ADVERTISEMENT

‘ರಾಷ್ಟ್ರ ವಿರೋಧಿ’ ಹಣೆಪಟ್ಟಿ ಅಂಟಿದ ನಂತರ...

ಆಕಾರ್ ಪಟೇಲ್
Published 28 ಫೆಬ್ರುವರಿ 2016, 19:34 IST
Last Updated 28 ಫೆಬ್ರುವರಿ 2016, 19:34 IST

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನ ಅಭಿಪ್ರಾಯ ಹೊಂದುವ ಸ್ವಾತಂತ್ರ್ಯದ ಪಾಲಿಗೆ ದೆಹಲಿ ರಣಾಂಗಣವಾಗಿ ಪರಿವರ್ತಿತವಾಗಿದೆ ಎಂಬುದನ್ನು ಒಪ್ಪಿಕೊಳ್ಳದೇ ಇರಲು ಆಗುತ್ತಿಲ್ಲ.

2012ರ ಡಿಸೆಂಬರ್‌ 16ರ ತಣ್ಣನೆಯ ರಾತ್ರಿಯಲ್ಲಿ 23 ವರ್ಷ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳ ಮೇಲೆ ದೆಹಲಿಯಲ್ಲಿ ಅತ್ಯಾಚಾರ ನಡೆಸಿ, ಆಕೆಯನ್ನು ಕೊಲೆ ಮಾಡಿದಾಗ ಈಗ ನಡೆಯುತ್ತಿರುವಂಥದ್ದೇ ಪ್ರತಿಭಟನೆ ನಡೆದಿತ್ತು. ಆದರೆ, ಈ ಬಾರಿ ವಿಶ್ವವಿದ್ಯಾಲಯವೊಂದರಲ್ಲಿ ಕೂಗಿದ ಘೋಷಣೆಗಳಿಗೆ ಸಂಬಂಧಿಸಿ ವ್ಯಕ್ತವಾಗುತ್ತಿರುವ ಪ್ರತಿಭಟನೆ ಏಕರೂಪಿಯಾಗಿಲ್ಲ.

ಇಲ್ಲಿ ವ್ಯಕ್ತವಾಗಿರುವ ವಿಚಾರಗಳು ಬಹಳ ಪ್ರಮುಖ. ಸರ್ಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ನಾವು ಇನ್ನೂ ಗೌರವಿಸುತ್ತೇವೆಯೇ?  ಇನ್ನೊಬ್ಬರ ಹಕ್ಕುಗಳಿಗಾಗಿ ಧ್ವನಿ ಎತ್ತುವವರಿಗೆ ರಕ್ಷಣೆ ಇದೆಯೇ?

ದೆಹಲಿಯಿಂದ 1,500 ಕಿ.ಮೀ. ದೂರದಲ್ಲಿರುವ ಛತ್ತೀಸಗಡ ರಾಜ್ಯದ ಬಸ್ತಾರ್‌ನಲ್ಲಿ ಈ ಪ್ರಶ್ನೆಗಳನ್ನು ಇನ್ನಷ್ಟು ತೀಕ್ಷ್ಣವಾಗಿ ಕೇಳಲಾಗುತ್ತಿದೆ. ಸಣ್ಣ ಉರಿಯಂತಿದ್ದ ಪ್ರಭುತ್ವದ ದಮನಕಾರಿ ನೀತಿ ಈಗ ಆಸ್ಫೋಟದ ಸ್ವರೂಪ ಪಡೆದುಕೊಂಡಿದೆ. ಪೊಲೀಸರು ಆಗಾಗ ಬಂದು ತಮ್ಮನ್ನು ವಿಚಾರಣೆಗೆ ಒಳಪಡಿಸುವುದು ಇಲ್ಲಿನ ಪತ್ರಕರ್ತರು ಮತ್ತು ಕಾರ್ಯಕರ್ತರ ಪಾಲಿಗೆ ಸಹಜ. ಆದರೆ, ಈಗ ಅವರನ್ನು ಮನಸ್ಸಿಗೆ ಬಂದಂತೆ ಬಂಧಿಸುವುದು ಕೂಡ ನಡೆಯುತ್ತಿದೆ.

ಸ್ಥಳೀಯ ಪತ್ರಕರ್ತ ಸಂತೋಷ್ ಯಾದವ್ ಅವರನ್ನು ಸುಳ್ಳು ಆರೋಪಗಳ ಅಡಿ ಸುಮಾರು ಐದು ತಿಂಗಳಿನಿಂದ ಬಂಧನದಲ್ಲಿ ಇರಿಸಲಾಗಿದೆ. 2015ರ ಸೆಪ್ಟೆಂಬರ್‌ನಲ್ಲಿ ಬಂಧಿಸುವುದಕ್ಕೂ ಮೊದಲು, ಈ ಭಾಗದ ಆದಿವಾಸಿಗಳ  ಸಮಸ್ಯೆಗಳ ಕುರಿತು ವರದಿ ಮಾಡಿದ್ದಕ್ಕಾಗಿ ಅವರಿಗೆ ಪದೇ ಪದೇ ಕಿರುಕುಳ ನೀಡಲಾಗಿತ್ತು (ಒಂದು ಬಾರಿಯಂತೂ ಅವರ ಬಟ್ಟೆ ಬಿಚ್ಚಿಸಿ ಬಡಿಯಲಾಯಿತು). ಯಾದವ್ ಅವರು ಆದಿವಾಸಿಗಳಿಗೆ ಕಾನೂನು ನೆರವು ನೀಡುತ್ತಿದ್ದವರು.
(ನಕ್ಸಲ್‌ ಆಗಿರುವ ಆರೋಪ ಎದುರಿಸುತ್ತಿರುವ ಸಾವಿರಾರು ಆದಿವಾಸಿಗಳು ಛತ್ತೀಸಗಡದ ತುಂಬಿ ತುಳುಕುತ್ತಿರುವ ಜೈಲುಗಳಲ್ಲಿದ್ದಾರೆ, ಕುಗ್ಗಿಹೋಗಿದ್ದಾರೆ. ಜಗದಾಲಪುರ ಕಾನೂನು ನೆರವು ಸಂಸ್ಥೆ ಸಂಗ್ರಹಿಸಿರುವ ಮಾಹಿತಿ ಅನುಸಾರ ಈ ರಾಜ್ಯದಲ್ಲಿ, 100 ಜನ ಕೈದಿಗಳು ಇರಬೇಕಾದ ಜೈಲುಗಳಲ್ಲಿ ಸರಾಸರಿ 253 ಕೈದಿಗಳು ಇದ್ದಾರೆ. ದೇಶದ ಜೈಲುಗಳಲ್ಲಿರುವ ಕೈದಿಗಳ  ಸರಾಸರಿ ಪ್ರಮಾಣ 114– ಅಂದರೆ ನೂರು ಜನ ಕೈದಿಗಳು ಇರಬಹುದಾದ ಜೈಲುಗಳಲ್ಲಿ 114 ಕೈದಿಗಳು ಇದ್ದಾರೆ. ಕಾಂಕೇರ್‌ನಲ್ಲಿ ಇದರ ಪ್ರಮಾಣ 428!)

ಸಂತೋಷ್‌ ಯಾದವ್‌ ಅವರ ವಕೀಲರಾದ ಇಶಾ ಖಂಡೇಲ್ವಾಲ್ ಅವರು ಜಗದಾಳಪುರ ಕಾನೂನು ನೆರವು ಸಂಸ್ಥೆಯ ಜೊತೆ ಸೇರಿ, ಆದಿವಾಸಿಗಳಿಗೆ ವರ್ಷಗಳಿಂದ ಉಚಿತವಾಗಿ ಕಾನೂನಿನ ನೆರವು ನೀಡುತ್ತಿದ್ದಾರೆ. ಇವರ ಜೊತೆ ಇನ್ನೊಬ್ಬ ವಕೀಲರಾದ ಶಾಲಿನಿ ಗೆರಾ ಅವರೂ ಇದ್ದಾರೆ.

‘ಬಾಡಿಗೆ ಪಡೆದಿರುವ ಮನೆಯನ್ನು ತೆರವು ಮಾಡಿ’ ಎಂದು ಈ ವಕೀಲರಿಗೆ ಮನೆಯ ಮಾಲೀಕ ಕಳೆದ ವಾರ ಹೇಳಿದ್ದಾರೆ. ಅದಕ್ಕೂ ಮೊದಲು ಪೊಲೀಸರು ಮನೆಯ ಮಾಲೀಕರನ್ನು ಕರೆದು ಪ್ರಶ್ನಿಸಿದ್ದರಂತೆ. ಬಸ್ತಾರ್‌ನಲ್ಲಿ ನೆಲೆ ನಿಂತು ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಇತ್ತೀಚಿನವರೆಗೂ ವರದಿ ಮಾಡುತ್ತಿದ್ದ ರಾಷ್ಟ್ರೀಯ ಮಾಧ್ಯಮದ ಪತ್ರಕರ್ತೆ ಮಾಲಿನಿ ಸುಬ್ರಮಣಿಯಂ ಅವರಿಗೆ ಜಾಗ ಖಾಲಿ ಮಾಡುವಂತೆ ನೋಟಿಸ್‌ ನೀಡಲಾಗಿದೆ.

ಈ ಪತ್ರಕರ್ತರು, ಕಾರ್ಯಕರ್ತರು ಪರಸ್ಪರರ ಕೆಲಸಗಳನ್ನು ಬೆಂಬಲಿಸಿದವರು. ಮಾವೊವಾದಿಗಳ ವಿರೋಧಿ ಸಂಘಟನೆಯಾದ ಸಾಮಾಜಿಕ ಏಕತಾ ಮಂಚ್‌ನ ವಿರುದ್ಧ ನೀಡಿರುವ ದೂರಿನಲ್ಲಿ ಇಶಾ ಅವರು ಮಾಲಿನಿ ಪರ ವಕೀಲಿಕೆ ನಡೆಸಿದ್ದಾರೆ. ರಾಜ್ಯ ಪೊಲೀಸರ ಜೊತೆ ನಂಟು ಹೊಂದಿರುವ ಸಾಮಾಜಿಕ ಏಕತಾ ಮಂಚ್‌ನ ಸದಸ್ಯರು ಮಾಲಿನಿ ಅವರ ಮನೆ ಎದುರು ಪ್ರತಿಭಟನೆ ನಡೆಸಿ, ಮಾಲಿನಿ ಅವರು ನಕ್ಸಲ್‌ ಬೆಂಬಲಿಗರು ಎಂದು ಸಾರ್ವಜನಿಕವಾಗಿ ಘೋಷಿಸಿದ್ದರು.

ಅಕ್ರಮ ಚಟುವಟಿಕೆ (ನಿಯಂತ್ರಣ) ಕಾಯ್ದೆ ಮತ್ತು ಛತ್ತೀಸಗಡ ವಿಶೇಷ ಸಾರ್ವಜನಿಕ ಭದ್ರತಾ ಕಾಯ್ದೆ ಸೇರಿದಂತೆ ಬೇರೆ ಬೇರೆ ಕಾನೂನುಗಳ ಅಡಿ ಸಂತೋಷ್ ಯಾದವ್ ಅವರನ್ನು ಬಂಧಿಸಿದಾಗ ಅದರ ಬಗ್ಗೆ ಮಾಲಿನಿ ವರದಿ ಮಾಡಿದ್ದರು. ಜಗದಾಳಪುರ ಕಾನೂನು ನೆರವು ಸಂಸ್ಥೆಯ ವಕೀಲರು ಮತ್ತು ಮಾಲಿನಿ ಅವರನ್ನು ಈಗ ಬಸ್ತಾರ್‌ನಿಂದ ಹೊರಹಾಕಲಾಗಿದೆ. ಸಂತೋಷ್ ಯಾದವ್ ಅವರು ಈಗ ಜೈಲಿನಲ್ಲಿದ್ದಾರೆ.

ಪೊಲೀಸ್ ವಶದಲ್ಲಿದ್ದಾಗ ಅತ್ಯಾಚಾರಕ್ಕೆ ಒಳಗಾಗಿದ್ದ, ನಿರಪರಾಧಿ ಎಂದು ಘೋಷಿಸುವ ಮುನ್ನ ಹಲವಾರು ವರ್ಷ ಜೈಲು ವಾಸ ಅನುಭವಿಸಿದ ಆದಿವಾಸಿ ಕಾರ್ಯಕರ್ತೆ ಸೋನಿ ಸೋರಿ ಅವರ ಮೇಲೂ ಹಲ್ಲೆ ನಡೆದಿದೆ. ಹಲ್ಲೆಕೋರರು ಅವರ ಮೇಲೆ ಫೆಬ್ರುವರಿ 20ರ ರಾತ್ರಿ ಕಪ್ಪು ಬಣ್ಣದ ವಸ್ತುವೊಂದನ್ನು ಎಸೆದಿದ್ದಾರೆ.

ಬಸ್ತಾರ್‌ನ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ವಿರುದ್ಧ ಧ್ವನಿ ಎತ್ತುವುದನ್ನು ನಿಲ್ಲಿಸದಿದ್ದರೆ ನಿಮ್ಮ ಮಗಳ ತಂಟೆಗೆ ಬರಬೇಕಾಗುತ್ತದೆ ಎಂದು ಹಲ್ಲೆಕೋರರು ಸೋನಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಹಿರಿಯ ಪೊಲೀಸ್‌ ಅಧಿಕಾರಿ ವಿರುದ್ಧ ಅಧಿಕೃತವಾಗಿ ಒಂದು ದೂರು ದಾಖಲಿಸಲು ಸೋನಿ ಅವರು, ‘ಮಾವೊವಾದಿ’ ಎಂಬ ಆರೋಪ ಹೊತ್ತ ಹದ್ಮಾ ಕಶ್ಯಪ್ ಅವರ ಕುಟುಂಬಕ್ಕೆ ನೆರವಾಗುತ್ತಿದ್ದರು. ಹದ್ಮಾ ಅವರನ್ನು ಫೆಬ್ರುವರಿ 3ರಂದು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು ಎಂದು ಅವರ ಕುಟುಂಬ ಆರೋಪಿಸಿದೆ. ಭದ್ರತಾ ಪಡೆಗಳು ನಡೆಸುತ್ತಿರುವ ಸಾಮೂಹಿಕ ಹಿಂಸಾಚಾರದ ವರದಿಗಳು ಸರಣಿಯಾಗಿ ಬಂದ ಬೆನ್ನಲ್ಲೇ ಪತ್ರಕರ್ತರು, ವಕೀಲರು, ಸೋನಿ ಸೋರಿ ಮೇಲೆ ಹಲ್ಲೆ ನಡೆದಿದೆ. ಇದು ತೀರಾ ಕಾಕತಾಳೀಯ ಆಗಿರಲಾರದು.

ಭದ್ರತಾ ಸಿಬ್ಬಂದಿ ನಡೆಸಿದ್ದಾರೆ ಎನ್ನಲಾದ ಸಾಮೂಹಿಕ ಅತ್ಯಾಚಾರ, ಲೈಂಗಿಕ ಹಲ್ಲೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳು ಆದಿವಾಸಿ ಮಹಿಳೆಯರಿಂದ ನವೆಂಬರ್‌ ನಂತರ ವರದಿಯಾಗಿವೆ ಎಂದು ಪತ್ರಕರ್ತೆ ಬೇಲಾ ಭಾಟಿಯಾ ವರದಿ ಮಾಡಿದ್ದಾರೆ. ಬೇಲಾ ಅವರೂ ಕಿರುಕುಳ ಎದುರಿಸುತ್ತಿದ್ದಾರೆ. ಎಫ್‌ಐಆರ್‌ ದಾಖಲಿಸಲು ಪೊಲೀಸರು ಆರಂಭದಲ್ಲಿ ನಿರಾಕರಿಸಿದರೂ, ಕಾರ್ಯಕರ್ತರಿಂದ ಒತ್ತಡ ತೀವ್ರವಾದ ನಂತರ ಎಫ್‌ಐಆರ್‌ ದಾಖಲಾಗಿದೆ.

ಪತ್ರಕರ್ತರನ್ನು ಮಾವೋವಾದಿಗಳ ಬೆಂಬಲಿಗರು ಎಂದು ಕರೆಯಲು ಬಹುಪಾಲು ಸಂದರ್ಭಗಳಲ್ಲಿ ಹಿಂಜರಿಯದ ಪೊಲೀಸರು, ‘ರಾಷ್ಟ್ರೀಯತೆಯ ವಿರೋಧಿ’ ಎಂಬ ವಿವರಣೆಯನ್ನೂ ಬಹಳ ಚುರುಕಾಗಿ ಬಳಸುತ್ತಾರೆ.

ಕಳೆದ ವಾರ, ಬಿಬಿಸಿ ವಾಹಿನಿಯ ಹಿಂದಿ ಪತ್ರಕರ್ತರೊಬ್ಬರು ಬೆದರಿಕೆ ಎದುರಾದ ಕಾರಣ ತಮಗೆ ವಹಿಸಿದ್ದ ಕೆಲಸವನ್ನು  ಅರ್ಧದಲ್ಲೇ ಕೈಬಿಡಬೇಕಾಯಿತು. ಬಸ್ತಾರ್‌ನ ಐಜಿಪಿ, ಅಂದರೆ ಅಲ್ಲಿನ ಅತ್ಯಂತ ಹಿರಿಯ ಪೊಲೀಸ್ ಅಧಿಕಾರಿ, ಈ ಪತ್ರಕರ್ತರಿಗೆ ಎಸ್‌ಎಂಎಸ್‌ ಮೂಲಕ ಹೀಗೆ ಹೇಳಿದರು:
‘ನಿಮ್ಮಂಥ ಪತ್ರಕರ್ತರಿಗಾಗಿ ನನ್ನ ಸಮಯ ಹಾಳುಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ರಾಷ್ಟ್ರೀಯವಾದಿ ಮತ್ತು ದೇಶಭಕ್ತ ಮಾಧ್ಯಮಗಳ ವರ್ಗ ನನ್ನನ್ನು ಬೆಂಬಲಿಸುತ್ತದೆ. ಅಂಥವರ ಜೊತೆ ನಾನು ಸಮಯ ಕಳೆಯುವುದು ಉತ್ತಮ’.

ದೆಹಲಿಯಲ್ಲಿ ಆಗುತ್ತಿರುವಂತೆಯೇ, ಬಸ್ತಾರ್‌ನಲ್ಲಿ ಕೂಡ ಸರ್ಕಾರದ ಕಣ್ಣಿಗೆ ‘ರಾಷ್ಟ್ರ ವಿರೋಧಿ’ ಎಂಬಂತೆ ಕಾಣಿಸಿಕೊಳ್ಳುವುದು ಹೊಸದೊಂದು ಅರ್ಥ ಪಡೆದಿದೆ. ಒಬ್ಬನಿಗೆ ಒಂದು ಬಾರಿ ‘ರಾಷ್ಟ್ರ ವಿರೋಧಿ’ ಎಂಬ ಹಣೆಪಟ್ಟಿ ಅಂಟಿದ ನಂತರ, ಆತನಿಗೆ ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳೂ ಇರುವುದಿಲ್ಲ.

ಆ ಹಂತದ ನಂತರ, ಆತ ಸರ್ಕಾರವನ್ನು ಟೀಕಿಸುವಂತಿಲ್ಲ. ಹಿಂಸೆಯಿಂದ ರಕ್ಷಣೆ ಆತನಿಗೆ ಇಲ್ಲ, ದೌರ್ಜನ್ಯಕ್ಕೆ ಒಳಗಾದರೆ ನ್ಯಾಯವೂ ಇಲ್ಲ.
ಮಧ್ಯಯುಗೀನ ಯುರೋಪ್‌ನಲ್ಲಿ ರಾಜನಿಷ್ಠೆ ತೋರದ ವ್ಯಕ್ತಿಯನ್ನು ದಂಡಿಸುವ ಮಾದರಿಯಲ್ಲಿ, ದೆಹಲಿ ಮತ್ತು ಬಸ್ತಾರ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ, ಗಲಾಟೆಯ ಗುಂಪುಗಳು ಸನ್ನದ್ಧವಾಗಿ ನಿಂತಿವೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.