2013ರ ಸೆಪ್ಟೆಂಬರ್ ಎರಡನೇ ವಾರದಿಂದಲೂ ಫೇಸ್‌ಬುಕ್, ಗೂಗಲ್‌ನಂಥ ಅಂತರ್ಜಾಲ ದೈತ್ಯರೆಲ್ಲರೂ ತಳಮಳದಲ್ಲಿದ್ದಾರೆ. ಇಂಥದ್ದೊಂದು ಸವಾಲು ಎದುರಾಗಬಹುದು ಎಂದು ಇವರಾರೂ ಊಹಿಸಿರಲಿಲ್ಲ. ಕೆಲ ತಿಂಗಳುಗಳ ಹಿಂದಷ್ಟೇ ಜಾಗತಿಕವಾಗಿ ದತ್ತಾಂಶ ಸಂವಹನಕ್ಕೆ ಅಡ್ಡಿಯಾಗದಂಥ ವ್ಯವಸ್ಥೆಯೊಂದಕ್ಕೆ ಪ್ರಬಲ ರಾಷ್ಟ್ರಗಳನ್ನು ಒಪ್ಪಿಸುವ ಕೆಲಸದಲ್ಲಿ ಅಮೆರಿಕದ ಪ್ರಭುತ್ವ ತೊಡಗಿಕೊಂಡಿತ್ತು.
ಇಂಥದ್ದೊಂದು ವ್ಯವಸ್ಥೆ ಇನ್ನೇನು ಕಾರ್ಯರೂಪಕ್ಕೆ ಬರಬಹುದು. ಅದರ ಮೂಲಕ ಚೀನಾದ ಗೋಡೆಯನ್ನು ಭೇದಿಸೋಣವೆಂದು ಅಮೆರಿಕದ ಅಂತರ್ಜಾಲ ದೈತ್ಯರೆಲ್ಲಾ ಸಂಚು ರೂಪಿಸುತ್ತಿರುವಾಗ ಅದನ್ನೆಲ್ಲಾ ಕ್ಷಣಾರ್ಧದಲ್ಲಿ ಮಣ್ಣು ಮಾಡಿದ್ದು ಬ್ರೆಜಿಲ್ ಅಧ್ಯಕ್ಷರು ಪ್ರಸ್ತಾಪಿಸಿದ ಮಾರ್ಕೋ ಸಿವಿಲ್ ದ ಇಂಟರ್‌ನೆಟ್ (Marco Civil da Internet).
ಹೌದು ಇಷ್ಟಕ್ಕೂ ಮಾರ್ಕೋ ಸಿವಿಲ್ ದ ಇಂಟರ್‌ನೆಟ್ ಎಂದರೆ ಏನು? ಇದನ್ನು ಅಂತರ್ಜಾಲ ಹಕ್ಕುಗಳ ಮಸೂದೆ ಎಂದು ಕನ್ನಡಕ್ಕೆ ಅನುವಾದಿಸಬಹುದು. ಬ್ರೆಜಿಲ್ ಅಂತರ್ಜಾಲ ಹಕ್ಕುಗಳ ಮಸೂದೆಯೊಂದನ್ನು ಮಂಡಿಸುವುದಕ್ಕೂ ಗೂಗಲ್, ಫೇಸ್‌ಬುಕ್. ಟ್ವಿಟ್ಟರಗಳಾದಿಯಾಗಿ ಅಂತರ್ಜಾಲ ದೈತ್ಯರೇಕೆ ತಳಮಳಗೊಳ್ಳಬೇಕು?
ಈ ಪ್ರಶ್ನೆಗಿರುವ ಉತ್ತರ ಬಹಳ ಕುತೂಹಲಕಾರಿಯಾಗಿದೆ. ಇಲ್ಲಿಯ ತನಕ ಇಂಟರ್‌ನೆಟ್ ಎಂಬ ತಂತ್ರಜ್ಞಾನದ ಮೇಲಿದ್ದ ಅಮೆರಿಕದ ಏಕಸ್ವಾಮ್ಯವನ್ನು ಕಸಿದುಕೊಳ್ಳುವ ಹಾದಿಯಲ್ಲಿ ಬ್ರೆಜಿಲ್ ಸಾಗುತ್ತಿದೆ. ತನ್ನ ದೇಶದ ವ್ಯಾಪಾರೀ ಏಕಸ್ವಾಮ್ಯಕ್ಕೆ ಧಕ್ಕೆಯಾಗುತ್ತದೆ ಎನಿಸಿದಾಗಲೆಲ್ಲಾ ಅಮೆರಿಕದ ಪ್ರಭುತ್ವ ಪ್ರತಿಕ್ರಿಯಿಸಿದೆ. ಈ ಪ್ರತಿಕ್ರಿಯೆ ಮಿಲಿಟರಿ ದಾಳಿಗಳ ರೂಪದಲ್ಲಿಯೂ ಇರುತ್ತದೆ ಎಂಬುದನ್ನು ಎರಡೆರಡು ಕೊಲ್ಲಿ ಯುದ್ಧಗಳು ತೋರಿಸಿಕೊಟ್ಟಿವೆ.
ಇಂಥ ದಾಳಿಗಳಿಗೆ ಮುಂಚೆ ಆರ್ಥಿಕ ದಿಗ್ಬಂಧನ ಎಂಬ ಅಸ್ತ್ರಗಳನ್ನೂ ಅಮೆರಿಕ ಪ್ರಯೋಗಿಸುವುದಿದೆ. ಆದರೆ ಈ ಬಾರಿ ಅಂಥದ್ದೇನನ್ನೂ ಮಾಡುವ ಸ್ಥಿತಿಯಲ್ಲಿ ಅಮೆರಿಕದ ಪ್ರಭುತ್ವವೂ ಇಲ್ಲ. ಒಂದು ವೇಳೆ ಹಾಗೆ ಮಾಡಲು ಮುಂದಾದರೆ ಅದಕ್ಕೆ ಇಡೀ ಯೂರೋಪ್ ಒಕ್ಕೂಟದಿಂದ ವಿರೋಧ ಬರಬಹುದು. ರಷ್ಯಾ ಕನಲಿ ಪ್ರತಿಕ್ರಿಯಿಸಬಹುದು. ಅಷ್ಟೇ ಅಲ್ಲ ಆ ಎಲ್ಲಾ ದೇಶಗಳೂ ಈಗಾಗಲೇ ಇರುವ ತಮ್ಮ ಅಂತರ್ಜಾಲ ಹಕ್ಕುಗಳ ಕಾಯ್ದೆಗಳಿಗೆ ಬ್ರೆಜಿಲ್ ಜೋಡಿಸಲು ಹೊರಟಿರುವಂಥ ಹಲ್ಲುಗಳನ್ನೇ ಜೋಡಿಸಲು ಪ್ರಯತ್ನಿಸಬಹುದು.
ಈ ರಾಜಕಾರಣಗಳನ್ನೆಲ್ಲಾ ಬದಿಗಿಟ್ಟು ಬ್ರೆಜಿಲ್ ಇಂಟರ್‌ನೆಟ್ ದೈತ್ಯರಿಗೆ ನುಂಗಿಸಲು ಹೊರಟಿರುವ ಜಾಪಾಳ ಮಾತ್ರೆ ಯಾವುದೆಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಬ್ರೆಜಿಲ್ ಇಂಟರ್‌ನೆಟ್ ಹಕ್ಕುಗಳ ಕುರಿತ ಮಸೂದೆಯೊಂದರ ಬಗ್ಗೆ ಕಳೆದ ಕೆಲವು ವರ್ಷಗಳಿಂದ ಹೇಳುತ್ತಲೇ ಬಂದಿತ್ತು. ಅದರ ಕರಡೂ ಸಿದ್ಧವಾಗಿತ್ತು. ಈ ಮಸೂದೆಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಒಂದು ಪ್ರಚಾರ ಅಭಿಯಾನವೂ ಆರಂಭವಾಗಿತ್ತು.
ಸ್ವತಃ ಬ್ರೆಜಿಲ್ ಇಂಟರ್‌ನೆಟ್‌ನಲ್ಲಿರುವ ಅಮೆರಿಕ ಪ್ರಭುತ್ವದ ಏಕಸ್ವಾಮ್ಯದ ಬದಲಿಗೆ ವಿಶ್ವಸಂಸ್ಥೆಯ ಅಡಿಯಲ್ಲಿರುವ ಒಂದು ವ್ಯವಸ್ಥೆ ಜಾಗತಿಕ ಇಂಟರ್‌ನೆಟ್ ಅನ್ನು ನಿಯಂತ್ರಿಸಬೇಕು ಎನ್ನುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ವೇದಿಕೆಯಲ್ಲೂ ಬ್ರೆಜಿಲ್ ಅಧ್ಯಕ್ಷರು ಮಾತನಾಡಿದ್ದರು. ಆದರೆ ಇದೆಲ್ಲವೂ ಒಮ್ಮತವನ್ನು ರೂಪಿಸುವ ಪ್ರಕ್ರಿಯೆಯಾಗಿಯಷ್ಟೇ ಉಳಿದಿತ್ತು.
ಅಮೆರಿಕದ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ ಜಾಗತಿಕ ಸಂವಹನವನ್ನು ಗುಟ್ಟಾಗಿ ಆಲಿಸುತ್ತಿದೆ ಎಂಬುದನ್ನು ಎಡ್ವರ್ಡ್ ಸ್ನೋಡೆನ್ ಬಯಲು ಮಾಡುವುದರೊಂದಿಗೆ ಇಂಟರ್‌ನೆಟ್ ಮೇಲೆ ಅಮೆರಿಕ ಹೊಂದಿರುವ ಏಕಸ್ವಾಮ್ಯ ಮತ್ತೆ ಚರ್ಚೆಗೆ ಬಂತು. ಅದಕ್ಕಿಂತ ಹೆಚ್ಚಾಗಿ ಅಮೆರಿಕ ಮೂಲದ ಗೂಗಲ್, ಫೇಸ್‌ಬುಕ್, ಟ್ವಿಟ್ಟರ್‌ಗಳಂಥ ಸಂಸ್ಥೆಗಳೆಲ್ಲವೂ ತಮ್ಮ ಸರ್ವರ್‌ಗಳಲ್ಲಿ ಎನ್‌ಎಸ್‌ಎಗಾಗಿ ಕಳ್ಳಕಿಂಡಿಯೊಂದನ್ನು ಇಟ್ಟಿವೆ ಎಂಬುದು ಎಲ್ಲಾ ದೇಶಗಳಲ್ಲಿಯೂ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತು.
ಇದರ ಹಿಂದೆಯೇ ಎನ್ಎಸ್ಎ ಬ್ರೆಜಿಲ್ ಅಧ್ಯಕ್ಷೆ ಡಿಲ್ಮಾ ರೌಸೆಫ್ ಅವರ ಇ-ಮೇಲ್‌ಗಳನ್ನು ಕದ್ದು ನೋಡಿದೆ ಎಂಬ ವಿವರಗಳು ಬಯಲಾಗುವುದರೊಂದಿಗೆ ಬ್ರೆಜಿಲ್‌ನಲ್ಲಿ ಮಾರ್ಕೋ ಸಿವಿಲ್ ದ ಇಂಟರ್‌ನೆಟ್ ಜಾರಿಗೆ ತರುವುದಕ್ಕೆ ಬೇಕಿರುವ ರಾಜಕೀಯ ವಾತಾವರಣವೂ ಸೃಷ್ಟಿಯಾಗಿಬಿಟ್ಟಿತು. ಇದನ್ನು ಬಳಸಿಕೊಂಡ ಬ್ರೆಜಿಲ್ ಅಧ್ಯಕ್ಷರು ಮಾರ್ಕೊ ದ ಸಿವಿಲ್ ಇಂಟರ್‌ನೆಟ್ ಮಸೂದೆಯಲ್ಲಿ ಹೊಸತೊಂದು ಅಂಶವನ್ನು ಸೇರಿಸುವ ವಿಚಾರವನ್ನೂ ಹೇಳಿದರು.
ಇದರಂತೆ ಬ್ರೆಜಿಲ್‌ನ ನಾಗರಿಕರ ವೈಯಕ್ತಿಕ ವಿವರಗಳನ್ನೆಲ್ಲಾ ಇಂಟರ್‌ನೆಟ್ ದೈತ್ಯರು ಬ್ರೆಜಿಲ್‌ನಲ್ಲಿಯೇ ಇರುವ ದತ್ತಾಂಶ ಕೇಂದ್ರಗಳಲ್ಲಿ (Data center) ಇಡಬೇಕಾಗುತ್ತದೆ. ಅಂದರೆ ಬ್ರೆಜಿಲ್‌ನಲ್ಲಿ ನಡೆಯುವ ಅಷ್ಟೂ ಇಂಟರ್‌ನೆಟ್ ಸಂವಹನದ ದಾಖಲೆ ಅಮೆರಿಕದಲ್ಲಿರುವ ದತ್ತಾಂಶ ಕೇಂದ್ರಗಳಲ್ಲಿ ಇರುವಂತಿಲ್ಲ. ಮುಂದಿನ ವರ್ಷವೇ ಚುನವಾಣೆಯನ್ನು ಎದುರಿಸಲಿರುವ ಡಿಲ್ಮಾ ಅವರಂತೂ ಇಂಟರ್‌ನೆಟ್ ಹಕ್ಕುಗಳನ್ನು ಆದ್ಯತೆಯ ವಿಚಾರವಾಗಿ ತೆಗೆದುಕೊಂಡುಬಿಟ್ಟಿದ್ದಾರೆ. ದೇಶದ ಅರ್ಧದಷ್ಟು ಜನಸಂಖ್ಯೆ ಇಂಟರ್‌ನೆಟ್ ಬಳಸುತ್ತಿರುವ ದೇಶದಲ್ಲಿ ಇದು ಜನರನ್ನು ನೇರವಾಗಿ ತಟ್ಟುವ ವಿಚಾರ.
ಮಸೂದೆಯಲ್ಲಿರುವ ಅಂತರ್ದೇಶೀ ದತ್ತಾಂಶ ಕೇಂದ್ರಗಳ (in-country data center) ಅಂಶವನ್ನು ಹೇಗಾದರೂ ಮಾಡಿ ತೆಗೆದು ಹಾಕುವಂತೆ ಮಾಡಬೇಕು ಎಂಬ ಪ್ರಯತ್ನದಲ್ಲಿ ಅಮೆರಿಕ ಕೇಂದ್ರಿತ ಇಂಟರ್‌ನೆಟ್ ದೈತ್ಯರು ಪ್ರಯತ್ನಿಸುತ್ತಿದ್ದಾರೆ. ಇದರ ಅಂಗವಾಗಿ ಬ್ರೆಜಿಲ್‌ನ ರಾಜಕಾರಣಿಗಳಿಗೆ ಫೇಸ್‌ಬುಕ್ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನಡೆಸಿ ಫೇಸ್‌ಬುಕ್ ಮೂಲಕ ಮತದಾರರನ್ನು ಹೇಗೆ ಆಕರ್ಷಿಸಬಹುದು ಎಂದು ಹೇಳಿಕೊಡಲು ಪ್ರಯತ್ನಿಸುತ್ತಿದೆ.
ಹಾಗೆಯೇ ಅಂತರ್ದೇಶೀ ದತ್ತಾಂಶ ಕೇಂದ್ರಗಳು ಸೀಮಾತೀತ ಇಂಟರ್‌ನೆಟ್ ಪರಿಕಲ್ಪನೆಯನ್ನೇ ಒಂದೊಂದು ರಾಷ್ಟ್ರದ ಗಡಿಗಳಿಗೆ ಸೀಮಿತಗೊಳಿಸಿಬಿಡಬಹುದು. ಇದು ಬ್ರೆಜಿಲ್‌ನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಂಬಂಧೀ ಉದ್ದಿಮೆಗೆ ಪೆಟ್ಟುಕೊಡಬಹುದು ಮುಂತಾದ ಭಯಗಳನ್ನೂ ಬಿತ್ತಲು ಪ್ರಯತ್ನಿಸುತ್ತಿದೆ. ಇಷ್ಟಕ್ಕೂ ಇಂಟರ್‌ನೆಟ್ ದೈತ್ಯರು ಬ್ರೆಜಿಲ್‌ನ ಪ್ರಸ್ತಾಪಕ್ಕೆ ಭಯಬೀಳುತ್ತಿರುವುದೇಕೆ? ಈ ಪ್ರಶ್ನೆಗಿರುವ ಉತ್ತರ ಕೇವಲ ತಂತ್ರಜ್ಞಾನವಷ್ಟೇ ಅಲ್ಲ.
ಇಂಟರ್‌ನೆಟ್‌ನ ವಿಚಾರದಲ್ಲಿ ಆರಂಭದಿಂದಲೂ ಅಮೆರಿಕಕ್ಕೆ ಒಂದು ಬಗೆಯ ಏಕಸ್ವಾಮ್ಯವಿದೆ. ಈ ಪರಿಕಲ್ಪನೆ ರೂಪುಗೊಂಡದ್ದೇ ಅಮೆರಿಕದ ಸೇನೆಯ ಮೂಲಕ. ಆರಂಭದ ARPANET ಕಾಲದಿಂದ ಆರಂಭಿಸಿ ಈ ತನಕವೂ ಇಂಟರ್‌ನೆಟ್‌ಗೆ ಸಂಬಂಧಿಸಿದ ಎಲ್ಲಾ ತಂತ್ರಜ್ಞಾನಗಳ ಅಭಿವೃದ್ದಿಯಲ್ಲಿ– ದತ್ತಾಂಶ ಸುರಕ್ಷತೆ ಮತ್ತು ರಹಸ್ಯ ಕಾಪಾಡುವ ಎನ್ಕ್ರಿಪ್ಷನ್ ತನಕವೂ– ಅಮೆರಿಕದ ಸೇನೆಗೆ ಒಂದು ಮುಖ್ಯ ಪಾತ್ರವಿದೆ.
ನಾವು ಯಾವುದು ಸುರಕ್ಷಾ ತಂತ್ರಜ್ಞಾನ ಎಂದು ಭಾವಿಸುತ್ತಿದ್ದೇವೆಯೋ ಅದರಲ್ಲೆಲ್ಲಾ ಅಮೆರಿಕಕ್ಕೆ ಬೇಕಿರುವ ಒಂದು ಕಳ್ಳಕಿಂಡಿ ಇರಬಹುದು ಎಂಬುದು ಈಗ ಕೇವಲ ಸಂಶಯವಾಗಿ ಮಾತ್ರ ಉಳಿದಿಲ್ಲ. ಅಮೆರಿಕದಿಂದ ದತ್ತಾಂಶ ಕೇಂದ್ರಗಳು ಹೊರಗೆ ಹೋಗುತ್ತವೆ ಎಂದರೆ ಇಂಟರ್‌ನೆಟ್‌ನ ಮೇಲಿನ ಅಮೆರಿಕದ ಏಕಸ್ವಾಮ್ಯವೂ ಇಲ್ಲವಾಗುತ್ತದೆ ಎಂದರ್ಥ. ಇನ್ನು ಈ ದೊಡ್ಡ ಸಂಸ್ಥೆಗಳು ಮುಂದಿಡುತ್ತಿರುವ ತಾಂತ್ರಿಕ ಕಾರಣಗಳೆಲ್ಲವೂ ಕೆಲ ಮಟ್ಟಿಗೆ ನಿಜವೇ. ಆದರೆ ತಂತ್ರಜ್ಞಾನದ ಬದಲಾವಣೆಗೆ ಆಗುವ ಖರ್ಚು ಅವುಗಳು ಮಾಡಿಕೊಳ್ಳುತ್ತಿರುವ ಲಾಭದ ದೃಷ್ಟಿಯಿಂದ ನೋಡಿದರೆ ನಗಣ್ಯ.
ರಾಜಕೀಯ ಕಾರಣಗಳ ಹೊರತಾಗಿ ಇಂಟರ್‌ನೆಟ್ ದೈತ್ಯರನ್ನು ಭಯಬೀಳಿಸುತ್ತಿರುವ ವಿಚಾರವೆಂದರೆ ಈ ದೈತ್ಯರ ಸೇವೆಗಳನ್ನು ಬಳಸುತ್ತಿರುವ ಜನರ ಸಂಖ್ಯೆ. ಫೇಸ್‌ಬುಕ್ ಬಳಸುವವರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡರೆ ಬ್ರೆಜಿಲ್ ಮೂರನೇ ಬಹುದೊಡ್ಡ ಗ್ರಾಹಕ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಪ್ರಮಾಣದ ಇಂಟರ್‌ನೆಟ್ ಸಂಪರ್ಕವಿರುವ ದೇಶವೆಂದರೆ ಬ್ರೆಜಿಲ್.
ಅಂದರೆ ಬ್ರೆಜಿಲ್ ಎಂಬುದು ಈ ಇಂಟರ್‌ನೆಟ್ ದೈತ್ಯರ ಮಟ್ಟಿಗೆ ಒಂದು ದೊಡ್ಡ ಮಾರುಕಟ್ಟೆಯೂ ಹೌದು. ಈ ಮಾರುಕಟ್ಟೆಯನ್ನು ಬಿಟ್ಟುಕೊಡುವುದಕ್ಕೆ ಅವರು ಸಿದ್ಧರಿಲ್ಲ. ಹಾಗಾಗಿ ಬ್ರೆಜಿಲ್ ಹೊಸ ಕಾನೂನು ತಂದರೆ ಅವುಗಳೆಲ್ಲವೂ ತಮ್ಮ ದತ್ತಾಂಶ ಕೇಂದ್ರಗಳನ್ನು ಬ್ರೆಜಿಲ್‌ನಲ್ಲಿ ಸ್ಥಾಪಿಸಲೇಬೇಕಾಗುತ್ತದೆ. ಕನಿಷ್ಠ ತಮ್ಮ ವ್ಯಾಪಾರವನ್ನು ಉಳಿಸಿಕೊಳ್ಳುವುದಕ್ಕಾಗಿಯಾದರೂ ಇದನ್ನು ಮಾಡಲೇಬೇಕಾಗುತ್ತದೆ.
ದತ್ತಾಂಶ ಕೇಂದ್ರಗಳು ದೇಶದೊಳಗೇ ಇದ್ದರೆ ಅಮೆರಿಕದ ಗೂಢಚರ್ಯೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ಇಂಟರ್‌ನೆಟ್‌ನ ಪ್ರಜಾಪ್ರಭುತ್ವೀಕರಣದ ಹಾದಿಯಲ್ಲಿ ಒಂದು ಮುಖ್ಯ ಹೆಜ್ಜೆಯಂತೂ ಆಗಬಹುದು. ಬ್ರೆಜಿಲ್‌ನ ಸಂಸತ್ತಿನಲ್ಲಿ ಈ ಮಸೂದೆ ಚರ್ಚೆಗೆ ಬಂದ ಸುದ್ದಿಯನ್ನು ಹೊರತು ಪಡಿಸಿದರೆ ನಂತರದ ಯಾವ ಬೆಳವಣಿಗೆಯ ಬಗ್ಗೆಯೂ ಗೂಗಲ್‌ನಲ್ಲಿ ಜಾಲಾಡಿದರೆ ಒಂದಕ್ಷರವೂ ಸಿಗುವುದಿಲ್ಲ. ಅದರ ಅರ್ಥ ಅಲ್ಲೇನೂ ನಡೆಯುತ್ತಿಲ್ಲ ಎಂದೇ? ಅಥವಾ ಜಾಗತಿಕ ಇಂಟರ್‌ನೆಟ್ ದೈತ್ಯರು ಈ ಸುದ್ದಿಯನ್ನು ಮುಚ್ಚಿಡುತ್ತಿದ್ದಾರೆ ಎಂದೇ? ಈ ಪ್ರಶ್ನೆಗೆ ಉತ್ತರ ಸಿಗುವುದಕ್ಕೆ ಇನ್ನೂ ಬಹುಕಾಲ ಬೇಕಾಗುತ್ತದೆ.
ಬ್ರೆಜಿಲ್ ಅಂತರ್ದೇಶೀ ದತ್ತಾಂಶ ಕೇಂದ್ರಗಳ ವಿಷಯದಲ್ಲಿ ವಿಜಯ ಸಾಧಿಸದೆಯೂ ಹೋಗಬಹುದು. ಆದರೆ ಅದು ಈಗಾಗಲೇ ಯೂರೋಪ್ ಮತ್ತು ಆಫ್ರಿಕಾ ಖಂಡವನ್ನು ಸಂಪರ್ಕಿಸುವ ಜಲಾಂತರ್ಗತ ಕೇಬಲ್‌ಗಳನ್ನು ಅಳವಡಿಸುವ ಕ್ರಿಯೆಯನ್ನು ಆರಂಭಿಸಿಬಿಟ್ಟಿದೆ. ಹಾಗೆಯೇ ಇಡೀ ದಕ್ಷಿಣ ಅಮೆರಿಕವನ್ನು ಆವರಿಸುವ ಕೇಬಲ್ ಜಾಲವೊಂದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿಯೂ ಹೆಜ್ಜೆಯಿಡುತ್ತದೆ. ಅಂದರೆ ಅಮೆರಿಕದ ಹೊರತಾದ ಒಂದು ಇಂಟರ್‌ನೆಟ್ ಸಾಧ್ಯ ಎಂಬುದನ್ನು ಸಾಧಿಸುವ ದಿಕ್ಕಿನಲ್ಲಿ ಅದು ಸಾಗುತ್ತಿದೆ. ಭಾರತದಂಥ ದೇಶಗಳೂ ಇದಕ್ಕೆ ಕೈ ಜೋಡಿಸಿದರೆ ನಾವು ನಿಜ ಅರ್ಥದಲ್ಲಿ ಒಂದು ಸಾಫ್ಟ್ ಪವರ್ ಆಗಬಹುದು.
ಆನೆಯನ್ನು ಮಣಿಸುವುದಕ್ಕೆ ಇರುವೆ ಸಾಕು ಎಂಬುದನ್ನು ಬ್ರೆಜಿಲ್ ತೋರಿಸಿಕೊಡುತ್ತಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಷ್ಟೇ. ಅಮೆರಿಕದ ಗೂಢಚರ್ಯೆ ಸೃಷ್ಟಿಸಿರುವ ಬಿಕ್ಕಟ್ಟು ಹೊಸತೊಂದು ವ್ಯಾಪಾರೀ ಸಾಧ್ಯತೆಯನ್ನೂ ಭಾರತದಂಥ ರಾಷ್ಟ್ರಗಳಿಗೆ ತೆರೆಯುತ್ತಿದೆ. ಅಂದರೆ ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದಂತೆ ಒಂದು ಸರಿಯಾದ ಕಾಯ್ದೆಯನ್ನು ರೂಪಿಸಿ ಇಡೀ ವಿಶ್ವಕ್ಕೆ ನಿಮ್ಮ ದತ್ತಾಂಶ ಭಾರತದಲ್ಲಿ ಸುರಕ್ಷಿತ ಎಂಬ ಸಂದೇಶವನ್ನು ನೀಡಬಹುದು.
ಆ ಮೂಲಕ ದತ್ತಾಂಶ ಕೇಂದ್ರ ಅಥವಾ ಡೇಟಾ ಸೆಂಟರ್‌ಗಳ ವ್ಯವಹಾರ ಭಾರತದಲ್ಲಿ ಕೇಂದ್ರೀಕೃತಗೊಳ್ಳುವಂತೆಯೂ ಮಾಡಬಹುದು. ಇಂಥದ್ದೊಂದು ಸಾಧ್ಯತೆಯನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ನಮ್ಮ ಸರ್ಕಾರಗಳಿಗೆ ಇರಬೇಕಷ್ಟೇ. ಆಗ ಬೆಂಗಳೂರು ನಿಜವಾದ ಕೇವಲ ಸಾಫ್ಟ್‌ವೇರ್ ‘ಕೂಲಿ ವ್ಯಾಲಿ’ ಉಳಿಯದೆ ನಿಜ ಅರ್ಥದ ಸಿಲಿಕಾನ್ ವ್ಯಾಲಿಯಾಗಬಹುದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.