ADVERTISEMENT

ಎರಡು ಸರ್ಕಾರಿ ಲ್ಯಾಪ್‌ಟಾಪ್ ಕಥೆಗಳು

ಎ.ಎನ್‌ ಎಮ ಇಸ್ಮಾಯಿಲ್
Published 2 ಫೆಬ್ರುವರಿ 2014, 19:30 IST
Last Updated 2 ಫೆಬ್ರುವರಿ 2014, 19:30 IST

ಕಳೆದ ಹನ್ನೆರಡು ದಿನಗಳಲ್ಲಿ ಎರಡು ಉಚಿತ ಲ್ಯಾಪ್‌­ಟಾಪ್ ಯೋಜನೆಗಳು ಕರ್ನಾಟಕದಲ್ಲಿ ಅನಾವರಣಗೊಂಡವು. ಮೊದಲನೆಯದ್ದು ವಿಧಾನ­ಸಭಾಧ್ಯಕ್ಷರು ಘೋಷಿಸಿದ ಶಾಸಕರಿಗೆ ಲ್ಯಾಪ್‌ಟಾಪ್ ಅನುದಾನ ಯೋಜನೆ. ಎರಡನೆಯದ್ದು ರಾಜ್ಯಪಾಲರ ಭಾಷಣದ ಮೂಲಕ ಅನಾವರಣಗೊಂಡ ಪದವಿ­ಪೂರ್ವ ವಿದ್ಯಾರ್ಥಿಗಳಿಗೆ (ಪಿಯುಸಿ) ಲ್ಯಾಪ್‌ಟಾಪ್ ಕೊಡುವ ಯೋಜನೆ. ಹಿಂದಿದ್ದ ಬಿಜೆಪಿ ಸರ್ಕಾರ ಶಾಸಕರಿಗೆ ಐ–ಪ್ಯಾಡ್ ಕೊಟ್ಟಿತ್ತು. ಈಗಿನ ಸರ್ಕಾರ ಲ್ಯಾಪ್‌ಟಾಪ್ ಕೊಡುತ್ತಿದೆ.  ಹಿಂದಿನ ಮುಖ್ಯಮಂತ್ರಿ­ಗಳು ವಿದ್ಯಾರ್ಥಿಗಳಿಗೆ ಸೈಕಲ್ ಕೊಟ್ಟಿದ್ದರು. ಸಿದ್ದ­ರಾಮಯ್ಯ­ ಲ್ಯಾಪ್‌ಟಾಪ್ ಕೊಡುತ್ತಿದ್ದಾರೆ ಅದರಲ್ಲಿ ವಿಶೇಷವೇನು ಎಂಬ ಪ್ರಶ್ನೆಗೆ ಒಂದು ರಾಜಕೀಯೇತರ­ಉತ್ತರ ಕಂಡುಕೊಳ್ಳಲು ಪ್ರಯತ್ನಿಸೋಣ.

ಇ–ಆಡಳಿತದ ಈ ಕಾಲದಲ್ಲಿ ಶಾಸಕರಿಗೊಂದು ಲ್ಯಾಪ್‌ಟಾಪ್ ಬೇಕು. ಆದರೆ ವಿಧಾನಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪನವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ­ದಂತೆ ಸರ್ಕಾರ ಈ ಲ್ಯಾಪ್‌ಟಾಪ್‌ಗಳನ್ನು ಖರೀದಿಸು­ವುದಿಲ್ಲ. ಶಾಸಕರು ತಮಗೆ ಬೇಕಿರುವ ಲ್ಯಾಪ್‌ಟಾಪ್‌ ಖರೀದಿಸಬಹುದು. ಸರ್ಕಾರ ಅದಕ್ಕೆ ಅರವತ್ತು ಸಾವಿರ ರೂಪಾಯಿಗಳನ್ನು ಅನುದಾನವಾಗಿ ಕೊಡುತ್ತದೆ. ಇದು ನಿಜಕ್ಕೂ ಒಳ್ಳೆಯ ಉಪಾಯ. ಖರೀದಿ ಹಗರಣವೊಂದು ನಡೆಯದಂತೆ ಸರ್ಕಾರ ಎಚ್ಚರ ವಹಿಸಿದೆ ಎನ್ನಬಹುದು. ಆದರೆ ಇಲ್ಲಿರುವ ಸಮಸ್ಯೆ ಮತ್ತೊಂದು. ಈ ಲ್ಯಾಪ್‌ಟಾಪ್ ಶಾಸಕರಿಗೆ ಸರ್ಕಾರ ನೀಡುತ್ತಿರುವ ಉಡುಗೊರೆಯ ಸ್ವರೂಪದಲ್ಲಿರಬೇಕೇ?

ಲ್ಯಾಪ್‌ಟಾಪ್‌ಗಳನ್ನು ಕೊಡುವುದು ಸರ್ಕಾರಕ್ಕೆ ಹೊಸ ವಿಚಾರವೇನೂ ಅಲ್ಲ. ಅನೇಕ ಇಲಾಖೆಗಳು ಈಗಾಗಲೇ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅನು­ಕೂಲವಾಗಲಿ ಎಂಬ ಉದ್ದೇಶದಿಂದ ಹೀಗೆ ಲ್ಯಾಪ್‌­ಟಾಪ್ ಕೊಡುತ್ತಿವೆ. ಅವರು ನಿರ್ದಿಷ್ಟ ಇಲಾಖೆ ಅಥವಾ ಕಚೇರಿಯಿಂದ ತೆರಳುವಾಗ ಅದನ್ನು ಮರಳಿಸು­ತ್ತಾರೆ. ಶಾಸಕರಿಗೆ ಸರ್ಕಾರ ಕೊಡುವ ಲ್ಯಾಪ್‌ಟಾಪ್ ಕೂಡಾ ಹೀಗೆಯೇ ಮರಳಿಸುವಂಥದ್ದಾ­ಗಿರಬೇಕು.

ಅವರು ಲ್ಯಾಪ್‌ಟಾಪ್ ಬಳಸಬೇಕಿರುವುದು ಅಧಿಕೃತ ಕೆಲಸಕ್ಕೆ ಎಂಬುದನ್ನು ಸರ್ಕಾರ ಮರೆತಂತೆ ಕಾಣಿಸುತ್ತದೆ. ಈ ಹಿಂದೆ ವಿತರಿಸಲಾಗಿದ್ದ ಐ–ಪ್ಯಾಡ್‌­ಗಳ ವಿಚಾರವೂ ಅಷ್ಟೇ. ಶಾಸಕರ ಕರ್ತವ್ಯ ನಿರ್ವಹಣೆಗೆ ಇವು ಹೇಗೆ ಬಳಕೆಯಾದವು ಎಂಬುದರ ಕುರಿತಂತೆ ಈ ತನಕ ಯಾವುದೇ ವಿವರಗಳು ಲಭ್ಯವಿಲ್ಲ. ಲ್ಯಾಪ್‌ಟಾಪ್‌ ಕೂಡಾ ಶಾಸಕರಿಗೆ ಒದಗಿಸಲಾಗಿರುವ ಐಷಾರಾಮ­ಗಳಲ್ಲಿ ಒಂದು ಎಂಬಂತಾಗಿಬಿಡಬಾರದು. ಇದನ್ನು ಬಳಸಿ ಅವರೇನು ಮಾಡಬೇಕು ಎಂಬುದರ ಪರಿಕಲ್ಪನೆ ಸರ್ಕಾರಕ್ಕೂ ಇರಬೇಕು. ಅಷ್ಟೇ ಅಲ್ಲ ಇದು ಶಾಸಕತ್ವದ ಅವಧಿ ಮುಗಿದ ಮೇಲೆ ಹಿಂದಿರುಗಿಸು­ವಂತೆಯೂ ಇರಬೇಕು. ಇಲ್ಲವಾದರೆ ಶಾಸಕರಿಗೆ ಪ್ರತೀ ಅವಧಿಗೊಂದು ಲ್ಯಾಪ್‌ಟಾಪ್‌ನ ಉಡುಗೊರೆ ದೊರೆಯುತ್ತಾ ಹೋಗುತ್ತದೆ.

ಇದರ ಜೊತೆಗೆ ಇನ್ನೊಂದು ಮುಖ್ಯವಾದ ವಿಷಯವೂ ಇಲ್ಲಿದೆ. ಎರಡು ತಿಂಗಳ ಹಿಂದೆ  ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆದಾಗ ಸುಧಾಕರ್ ಲಾಲ್ ಅವರು ಕೇಳಿದ ಪ್ರಶ್ನೆ­ಯೊಂದಕ್ಕೆ ಕೆಐಎಡಿಬಿ ನೀಡಿದ್ದ ಉತ್ತರವನ್ನು ದೊಡ್ಡ­ದೊಂದು ವಾಹನದಲ್ಲಿ ಬೆಳಗಾವಿಗೆ ಹೇರಿ­ಕೊಂಡು ಹೋಗಬೇಕಾಯಿತು. ಒಂದೊಂದು ಅಧಿವೇಶನದ ಅವಧಿಯಲ್ಲಿಯೂ ಶಾಸಕರು ಕೇಳುವ ಪ್ರಶ್ನೆಗಳು, ಉತ್ತರಗಳು ಮತ್ತಿತರ ದಾಖಲೆಗಳ ಹೆಸರಿನಲ್ಲಿ ಬಳಕೆ­ಯಾಗುವ ಕಾಗದದ ಪ್ರಮಾಣ ಬಹಳ ದೊಡ್ಡದು. ಮುದ್ರಣ ಇತ್ಯಾದಿ ಎಂಬ ಖರ್ಚನ್ನೂ ಸೇರಿಸಿಕೊಂಡರೆ ಇದರ ಮೊತ್ತ ಬಹಳ ದೊಡ್ಡದು.

ಶಾಸಕರಲ್ಲಿ ಈಗಾಗಲೇ ಒಂದು ಐ–ಪ್ಯಾಡ್ ಇದೆ. ಹಾಗೆಯೇ ಈಗ ಒಂದು ಲ್ಯಾಪ್‌ಟಾಪ್ ಕೂಡಾ ದೊರೆಯುತ್ತಿದೆ. ಅಂದರೆ ವಿಧಾನಸಭಾ ಕಾರ್ಯಾ­ಲಯವನ್ನು ಕಾಗದ ರಹಿತವಾಗಿ ಮಾಡುವುದಕ್ಕೆ ಬೇಕಿರುವ ಮೂಲ ಸೌಕರ್ಯ ಸಿದ್ಧವಾದಂತಾಗಿದೆ. ಈಗ ಸರ್ಕಾರ ಮಾಡ­ಬಹುದಾದ ಮುಖ್ಯ ಕೆಲಸ­ವೆಂದರೆ ಶಾಸಕರ ಪ್ರಶ್ನೆಗಳು ಮತ್ತಿತರ ಪತ್ರವ್ಯವ­ಹಾರಗಳನ್ನು ಆನ್‌ಲೈನ್‌ನಲ್ಲಿಯೇ ನಿರ್ವಹಿಸುವುದು. ಪ್ರಶ್ನೆಗಳನ್ನು ನಿರ್ವಹಿಸುವುದಕ್ಕೆ ಲೋಕ­ಸಭೆ ಮತ್ತು ರಾಜ್ಯಸಭೆಗಳು ಈಗಾಗಲೇ ಮಾದರಿ­ಯಾಗಿವೆ.

ಉಳಿದ ಪತ್ರವ್ಯವಹಾರಗಳನ್ನು ಸದ್ಯಕ್ಕೆ ಇ–ಮೇಲ್ ಮೂಲಕವೇ ನಿರ್ವಹಿಸುವ ವ್ಯವಸ್ಥೆ ಮಾಡಬಹುದು. ಇದರಿಂದ ಪ್ರತೀ ವಿಧಾನಸಭೆಯ ಅವಧಿಯಲ್ಲೂ ಕಾಗದ, ಮುದ್ರಣಕ್ಕಾಗಿ ಖರ್ಚಾಗುವ ಕೋಟ್ಯಂತರ ರೂಪಾಯಿಗಳನ್ನು ಉಳಿಸ­ಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಶಾಸಕರಿಗೆ ದೊರೆ­ಯುವ ಮಾಹಿತಿ­ಯನ್ನು ಅಷ್ಟೇ ಸುಲಭವಾಗಿ ಶಾಸಕ­ರನ್ನು ಆರಿಸುವ ಜನರೂ ತಿಳಿದುಕೊಳ್ಳುವಂತೆ ಮಾಡಬಹುದು.

ಇನ್ನು ರಾಜ್ಯಪಾಲರ ಭಾಷಣದಲ್ಲಿ ಅನಾವರಣ­ಗೊಂಡ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಒದಗಿಸು­ತ್ತಿರುವ ಲ್ಯಾಪ್‌ಟಾಪ್‌ ಅನ್ನು ಗಮನಿಸೋಣ. ಎರಡು ವರ್ಷಗಳ ಹಿಂದೆ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಅಜೀಂ ಪ್ರೇಂಜಿ ಪ್ರತಿಷ್ಠಾನದ (ಎಪಿಎಫ್) ಸಹ ಮುಖ್ಯ ಕಾರ್ಯನಿರ್ವಹಣಾಧಿಕಾರಿ­ಯಾಗಿರುವ ಅನುರಾಗ್ ಬೆಹರ್ ತಮ್ಮ ಡಿಜಿಟಲ್ ಕಲಿಕಾ ಸಂಪನ್ಮೂಲ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಬಹಿರಂಗವಾಗಿ ಹೇಳಿಕೊಂಡರು.

ಭಾರೀ ವೆಚ್ಚದಲ್ಲಿ ತಯಾರಿಸಲಾದ ಈ ಕಲಿಕಾ ತಂತ್ರಾಂಶಗಳನ್ನು ಸುಮಾರು ಐದು ವರ್ಷಗಳ ಕಾಲ ಸಾವಿರಾರು ಸರ್ಕಾರಿ ಶಾಲೆಗಳಲ್ಲಿ ಬಳಸಿದ ನಂತರ ಎಪಿಎಫ್ ಇದೊಂದು ವಿಫಲ ಯೋಜನೆ ಎಂಬ ತೀರ್ಮಾನಕ್ಕೆ ಬಂದಿತ್ತು. ವಿದ್ಯುತ್ ಕೊರತೆ, ಇಂಟರ್ನೆಟ್ ಅಲಭ್ಯತೆ ಇತ್ಯಾದಿ ಮೂಲಸೌಕರ್ಯದ ಕಾರಣಗಳೆಲ್ಲವೂ ಈ ಯೋಜನೆಯ ವೈಫಲ್ಯದಲ್ಲಿ ಇದ್ದವಾದರೂ ಎಪಿಎಫ್‌ನ ಸಹ ಮುಖ್ಯ ಕಾರ್ಯ­ನಿರ್ವಹಣಾಧಿಕಾರಿ ನೀಡಿದ ಮುಖ್ಯ ಕಾರಣ: ‘ಕಲಿಕೆಯಲ್ಲಿ ಇದರ ಪ್ರಯೋಜನ ಶಿಕ್ಷಕರಿದ್ದಾಗ ಎಷ್ಟಿರುತ್ತದೆಯೋ ಅಷ್ಟು ಮಾತ್ರ. ಅಪವಾದವೆಂಬಂತೆ ಇದ್ದ ಕೆಲವೇ ಕೆಲವು ಶಿಕ್ಷಕರ ಕೈಯಲ್ಲಿ ಇದೊಂದು ಅತ್ಯುತ್ತಮ ಕಲಿಕೆಯ ಮಾಧ್ಯಮವಾಗಿತ್ತು. ಸಾಧಾರಣ ಶಿಕ್ಷಕರಿದ್ದಲ್ಲಿ ಮಕ್ಕಳಿಗೆ ಇದೊಂದು ಆಟಿಕೆಯಾಯಿತು’.

ಅಜೀಂ ಪ್ರೇಂಜಿ ಪ್ರತಿಷ್ಠಾನ ಸರ್ಕಾರದ ಜೊತೆ ಸೇರಿಕೊಂಡೇ ತನ್ನ ಡಿಜಿಟಲ್ ಕಲಿಕಾ ಸಂಪನ್ಮೂಲವನ್ನು ಬಳಸಿತ್ತು. ಲ್ಯಾಪ್‌ಟಾಪ್ ಕೊಡುವ ನಿರ್ಧಾರಕ್ಕೆ ಬರುವ ಮುನ್ನ ಈ ಹಿಂದೆ ಏನಾಗಿತ್ತು ಎಂಬುದನ್ನು ಸರ್ಕಾರ ಗಮನಿಸಬಹುದಿತ್ತು. ಅಥವಾ ಈ ಕ್ಷೇತ್ರದ ತಜ್ಞರ ಬಳಿ ಒಮ್ಮೆ ಕೇಳಬಹುದಿತ್ತು. ಎಲ್ಲಾ ಸರ್ಕಾರಗಳಂತೆ ಈ ಸರ್ಕಾರವೂ ‘ಐ.ಟಿ.ಯಿಂದಲೇ ಮೋಕ್ಷ’ ಎಂಬ ಮೂಢನಂಬಿಕೆಯ ಹಿಂದೆ ಬಿದ್ದಿರು­ವಂತಿದೆ. ಸದ್ಯದ ಮಟ್ಟಿಗೆ ಸರ್ಕಾರದ ಆದ್ಯತೆ­ಯಾಗಬೇಕಾದುದು ಪದವಿ ಪೂರ್ವ ಕಾಲೇಜುಗಳಲ್ಲಿ  ಪೂರ್ಣಾವಧಿ ಶಿಕ್ಷಕರಿರುವಂತೆ ನೋಡಿಕೊಳ್ಳುವುದು. ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಗಳು ಕಡ್ಡಾಯವಾಗುತ್ತಿವೆ.

 ಅದಕ್ಕಿಂತ ಹೆಚ್ಚಾಗಿ ಮೂಲ ವಿಜ್ಞಾನ ಮತ್ತು ಮಾನವಿಕ ವಿಷಯಗಳ ಅಧ್ಯಯನದ ಗುಣಮಟ್ಟ ಕೆಳಗೆ ಇಳಿಯುತ್ತಿರುವ ಹೊತ್ತಿನಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕೆ­ಯನ್ನು ಉದ್ದೀಪಿಸುವಂತೆ ಶಿಕ್ಷಕರನ್ನು ಸಿದ್ಧಪಡಿಸ­ಬೇಕಾದ ಅಗತ್ಯವೂ ಇದೆ. ಇದನ್ನೆಲ್ಲಾ ಮಾಡದೆ ಲ್ಯಾಪ್‌ಟಾಪ್ ಕೊಡುವುದು ಹದಿಹರೆಯದವರ ಕೈಯಲ್ಲಿ ಮತ್ತೊಂದು ಆಟಿಕೆಗಿಂತ ಭಿನ್ನವಾಗಿ ಬಳಕೆ­ಯಾಗುವ ಯಾವ ಸಾಧ್ಯತೆಗಳೂ ಇಲ್ಲ.

ಈ ವಿಷಯ­ದಲ್ಲಿ ಐಸಿಟಿ ಮತ್ತು ಶಿಕ್ಷಣದ ವಿಷಯದಲ್ಲಿ ಸಾಕಷ್ಟು ಪ್ರಯೋಗಗಳನ್ನು ನಡೆಸಿರುವ ಕೆನಡಾ ಮತ್ತು ಫಿನ್ಲೆಂಡ್ ನಮಗೆ ಮಾದರಿಯಾಗ­ಬೇಕಾಗಿದೆ. ವಿಶ್ವದಲ್ಲೇ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಈ ಎರಡೂ ದೇಶಗಳೂ ಶಿಕ್ಷಣ ಕ್ಷೇತ್ರದಲ್ಲಿ ಐಸಿಟಿಗಾಗಿ ಯಾವುದೇ ರೀತಿಯಲ್ಲಿ ಹಣ ವೆಚ್ಚ ಮಾಡುವುದಿಲ್ಲ. ಈ ವಿಷಯವನ್ನು ಸರ್ಕಾರಿ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡಿ ಬಂದಿರುವ ಯಾರಾದರೊಬ್ಬ ಶಾಸಕರು ಕನಿಷ್ಠ ಗೂಗಲಿಸಿ­ಯಾದರೂ ಈ ವಿಷಯವನ್ನು ಸರ್ಕಾರಕ್ಕೆ ತಿಳಿಸುವುದು ಉತ್ತಮ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.