ADVERTISEMENT

ಮಾಂಜ್ರಾ ನದಿತೀರದಲ್ಲಿ ‘ದೇವಣಿ’ ಹುಡುಕುತ್ತಾ...

ಸುದೇಶ ದೊಡ್ಡಪಾಳ್ಯ
Published 14 ಸೆಪ್ಟೆಂಬರ್ 2017, 19:30 IST
Last Updated 14 ಸೆಪ್ಟೆಂಬರ್ 2017, 19:30 IST

ದೇವಣಿಯಲ್ಲಿ ನಿಂತಾಗ..

ಅಲ್ಲಿ ಸಣ್ಣದೊಂದು ಗುಂಪು ಸೇರಿತ್ತು. ಪರಸ್ಪರರ ನಡುವೆ ಮಾತುಕತೆ ನಡೆಯುತ್ತಿತ್ತು. ನಾವು ಕುತೂಹಲದಿಂದ ಆ ಗುಂಪನ್ನು ಸೇರಿಕೊಂಡೆವು. ನನಗೆ ಮರಾಠಿ ತಿಳಿಯುವುದಿಲ್ಲ. ಜೊತೆಗಿದ್ದ ಸ್ನೇಹಿತರಿಗೆ ಮರಾಠಿ ಮಾತೃಭಾಷೆಯಷ್ಟೇ ಸಲೀಸು. ಗುಂಪಿನಲ್ಲಿ ಇದ್ದವರು ಬಾಲಿವುಡ್‌ನ ನಟರಾದ ಅಜಯ್‌ ದೇವಗನ್‌, ಅಕ್ಷಯ್‌ಕುಮಾರ್‌ ಅವರ ಹೆಸರನ್ನು ಹೇಳುತ್ತಿದದ್ದು ಮಾತ್ರ ನನಗೆ ತಿಳಿಯಿತು.

ಅಜಯ್‌ ದೇವಗನ್‌, ಅಕ್ಷಯ್‌ಕುಮಾರ್‌ ಅವರು ದೇವಣಿಯ ಜಾನುವಾರು ಸಂತೆಯಲ್ಲಿ ‘ದೇವಣಿ’ ಹಸುವನ್ನು ಖರೀದಿಸಿದ್ದಾರೆ. ಏಕೆಂದರೆ ದೇವಣಿ ಹಸುವಿನ ಹಾಲು ತುಂಬಾ ಆರೋಗ್ಯಕರ. ಅವರಿಗೆ ದೇವಣಿ ಹಸುವಿನ ಹಾಲಿನ ಮಹತ್ವ ಗೊತ್ತಿರುವುದು ಹೆಮ್ಮೆಯ ಸಂಗತಿ ಎಂದು ಆ ಗುಂಪಿನಲ್ಲಿ ಇದ್ದವರು ಮಾತನಾಡಿಕೊಳ್ಳುತ್ತಿದ್ದರು ಎಂದು ಸ್ನೇಹಿತರು ವಿವರಿಸಿದರು.

ADVERTISEMENT

ನಾನು ಅದೇ ‘ದೇವಣಿ ತಳಿ’ಯ ರಾಸುಗಳ ಜಾಡನ್ನು ಹಿಡಿದು ಹೊರಟ್ಟಿದ್ದೆ!

ತುಂಬಾ ಹಿಂದೆ ದೊಡ್ಡ ಹಳ್ಳಿಯಾಗಿದ್ದ ‘ದೇವಣಿ’ ಈಗ ತಾಲ್ಲೂಕು ಕೇಂದ್ರ. ಇದು ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯಲ್ಲಿದೆ. ನಮ್ಮ ಬೀದರ್‌ ಜಿಲ್ಲೆಯ ಕಮಲನಗರಕ್ಕೆ ಅಂಟಿಕೊಂಡಿದೆ.

‘ದೇವಣಿ’ಯು ಭಾರತದ ಜಾನುವಾರುಗಳಲ್ಲಿ ಪ್ರಮುಖ ದ್ವಿ ಉದ್ದೇಶ ತಳಿ. ನಿಜಾಮರ ಆಳ್ವಿಕೆಯಲ್ಲಿ ‘ದೇವಣಿ’ ಹಸು ಅತ್ಯುತ್ತಮ ಹಾಲು ಉತ್ಪಾದಕ ತಳಿ ಎಂದೂ, ಎತ್ತುಗಳು ಭಾರೀ ಕೆಲಸ ಮತ್ತು ತೀವ್ರವಾದ ಕೃಷಿಗೆ ವಿಶೇಷವಾಗಿ ಹೆಸರಾಗಿದ್ದವು. ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹರಿಯುವ ಮಾಂಜ್ರಾ ನದಿತೀರದ ಹಳ್ಳಿಗಳಲ್ಲಿ ದೇವಣಿ ತಳಿ ರಾಸುಗಳು ಜನಪ್ರಿಯ. ಹೀಗಾಗಿ ಬೀದರ್‌ ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿ, ಔರಾದ್‌ ತಾಲ್ಲೂಕು, ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯಲ್ಲಿ ಅಧಿಕವಾಗಿವೆ. ತೆಲಂಗಾಣದ ಮೇದಕ್‌ ಜಿಲ್ಲೆಯಲ್ಲಿ ಅಲ್ಲಲ್ಲಿ ಕಾಣಸಿಗುತ್ತವೆ.

ದೇವಣಿ ರಾಸುಗಳ ನಿರ್ವಹಣೆ ತಂಬಾ ಸುಲಭ. ರೋಗ ನಿರೋಧಕಶಕ್ತಿ ಹೆಚ್ಚು. ಉಷ್ಣ ವಲಯದ ಬರಪೀಡಿತ ಪ್ರದೇಶಗಳಿಗೆ ಹೊಂದಿಕೊಳ್ಳುತ್ತವೆ. ಆದ್ದರಿಂದ ಹೆಚ್ಚಿನ ರೈತರು ಸಾಂಪ್ರದಾಯಿಕ ಅಭ್ಯಾಸವಾಗಿ ದೇವಣಿ ರಾಸುಗಳನ್ನೇ ಹಿಂಬಾಲಿಸುತ್ತಾರೆ. ಔರಾದ್‌ ತಾಲ್ಲೂಕಿನ ತೋರಣ ಗ್ರಾಮದ ಪ್ರಗತಿಪರ ರೈತ ಹಂಸರಾಜ ಶೆಟಕಾರ ಅವರು ದೇವಣಿ ಹಸುವಿನ ಹಾಲನ್ನು ಅಮೃತಕ್ಕೆ ಹೋಲಿಸಿ ಹೆಮ್ಮ ಪಡುತ್ತಾರೆ. ಇವರ ಕುಟುಂಬ ಬೀದರ್‌ನಲ್ಲಿದೆ. ಆದರೆ, ನಿತ್ಯ ಹಳ್ಳಿಯಿಂದ ಅಲ್ಲಿಗೆ ಬಸ್ಸಿನ ಮೂಲಕ ದೇವಣಿ ಹಸುವಿನ ಹಾಲನ್ನು ಕಳುಹಿಸುತ್ತಾರೆ! ದೇವಣಿ ಹಸು ಮತ್ತು ಎತ್ತುಗಳನ್ನು ಸಾಕುವ ರೈತರು ಇದರ ಶಾಂತ ಸ್ವಭಾವ, ನಿಲ್ಲುವ ಭಂಗಿ, ಒಂಟೆಯಂತಹ ಡುಬ್ಬ, ಕೆಲಸ ಮಾಡುವ ಸಾಮರ್ಥ್ಯವನ್ನು ಹಾಡಿ ಹೊಗಳುತ್ತಾರೆ.

ದೇವಣಿಯಲ್ಲಿ ಕೊಟ್ಟಿಗೆ ನೋಡಲು ಹೋದಾಗ ಅಲ್ಲಿ ದೇವಣಿ ತಳಿಯ ಗಂಡುಕರು ನೆಗೆದಾಡುತ್ತಿತ್ತು. ಅದೊಂದನ್ನು ಬಿಟ್ಟರೆ ಉಳಿದವೆಲ್ಲವೂ ವಿದೇಶಿ ತಳಿಗಳ ಹಸುಗಳೇ ಇದ್ದವು.

‘ದೇವಣಿ ಆಕಳ ಹಾಲು ಚಲೋ ಇರತ್ತೈತಿ. ಆದ್ರ, ಜೇಬು ತುಂಬೋದಿಲ್ಲ. ಜರ್ಸಿ, ಎಚ್‌.ಎಫ್‌. ತಳಿ ಆಕಳು ಕ್ಯಾನ ತುಂಬ ಹಾಲ ಹಿಂಡ್ತಾವ್ರೀ’ ಎಂದು ವೈಜಿನಾಥ ಡೊಂಗರೆ ಮರಾಠಿ ಶೈಲಿಯ ಕನ್ನಡದಲ್ಲಿ ಹೇಳಿದರು.

ದೇಶದಲ್ಲಿನ ಭೀಕರ ಬರಗಾಲವು ಕ್ಷೀರ ಮತ್ತು ಹಸಿರುಕ್ರಾಂತಿಗೆ ಮುನ್ನುಡಿ ಬರೆದವು. ಕ್ಷೀರಕ್ರಾಂತಿಯಿಂದಾಗಿ ಕೊಟ್ಟಿಗೆಗೆ ವಿದೇಶಿ ಹಸುಗಳು ಬಂದು ನಿಂತವು. ಹಸಿರುಕ್ರಾಂತಿ ದೆಸೆಯಿಂದ ಜಮೀನ್ದಾರರ ಕೊಟ್ಟಿಗೆಗಳು ಟ್ರ್ಯಾಕ್ಟರ್‌, ಪವರ್‌ ಟಿಲ್ಲರ್‌ ನಿಲ್ಲುವ ಶೆಡ್ಡುಗಳಾಗಿ ರೂಪಾಂತರಗೊಂಡವು.

ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ರಾಜ್ಯಗಳ ಗಡಿ ಪ್ರದೇಶದಲ್ಲಿನ ಸುತ್ತಾಟದಲ್ಲಿ ರಾಸುಗಳು ಕಡಿಮೆ ಆಗಿರುವುದು ಢಾಳಾಗಿ ಕಾಣಿಸಿತು. ಈ ಕುರಿತು ರೈತರೊಂದಿಗೆ ಮಾತನಾಡಿದಾಗ– ‘ಮೇವಿನ ಕೊರತೆ ರಾಸುಗಳನ್ನು ಕೊಟ್ಟಿಗೆಯಿಂದ ಹೊರದೂಡುತ್ತಿದೆ. ಅಲ್ಲದೆ ಹಿಂದೆ ಅವಿಭಕ್ತ ಕುಟುಂಬಗಳು ಇರುತ್ತಿದ್ದವು. ಹಿಡುವಳಿಯೂ ಹೆಚ್ಚಾಗಿ ಇರುತ್ತಿತ್ತು. ಈಗ ಕುಟುಂಬಗಳು ಸಣ್ಣದಾಗಿವೆ. ಹಿಡುವಳಿ ಅಂಗೈ ಅಗಲಕ್ಕೆ ಬಂದಿದೆ. ಮಧ್ಯಮ ಗಾತ್ರದ ರೈತರ ಬಳಿ ಮಾತ್ರ ಜಾನುವಾರುಗಳಿವೆ. ದೇವಣಿ ಅಷ್ಟೇ ಅಲ್ಲ; ಎಲ್ಲ ತಳಿಯ ರಾಸುಗಳೂ ಕಡಿಮೆ ಆಗಿವೆ’ ಎಂದು ಹೇಳಿದರು.

ಕಮಲನಗರ ಸಮೀಪದ ತೋರಣ ಗ್ರಾಮದಲ್ಲಿ ರಾಜೇಂದ್ರ ವೆಂಕಟರಾವ ಪಾಟೀಲ ಇದ್ದಾರೆ. ಇವರ ಕುಟುಂಬ ಒಟ್ಟಿಗೆ ಇದ್ದಾಗ 500 ಎಕರೆ ಭೂಮಿ ಇತ್ತು. 125 ದೇವಣಿ ಆಕಳು, 25 ಎತ್ತುಗಳು ಇದ್ದವು. 200 ಎಕರೆಯಲ್ಲಿ ಒಕ್ಕಲುತನ ಮಾಡುತ್ತಿದ್ದರು. 300 ಎಕರೆಯನ್ನು ಗೋಮಾಳದ ರೀತಿ ಬಳಕೆ ಮಾಡುತ್ತಿದ್ದರು. ಇವರ ಕುಟುಂಬ ಪಾಲು ಪಡೆದು ಹಲವು ವರ್ಷಗಳಾದವು. ಈಗ ಇವರ ಬಳಿ 100 ಎಕರೆ ಭೂಮಿ ಇದೆ. ದೊಡ್ಡಿಯಲ್ಲಿ 20 ಜಾನುವಾರುಗಳಿವೆ. ವಾಡೆ (ದೊಡ್ಡ ಮನೆ) ಮುಂದೆ ಟ್ರ್ಯಾಕ್ಟರ್‌ ನಿಂತಿದೆ.

‘ಆ ದಿನಗಳು ಹೇಗಿದ್ದವು ಗೊತ್ತಾ? ಮೊದಲ ಆಕಳ ಊರಿನ ಅಗಸಿ (ಹೆಬ್ಬಾಗಿಲು) ಬಳಿ ಇದ್ದರೆ, ಕೊನೆಯ ಆಕಳ ನಮ್ಮ ವಾಡೆ ಬಾಗಿಲ ಬಳಿ ಇರುತ್ತಿತ್ತು. ಸಂಜೆ ಗೋಧೋಳಿಯನ್ನು ನೋಡುವುದು ಮನಸ್ಸಿಗೆ ಹಿಗ್ಗು ಅನಿಸುತ್ತಿತ್ತು’ ಎಂದು ಪಾಟೀಲರು ಗತಕಾಲವನ್ನು ನೆನಪಿಸಿಕೊಂಡರು.

ದೇವಣಿಯಲ್ಲಿ ನಿಂತು ‘ಈ ತಳಿಗೆ ದೇವಣಿ ಎಂಬ ಹೆಸರು ಏಕೆ ಬಂದಿತು’ ಎಂದು ಕೇಳಿದೆ.

‘ಇದು ನಮ್ಮೂರಿನ ತಳಿ; ಅದಕ್ಕೆ’ ಎಂದು ಅಭಿಮಾನದಿಂದ ಹೇಳಿದವರೇ ಹೆಚ್ಚು. ಆದರೆ, ಇದನ್ನು ಒಬ್ಬರು ಒಪ್ಪಲಿಲ್ಲ. ಈ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು. ಬಳಿಕ ಎಲ್ಲರ ಅಭಿಪ್ರಾಯವನ್ನು ಒಟ್ಟು ಮಾಡಿದಾಗ ಈ ತಳಿಯನ್ನು ‘ದೇವಣಿ’ಯಲ್ಲಿ ಗುರುತಿಸಿದ್ದರಿಂದ ‘ದೇವಣಿ’ ಎಂಬ ಹೆಸರು ಬಂದಿದೆ ಎನ್ನುವುದು ಗೊತ್ತಾಯಿತು.

ಆದರೆ, ಈ ಅಭಿಪ್ರಾಯವನ್ನು ದೇವಣಿ ತಳಿ ರಾಸುಗಳ ಕುರಿತು ಸಂಶೋಧನೆ ಮಾಡಿರುವ ಡಾ.ವಿವೇಕ ಪಾಟೀಲ ಅವರು ಒಪ್ಪುವುದಿಲ್ಲ.

‘ಈ ತಳಿಯು ಅಂದಾಜು 400 ವರ್ಷಗಳ ಹಿಂದೆ ನಾಸಿಕ್‌ನ ಸಹ್ಯಾದ್ರಿ ಪರ್ವತ ಪ್ರದೇಶದಲ್ಲಿ ವಿಕಸನಗೊಂಡಿದೆ. ಗಿರ್‌ ಮತ್ತು ಡಾಂಗಿ ಹಾಗೂ ಸ್ಥಳೀಯ ಜಾನುವಾರುಗಳ ಮಿಶ್ರಣದಿಂದ ಇಳಿಮುಖವಾದ ತಳಿಗಳಿಂದ ಅಭಿವೃದ್ಧಿಪಡಿಸಲಾಗಿದೆ. ಈ ತಳಿಯನ್ನು ವಿವಿಧ ಹೆಸರುಗಳಿಂದ ಸಹ ಕರೆಯಲಾಗುತ್ತದೆ. ಸುಮಾರು 80 ವರ್ಷಗಳ ಹಿಂದೆ ದೇವಣಿಯಲ್ಲಿ ಜಮೀನ್ದಾರರು ಈ ತಳಿಯನ್ನು ವ್ಯವಸ್ಥಿತವಾಗಿ ಸಂವರ್ಧನೆ ಮಾಡಿದರು. ಆದ್ದರಿಂದ ಇದಕ್ಕೆ ದೇವಣಿ ಎಂಬ ಹೆಸರು ಬಂದಿದೆ’ ಎಂದು ವಿವರ ನೀಡಿದರು.

ನಮ್ಮ ಗುಂಪಿನ ಸನಿಹವೆ ಮತ್ತೊಂದು ಗುಂಪು ಸೇರಿತ್ತು. ಕುತೂಹಲದಿಂದ ನೋಡಲು ಹೋದಾಗ ವಾಹನದಲ್ಲಿ ‘ದೇವಣಿ’ ಹೋರಿ ನಿಂತಿತ್ತು. ಅದರ ವಯಸ್ಸು ಒಂದೂವರೆ ವರ್ಷ. 75 ಸಾವಿರ ರೂಪಾಯಿಗೆ ಖರೀದಿಸಲಾಗಿತ್ತು. ವಿಳೇಗಾಂವದ ರಘುನಾಥ ಚವಾಣ ಅವರು ಆ ಹೋರಿಯನ್ನು ತಳಿ ಸಂವರ್ಧನೆಗೆ ಬಳಸುವುದಾಗಿ ಹೇಳಿದರು. ಅವರ ಮನೆತನ ಶುದ್ಧ ದೇವಣಿ ತಳಿಯನ್ನು ವೃದ್ಧಿಗೊಳಿಸುವ ಕೆಲಸವನ್ನು ತಲೆತಲಾಂತರದಿಂದ ಮಾಡಿಕೊಂಡು ಬರುತ್ತಿದೆ.

ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಗೋಕುಲ್‌ ವಿಷನ್‌’ ಯೋಜನೆಯಡಿ ದೇಸಿ ತಳಿಗಳ ಸಂರಕ್ಷಣೆಗೆ ಅನುದಾನ ನೀಡುತ್ತಿದೆ. ರಾಜ್ಯ ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇದೇ ಯೋಜನೆಯಲ್ಲಿ ಮಹಾರಾಷ್ಟ್ರದ ಉದಗೀರ್‌, ಬೀದರ್‌ ಜಿಲ್ಲೆಯ ಕಾರಂಜಾ ಜಲಾಶಯದಲ್ಲಿ ದೇವಣಿ ತಳಿ ಸಂಶೋಧನೆ ಮತ್ತು ಸಂವರ್ಧನೆ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಈ ತಳಿಯ ಹೋರಿಗಳನ್ನು ಶೋಕಿಗಾಗಿ ಸಾಕುವ ಶ್ರೀಮಂತ ರೈತರೂ ಇದ್ದಾರೆ. ಇವುಗಳು ಮನೆಯಲ್ಲಿ ಇದ್ದರೆ ಅವರಿಗೆ ‘ಬೆಂಜ್‌’ ಕಾರು ಹೊಂದಿರುವಷ್ಟೇ ಗೌರವ! ದೇವಣಿ ದೇಶದ ಪ್ರಮುಖ ಜಾನುವಾರು ಪ್ರದರ್ಶನಗಳಲ್ಲಿ ಚಾಂಪಿಯನ್‌ ಕೂಡ ಆಗಿದೆ.

ದೇಶದ ಹಳ್ಳಿಗಳಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಸ್ಪಷ್ಟ. ಸಮಾಜದಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದ ಕುಟುಂಬಗಳು ಸಣ್ಣದಾಗುತ್ತಿವೆ. ನೈಸರ್ಗಿಕ ವಿಕೋಪದಿಂದ ಮೇವು ಕೊರತೆ ಹೇರಳವಾಗಿದೆ. ರೈತರಿಗೆ ರಾಸುಗಳನ್ನು ಸಾಕುವುದು ಹೊರೆ ಎನಿಸುತ್ತಿದೆ. ಸರ್ಕಾರದ ನೀತಿಗಳು, ಜನಸಂಖ್ಯೆ ಹೆಚ್ಚಳದಿಂದ ದೇಸಿ ಜಾನುವಾರುಗಳ ಜಾಗದಲ್ಲಿ ವಿದೇಶಿ, ಮಿಶ್ರತಳಿ ರಾಸುಗಳು ಬಂದಿವೆ. ಕೂಲಿ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ಆದ್ದರಿಂದ ಎಲ್ಲ ಬಗೆಯ ಜಾನುವಾರುಗಳ ಇರುವಿಕೆಯೇ ಪಲ್ಲಟಗೊಳ್ಳುತ್ತಿದೆ.

ಯಾವುದೇ ಒಂದು ಸ್ಥಳೀಯ ಧಾನ್ಯ, ಸಸ್ಯ, ಜಾನುವಾರು ತಳಿಗೆ ಅದರದೇ ಚರಿತ್ರೆ ಇರುತ್ತದೆ. ಅದು ನೂರಾರು ವರ್ಷಗಳಿಂದ ವಿಕಸನ ಹೊಂದಿ, ಆ ಪರಿಸರಕ್ಕೆ ಸೂಕ್ತವಾಗಿ ಇರುತ್ತದೆ. ಆ ಜಾಗಕ್ಕೆ ಹೈಬ್ರೀಡ್‌ ತಳಿಗಳು ಬಂದಾಗ ದೇಸಿಯ ತಳಿಗಳ ಕೊಂಡಿ ತುಂಡಾಗುತ್ತದೆ.

ಆದ್ದರಿಂದಲೇ ಮಾಂಜ್ರಾ ನದಿತೀರದ ರೈತರು ವಿಶಿಷ್ಟ ದೇಸಿಯ ತಳಿಯೊಂದನ್ನು ಉಳಿಸಿಕೊಳ್ಳಲು ತೋರುತ್ತಿರುವ ಕಾಳಜಿ ನನಗೆ ಅತೀ ಸಂತಸವನ್ನು ಉಂಟು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.