ವೆಂಡಿ ಡೊನಿಗರ್ ಅವರ ಪುಸ್ತಕ The Hindus: An Alternative History ಯನ್ನು ಪೆಂಗ್ವಿನ್ ಇಂಡಿಯಾ ಪ್ರಕಾಶನ ಸಂಸ್ಥೆ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದು ಬೆಳಕಿಗೆ ಬಂದದ್ದರ ಹಿಂದೆಯೇ ಉಚಿತವಾಗಿ ಆ ಪುಸ್ತಕದ ಇ–ಆವೃತ್ತಿಗಳು ಎಲ್ಲೆಲ್ಲಿ ಲಭ್ಯವಿವೆ ಎಂಬ ವಿವರ ಫೇಸ್‌ಬುಕ್, ಟ್ವಿಟ್ಟರ್, ಇ–ಮೇಲ್, ಬ್ಲಾಗ್ ಹೀಗೆ ಎಲ್ಲೆಂದರಲ್ಲಿ ಹರಿದಾಡತೊಗಿತು.
ಈ ಅನಧಿಕೃತ ಪುಸ್ತಕ ನಿಷೇಧಕ್ಕೆ ಸಂಬಂಧಿಸಿದಂತೆ ಅತ್ಯಂತ ಕುತೂಹಲಕರವಾದ ಪ್ರತಿಕ್ರಿಯೆ ಪ್ರಕಟವಾಗಿದ್ದು http://kafila.org ಎಂಬ ವೆಬ್‌ಸೈಟ್‌ನಲ್ಲಿ. ನಿವೇದಿತಾ ಮೆನನ್ ಅವರ ಈ ಪ್ರತಿಕ್ರಿಯೆಯಲ್ಲಿರುವ ಚಿತ್ರ, ಬರಹ, ಉಲ್ಲೇಖಗಳೆಲ್ಲವೂ ಒಂದು ಕಲಾಕೃತಿಯಂತೆ ಸಂಯೋಜನೆಗೊಂಡಿವೆ.
ಪ್ರಖ್ಯಾತ ಬೆಲ್ಜಿಯನ್ ಕಲಾವಿದ ರೆನೆ ಮ್ಯಾಗ್ರೀಟ್‌ನ ಪ್ರಖ್ಯಾತ ಚಿತ್ರ ದಿಸ್ ಈಸ್ ನಾಟ್ ಎ ಪೈಪ್ ಮೊದಲಿಗಿದೆ. ಅದರ ಅಡಿಯಲ್ಲಿ ವೆಂಡಿ ಡೊನಿಗೆರ್ ಅವರ ಪುಸ್ತಕದ ಮುಖಪುಟ ಚಿತ್ರ ಅದರಡಿಯಲ್ಲಿ ‘ಇದು ವೆಂಡಿ ಡೊನಿಗೆರ್ ಅವರ ದ ಹಿಂದೂಸ್: ಆ್ಯನ್ ಆಲ್ಟರ್‌ನೇಟಿವ್ ಹಿಸ್ಟರಿ ಅಲ್ಲ. ಈ ಕೆಳಗಿನವೂ ಅಷ್ಟೇ. ಇವು ಇಡೀ ಪಠ್ಯವನ್ನು ಡೌನ್‌ನೋಡ್ ಮಾಡಿಕೊಳ್ಳಬಹುದಾದ ಲಿಂಕ್‌ಗಳಷ್ಟೇ’ ಎಂಬ ಹೇಳಿಕೆಯಡಿಯಲ್ಲಿ ಪುಸ್ತಕದ ಇ–ಪಬ್ ಆವೃತ್ತಿ ಮತ್ತು ಪಿಡಿಎಫ್ ಆವೃತ್ತಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಬೇಕಿರುವ ಎರಡು ಕೊಂಡಿಗಳಿವೆ. ಇದರ ಕೆಳಗಿರುವ ವೆಂಡಿ ಡೊನಿಗೆರ್ ಅವರ ಹೇಳಿಕೆಯಿದೆ. ಅದನ್ನು ಹೀಗೆ ಅನುವಾದಿಸಬಹುದೇನೋ ‘ಇಂಟರ್‌ನೆಟ್ ಯುಗದಲ್ಲಿ ಪುಸ್ತಕವೊಂದನ್ನು ಧಮನಿಸಲು ಸಾಧ್ಯವಿಲ್ಲ ಎಂಬುದು ನನಗೆ ಸಮಾಧಾನದ ಸಂಗತಿ. ಪುಸ್ತಕ ಕಿಂಡಲ್‌ನಲ್ಲಿ (ಅಮೆಜಾನ್ ಸಂಸ್ಥೆಯ ಇ–ಪುಸ್ತಕದಂಗಡಿ) ಲಭ್ಯವಿದೆ. ಕಾನೂನು ಬದ್ಧ ಪ್ರಕಾಶನ ವ್ಯವಸ್ಥೆಯೂ ವಿಫಲವಾದರೂ ಪುಸ್ತಕಗಳನ್ನು ಚಾಲ್ತಿಯಲ್ಲಿಡುವ ವ್ಯವಸ್ಥೆ ಇಂಟರ್‌ನೆಟ್‌ನಲ್ಲಿದೆ. ಕೆಲವು ಹಿಂದೂಗಳಿಗೆ ನೋವುಂಟು ಮಾಡುವ ಪುಸ್ತಕಗಳೂ ಸೇರಿದಂತೆ ಭಾರತದ ಜನರು ಯಾವಾಗಲೂ ಎಲ್ಲಾ ಬಗೆಯ ಪುಸ್ತಕಗಳನ್ನೂ ಓದಬಹುದು.’ ಇದರ ಕೆಳಗೆ ಪೆಂಗ್ವಿನ್ ಪ್ರಕಾಶನ ಸಂಸ್ಥೆಯ ಲಾಂಛನವಾದ ಪೆಂಗ್ವಿನ್‌ನ ಚಿತ್ರವೊಂದು ‘ಕೋಳಿ’ ಎಂಬ ಶೀರ್ಷಿಕೆಯ ಜೊತೆ ಇದೆ. ಈ ಚಿತ್ರದ ಮೇಲೆ ‘ಇದು ಪೆಂಗ್ವಿನ್ ಅಲ್ಲ. ತನ್ನ ಧೈರ್ಯಕ್ಕಾಗಿ ಕುಖ್ಯಾತವಾಗಿರುವ ಹಕ್ಕಿ’ ಹೇಳಿಕೆಯಿದೆ. ಪುಸ್ತಕ ನಿಷೇಧದ ರಾಜಕಾರಣಕ್ಕೆ ನವ ಮಾಧ್ಯಮಕಷ್ಟೇ ಸಾಧ್ಯವಿರುವ ವ್ಯಂಗ್ಯದಲ್ಲಿ ಮೂಡಿಬಂದಿರುವ ಈ ಪ್ರತಿಕ್ರಿಯೆ ನಮ್ಮ ಕಾಲದ ಅನೇಕ ಸತ್ಯಗಳನ್ನೂ ಹೇಳುತ್ತಿದೆ.
ಇಂಟರ್‌ನೆಟ್‌ನ ಈ ಕಾಲದಲ್ಲಿ ಪುಸ್ತಕ ಡಿಜಿಟಲ್ ಸ್ವರೂಪ ಪಡೆದಾಕ್ಷಣ ಅದಕ್ಕೆ ಸಾವಿಲ್ಲ ಎಂಬುದು ಎಲ್ಲರೂ ನಂಬುವ ವಿಚಾರ. ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆದ ಕೆಲವು ಬೆಳವಣಿಗೆಗಳು ಹೇಳುತ್ತಿರುವ ವಿಚಾರವೇ ಬೇರೆ. ಜಾರ್ಜ್ ಆರ್ವೆಲ್‌ರ ‘ಅನಿಮಲ್ ಫಾರ್ಮ್’ ಮತ್ತು ‘1984’ ಕೃತಿಗಳ ಕಿಂಡಲ್ ಆವೃತ್ತಿಗಳನ್ನು ಅಮೆಜಾನ್ ಮೂಲಕ ಖರೀದಿಸಿದವರನ್ನೆಲ್ಲಾ ಬೆಚ್ಚಿಬೀಳಿಸುವ ಘಟನೆಯೊಂದು 2009ರಲ್ಲಿ ನಡೆಯಿತು. ಖರೀದಿಸಿದ ಕೆಲವು ದಿನಗಳ ನಂತರ ಎಲ್ಲರ ಕಿಂಡಲ್ ಇ–ರೀಡರ್‌ಗಳಿಂದ ಈ ಎರಡೂ ಕೃತಿಗಳು ಮಾಯವಾಗಿದ್ದವು. ಎಲ್ಲಿ ಹೋಯಿತೆಂದು ಎಲ್ಲರೂ ಹುಡುಕಾಟ ಆರಂಭಿಸಿದಾಗ ಇವುಗಳನ್ನು ಅಮೆಜಾನ್ ಕಂಪೆನಿಯೇ ಡಿಲಿಟ್ ಮಾಡಿದೆ ಎಂಬ ಅಂಶ ಬಯಲಾಯಿತು.
ಅಮೆಜಾನ್ ಕಂಪೆನಿ ಕೂಡಾ ತನ್ನ ಗ್ರಾಹಕರ ಕ್ಷಮೆ ಕೋರಿ ಈ ಎರಡೂ ಪುಸ್ತಕಗಳ ಇ–ಆವೃತ್ತಿಗೆ ಸಂಬಂಧಿಸಿದಂತೆ ಹಕ್ಕು ಸ್ವಾಮ್ಯದ ಸಮಸ್ಯೆ ಇರುವುದರಿಂದ ಹೀಗೆ ಡಿಲಿಟ್ ಮಾಡಬೇಕಾಯಿತು. ಗ್ರಾಹಕರು ತಾವು ನೀಡಿರುವ ಮೊತ್ತಕ್ಕೆ ಬೇರೆ ಪುಸ್ತಕ ಖರೀದಿಸಬಹುದು ಇಲ್ಲವೇ ಅವರಿಗೆ ಹಣ ಹಿಂದಿರುಗಿಸುತ್ತೇವೆ ಎಂಬ ಸ್ಪಷ್ಟೀಕರಣ ನೀಡಿತು. ಈ ವಿಚಾರ ಸಾಕಷ್ಟು ಚರ್ಚೆಯಾಯಿತು, ಅಮೆಜಾನ್ ಮುಂದೆ ಹೀಗೆ ಮಾಡುವುದಿಲ್ಲ ಎಂದೆಲ್ಲಾ ಹೇಳಿತು. ಆದರೆ ಹ್ಯಾರಿ ಪಾಟರ್ ಪುಸ್ತಕಗಳು, ಅಯನ್ ರ್‍ಯಾಂಡ್ ಅವರ ಪುಸ್ತಕಗಳು ಹೀಗೆ ದಿನ ಬೆಳಗಾಗುವುದರೊಳಗೆ ಗ್ರಾಹಕರ ಕಿಂಡಲ್‌ನಿಂದ ಕಾಣೆಯಾದವು. ಆಗಲೂ ಅಮೆಜಾನ್ ಮತ್ತೆ ‘ಈ ಪುಸ್ತಕಗಳಿಗೆ ಸಂಬಂಧಿಸಿದ ಹಕ್ಕು ಸ್ವಾಮ್ಯದ ಸಮಸ್ಯೆಗಳಿದ್ದವು. ಆದ್ದರಿಂದ ಅವುಗಳನ್ನು ತೆಗೆದು ಹಾಕುವುದು ತನಗೆ ಅನಿವಾರ್ಯವಾಗಿತ್ತು’ ಎಂದು ಹೇಳಿ ತಿಪ್ಪೆ ಸಾರಿಸಿತು.
ಒಂದು ವೇಳೆ ಅಮೆಜಾನ್‌ನಿಂದ ಒಂದು ಮುದ್ರಿತ ಪುಸ್ತಕವನ್ನು ಖರೀದಿಸಿದ್ದರೆ ಅದು ಗ್ರಾಹಕನ ಮನೆಗೆ ನುಗ್ಗಿ ಅವನ ಶೆಲ್ಫ್‌ನಲ್ಲಿರುವ ಪುಸ್ತಕವನ್ನು ಅದು ನಾಶ ಪಡಿಸಿ ನಿನಗೆ ಅದರ ದುಡ್ಡು ಹಿಂದಿರುಗಿಸುತ್ತೇನೆ ಎಂದು ಹೇಳಲು ಸಾಧ್ಯವಿತ್ತೆ? ಇ–ಪುಸ್ತಕಗಳ ಮಾಲೀಕತ್ವಕ್ಕೆ ಸಂಬಂಧಿಸಿದ ಇಂಥದ್ದೊಂದು ಪ್ರಶ್ನೆಯನ್ನು ಕಳೆದ ಐದು ವರ್ಷಗಳಿಂದಲೂ ಹಲವರು ಕೇಳುತ್ತಿದ್ದಾರೆ. ಇದಕ್ಕೆ ಅಮೆಜಾನ್ ಸೇರಿದಂತೆ ಎಲ್ಲಾ ಡಿಜಿಟಲ್ ದೈತ್ಯರು ನೀಡುವ ಉತ್ತರಗಳೂ ಡಿಜಿಟಲ್ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರ ಭಾಷೆಯಲ್ಲಿಯೇ ಇದೆ.
ಅಮೆಜಾನ್‌ನ ವಕೀಲರು ಹೇಳುವಂತೆ ‘ಇ–ಪುಸ್ತಕವೊಂದನ್ನು ಖರೀದಿಸುವುದು ಎಂದರೆ ಅದನ್ನು ಓದುವುದಕ್ಕೆ ಬೇಕಿರುವ ಅನುಮತಿಯನ್ನು ಪಡೆಯುವುದು ಎಂದರ್ಥವೇ ತಾನು ಖರೀದಿಸಿರುವ ಪ್ರತಿಯ ಮಾಲೀಕತ್ವವನ್ನು ಪಡೆಯುವುದು ಎಂದಲ್ಲ. ಇದನ್ನು ಮುದ್ರಿತ ಪುಸ್ತಕದಂತೆ ಪರಿಗಣಿಸುವುದು ತಪ್ಪು’ ಅಮೆಜಾನ್, ನೂಕ್, ಐ–ಬುಕ್ಸ್ ಹೀಗೆ ಇ–ಪುಸ್ತಕಗಳನ್ನು ಮಾರಾಟ ಮಾಡುವ ಯಾರ ಮಾರಾಟ ಷರತ್ತುಗಳನ್ನು ಸೂಕ್ಷ್ಮವಾಗಿ ಓದಿದರೂ ಇದು ಸ್ಪಷ್ಟವಾಗುತ್ತದೆ. ಈ ಎಲ್ಲಾ ಕಂಪೆನಿಗಳು ಪುಸ್ತಕಗಳನ್ನು ಖರೀದಿಸುವವರಿಗೆ ಓದುವುದಕ್ಕೆ ಅನುಮತಿಯನ್ನಷ್ಟೇ ನೀಡುತ್ತಿವೆ. ಈ ಪುಸ್ತಕದಲ್ಲಿರುವ ಯಾವುದೇ ಅಂಶವನ್ನು ಯಾವುದೇ ಕ್ಷಣದಲ್ಲಿ ಬದಲಾಯಿಸುವ ಹಕ್ಕು ಕಂಪೆನಿಯ ಬಳಿಯೇ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ಗ್ರಾಹಕರು ತಮಗೆ ಓದಲು ದೊರೆತಿರುವ ‘ಅನುಮತಿ’ಯನ್ನು ಇತರರೊಂದಿಗೆ ಹಂಚಿಕೊಳ್ಳಲೂ ಸಾಧ್ಯವಿಲ್ಲ. ಈ ಬಗೆಯ ಷರತ್ತುಗಳನ್ನು ಸಾಫ್ಟ್‌ವೇರ್‌ಗಳು ಮಾರಾಟಕ್ಕಿರುವ ಉತ್ಪನ್ನವಾದ ದಿನದಿಂದಲೂ ಎಲ್ಲರೂ ಮರು ಮಾತಿಲ್ಲದೇ ಒಪ್ಪಿಕೊಂಡು ಬಂದಿದ್ದಾರೆ. ಅದರ ಪರಿಣಾಮ ಅರ್ಥವಾಗುವುದಕ್ಕೆ ಇಷ್ಟು ಕಾಲ ಬೇಕಾಯಿತು.
ಪೆಂಗ್ವಿನ್ ತನ್ನ ಮುದ್ರಿತ ಪುಸ್ತಕಗಳನ್ನು ಹಿಂದೆಗೆದುಕೊಳ್ಳುತ್ತೇನೆ ಎಂದರೆ ಅದರ ಅರ್ಥ ಅಂಗಡಿಗಳಿಗೆ ಒದಗಿಸಲಾಗಿರುವ ಪುಸ್ತಕಗಳನ್ನು ಹಿಂದಕ್ಕೆ ಪಡೆಯುತ್ತೇನೆ ಮತ್ತು ತನ್ನ ಗೋದಾಮುಗಳಲ್ಲಿರುವ ಪುಸ್ತಕಗಳನ್ನು ಮಾರಾಟಕ್ಕೆ ಬಿಡುವುದಿಲ್ಲ ಎಂದಷ್ಟೇ ಅರ್ಥ. ಅದು ಈಗಾಗಲೇ ಖರೀದಿಸಿರುವ ಗ್ರಾಹಕರ ಮನೆಗೆ ನುಗ್ಗಿ ಅಲ್ಲಿರುವ ಪ್ರತಿಗಳನ್ನು ವಶಪಡಿಸಿಕೊಳ್ಳುವುದಿಲ್ಲ. ಆದರೆ ಇ–ಪುಸ್ತಕಗಳನ್ನು ಮಾರಾಟ ಮಾಡುವ ಸಂಸ್ಥೆಯೊಂದು ಪುಸ್ತಕಗಳನ್ನು ಹಿಂದೆಗೆದುಕೊಳ್ಳುತ್ತೇನೆ ಎಂದರೆ ಅದು ಗ್ರಾಹಕನ ಬಳಿ ಇರುವ ಪುಸ್ತಕಗಳನ್ನೂ ಕಿತ್ತುಕೊಳ್ಳುತ್ತದೆ. ಹೀಗೆ ಮಾಡುವುದಕ್ಕೆ ಅದು ಕಷ್ಟಪಡುವ ಅಗತ್ಯವೂ ಇಲ್ಲ. ನಿಷೇಧಿತ ಅಥವಾ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದ ಪುಸ್ತಕವಿರುವ ಕಂಪ್ಯೂಟರ್, ಟ್ಯಾಬ್, ಇ–ಬುಕ್ ರೀಡರ್ ಅಥವಾ ಅಂಥ ಯಾವುದೇ ಉಪಕರಣ ಅಂತರ್ಜಾಲ ಸಂಪರ್ಕಕ್ಕೆ ಬಂದಾಕ್ಷಣ ನಾಶಪಡಿಸುವ ಕ್ರಿಯೆ ಪೂರ್ಣಗೊಳ್ಳುತ್ತದೆ.
ಪುಸ್ತಕ ನಿಷೇಧದ ಡಿಜಿಟಲ್ ಭವಿಷ್ಯದ ಏಕೈಕ ಆಶಾಕಿರಣ ಹಾಲಿವುಡ್‌ನಿಂದ ಆರಂಭಿಸಿ ಸ್ಯಾಂಡಲ್‌ವುಡ್ ತನಕದ ಎಲ್ಲರೂ ವಿರೋಧಿಸುತ್ತಿರುವ ಪೈರಸಿ ಸಾಧ್ಯತೆಗಳು ಮಾತ್ರ. ಅಮೆಜಾನ್, ಐಬುಕ್ಸ್, ಐಟ್ಯೂನ್ಸ್ ಹೀಗೆ ಡಿಜಿಟಲ್ ಉತ್ಪನ್ನಗಳು ಮಾರುವ ಎಲ್ಲರೂ ತಮ್ಮ ಉತ್ಪನ್ನಗಳ ನಕಲು ಪ್ರತಿಗಳು ಸೃಷ್ಟಿಯಾಗದಂತೆ ಡಿಜಿಟಲ್ ಹಕ್ಕು ನಿರ್ವಹಣಾ ವ್ಯವಸ್ಥೆಯನ್ನು ಬಳಸುತ್ತಾರೆ. ಪೈರಸಿ ಮಾಡುವವರು ಈ ಡಿಜಿಟಲ್ ಹಕ್ಕು ನಿರ್ವಹಣಾ ವ್ಯವಸ್ಥೆಯನ್ನು ಭೇದಿಸಿ ನಿಸ್ತೇಜಗೊಳಿಸುತ್ತಾರೆ. ಇದರಿಂದ ಪುಸ್ತಕ ಅಥವಾ ಇತರ ಡಿಜಿಟಲ್ ಉತ್ಪನ್ನಗಳ ಅನಧಿಕೃತ ನಕಲು ಪ್ರತಿಗಳು ಸೃಷ್ಟಿಯಾಗುತ್ತದೆ ಎಂಬುದು ನಿಜ. ಆದರೆ ಈ ಪ್ರಕ್ರಿಯೆಯಲ್ಲಿ ಆ ಉತ್ಪನ್ನ ಸ್ವತಂತ್ರವಾಗುತ್ತದೆ. ಇವುಗಳನ್ನು ಗ್ರಾಹಕರಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ.
ಈ ಸ್ವತಂತ್ರಗೊಳಿಸುವ ಪ್ರಕ್ರಿಯೆಯನ್ನೂ ಹೆಚ್ಚಿನ ಎಲ್ಲಾ ದೇಶಗಳೂ ಅಪರಾಧವೆಂದು ಹೇಳಲು ಆರಂಭಿಸಿವೆ. ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ ಕೂಡಾ ಇದನ್ನೇ ಹೇಳುತ್ತದೆ. ವೆಂಡಿ ಡೊನಿಗೆರ್ ಅವರ ಪುಸ್ತಕದ ಇ–ಆವೃತ್ತಿಯ ಹಕ್ಕು ಸ್ವಾಮ್ಯ ಹೊಂದಿರುವವರು ಮನಸ್ಸು ಮಾಡಿದರೆ ಸುಲಭದಲ್ಲಿ ಪುಸ್ತಕದ ಇ–ಆವೃತ್ತಿ ದೊರೆಯದಂತೆ ಮಾಡಬಹುದು. ಆಗಲೂ ಪುಸ್ತಕ ಹಂಚಿಕೊಳ್ಳಲು ಹಲವು ಮಾರ್ಗಗಳನ್ನು ಇಂಟರ್‌ನೆಟ್ ಉಳಿಸಿಕೊಂಡಿರುತ್ತದೆ. ಅದು ಸದ್ಯದ ಭರವಸೆ ಮಾತ್ರ. ಸರ್ಕಾರಗಳು ಸಾಗುತ್ತಿರುವ ಹಾದಿ ನೋಡಿದರೆ ಇಂಥ ಹಾದಿಗಳನ್ನು ಅಧಿಕೃತ ಇಂಟರ್‌ನೆಟ್‌ನಲ್ಲಿ ಉಳಿಸಿಕೊಳ್ಳುವುದು ಕಷ್ಟ ಎನಿಸುತ್ತಿದೆ.
ಎಲ್ಲಾ ಹಾದಿಗಳೂ ಮುಚ್ಚಿಕೊಂಡಾಗ ಬೀದಿಯ ಗೋಡೆಗಳ ಮೇಲೆ ರಾತ್ರಿ ಪೊಲೀಸರ ಕಣ್ಣು ತಪ್ಪಿಸಿ ಇಂಟರ್‌ನೆಟ್ ಅನ್ನು ಸಂಕೇತಿಸುವ ಚಿತ್ರ ಬಿಡಿಸಿ ಅದರ ಕೆಳಗೆ ‘ಇದು ಇಂಟರ್‌ನೆಟ್ ಅಲ್ಲ ಅಭಿವ್ಯಕ್್ತಿ ಸ್ವಾತಂತ್ರ್ಯದ ಕುಖ್ಯಾತ ಸಂಕೇತ’ ಎಂದು ಬರೆದು ಪ್ರತಿಭಟಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.