
ಸ್ಮಾರ್ಟ್‌ಫೋನ್ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಸದ್ಯಕ್ಕೆ ಮೊದಲನೆಯ ಸ್ಥಾನದಲ್ಲಿರುವುದು ಗೂಗ್ಲ್‌ನವರ ಆಂಡ್ರೋಯಿಡ್. ಇದರ ಈಗಿನ ಆವೃತ್ತಿ 4.2.2 (ಜೆಲ್ಲಿ ಬೀನ್). ಗೂಗ್ಲ್ ಆಂಡ್ರೋಯಿಡ್ ಕಂಪೆನಿಯನ್ನು 2005ರಲ್ಲಿ ಕೊಂಡುಕೊಂಡಿತು. ನಂತರ 2007ರಲ್ಲಿ ಅದನ್ನು ಮುಕ್ತ ತಂತ್ರಾಂಶವಾಗಿ ಬಿಡುಗಡೆ ಮಾಡಿತು. ಇದರ ಪರಿಣಾಮವಾಗಿ ಆಂಡ್ರೋಯಿಡ್ ಕಾರ್ಯಾಚರಣ ವ್ಯವಸ್ಥೆಯನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯನ್ನು ತುಂಬಿದವು.
ಆಂಡ್ರೋಯಿಡ್ ಫೋನ್‌ಗಳನ್ನು ಹಲವು ಕಂಪೆನಿಗಳು ತಯಾರಿಸುತ್ತಿದ್ದರೂ ಮಧ್ಯೆ ಮಧ್ಯೆ ಗೂಗ್ಲ್ ಕಂಪೆನಿ ತನ್ನದೇ ನೆಕ್ಸಸ್ ಶ್ರೇಣಿಯ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಮಾಲಿಕೆಯಲ್ಲಿ ಹೊಚ್ಚಹೊಸದು ಗೂಗ್ಲ್ ನೆಕ್ಸಸ್ 4 (Google Nexus 4). ಇದು ನಮ್ಮ ಈ ವಾರದ ಗ್ಯಾಜೆಟ್.
ಗುಣವೈಶಿಷ್ಟ್ಯಗಳು
1.5 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (quadcore), 2+16 ಗಿಗಾಬೈಟ್ ಮೆಮೊರಿ, 4.7 ಇಂಚು ಗಾತ್ರದ 11280x768 ಪಿಕ್ಸೆಲ್ ರೆಸೊಲೂಶನ್‌ನ ಪರದೆ, ಐಪಿಎಸ್ ಮತ್ತು ಗೊರಿಲ್ಲ ಗಾಜು, 8 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 1.3 ಮೆಗಾಪಿಕ್ಸೆಲ್‌ನ ಇನ್ನೊಂದು ಕ್ಯಾಮೆರಾ, 2ಜಿ ಮತ್ತು 3ಜಿ, ವೈಫೈ, ಬ್ಲೂಟೂತ್, ಎನ್‌ಎಫ್‌ಸಿ ಸಂಪರ್ಕಗಳು, ನಿಸ್ತಂತು (ವೈರ್‌ಲೆಸ್) ಚಾರ್ಜಿಂಗ್, 1133.9 x 68.7 x 9.1 ಮಿ.ಮೀ ಗಾತ್ರ, 139 ಗ್ರಾಂ ತೂಕ, ಆಂಡ್ರೋಯಿಡ್ 4.2.2 ಕಾರ್ಯಾಚರಣ ವ್ಯವಸ್ಥೆ, ಜಿಪಿಎಸ್, ಎಕ್ಸೆಲೆರೋಮೀಟರ್, 3.5 ಮಿ.ಮೀ. ಇಯರ್‌ಫೋನ್ ಕಿಂಡಿ, ಯುಎಸ್‌ಬಿ ಕಿಂಡಿ, ಮೈಕ್ರೋಸಿಮ್ ಕಾರ್ಡ್, 2100 ಞಅ ಬ್ಯಾಟರಿ ಇತ್ಯಾದಿ.
ಕೈಯಲ್ಲಿ ಹಿಡಿದಾಗಿನ ಅನುಭವ ಚೆನ್ನಾಗಿದೆ. ಇದರ ಮುಂದೆ ಮತ್ತು ಹಿಂದೆ ಎರಡು ಕಡೆಯೂ ಗೊರಿಲ್ಲ ಗಾಜು ಇದೆ. ಬಿದ್ದರೆ ಈ ಗಾಜು ಅಷ್ಟು ಬೇಗನೆ ಒಡೆಯುವುದಿಲ್ಲ. ಹಾಗೆಂದು ಹೇಳಿ ಸುಮ್ಮನೆ ಬಿಡುವುದಕ್ಕಿಂತ ಒಂದು ಸುರಕ್ಷಾ ಕವಚ ಕೊಂಡುಕೊಂಡು ಹಾಕಿಕೊಳ್ಳುವುದು ಲೇಸು. ಇದರ ವಿನ್ಯಾಸ ಯುನಿಬಾಡಿ ಎನಿಸಿಕೊಳ್ಳುತ್ತದೆ. ಅಂದರೆ ಇದನ್ನು ಬಿಚ್ಚಲು ಆಗುವುದಿಲ್ಲ. ಬ್ಯಾಟರಿ ತುಂಬಾ ಸಮಯ ಬಾಳಿಕೆ ಬರುವುದಿಲ್ಲ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದ ನಂತರ ಅಂತರಜಾಲ, ಫೋನ್, ಆಟ, ವಿಡಿಯೊ ವೀಕ್ಷಣೆ ಎಲ್ಲ ಮಾಡಿದರೆ ಐದಾರು ಗಂಟೆ ಮಾತ್ರ ಉಳಿಯುತ್ತದೆ.
ಇದು ನೇರವಾಗಿ ಗೂಗ್ಲ್ ಅವರು ತಮ್ಮದೇ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಫೋನ್. ತಯಾರಿಸಿದ್ದು ಎಲ್‌ಜಿ ಕಂಪೆನಿ. ಆಂಡ್ರೋಯಿಡ್ ಫೋನ್ ತಯಾರಿಸುವ ಕಂಪೆನಿಗಳು ಆಂಡ್ರೋಯಿಡ್ ಮೇಲೆ ತನ್ನದೇ ಪ್ರತ್ಯೇಕ ಹೊದಿಕೆ ಹೊರಿಸುತ್ತವೆ. ಇದರಿಂದ ಕೆಲವು ಸೌಕರ್ಯಗಳೂ ತೊಂದರೆಗಳೂ ಏಕಕಾಲಕ್ಕೆ ಲಭ್ಯವಾಗುತ್ತವೆ. ಈ ಫೋನ್ ಅನ್ನು ಗೂಗಲ್ ತಮ್ಮದೇ ಹೆಸರಿನಲ್ಲಿ ಎಲ್‌ಜಿ ಕಂಪೆನಿ ಮೂಲಕ ಬಿಡುಗಡೆ ಮಾಡಿರುವುದರಿಂದ ಅಂತಹ ಯಾವುದೇ ಅಧಿಕ ತಂತ್ರಾಂಶಗಳಿಲ್ಲ. ಆದುದರಿಂದ ಇದು ಬೇಗನೆ ಬೂಟ್ ಆಗುತ್ತದೆ ಮತ್ತು ಕೆಲಸ ಮಾಡುವಾಗ ನಿಧಾನ ಆಗುವುದಿಲ್ಲ. ಗೂಗ್ಲ್‌ನದೇ ಫೋನ್ ಆಗಿರುವುದರಿಂದ ಒಂದು ಪ್ರಮುಖ ಸಾಧಕ ಇದೆ.
ಗೂಗ್ಲ್ ಕಂಪೆನಿ ಆಂಡ್ರೋಯಿಡ್ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿ ಬಿಡುಗಡೆ ಮಾಡುತ್ತಿದ್ದಂತೆ ಈ ಫೋನ್ ಬಳಕೆದಾರರಿಗೆ ಕೂಡಲೆ ಲಭ್ಯವಾಗುತ್ತದೆ. ಫೋನ್ ತಯಾರಿಸಿದ ಕಂಪೆನಿ ತನ್ನ ಸುಧಾರಿತ ಆಂಡ್ರೋಯಿಡ್ ಬಿಡುಗಡೆ ಮಾಡುವ ತನಕ ಕಾಯಬೇಕಾಗಿಲ್ಲ. ನಾಲ್ಕು ಹೃದಯಗಳ ಪ್ರೊಸೆಸರ್ ಇರುವುದರಿಂದ ಇದು ವೇಗವಾಗಿ ಕೆಲಸ ಮಾಡುತ್ತದೆ. ಆಟ ಆಡುವಾಗಿನ ಅನುಭವ ಚೆನ್ನಾಗಿದೆ. ವಿಡಿಯೊ ಪ್ಲೇ ಕೂಡ ಚೆನ್ನಾಗಿದೆ. ಹೈಡೆಫಿನಿಶನ್ ವಿಡಿಯೊ ವೀಕ್ಷಣೆಯ ಅನುಭವ ಚೆನ್ನಾಗಿದೆ.
ಪರದೆ ಪೂರ್ಣ ಕಪ್ಪಾಗಿರುವುದರಿಂದ ವಿಡಿಯೊ ನೋಡಲು ಮತ್ತು ಹೈಡೆಫಿನಿಶನ್ ಆಟ ಆಡಲು ಈ ಫೋನ್ ಚೆನ್ನಾಗಿದೆ. ಇದರಲ್ಲಿರುವ ಆಡಿಯೊ ಎಂಜಿನ್ ಚೆನ್ನಾಗಿದೆ. ಉತ್ತಮ ಇಯರ್‌ಫೋನ್, ಹೆಡ್‌ಫೋನ್ ಅಥವಾ ಆಂಪ್ಲಿಫೈಯರ್‌ಗೆ ಸಂಪರ್ಕಿಸಿ ಉತ್ತಮ ಸಂಗೀತ ಆಲಿಸಬಹುದು. ಆದರೆ ಈ ಫೋನ್ ಜೊತೆ ಯಾವುದೇ ಇಯರ್‌ಪೋನ್ ನೀಡಿಲ್ಲ. ಇದೊಂದು ಸ್ವಲ್ಪ ವಿಚಿತ್ರ. ಸಾವಿರ ರೂ. ಬೆಲೆಬಾಳುವ ಫೋನ್ ಜೊತೆಯೂ ಇಯರ್‌ಫೋನ್ ದೊರೆಯುವ ಈ ಕಾಲದಲ್ಲಿ ಒಂದು ಉತ್ತಮ ಇಯರ್‌ಫೋನ್ ನೀಡಲು ಅವರಿಗೆ ಏನು ತೊಂದರೆಯಾಯಿತೋ ಗೊತ್ತಿಲ್ಲ. ಇದರಲ್ಲಿ ಎಫ್‌ಎಂ ರೇಡಿಯೊ ಇಲ್ಲ. ಇದು ಬಹುಶಃ ಬಿಸಿನೆಸ್ ಫೋನ್, ಮನರಂಜನೆಗಾಗಿ ಅಲ್ಲ ಎಂಬ ತೀರ್ಮಾನ ತಯಾರಕರದಿರಬೇಕು.
ಗೂಗ್ಲ್ ನೆಕ್ಸಸ್ 4 ಫೋನ್‌ನಲ್ಲಿರುವ ಕ್ಯಾಮೆರಾ ಖಂಡಿತ ಚೆನ್ನಾಗಿಲ್ಲ. ಉತ್ತಮ ಬೆಳಕಿದ್ದಾಗ ಮನೆಯ ಹೊರಗೆ ತೆಗೆದ ಫೋಟೊ ಮಾತ್ರ ಪರವಾಗಿಲ್ಲ ಎಂಬಂತೆ ಬಂತು. ಉಳಿದ ಯಾವ ಫೋಟೊ ಕೂಡ ಏನೇನೂ ತೃಪ್ತಿ ನೀಡಲಿಲ್ಲ. ಹೆಸರಿಗೆ ಕ್ಯಾಮೆರಾದಲ್ಲಿ ಎಲ್ಲ ಆಧುನಿಕ ಸವಲತ್ತುಗಳಿವೆ. ಕ್ಯಾಮೆರಾ ಅಷ್ಟಕ್ಕಷ್ಟೆ ಎಂದ ಮೇಲೆ ವಿಡಿಯೊ ಚಿತ್ರೀಕರಣದ ಗುಣಮಟ್ಟವೂ ಅಷ್ಟಕ್ಕಷ್ಟೆ ಎನ್ನಬಹುದು.
ಈ ಫೋನ್ ಬಳಸುವುದು ಮೈಕ್ರೋ ಸಿಮ್ ಕಾರ್ಡ್. ಅದನ್ನು ಹಾಕಲು ಒಂದು ಚಿಕ್ಕ ಟ್ರೇ ಹೊರಗೆ ಬರುತ್ತದೆ. ಈ ಟ್ರೇಯನ್ನು ಹೊರಗೆ ತರಲು ಒಂದು ಚಿಕ್ಕ ತೂತಿನಲ್ಲಿ ಪಿನ್ ರೀತಿಯ ಸಾಧನವನ್ನು ಚುಚ್ಚಬೇಕು. ಆ ಸಾಧನವನ್ನು ಅವರೇ ನೀಡಿದ್ದಾರೆ. ಅದನ್ನು ಕಳೆದುಕೊಂಡರೆ ಕಷ್ಟ.
ಗೂಗ್ಲ್ ನೆಕ್ಸಸ್ 4 ಫೋನ್ ಅನ್ನು ಬಿಚ್ಚಲು ಆಗುವುದಿಲ್ಲ, ಜೊತೆಗೆ ಇದಕ್ಕೆ ಹೆಚ್ಚಿಗೆ ಮೆಮೊರಿ ಮೈಕ್ರೊಎಸ್‌ಡಿ ಕಾರ್ಡ್ ಮೂಲಕ ಹಾಕಲೂ ಆಗುವುದಿಲ್ಲ. ಈ ಫೋನ್ 8 ಮತ್ತು 16 ಗಿಗಾಬೈಟ್ ಮಾದರಿಗಳಲ್ಲಿ ದೊರೆಯುತ್ತದೆ. ಹೆಚ್ಚಿಗೆ ಮೆಮೊರಿ ಹಾಕಲು ಆಗುವುದಿಲ್ಲವಾದುದರಿಂದ ಕೊಳ್ಳುವಾಗಲೇ ನಿಮಗೆ ಎಷ್ಟು ಮೆಮೊರಿ ಬೇಕಾಗಬಹುದು ಎಂದು ತೀರ್ಮಾನ ಮಾಡಿಕೊಂಡು ಸೂಕ್ತ ಮಾದರಿ ಕೊಳ್ಳಬೇಕು. ಇದಕ್ಕೆ ಯುಎಸ್‌ಬಿ ಮೂಲಕ ಫ್ಲಾಶ್ ಡ್ರೈವ್ (USB on the go) ಜೋಡಿಸಲೂ ಆಗುವುದಿಲ್ಲ.
ಈ ಫೋನಿನ ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 4.2.2. ಆದುದರಿಂದ ಇದರಲ್ಲಿ ಕನ್ನಡದ ಬೆಂಬಲ ಇದೆ. ಕನ್ನಡ ಪಠ್ಯದ ರೆಂಡರಿಂಗ್ ಸರಿಯಾಗಿದೆ. ಗೂಗ್ಲ್ ಪ್ಲೇ ಜಾಲತಾಣದಿಂದ ನಿಮಗಿಷ್ಟವಾದ ಕನ್ನಡದ ಕೀಲಿಮಣೆ ಹಾಕಿಕೊಂಡರೆ ಕನ್ನಡದಲ್ಲಿ ಪಠ್ಯವನ್ನು ಊಡಿಸಲೂಬಹುದು.
ಗೂಗ್ಲ್ ನೆಕ್ಸಸ್ 4 ಫೋನ್‌ನ ಬೆಲೆ ರೂ.26 ಸಾವಿರ. ಇದು ಸ್ವಲ್ಪ ಜಾಸ್ತಿಯೇ ಎನ್ನಬಹುದು. ನೀವು ಅಮೆರಿಕದಿಂದ ತರಿಸಿದರೆ ನಿಮಗೆ 19ರಿಂದ 21 ಸಾವಿರ ರೂ.ಗಳಿಗೆ ದೊರೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.