಮದ ಸದ್ಯದ ಸಂದರ್ಭದಲ್ಲಿ ಸಾಹಿತ್ಯದ ಓದಿನ ವಾತಾವರಣವನ್ನು ಕುರಿತು ನಿಮ್ಮ ಅನಿಸಿಕೆ
`ಮಾಧ್ಯಮಗಳ ಸಂಗಮ' ಎಂದಿದ್ದೀರ. ಆದರೆ ವಸ್ತುಸ್ಥಿತಿ ಅನಾರೋಗ್ಯಕರವಾದ ಪೈಪೋಟಿ. ಚೀಪ್ ಆದ ರಂಜನೆ. ಅದಕ್ಕೆ ಮುಗಿಬಿದ್ದು ಓದಿನ ಖುಷಿಯನ್ನು ಅದರ ಮಹತ್ವವನ್ನು ಬಹು ಜನ ಆಗಲೇ ಕಳೆದುಕೊಂಡಿದ್ದಾರೆ. ಸಾಹಿತ್ಯ ಕೃತಿಗಳನ್ನು ಓದುವಷ್ಟು ವ್ಯವಧಾನವಿಲ್ಲ. ಟಿ.ವಿ ಚಾನೆಲ್‌ಗಳನ್ನು ನೋಡಿ ಅವುಗಳ ವಿನಿಮಯದಲ್ಲೇ ದಿನ ಕಳೆದು ಬಿಡುತ್ತಾರೆ. ಎಳೆಯ ಮನಸ್ಸುಗಳ ಹದಗೆಡಿಸುವ ಸಂದರ್ಭ ಸೃಷ್ಟಿಯಾಗಿದೆ. ಅವರ ಓದು ಏನಿದ್ದರು ಪರೀಕ್ಷೆಗೆ ಉರುಹಚ್ಚುವ ಕೆಲಸವಾಗಿದೆ. `ಹೆಚ್ಚಿನ ದುಡಿಮೆಗೆ ಹೆಚ್ಚಿನ ಓದು' ಎಂದಷ್ಟೇ ಅಗಿರುವುದರಿಂದ ಜ್ಞಾನಕ್ಕಾಗಿ ತಿಳಿವಳಿಕೆಗಾಗಿ, ವಿವೇಕಕ್ಕಾಗಿ ಓದು ಎಂಬುದು ಮಾಯವಾಗಿದೆ.
ಒಳ್ಳೆಯ ಅಭಿರುಚಿಯ ಓದಿನ ಹವ್ಯಾಸ ಮನುಷ್ಯರನ್ನಾಗಿಸುತ್ತದೆ. ಸಭ್ಯ ನಾಗರೀಕರನ್ನಾಗಿಸುತ್ತದೆ. ಶುಚಿ ರುಚಿಯ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ. ಇಂಥದು ಇಂದು ಎಷ್ಟು ಮಂದಿಗೆ ಬೇಕಿದೆ? ಅಂಥ ಓದಿನ ಒಂದು ವಾತಾವರಣವನ್ನು ನಿರ್ಮಾಣ ಮಾಡಬೇಕಾದವರು ಯಾರು? ಶಾಲೆ ಕಾಲೇಜುಗಳಲ್ಲಿ ಅಗಬೇಕಲ್ಲವೇ? ಅವುಗಳಿಗೆ ಓದುವ ಹವ್ಯಾಸ ಕಲಿಸುವ ವ್ಯವಧಾನವೆಲ್ಲಿದೆ? ಸೃಜನಶೀಲ ಸಂವೇದನೆಯ ಮನಸ್ಸುಗಳಿಗೆ ಸತತಾಭ್ಯಾಸ ಅವಶ್ಯಕವಾದುದು. ಅದೂ ಹ್ರಸ್ವವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾದರೆ ಸತ್ವಯುತ ಸಾಹಿತ್ಯ ಹುಟ್ಟುವುದಾದರೂ ಹೇಗೆ?
ಮೌಲಿಕವಾದುದನ್ನು ರಚಿಸಲು ಬೇಕಾದ ಲೋಕಾನುಭವ ಒಳ್ಳೆಯ ವಿಸ್ತಾರವಾದ ಓದು ಮತ್ತು ಏಕಾಗ್ರತೆಯಿಂದ ಮಾತ್ರ ಸಾಧ್ಯವಾದುದರಿಂದ ಅದನ್ನು ಸಾಹಿತಿಯಾದವನು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಇಲ್ಲವಾದರೆ ಅಭಿಮಾನಿಗಳ ಚಪ್ಪಾಳೆಗಿಟ್ಟಿಸುವ ಬರಹಗಳೇ ಹೆಚ್ಚಿ, ಕ್ಷಣದ ರಂಜನೆಯಲ್ಲಿ ಮೈಮರೆಯುವಂತಾಗುತ್ತದೆ ಅಷ್ಟೆ. ಸೃಜನಶೀಲಕ್ರಿಯೆಯಲ್ಲಿ ಮೌಲ್ಯ ಕುಸಿಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಕೆಲವರಾದರು ಗಟ್ಟಿ ಬರಹಗಾರರು ಕಾಣಸಿಗುತ್ತಿರುವುದು ಅವರ ಓದಿನ ಹರವಿನಿಂದ ಮತ್ತು ಶ್ರದ್ಧೆಯಿಂದ. ಅಂಥವರು ಹೆಚ್ಚಿದಷ್ಟೂ ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.