ADVERTISEMENT

ವಿಲಿಂಪಾ ರಾಮಾಯಣ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2011, 19:30 IST
Last Updated 3 ಡಿಸೆಂಬರ್ 2011, 19:30 IST

ಅಂದೆಂದೋ ಒಮ್ಮೆ ಕೇಳಿದ `ಹನುಮನ ಬಯಕೆ~ ಎಂಬ ಕತೆಯನ್ನು ಹೇಳಹೊರಟಿರುವೆ. ಹನುಮಂತನಿಗೊಮ್ಮೆ ಮದುವೆಯಾಗಬೇಕೆಂದು ಆಸೆಯಾಯಿತಂತೆ. ಆದರೆ ತನಗೆ ಆ ವಯಸ್ಸು ಮೀರಿ ಹೋಗಿದೆಯಲ್ಲಾ ಎಂದು ಅಳುಕುತಿದ್ದನಂತೆ.

ಸೀತಾದೇವಿಗೆ ಇದು ಹೇಗೋ ತಿಳಿದು `ಹನುಮ, ನಿನ್ನ ವಯಸ್ಸೇನು ಮೀರಿಲ್ಲ ಬಿಡು. ನನ್ನ ಮಾವನವರಾದ ದಶರಥ ಮಹಾರಾಜರು ತನ್ನ ಅಪರವಯಸ್ಸಿನಲ್ಲಿಯೂ ಮದುವೆಯಾಗಿಲ್ಲವೇ?

ಬೇಕಾದರೆ ನನ್ನ ಸಖಿಯರಲ್ಲೇ ಯಾರನ್ನಾದರೂ ಆರಿಸಿಕೋ. ಮದುವೆ ಮಾಡಿಸುವ ಕೆಲಸ ನನ್ನದು~ ಎಂದಳಂತೆ. ಅದಕ್ಕೆ ಹನುಮ ಕೈ ಮುಗಿದು ನಿಂತು- `ತಾಯಿ, ನಾನು ನನಗೆ ತಕ್ಕ ವಾನರಿಯನ್ನು ವರಿಸುವುದೇ ಉತ್ತಮವೆಂದು ಅನಿಸುತ್ತಿದೆ. ಆದ್ದರಿಂದ ಕನ್ಯಾಶೋಧಕ್ಕೆ ಕಿಷ್ಕಿಂಧೆಗೆ ಹೊರಡಲೆ~ ಎಂದಾಗ ಸೀತಾದೇವಿ ಬಲು ಸಂತಸದಿಂದ ಒಪ್ಪಿ `ಹೋಗಿ ಬಾ, ಒಳಿತಾಗಲಿ~ ಎಂದಳು.

ಶ್ರೀರಾಮನ ಅಪ್ಪಣೆಯನ್ನೂ ಪಡೆದ ಹನುಮ ಉತ್ತರದ ಅಯೋಧ್ಯೆಯಿಂದ ದಕ್ಷಿಣದ ಕಿಷ್ಕಿಂಧೆಗೆ ಪಯಣ ಹೊರಟ. ದಾರಿಯುದ್ದಕ್ಕೂ ಆತನಿಗೆ ಯೋಚನೆಯ ಮೇಲೆ ಯೋಚನೆ.

ಯಾರವಳು, ತನ್ನ ಹೆಂಡತಿ ಆಗುವವಳು, ಹೇಗಿರುವಳು? ತನ್ನನ್ನು ಇಷ್ಟಪಡುವಳೋ, ಅಂಥವಳೋ ಇಂಥವಳೋ, ಕೆಟ್ಟವಳೋ ಒಳ್ಳೆಯವಳೋ, ಸ್ಥೂಲವೋ ಸೂಕ್ಷ್ಮವೋ, ತಾನು ಹೇಳಿದಂತೆ ಕೇಳುವಳೋ ಕೇಳುವವಳಲ್ಲವೋ, ಒಂದು ವೇಳೆ ತಾನು ಹೇಳಿದಂತೆ ಕೇಳಿದರೆ ತಾನೇನು ಮಾಡಬೇಕು? ತಲೆಯ ಮೇಲೆ ಹೊತ್ತು ತಿರುಗಲೋ? ಕೇಳದಿದ್ದಲ್ಲಿ ಏನು ಮಾಡಬೇಕು? ಎರಡೇಟು ಕೊಡಲೋ? ಸ್ತ್ರೀಯರ ಕುರಿತು ಏನೂ ತಿಳಿಯದೆ ಸೀದಾ ಕನ್ಯಾನ್ವೇಷಣೆಗೆ ಹೊರಟು ಬಿಟ್ಟೆನಲ್ಲ ಇತ್ಯಾದಿ ಚಿಂತಿಸುತ್ತಲೇ ಇದ್ದನಂತೆ.

ಹೀಗೆ ಬರುತ್ತಾ ದಂಡಕಾ ಎಂಬಲ್ಲಿಗೆ ಬಂದು ತಲುಪಿದಾಗ ಅಲ್ಲೊಂದು ಎಲೆಮನೆ. ತಡಿಕೆ ದೂಡಿ ಸೀದಾ ಒಳ ಹೋದ ಹನುಮ ನೋಡುತ್ತಾನೆ, ರಾಜಭೋಗದ ವಸ್ತುಗಳೆಲ್ಲವೂ ಅಲ್ಲಿ ಅಣಿಯಾಗಿ ಜೋಡಿಸಲ್ಪಟ್ಟಿವೆ.

ಮೂಲೆಯಲ್ಲೊಂದು ವೀಣೆ ಸುಮ್ಮನೆ ಕುಳಿತಿದೆ. ಚಪಲ ತಡೆಯದೆ ವೀಣೆಯನ್ನು ಹನುಮ ಎತ್ತಿಕೊಂಡ. ಎತ್ತಿಕೊಂಡ ಮೇಲೆ ಮೀಟುವ ಅನಿಸಿತು, ಕುಳಿತು ಮೆಲ್ಲ ಮೀಟಿದ, ಮೀಟಿದ್ದೇ ಆತನ ಬಲ ತಾಳಲಾರದೆ ತಂತಿಗಳೆಲ್ಲ ಠಿಣಿಠಿಣಿ ತುಂಡಾಗಿ ಅಲ್ಲಲ್ಲೇ ಒರಗಿದವು.

ಆಗ ಹನುಮ ಓ, ಹೆಚ್ಚು ಸೂಕ್ಷ್ಮವಿದ್ದರೆ ಹೀಗೆ ವೀಣೆಯ ತಂತಿಯಂತೆ ತನ್ನ ಹೆಂಡತಿಯೂ ಏನಾದರೂ ನುಡಿಯುವ ಮೊದಲೇ ಛಿದ್ರವಾಗಿ ನೆಲಕ್ಕುರುಳಿಯಾಳು. ಸಂಜೀವಿನಿ ಪರ್ವತವನ್ನು ತಂದವನು ನಾನು, ಸಾಗರ ಲಂಘನ ಮಾಡಿದವನು, ಲಂಕಾ ದಹನ ಮಾಡಿದವನು.

ಶಕ್ತಿವಂತನಾದ ತನಗೆ ಕೋಮಲೆಯರು ಸಿಕ್ಕಿದರೆ ಕಷ್ಟವೇ ಎಂಬ ನಿರ್ಧಾರಕ್ಕೆ ಬಂದ. ಅದಾದ ಮೇಲೆ ಮದುಮಗನಾದಾಗ ತನ್ನ ವೇಷ ಭೂಷಣ ಹೇಗಿರಬೇಕೆಂಬ ಯೋಚನೆ ಬಂದು ಅತ್ತಿತ್ತ ನೋಡಿದನಾಗಿ ಅಲ್ಲೊಂದೆಡೆ ರಾಜೋಚಿತ ಉಡುಗೆ ತೊಡುಗೆ ಆಭರಣಗಳು ಕಾಣಿಸಿದವು.

ಭಾರೀ ಸಂಭ್ರಮದಿಂದ ಅವುಗಳನ್ನು ಒಂದೊಂದಾಗಿ ತೊಟ್ಟು ಅಲ್ಲೇ ಅಡ್ಡ ದಂಡೆಯ ಮೇಲೆ ಕುಳಿತು ಪಾತ್ರೆಯೊಳಗಿನ ನೀರ‌್ಗನ್ನಡಿಯಲ್ಲಿ ತನ್ನನ್ನು ತಾನೇ ನೋಡಿಕೊಳ್ಳುತ್ತ ಪ್ರಸನ್ನಚಿತ್ತನಾಗಿ ನಗುತ್ತ ಕುಳಿತ. ಆಗ-

`ಎಲೆ ವಾನರ, ಯಾರು ನೀನು? ಇಲ್ಲಿಗೇಕೆ ಬಂದೆ? ನನ್ನ ಉಡುಗೆಯನ್ನು ಧರಿಸುವಷ್ಟು ಧೈರ್ಯವೆ ನಿನಗೆ!~

ಧ್ವನಿಯ ಗುಡುಗು ಕೇಳಿಬಂದ ಕಡೆಗೆ ನೋಡಿದರೆ ರಾಜ ಉಡುಗೆಯಲ್ಲಿ ಅಲ್ಲೊಬ್ಬ ಯುವಕ. ಬಿಲ್ಲು ಬಾಣ ಧರಿಸಿದ್ದಾನೆ, ಕ್ರೋಧೋನ್ಮತ್ತನಾಗಿ ನಿಂತಿದ್ದಾನೆ. ಹನುಮ ಯಾವತ್ತಿನಂತೆ ತಾನು ಶ್ರೀರಾಮನ ಬಂಟ ಎಂದು ಪರಿಚಯ ಹೇಳಿದ.

ತಕ್ಷಣ ಅವನೆದುರು ಮಂಡಿಯೂರಿದ ಯುವಕ, ನಮಿಸಿ ಕ್ಷಮೆ ಯಾಚಿಸಿ, ತಾನು ಚಂಚರೀಕನೆಂಬ ರಾಜನೆಂದೂ ತನ್ನ ಹೆಂಡತಿಯಿಂದಾಗಿ ನೊಂದು ಇಲ್ಲಿ ಈ ಎಲೆಮನೆಯಲ್ಲಿ ಸದ್ಯಕ್ಕೆ ವಾಸವಾಗಿರುವೆನೆಂದೂ ಹೇಳಿದ. ಹನುಮ ವಿವರ ಕೇಳಲು ಹೀಗಂದ.

`ಅರಮನೆಯ ದಾಸಿಯೊಬ್ಬಳೊಂದಿಗೆ ನಾನೊಮ್ಮೆ ಮಾತಾಡುತಿದ್ದಾಗ ಮಹಾರಾಣಿ ನೋಡಿದಳು. ಸಂದೇಹದಿಂದ ನನ್ನೊಡನೆ ಮಾತಾಡುವುದನ್ನೇ ನಿಲ್ಲಿಸಿದಳು. ನಾನವಳಿಗೆ ಬುದ್ದಿ ಕಲಿಸಬೇಕೆಂದು ತಕ್ಷಣ ಅರಮನೆ ತ್ಯಜಿಸಿ ವನವಾಸಕೆ ಬಂದೆ.

ಇಲ್ಲಿ ಒಬ್ಬ ಋಷಿವರ್ಯರ ದರ್ಶನವಾಯಿತು. ಆತನಿಗೆ ನೂರು ಮಂದಿ ಪತ್ನಿಯರು. ಆದರೆ ಆ ನೂರುಮಂದಿಯನ್ನೂ ಆತ ತನ್ನ ಅಳವಿನೊಳಗೆ ಇರಿಸಿಕೊಂಡಿದ್ದಾನೆ, ತಾನು ಹಾಕಿದ ಗೆರೆ ಮೀರದಂತೆ ನೋಡಿಕೊಂಡಿದ್ದಾನೆ, ಗೊತ್ತೆ! ಅವನಿಂದ ಉಪದೇಶ ಪಡೆದೇ ಅರಮನೆಗೆ ಮರಳುವ ಉದ್ದೇಶದಿಂದ ಇಲ್ಲಿ ಹೀಗೆ ಬೀಡುಬಿಟ್ಟಿರುವೆ. ನನ್ನ ಕತೆ ಇಷ್ಟು. ನಿನ್ನ ಕತೆ ಏನು? ಅಯೋಧ್ಯೆ ಬಿಟ್ಟು ಹೊರಟ ಕಾರಣವೇನು? ಯುದ್ಧ ಮುಗಿದು ಅಯೋಧ್ಯೆ ತಲುಪಿದ್ದಾಗಿದೆ, ಪಟ್ಟಾಭಿಷೇಕವೂ ಮುಗಿದಿದೆ. ಇನ್ನು ನಿನ್ನೂರಿಗೆ ಹೊರಡಬಹುದು ಎಂದು ಶ್ರೀರಾಮನು ನಿನ್ನನ್ನು ಹಿಂದೆ ಕಳಿಸಿದನೇನು? ಹೇಳೋಣವಾಗಲಿ~.

ಶ್ರೀರಾಮನ ಕುರಿತು ಆತನ ನುಡಿ ಕೇಳಿದ ಹನುಮ ಒಮ್ಮೆ ಕೆಂಪಾಗಿ ಕೆರಳಿದರೂ ಅಲ್ಲಿಯೇ ಅದನ್ನು ತಣಿಸಿಕೊಂಡ. ರಾಮದೇವರ ವಿಷಯದಲ್ಲಿ ಹಾಗೆ ಯೋಚಿಸುವುದು ಎಷ್ಟು ದೊಡ್ಡ ಪ್ರಮಾದವೆಂದು ಆತನಿಗೆ ತಿಳಿ ಹೇಳಿದ. ತಾನು ಹೊರಟ ಕಾರಣ ತಿಳಿಸಿ ಹೆಂಗಸರ ವಿಚಾರ ಏನೇನೂ ತಿಳಿಯದೆ ಮದುವೆಯಾಗಲು ಹೊರಟೆನಲ್ಲ ಎಂದು ತನ್ನ ತಳಮಳವನ್ನೂ ತೋಡಿಕೊಂಡ.

ಹನುಮ: ಆದರೀಗ ನಿನ್ನ ಕತೆ ಕೇಳಿ ಮನಸ್ಸು ಮದುವೆಯಿಂದ ವಿಮುಖವಾಗುತ್ತಿದೆಯಲ್ಲಾ, ಏನು ಮಾಡಲಿ? 

ಚಂಚರೀಕ: ಸಾಹಸಿ ನೀನು, ಹೆಚ್ಚು ಚಿಂತಿಸಬೇಡ. ಹಿಂಜರಿಯಬೇಡ. ಆದರೂ ಒಂದು ವಿಚಾರ ಹೇಳುವೆ ಕೇಳು. ಮಕ್ಕಳನ್ನು ಪಡೆದು ಪಿತೃಋಣ ತೀರಿಸುವ ಇಚ್ಛೆ ನಿನಗಿದ್ದರೆ ಮದುವೆ ಅಂಥದ್ದೇನು ಸಮಸ್ಯೆಯೇ ಅಲ್ಲ.

ಆದರೆ ಪ್ರೀತಿಗಾಗಿ ಮದುವೆಯಾಗುವೆಯೋ, ಅದು ಕಷ್ಟ. ಆ ಕುರಿತು ಹೀಗೆಯೇ ಎಂದು ಹೇಳಲು ನಾನು ಅಸಮರ್ಥ ಎನ್ನುತ್ತ ರಾಜಾ ಚಂಚರೀಕ ಊಟಕ್ಕೆ ಸನ್ನಾಹ ಮಾಡಿದ. ಇನ್ನೇನು ಇಬ್ಬರೂ ಉಣ್ಣಲು ಕೈ ಇಟ್ಟರಷ್ಟೇ, ಹೊರಗೆ ಯಾರೋ `ಒಳಗೆ ಬರಲೆ? ಹೊರಗೆ ಬಹಳ ಚಳಿಯಿದೆ. ಹಸಿದಿದ್ದೇನೆ ನಾನು, ದೂರ ಹೋಗಲಾರೆ. ಒಳಗೆ ಬರಲೇ?~ 

ಚಂಚರೀಕನು ಬನ್ನಿ ಒಳಗೆ ಎನ್ನುತ್ತಲೇ ಬಾಗಿಲ ತಡಿಕೆ ದೂಡಿಕೊಂಡು ಋಷಿಯೊಬ್ಬ ಪ್ರವೇಶಿಸಿದ. ಕೂಡಲೇ ಚಂಚರೀಕ, `ಓ ಋಷಿವರ್ಯ, ನೀವೆ! ನನಗೆ ತಿಳಿಯದೇ ಹೋಯಿತಲ್ಲ. ಯಾಕೆ ಅಪರಿಚಿತರಂತೆ ಹೊರಗೆ ನಿಂತಿರಿ?~ ಎನ್ನುತ್ತ ಆಸನ ನೀಡಿದ.

ತಾನು ಈಗಷ್ಟೇ ಪ್ರಸ್ತಾಪಿಸಿದ ಮುನಿ ಈತನೇ ಎಂದು ಹನುಮನಿಗೆ ಪರಿಚಯಿಸಿದ. ಮೊದಲ ಮಾತುಗಳ ನಂತರ ಮೂವರೂ ಊಟ ಮುಗಿಸಿದರು. ಹನುಮ ಹೊರಟಿರುವ ಪಯಣದ ಉದ್ದೇಶವನ್ನು ಮುನಿಗೆ ತಿಳಿಸಿದ ಚಂಚರೀಕ ಆತನ ತಳಮಳದ ಕುರಿತೂ ಹೇಳಿ ತಮಗೆ ತಿಳಿದ ಪರಿಹಾರ ಹೇಳಿ ಎನಲು ಆ ಮುನಿ, `ನೋಡಪ್ಪ ಹನುಮಾ, ಬಹಳ ಹಿಂದೊಮ್ಮೆ ದಕ್ಷಿಣರಾಜ್ಯಕ್ಕೆ ಹೋಗಿ ಬಂದವ ನಾನು. ಅಲ್ಲಾಗ ದೊಡ್ಡ ಬರಗಾಲ ಬಂದಿತ್ತು. ಅದರ ನಿವಾರಣೆಗಾಗಿ ಮಹಾರಾಜನ ಕೋರಿಕೆ ಮೇರೆಗೆ ಬಂದು ವಾರವಿಡೀ ನೆಲೆಸಿ ವರುಣಯಜ್ಞ ಮಾಡಿದೆನು. ಯಜ್ಞಫಲದಂತೆ ಮಳೆಯಾಗಿ ಬರಗಾಲ ನೀಗಿತು, ರಾಜ್ಯ ಸುಭಿಕ್ಷವಾಯಿತು.

ಸಂತೋಷಗೊಂಡ ರಾಜ ಉಡುಗೊರೆಯಾಗಿ ತನ್ನ ನೂರುಮಂದಿ ಕುವರಿಯರನ್ನು ವಿಧಿವತ್ತಾದ ವಿವಾಹರೂಪದಲ್ಲಿ ನನಗೆ ನೀಡಿದ. ಅವರನ್ನು ಸಾಕಲು ಬೇಕಾದ ಎಲ್ಲವನ್ನೂ ನೀಡಿ ನನ್ನೊಂದಿಗೆ ಕಳಿಸಿಕೊಟ್ಟ. ಅವರಿಗೆ ಬೇರೆಬೇರೆ ಮನೆಯನ್ನೂ ಕಟ್ಟಿಸಿ ಕೊಟ್ಟ. ಆದರೆ ಅವರೋ, ನಾನು ಮರೆಯಾದೆನೆಂದರೆ ಪರಸ್ಪರ ಜಗಳಾಡುತ್ತಾರೆ, ಅಷ್ಟಿಷ್ಟಲ್ಲ.
 
ಬಾ ನನ್ನೊಂದಿಗೆ, ಅವರಲ್ಲಿ ನಿನಗೆ ಯಾರು ಬೇಕೋ ಅವರನ್ನು ಆರಿಸಿಕೊ. ನನಗೂ ತುಸು ಬಿಡುಗಡೆ ಎನಿಸುವುದು~ ಎಂದ. ಆತ ಹಾಗೆನಲು, ಹನುಮ ಇನ್ನಷ್ಟು ವಿಹ್ವಲನಾದ. ಅವನ ಆತಂಕ ಇಮ್ಮಡಿಸಿತು. `ಇಲ್ಲ ಇಲ್ಲ. ನಾನು ಸೀದಾ ಕಿಷ್ಕಿಂಧೆಗೇ ಹೊರಡುವೆ. ಅಲ್ಲಿಯೇ ನನಗೆ ಬೇಕಾದವರನ್ನು ಆರಿಸಿಕೊಳ್ಳುವೆ~ ಎನ್ನುತ್ತ ಮತ್ತೆ ಒಂದು ಮಾತಿಗೂ ನಿಲ್ಲದೆ ನಾಳೆ ಹೊರಡು ಎಂದು ಇಬ್ಬರೂ ಎಷ್ಟು ಒತ್ತಾಯಿಸಿದರೂ ಕೇಳದೆ ಅಲ್ಲಿಂದ ಹೊರಟೇ ಬಿಟ್ಟ.

ಕಿಷ್ಕಿಂಧೆ ತಲುಪುತ್ತಲೂ ನೆನಪೆಲ್ಲ ಮರಳಿ ಉಲ್ಲಸಿತನಾದ ಹನುಮ. ತಾನಲ್ಲಿ ರಾಮಲಕ್ಷ್ಮಣರನ್ನು ಕಂಡದ್ದು, ಅವರನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಸುಗ್ರೀವನಿದ್ದಲ್ಲಿಗೆ ಕರೆತಂದದ್ದು, ಅಲ್ಲಿ ಸೀತಾಮಾತೆಯನ್ನು ಹುಡುಕಿಕೊಟ್ಟೇ ಶುದ್ಧ ಅಂತ ತಾವೆಲ್ಲರೂ ಸಾಮೂಹಿಕವಾಗಿ ಪಣತೊಟ್ಟದ್ದು ಎಲ್ಲ ನೆನೆಯುತ್ತ ರೋಮಾಂಚಿತನಾಗಿ ಬರುತಿದ್ದಂತೆ, ಬರುತ್ತಿದ್ದ ಅವನನ್ನು ನೋಡಿ ಜೊತೆಗೆ ಆಡಿ ಬೆಳೆದ ಸಂಗಡಿಗರೂ ಇತರ ಪ್ರಜೆಗಳೂ ಅತೀವ ಹರ್ಷಚಿತ್ತರಾದರು.

ಹನುಮನ ಯೋಗಕ್ಷೇಮ, ಅಯೋಧ್ಯೆಯ ಹಾಗೂ ಶ್ರೀರಾಮ ಸೀತಾದೇವಿ ಲಕ್ಷ್ಮಣಾದಿ ಸೋದರರೆಲ್ಲರ ಸಮಾಚಾರ, ಆತನಿಲ್ಲದೆ ಭಣಗುಡುವ ಕಿಷ್ಕಿಂಧೆ ಇತ್ಯಾದಿ ಕೇಳುತ್ತ ಹೇಳುತ್ತ ಮಾತಾಡುತ್ತ ಅವನನ್ನು ಹಿಂಬಾಲಿಸಿದರು. ಆಗ ಆ ದೃಶ್ಯ ಒಂದು ದೊಡ್ಡ ಕಪಿಸೈನ್ಯವೇ ಅರಮನೆಯ ಕಡೆಗೆ ಹೊರಟಿದೆಯೋ ಎಂಬಂತೆ ಕಾಣುತಿತ್ತು.
 
ಅಂತೂ ಅರಮನೆ ಸಮೀಪಿಸಿತು. ನೋಡಿದರೆ ಹೊರಗೆ ಉದ್ಯಾನದಲ್ಲಿ ಸುಗ್ರೀವ ಮಹಾರಾಜ ತನ್ನ ಸ್ನೇಹಿತರೊಂದಿಗೆ ಸಂತೋಷಕೂಟ ನಡೆಸಿಕೊಂಡಿದ್ದ. ಹನುಮ ಬರುವುದನ್ನು ನೋಡಿ ಒಮ್ಮೆ ಅಪಾರ ಸಂತೋಷ ಚಿಮ್ಮಿದರೂ ಅವನ ಹಿಂದಿನ ವಾನರರ ಹಿಂಡು ಕಂಡು ಒಮ್ಮೆ ಮನಸ್ಸು ಆ ಆಗಮನ ಉದ್ದೇಶದ ಕುರಿತು ಸಂದೇಹಿಸಿತು. ಹನುಮ ಬಂದವನೇ ಸುಗ್ರೀವನಿಗೆ ನಮಿಸಿದ.

ಸುಗ್ರೀವ: ಬಾ ಹನುಮಾ ಬಾ. ಅನಿರೀಕ್ಷಿತವಾಗಿ ಬಂದ ಕಾರಣವೇನು?
ಹನುಮ ತಾನು ಬಂದ ಕಾರಣ ತಿಳಿಸುವುದರೊಳಗೆ ಮತ್ತೆ ಆತನೇ ಮುಂದರಿಸಿ-

ಸುಗ್ರೀವ: ಒಂದು ವೇಳೆ ರಾಜ್ಯದಲ್ಲಿ ನಿನ್ನ ಪಾಲನ್ನು ಪಡೆಯಲು ಬಂದೆಯಾದರೆ, ಕ್ಷಮಿಸು ಹನುಮ, ಅದೀಗ ಅಂಗದನ ವಶದಲ್ಲಿದೆ. ನಿನಗೆ ಹಿಂದೆ ಕೊಡಿಸುವುದು ನನ್ನಿಂದ ಸಾಧ್ಯವಾಗದ ಮಾತು~. ಸುಗ್ರೀವನ ನುಡಿ ಕೇಳಿ ಸಿಟ್ಟಾಗಲಿಲ್ಲ ಹನುಮ, ಬದಲು ದೊಡ್ಡದಾಗಿ ನಕ್ಕ.

ಹನುಮ: ನಾನೆ? ಪಾಲು ಬೇಡುವೆನೆ? ಶ್ರೀರಾಮ ನನಗೆ ಏನೂ ಕೊರತೆ ಮಾಡದೇ ಇರುವಾಗ ನನಗಿಂತಹ ಲಾಲಸೆ ಬರುವುದೆ? ನಿನಗಾದರೂ ಈ ಸಂಶಯ ಹೇಗೆ ಬಂತು? ಎಂದವ ತಾನು ಬಂದ ಉದ್ದೇಶ ತಿಳಿಸಿದ. ಕೇಳಿ ಸುಗ್ರೀವ ನಿಶ್ಚಿಂತೆಯ ನಿಟ್ಟುಸಿರೆಳೆದ.

ಸುಗ್ರೀವ: ಸರಿಸರಿ ಹನುಮ, ಇದು ಸಲ್ಲದ ಆಸೆಯೇನಲ್ಲ. ಆದರೆ ನೀನು ಎಲ್ಲಿ ಯಾಕೆ ಹುಡುಕಬೇಕು. ತಾರೆ ಇರುವಳಲ್ಲ. ನನಗೀಗ ಆಕೆಯ ಅಗತ್ಯವಿಲ್ಲ. ಗುಣವಂತೆಯಾದ ಅವಳನ್ನು ವರಿಸು. ನಮ್ಮ ಕುಲಕ್ಕೆ ವಿರುದ್ಧವಾದುದೇನೂ ಅಲ್ಲದ ಇದಕ್ಕೆ ನನ್ನ ಅನುಮತಿಯೂ ಇದೆ.

ಈ ಮಾತಿಗೆ ಹನುಮ ಒಲ್ಲೆನೆಂದ. `ಮಹಾರಾಜ, ನನಗೆ ತಾರಾದೇವಿ ಬೇರೆಯಲ್ಲ ನನ್ನಮ್ಮನಾದ ಅಂಜನಾದೇವಿ ಬೇರೆಯಲ್ಲ, ನಾನಾಕೆಯನ್ನು ಬೇರೆ ಬಗೆಯಲ್ಲಿ ಕಾಣಲು ಅಸಾಧ್ಯದಲ್ಲಿ ಅಸಾಧ್ಯ~ ಎಂದ.

ಹೀಗೆ ಆತ ಸುಗ್ರೀವನ ಸೂಚನೆಯನ್ನು ನಿತ್ತಮೆಟ್ಟಿನಲ್ಲಿ ನಿರಾಕರಿಸಲು ಸುಗ್ರೀವನು `ಸರಿ, ನಿನಗೊಬ್ಬಳು ಅನುರೂಪ ವಧುವನ್ನು ಸೂಚಿಸುವೆನು ಕೇಳುವವನಾಗು. ಆಕೆ ಸಾಮ್ರೋಜ್ಞಿ. ಹೆಸರು ವಿಲಿಂಪಾ. ದಕ್ಷಿಣದಿಕ್ಕಿನಲ್ಲಿರುವ ಕಿಚ್ಚಟ ದೇಶದವಳು. ವಿದುಷಿಯೂ ಆಗಿರುವ ಅವಳು ಯಾವ ವರನನ್ನೂ ಒಪ್ಪದೆ ಇನ್ನೂ ಅವಿವಾಹಿತಳಿರುವಳು. ನಾನು ನಳ ನೀಲರೇ ಮುಂತಾದ ಯೋಗ್ಯ ವರರನ್ನು ಕಳಿಸಿ ಅವಳ ವಿವಾಹಕ್ಕೆ ಎಷ್ಟೋ ಪ್ರಯತ್ನಿಸಿದೆ.

ನಿರ್ದಾಕ್ಷಿಣ್ಯವಾಗಿ ನಿಷ್ಕಾರಣವಾಗಿಯೂ ಅವಳು ಅವರನ್ನು ನಿರಾಕರಿಸಿ ನಿರಾಶೆಯಿಂದ ಹಿಂದಿರುಗುವಂತೆ ಮಾಡಿದಳು. ನೀನು ಹೋಗಿ ಅವಳನ್ನು ಕಾಣು. ಕಂಡು ಮದುವೆಯಾಗಲು ಯತ್ನಿಸು. ತಡಮಾಡಬೇಡ, ಹೊರಡು ಈಗಲೇ, ಯಶಸ್ಸು ನಿನ್ನ ಕೈ ಬಿಡದಿರಲಿ~ ಎಂದನು.

ಆ ಕ್ಷಣವೇ ಕಿಚ್ಚಟ ದೇಶಕ್ಕೆ ಪಯಣ ಹೊರಟ ಹನುಮ ಅಲ್ಲಿನ ರಾಜಧಾನಿಗೆ ಬಂದು ಇಳಿಯುತ್ತಲೂ ಒಸಗೆ ಹೋಯಿತು. `ಧೀರನೊಬ್ಬ ರಾಜ್ಯವನ್ನು ಹೇಳಕೇಳದೆ ಆಕಾಶ ಮಾರ್ಗವಾಗಿ ಪ್ರವೇಶಿದ್ದಾನೆ ಮಹಾರಾಣಿ. ಬಂದವನೇ ಯಾವ ಅಂಜಿಕೆ ಅಳುಕು ಇಲ್ಲದೆ `ಎಲ್ಲಿ ನಿಮ್ಮ ಮಹಾರಾಣಿ~ ಎಂದು ನಮ್ಮನ್ನು ಹಿಡಿದೆತ್ತಿ ಕೇಳಿದ. ನಾವು ಆಕೆಗೆ ತಿಳಿಸಿ ಬರುತ್ತೇವೆ ಎಂದು ಬಂದಿರುವೆವು. ಆಜ್ಞೆಯಾದರೆ ಒಳಕಳಿಸುವೆವು~.

ಸೇವಕರು ನಡುನಡುಗುತ್ತ ತಿಳಿಸಿದರು. ಒಳಗೆ ಬರಲಿ- ಮಹಾರಾಣಿಯ ಆಜ್ಞೆಯಾಯಿತು. ಸೇವಕರು ಹನುಮನನ್ನು ಕರತಂದರು. ಮಹಾರಾಣಿ ಆತನನ್ನು ನೋಡಿದವಳು `ಚೋದ್ಯವೆ! ವೀರನಂತೆ ಕಾಣುತ್ತೀ. ಮತ್ತೆ ಅಪ್ಪಣೆಯಿಲ್ಲದೆ ರಾಜ್ಯವನ್ನು ಪ್ರವೇಶಿಸಿದ್ದೀ! ಹೀಗೆ ದಿಢೀರನೆ ನುಗ್ಗಿ ಬರಲು ಕಾರಣವೇನು?~

ಹನುಮ: ನಾನು, ಹನುಮ, ಶ್ರೀರಾಮನ ಬಂಟ. ಎಂದವ, ಆಕೆ ಪ್ರತಿನುಡಿಯುವ ಮೊದಲೇ, ದನಿ ಬದಲಿಸಿ, ಜೋರಾಗಿ `ಕೇಳಿಲ್ಲಿ ಹೆಣ್ಣೆ, ನಾನು ನಿನ್ನನ್ನು ವಿವಾಹವಾಗಬಯಸುವೆ. ಬೇರೇನೂ ಅಲ್ಲದೆ ಕೇವಲ ಆ ಉದ್ದೇಶಮಾತ್ರದಿಂದಲೇ ಇಲ್ಲಿಗೆ ಬಂದಿರುವೆ. ನನ್ನಂಥ ವೀರನನ್ನು ವಿವಾಹವಾಗಲು ನೀನೂ ಉತ್ಸುಕಳೆಂದು ಭಾವಿಸುವೆ~.

ಹನುಮನ ಮಾತಿಗೆ ನಕ್ಕಳು ಮಹಾರಾಣಿ. `ಹನುಮಾ, ನೀನು ವೀರನೇನೋ ಸರಿಯೆ. ಆದರೆ ವಿವಾಹವಾಗಲು ಕೇವಲ ವೀರನಾದರೆ ಸಾಲದೋ. ದಾಂಪತ್ಯ ಪ್ರೀತಿ ಕುರಿತ ನಿನ್ನ ಅಭಿಮತವೇನು, ಅದನು ಹೇಳು?~

ಮದುವೆಯ ಕುರಿತೇ ಗೊಂದಲವಿರುವ ತನಗೆ ಈಕೆಯೀಗ ಇಂತಹ ಪ್ರಶ್ನೆ ಕೇಳಿದಳಲ್ಲ. ತಬ್ಬಿಬ್ಬಾಗಿಸಿದಳಲ್ಲ. ಹೀಗೆ ಕೇಳಿ ತನ್ನನ್ನು ಗೊಂದಲದಲ್ಲಿ ಕೆಡಹುವುದೇ ಈಕೆಯ ಗುರಿಯಾಗಿರಬಾರದು ಏಕೆ? ಹನುಮ ಅವಳ ಪ್ರಶ್ನೆ ಕೇಳಿಯೇ ಇಲ್ಲವೆಂಬಂತೆ ನುಡಿದ- `ಹುಡುಗೀ, ನಿನ್ನನ್ನು ಚೆನ್ನಾಗಿ ಅಲಂಕರಿಸುವೆ. ನನ್ನ ಸೀತಾಮ್ಮನೊಡನೆ ಕೇಳಿ ನಿನಗೆ ಮಾಣಿಕ್ಯದ ಹಾರವನ್ನು ತೊಡಿಸುವೆ. ಇದರಿಂದ ನಿನ್ನನ್ನು ಸಂತೋಷ ಪಡಿಸುವೆ~.

ಒಂದೇ ಮಾತಿಗೆ ಚಾಟಿಯಂತೆ ನುಡಿದಳಾಕೆ `ಓ ವೀರ ಹನುಮಾ, ಇದು ನನ್ನ ಪ್ರಶ್ನೆಗೆ ಉತ್ತರವಲ್ಲ. ಮರಳು ಕಿಷ್ಕಿಂಧೆಗೆ. ಮರಳಿ ಸುಗ್ರೀವನಿಗೆ ನನ್ನ ವಿವಾಹದ ವಿಚಾರ ಬೇಡ, ಬಿಟ್ಟು ಬಿಡೆಂದು ತಿಳಿಸು~.

ಹನುಮನಿಗೆ ಇದೆಲ್ಲ ವಿಚಿತ್ರವೆನಿಸಿತು. ಈಕೆ ಅಹಂಕಾರಿ. ಗರ್ವ ಅವಳನ್ನು ಆಳುತ್ತಿದೆ. ಅವಳ ಸೊಕ್ಕು ಮುರಿಯುವೆ ಎಂದು ಅವಳನ್ನು ಎತ್ತಿ ಒಯ್ಯಲು ತನ್ನ ಕೈ ದೀರ್ಘಗೊಳಿಸಿ ಮುಂಚಾಚಿದ. ಕ್ಷಣಮಾತ್ರದಲ್ಲಿ ಅದನ್ನರಿತ ಮಹಾರಾಣಿ ತನ್ನ ಸೇವಕರನ್ನು ಕರೆದು ಆತನನ್ನು ಬಂಧಿಸಲು ಆಜ್ಞಾಪಿಸಿದಳು. ಸೇವಕರು ಆತನನ್ನು ಸರಪಳಿಯಲ್ಲಿ ಕಟ್ಟಿದರು.

ಅಷ್ಟರಲ್ಲಿ ಹನುಮ ತನ್ನ ದೇಹವನ್ನು ಬೃಹತ್ತಾಗಿ ಹಿಗ್ಗಿಸಲು ಆ ರಭಸಕ್ಕೆ ಕಟ್ಟಿದ ಸರಪಳಿಯು ಖಂಣಖಂಣನೆ ಕಡಿಯಿತು. ಕೂಡಲೇ ಮುನ್ನುಗ್ಗಿದನಾತ, ವಿಲಿಂಪಾಳ ಜುಟ್ಟು ಹಿಡಿದೆಳೆದು ಅನಾಮತ್ತು ಎತ್ತಿಕೊಂಡು ಎಲ್ಲ ಭಯಭೀತರಾಗಿ ನೋಡುನೋಡುತಿದ್ದಂತೆ ಆಕಾಶಮಾರ್ಗವಾಗಿ ಅಲ್ಲಿಂದ ಹೊರಟುಬಿಟ್ಟ.
 
ಆತನ ಹಿಡಿತದ ಬಿಗಿಗೆ ನೋವು ತಡೆಯಲಾರದೆ ವಿಲಿಂಪಾ ಬೊಬ್ಬಿಟ್ಟಳು. ಲಕ್ಷ್ಯವೇ ಕೊಡದೆ ಅತೀವ ಉದ್ವೇಗದಲ್ಲಿ ಪಯಣ ಮುಂದರಿಸಿದ ಹನುಮ. ಕಿಷ್ಕಿಂಧೆ ಸಮೀಪಿಸುತ್ತಲೂ ಇವಳನ್ನು ಇಲ್ಲಿಯೇ ಇಳಿಸುವೆನೆಂದು ಯೋಚಿಸಿದ. ಹಾಗೆಣಿಸಿ ಕೆಳಗೆ ನೋಡಿದರೆ ಅಲ್ಲಿ ಕೊಳದಲ್ಲಿ ಸುಗ್ರೀವನು ತನ್ನ ಅಂತಃಪುರದ ಸ್ತ್ರೀಯರೊಂದಿಗೆ ಕ್ರೀಡಾಮಗ್ನನಾಗಿದ್ದ. ಅದನ್ನು ನೋಡಿದವನೇ ವಿಲಿಂಪಾಳನ್ನು ಮೇಲಿಂದಲೇ ನೀರೊಳಗೆ ಧುಳುಮ್ಮನೆ ಎಸೆದು, ಸದ್ದಿಗೆ ಅಚ್ಚರಿಯಿಂದ ಮುಖವೆತ್ತಿದ ಸುಗ್ರೀವ `ಹನುಮ ಯೇ ಹನುಮಾ~ ಎಂದು ಕರೆಯುತ್ತಿದ್ದಂತೆ ವೇಗವಾಗಿ ಸಾಗಿ ಮರೆಯಾಗಿಬಿಟ್ಟ.

ಶರವೇಗದಲ್ಲಿ ಉತ್ತರದ ಕಡೆಗೆ ಸಾಗಿ ಅಂತೂ ಅಯೋಧ್ಯೆ ತಲುಪಿದ. ತಲುಪಿ ಶ್ರೀರಾಮದೇವರು ಹಾಗೂ ಸೀತಾದೇವಿಯು ಕೇಳತೊಡಗಿದ ಪ್ರಶ್ನೆಗಳೆದುರು ತುಟಿಬಿಚ್ಚದೆ ಕಣ್ಮುಚ್ಚಿ ಕೈಮುಗಿದು ಮೌನ ಕುಳಿತ.

ಹೀಗೆ ಎಲ್ಲೋ ಚಿಕ್ಕಂದಿನಲ್ಲಿ ಕೇಳಿದ, ಕೇಳುವಾಗ ನಡುನಡುವೆ ನಕ್ಕೂ ನಕ್ಕೂ ಇಟ್ಟ, ಯಾರು ಹೇಳಿದರೆಂದೇ ಮರೆತು ಹೋದ, ಹೇಳಿದವರು ಪುರುಷನೋ ಸ್ತ್ರೀಯೋ ಎಂಬುದೂ ಮರವೆಯಾದ, ಇದು ಮುನ್ನೂರು ರಾಮಾಯಣದಲ್ಲಿ ಯಾವ ರಾಮಾಯಣದ್ದು, ಅಥವ ಬರಿ ಜನಾಯಣವೋ ಎಂತಲೂ ತಿಳಿಯದ ಆದರೆ ಅರಿವಾಗದಂತೆ ನೆನಪಿನಲ್ಲಿ ಕುಳಿತೇ ಇದ್ದ ಈ ಕತೆ, (ಇದನ್ನು ಮುನ್ನೂರ ಒಂದನೇ `ವಿಲಿಂಪಾ ರಾಮಾಯಣ~ವೆನ್ನಲೆ) ರಾಷ್ಟ್ರೀಯ ಮಹಿಳಾ ಸಮಾವೇಶದ ಸಂದರ್ಭದಲ್ಲಿ (ನವೆಂಬರ್ 29,30) ನೆನಪಿಗೆ ಬರುತ್ತಿದೆ, ಮೇಲೆ ತೇಲಿತೇಲಿ ಬರುತ್ತಿದೆ.
ಬಾ ಈಗ ಆಲಿಸು ಬಾ ಎನ್ನುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.