ADVERTISEMENT

ಬಾಲ್ಯ ವಿವಾಹ ತಡೆಗೆ ಹೊಸ ಹೆಜ್ಜೆಯಾಗುವುದೇ?

ಸಿ.ಜಿ.ಮಂಜುಳಾ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ಬಾಲ್ಯ ವಿವಾಹ ತಡೆಗೆ ಹೊಸ ಹೆಜ್ಜೆಯಾಗುವುದೇ?
ಬಾಲ್ಯ ವಿವಾಹ ತಡೆಗೆ ಹೊಸ ಹೆಜ್ಜೆಯಾಗುವುದೇ?   

ಜಗತ್ತಿನಲ್ಲಿ ಪ್ರತಿದಿನ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 39 ಸಾವಿರ ಹೆಣ್ಣುಮಕ್ಕಳು ಬಾಲ್ಯವಿವಾಹದ ಬಂಧನಕ್ಕೆ ಸಿಲುಕುತ್ತಿದ್ದಾರೆ. ಭಾರತದಲ್ಲಂತೂ ಪ್ರತಿ ಐದು  ಮದುವೆಗಳಲ್ಲಿ ಒಂದು ಮದುವೆ ಬಾಲ್ಯ ವಿವಾಹವಾಗಿರುತ್ತದೆ. ಬಾಲ್ಯ ವಿವಾಹ ನಿಷೇಧ ಕಾನೂನು ಇದ್ದರೂ ರಾಷ್ಟ್ರದಲ್ಲಿ ಬಾಲ್ಯ ವಿವಾಹಗಳು ಎಗ್ಗಿಲ್ಲದೆ ನಡೆಯುತ್ತಿದ್ದು 2.3 ಕೋಟಿ ಬಾಲ ವಧುಗಳಿರುವ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಈ ಆತಂಕವನ್ನು ವ್ಯಕ್ತಪಡಿಸುತ್ತಲೇ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯ ಜೊತೆ ಲೈಂಗಿಕ ಸಂಬಂಧ ಹೊಂದುವುದು ಅತ್ಯಾಚಾರವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ನೀಡಿದ ತೀರ್ಪು ಹೊಸ ಮೈಲುಗಲ್ಲು. ಅದೂ ಅಂತರರಾಷ್ಟ್ರೀಯ ಹೆಣ್ಣುಮಗುವಿನ ದಿನದಂದೇ (ಅಕ್ಟೋಬರ್ 11) ಈ ತೀರ್ಪು ಹೊರಬಿದ್ದಿರುವುದು ಕಾಕತಾಳೀಯ.

ಭಾರತೀಯ ದಂಡ ಸಂಹಿತೆ (ಐಪಿಸಿ), ಓಬೀರಾಯನ ಕಾಲದ ಹಲವು ಅಂಶಗಳನ್ನು ಒಳಗೊಂಡಿದೆ. ಸೆಕ್ಷನ್ 375ರ ವಿನಾಯಿತಿ 2, ಇಂತಹದೊಂದು ಓಬೀರಾಯನ ಕಾಲದ ಮನಸ್ಥಿತಿಗೆ ಸಾಕ್ಷಿಯಾಗಿತ್ತು. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ತನ್ನದೇ ಪತ್ನಿ ಜೊತೆ ಪುರುಷ ಲೈಂಗಿಕ ಸಂಪರ್ಕ ಹೊಂದಿದಲ್ಲಿ ಅದು ಅತ್ಯಾಚಾರವಾಗುವುದಿಲ್ಲ ಎಂಬಂಥ ವಿನಾಯಿತಿ ಇದು. ಈಗ, ಈ ವಿನಾಯಿತಿಯನ್ನು ಸುಪ್ರೀಂ ಕೋರ್ಟ್ ಕಿತ್ತು ಹಾಕಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯ ಜೊತೆಗಿನ ಲೈಂಗಿಕ ಸಂಪರ್ಕವೂ ಅತ್ಯಾಚಾರ ಎಂದು ಅದು ಹೇಳಿದೆ. ಗಂಡಂದಿರಿಂದ ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣುಮಕ್ಕಳಿಗೆ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಯಾವುದೇ ಪರಿಹಾರ ಇಲ್ಲ ಎಂಬಂಥ ವಿಪರ್ಯಾಸವನ್ನು ಕಡೆಗೂ ಸುಪ್ರೀಂ ಕೋರ್ಟ್‌ನ ಮದನ್ ಬಿ. ಲೋಕೂರ್ ಹಾಗೂ ದೀಪಕ್ ಗುಪ್ತ ಅವರ ದ್ವಿಸದಸ್ಯ ಪೀಠ ಸರಿಪಡಿಸಿದಂತಾಗಿದೆ.

ಈ ಬಗ್ಗೆ ‘ಇಂಡಿಪೆಂಡೆಂಟ್ ಥಾಟ್’ ಎಂಬಂತಹ ಎನ್‌ಜಿಓ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ವಿಚಾರಣೆ ಕಾಲದಲ್ಲಿ ಹಲ ಬಗೆಯ ಅಚ್ಚರಿ ಹಾಗೂ ತಿರುವುಗಳಿಗೂ ಸಾಕ್ಷಿಯಾಗಿತ್ತು. ‘ಈ ವಿನಾಯಿತಿಗೆ ಅವಕಾಶ ಇರಬೇಕು. ಇಲ್ಲದಿದ್ದಲ್ಲಿ ಭಾರತದಲ್ಲಿ ವಿವಾಹ ವ್ಯವಸ್ಥೆಗೇ ಧಕ್ಕೆಯಾಗಬಹುದು. 2.3 ಕೋಟಿ ಬಾಲ ವಧುಗಳಿಗೆ ತೊಂದರೆಯಾಗಬಹುದು’ ಎಂದೆಲ್ಲಾ ಭಾರತ ಸರ್ಕಾರ ವಾದಿಸಿತ್ತು. ಆಸಕ್ತಿಯ ಸಂಗತಿ ಎಂದರೆ, 2013ರಲ್ಲಿ ಯುಪಿಎ ಹಾಗೂ ನಂತರ ಈಗಿನ ಎನ್‌ಡಿಎ ಸರ್ಕಾರಗಳೆರಡರಿಂದಲೂ ಈ ವಿರೋಧ ವ್ಯಕ್ತವಾಗಿತ್ತು. ಬಾಲ್ಯ ವಿವಾಹ ಸಾಮಾಜಿಕ ಪಿಡುಗು ಎಂಬುದನ್ನು ಒಪ್ಪಿಕೊಂಡರೂ ಈ ಪಿಡುಗನ್ನು ನಿವಾರಿಸುವತ್ತ ದೃಢ ನಿರ್ಧಾರಗಳನ್ನು ಸರ್ಕಾರಗಳು ಪ್ರಕಟಿಸಲಿಲ್ಲ. ಇಂದಿನ ಕಾಲಕ್ಕೆ ಪ್ರಸ್ತುತವಲ್ಲದ ಕಾನೂನುಗಳ ಸೆಕ್ಷನ್‌ಗಳ ತಿದ್ದುಪಡಿಗೆ ಮುಂದಾಗಲಿಲ್ಲ. ಹೀಗಾಗಿ ಕಡೆಗೆ ಸರ್ವೋಚ್ಚ ನ್ಯಾಯಾಲಯವೇ ಮಧ್ಯ ಪ್ರವೇಶ ಮಾಡಬೇಕಾದ ಪ್ರಸಂಗ ಎದುರಾಯಿತು.

ADVERTISEMENT

ಸರ್ಕಾರದ ದ್ವಂದ್ವ ನಿಲುವುಗಳು, ಕಾನೂನುಗಳಲ್ಲಿನ ಅಸಂಗತತೆಗೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ಇಲ್ಲಿ ಗಮನಿಸಬಹುದು. 18 ವರ್ಷಕ್ಕಿಂತ ಮೇಲ್ಪಟ್ಟ ಹುಡುಗ,18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಜೊತೆ ಲೈಂಗಿಕ ಸಂಬಂಧ ಹೊಂದುವುದು, ಸಮ್ಮತಿಪೂರ್ವಕವಾಗಿದ್ದರೂ ಅದು ಕಾನೂನಿನ ಪ್ರಕಾರ ಅತ್ಯಾಚಾರ. 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ) ಅನ್ವಯ ಮಕ್ಕಳ ಮೇಲೆ ಅತ್ಯಾಚಾರ ಎಸಗುವುದು ಅಪರಾಧ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಮಕ್ಕಳೆಂದು ಈಗ ಪರಿಗಣಿಸಲಾಗುತ್ತದೆ. ಹೀಗಿದ್ದೂ ಈ ಕಾನೂನುಗಳಿಗೆ ಪೂರಕವಾಗಿ ಸೆಕ್ಷನ್ 375 ತಿದ್ದುಪಡಿಗೆ ಸರ್ಕಾರ ಮುಂದಾಗಲಿಲ್ಲ.

‘ಸೆಕ್ಷನ್ 375ರಲ್ಲಿ ಅತ್ಯಾಚಾರ ವಿವರಣೆ ನೀಡುವ ಸಂದರ್ಭದಲ್ಲಿ, ಪತ್ನಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿರದಿದ್ದಲ್ಲಿ ಆಕೆಯೊಂದಿಗೆ ವ್ಯಕ್ತಿ ನಡೆಸುವ ಲೈಂಗಿಕ ಸಂಪರ್ಕ ಅತ್ಯಾಚಾರವಾಗುವುದಿಲ್ಲ ಎಂದು ಹೇಳಿರುವುದು ನಿರಂಕುಶವಾದದ್ದು ಹಾಗೂ ತಾರತಮ್ಯದಿಂದ ಕೂಡಿದ್ದು ಸಂವಿಧಾನದ 14 ಹಾಗೂ 15ನೇ ವಿಧಿಗಳ ಉಲ್ಲಂಘನೆಯಾಗುತ್ತದೆ’ ಎಂದು ನ್ಯಾಯಮೂರ್ತಿ ದೀಪಕ್ ಗುಪ್ತ ಈ ತೀರ್ಪಿನಲ್ಲಿ ಬರೆದಿದ್ದಾರೆ.

2006ರ ಬಾಲ್ಯ ವಿವಾಹ ತಡೆ ಕಾಯ್ದೆ ಜಾರಿ ಮಾಡುವ ಮೂಲಕ ಸರ್ಕಾರ ಈಗಾಗಲೇ ಬಾಲ್ಯ ವಿವಾಹವನ್ನೂ ಅಪರಾಧ ವ್ಯಾಖ್ಯೆ ಅಡಿ ತಂದಿದೆ. ಹೀಗಿದ್ದೂ ಇಂತಹ ಬಾಲ್ಯ ವಿವಾಹಗಳು ಯಾವುದೇ ದೂರುಗಳಿಲ್ಲದಿದ್ದಲ್ಲಿ ಊರ್ಜಿತಗೊಳ್ಳುತ್ತವೆ. ಆದರೆ, ಈ ಕಾಯ್ದೆ ಕೂಡ, ಸೆಕ್ಷನ್ 375ಕ್ಕೆ ತಿದ್ದುಪಡಿ ತರಲು ಯತ್ನಿಸಿರಲಿಲ್ಲ ಎಂಬುದನ್ನು ಗಮನಿಸಬೇಕು.

ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ, ಕರ್ನಾಟಕದಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್  ಶ್ಲಾಘಿಸಿರುವುದು ವಿಶೇಷ. 2011ರಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ನೇತೃತ್ವದ ಸಮಿತಿಯು, ರಾಜ್ಯದಲ್ಲಿ ಬಾಲ್ಯ ವಿವಾಹ ತಡೆ ಕುರಿತಂತೆ ನಡೆಸಿದ್ದ ಅಧ್ಯಯನ ವರದಿಯನ್ವಯ ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ಕ್ಕೆ ತಿದ್ದುಪಡಿ ತರಲಾಗಿದೆ. ಈ ವರ್ಷ ಏಪ್ರಿಲ್‌ನಲ್ಲಷ್ಟೇ ಜಾರಿಗೆ ತರಲಾದ ರಾಜ್ಯದ ಬಾಲ್ಯ ವಿವಾಹ ನಿಷೇಧ ಕಾಯಿದೆಯ ಸೆಕ್ಷನ್ 3ರಲ್ಲಿ ಉಪ ಸೆಕ್ಷನ್ (1ಎ) ಸೇರಿಸಲಾಗಿದೆ. ಈ ಪ್ರಕಾರ, ರಾಜ್ಯದಲ್ಲಿ ಇನ್ನು ಮುಂದೆ ನಡೆಯುವ ಬಾಲ್ಯ ವಿವಾಹಗಳು ವಿವಾಹಗಳೆನಿಸಿಕೊಳ್ಳುವುದೇ ಇಲ್ಲ. ವಿವಾಹವಾದ ಕ್ಷಣದಿಂದಲೇ ಅವು ಊರ್ಜಿತವಲ್ಲ ಎಂದು ಪರಿಗಣಿಸುವಂತಹ ಮಾತನ್ನು ಈ ತಿದ್ದುಪಡಿಯಲ್ಲಿ ಸೇರಿಸಲಾಗಿದೆ. ಹೀಗಾಗಿ ಈ ವಿವಾಹಗಳಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ.

ಪ್ರತೀ ಬಾಲ್ಯ ವಿವಾಹವೂ ತಾನಾಗೇ ಅನೂರ್ಜಿತವಾಗುತ್ತದೆ. ಈ ಬಗೆಯ ಕಾನೂನು ಅನುಷ್ಠಾನಗೊಳಿಸಿರುವುದರಲ್ಲಿ ಕರ್ನಾಟಕವೇ ಮೊದಲನೆಯದು ಹಾಗೂ ಏಕೈಕ ರಾಜ್ಯ. ‘ಇಂತಹ ಕ್ರಮವನ್ನು ಎಲ್ಲಾ ರಾಜ್ಯ ಸರ್ಕಾರಗಳೂ ಅಳವಡಿಸಿಕೊಳ್ಳುವುದು ಒಳ್ಳೆಯದು’ ಎಂದು ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಅವರು ತಮ್ಮ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ತಿದ್ದುಪಡಿಯಾದ ಅಂಶವನ್ನು ತಮ್ಮ ತೀರ್ಪಿನಲ್ಲಿ ಎತ್ತಿ ಹೇಳಿರುವ ನ್ಯಾಯಮೂರ್ತಿ ದೀಪಕ್ ಗುಪ್ತ ಅವರು, ‘18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಗಳು ಹಾಗೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷನ ನಡುವಿನ ವಿವಾಹ, ವಿವಾಹವಾದ ದಿನದಿಂದಲೇ ಕರ್ನಾಟಕದಲ್ಲಿಅನೂರ್ಜಿತವಾಗುತ್ತದೆ. ರಾಷ್ಟ್ರದಾದ್ಯಂತ ಕಾನೂನು ಇರಬೇಕಾದುದೇ ಹೀಗೆ. ವಿವಾಹವೇ ‘ಶೂನ್ಯ’ವಾಗಿದ್ದಾಗ ಗಂಡ, ಹೆಂಡತಿ ಎಂಬ ಪ್ರಶ್ನೆಯೇ ಬರುವುದಿಲ್ಲ. ಆಗ ‘ಬಾಲ ವಧು’ವಿನ ‘ಪತಿ’ ಎಂದು ಹೇಳಿಕೊಂಡು ಐಪಿಸಿ 375ರಲ್ಲಿರುವ ವಿನಾಯಿತಿಯಿಂದ ರಕ್ಷಣೆ ಪಡೆಯುವುದು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ.

ಈ ಇಬ್ಬರು ನ್ಯಾಯಮೂರ್ತಿಗಳ ಪ್ರತ್ಯೇಕ ತೀರ್ಪುಗಳು 127 ಪುಟಗಳಷ್ಟಿವೆ. ಈ ತೀರ್ಪಿನಲ್ಲಿ ಹೇಳಿರುವ ಮುಖ್ಯ ಅಂಶ ಇದು: ‘ಹೆಣ್ಣುಮಗುವಿನ ಮಾನವ ಹಕ್ಕುಗಳು ಆಕೆ ಮದುವೆಯಾಗಿರಲಿ, ಆಗಿಲ್ಲದಿರಲಿ ಮುಖ್ಯವಾದವು. ಅದಕ್ಕೆ ಮಾನ್ಯತೆ ಇದೆ ಹಾಗೂ ಅದನ್ನು ಒಪ್ಪಿಕೊಳ್ಳಬೇಕು’.

ಈ ತೀರ್ಪು ನಿಜಕ್ಕೂ ಪರಿಣಾಮಕಾರಿಯಾಗಿ ಬಳಸುವುದು ಸಾಧ್ಯವೆ? ಚಿಕ್ಕ ವಯಸ್ಸಿನ ಪತ್ನಿಯ ಜೊತೆ ಲೈಂಗಿಕ ಸಂಬಂಧ ಹೊಂದುವುದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಈಗ ಘೋಷಿಸಿರುವುದರಿಂದ ಅಪರಾಧ ಎಸಗಿದ ಒಂದು ವರ್ಷದೊಳಗೇ ಪತಿಯ ವಿರುದ್ಧ ಪತ್ನಿ ಈಗ ದೂರು ಸಲ್ಲಿಸಬಹುದು. ಇದರಿಂದ ಬಾಲ್ಯ ವಿವಾಹಗಳಾಗುವುದು ತಪ್ಪುತ್ತದೆಯೇ? ಎಂಬುದು ಪ್ರಶ್ನೆ. ಪತ್ನಿ ದೂರು ನೀಡಿದರಷ್ಟೇ ಈ ಕಾನೂನು ಜಾರಿಗೊಳಿಸುವುದು ಸಾಧ್ಯ. ಸಂತ್ರಸ್ತೆ ದೂರು ನೀಡದಿದ್ದಲ್ಲಿ ತಾನಾಗೇ ಸರ್ಕಾರ ಕ್ರಮ ಕೈಗೊಳ್ಳಲಾಗದು. ಇದನ್ನು ಗಮನಿಸಿದಲ್ಲಿ ಕಾನೂನು ಅನುಷ್ಠಾನದ ಸವಾಲು ದೊಡ್ಡದಿರುವುದು ವೇದ್ಯವಾಗುತ್ತದೆ.

ಬಾಲ್ಯ ವಿವಾಹದ ದೂರುಗಳಿಗೆ ನಮ್ಮ ಪೊಲೀಸ್ ಹಾಗೂ ಅಪರಾಧ ನ್ಯಾಯ ವ್ಯವಸ್ಥೆ ಸಂವೇದನಾಶೀಲವಾಗಿ ಸ್ಪಂದಿಸುವಂತಾಗಬೇಕು. ಅದಿಲ್ಲದಿದ್ದಲ್ಲಿ ಪೊಲೀಸ್ ಠಾಣೆಗೆ ಹೋಗಿ ತನ್ನದೇ ಪತಿಯ ವಿರುದ್ಧ ಅತ್ಯಾಚಾರ ದೂರು ದಾಖಲಿಸುವ ಸಾಹಸವನ್ನು ಹೆಣ್ಣುಮಕ್ಕಳು ಪ್ರದರ್ಶಿಸುವುದು ಕಷ್ಟ. ಬಾಲ್ಯ ವಿವಾಹ ಏರ್ಪಡಿಸುವವರೇ ಅಪ್ಪ ಅಮ್ಮ. ಅವರು ಹುಡುಗಿಗೆ ಬೆಂಬಲಿಸುತ್ತಾರೆನ್ನುವುದು ಸುಳ್ಳು. ಇಂತಹ ಹೆಣ್ಣುಮಕ್ಕಳಿಗೆ ಸುರಕ್ಷಿತ ವಾತಾವರಣ ಹಾಗೂ ಕಾನೂನು ಬೆಂಬಲ ವ್ಯವಸ್ಥೆಯನ್ನೂ ಸೃಷ್ಟಿಸಬೇಕಾಗುತ್ತದೆ. ದಿನನಿತ್ಯದ ವಾಸ್ತವ ಬದುಕುಗಳಲ್ಲಿ ಎದುರಾಗುವ ಈ ಸಮಸ್ಯೆಗಳಿಗೆ ಉತ್ತರಗಳೆಲ್ಲಿ?

ಬಾಲ್ಯ ವಿವಾಹಕ್ಕೆ ಕಾರಣಗಳು ಸಂಕೀರ್ಣ. ಸಾಮಾಜಿಕ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡು ಬರಲಾದ ಪದ್ಧತಿ ಅಥವಾ ಸಂಪ್ರದಾಯ ಒಂದು ಕಾರಣ. ಬಡತನ, ಆರ್ಥಿಕ ಸಮಸ್ಯೆ ಹಾಗೂ ಅರಿವಿನ ಕೊರತೆ, ಮತ್ತೆ ಕೆಲವು ಕಾರಣಗಳು.

2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ (ಎನ್‌ಎಫ್‌ಎಚ್ಎಸ್‌) ಆತಂಕ ಹುಟ್ಟಿಸುವ ಸಂಗತಿಗಳು ಬಹಿರಂಗಗೊಂಡಿವೆ. 2014ರಲ್ಲಿ ಸಮೀಕ್ಷೆಯನ್ನು ಕೈಗೊಳ್ಳುತ್ತಿರುವಾಗ, 20-24 ವಯೋಮಾನದ ಮಹಿಳೆಯರ ಗುಂಪಿನಲ್ಲಿದ್ದವರು, ಬಹುತೇಕ ಶೇ 26.8ರಷ್ಟು ಮಹಿಳೆಯರು 18 ವರ್ಷ ತುಂಬುವ ಮೊದಲೇ ವಿವಾಹವಾಗಿದ್ದವರು. ಎಂದರೆ ನಾಲ್ಕು ವಿವಾಹಗಳ ಪೈಕಿ ಒಂದಕ್ಕಿಂತ ಹೆಚ್ಚು ಮದುವೆಗಳು ಬಾಲ್ಯ ವಿವಾಹಗಳಾಗಿದ್ದವು ಎಂಬುದನ್ನು ಈ ತೀರ್ಪು ಪ್ರಸ್ತಾಪಿಸಿದೆ. ನಗರ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಪ್ರಮಾಣ ಶೇ 17.5ರಷ್ಟಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇ 31.5ರಷ್ಟಿದೆ ಎಂಬುದನ್ನೂ ವರದಿ ಹೇಳಿದೆ. 2015-16ರ ಎನ್‌ಎಫ್‌ಎಚ್ಎಸ್‌ ವರದಿ ಪ್ರಕಾರ, 15-19 ವಯೋಮಾನದ ಸುಮಾರು ಶೇ 8ರಷ್ಟು ಬಾಲಕಿಯರು ಈ ಸಮೀಕ್ಷೆ ನಡೆಸುವ ವೇಳೆಯಲ್ಲಿ ಆಗಲೇ ತಾಯಂದಿರಾಗಿದ್ದರು ಅಥವಾ ಗರ್ಭಿಣಿಯರಾಗಿದ್ದರು. ಹೆರಿಗೆ ಸಮಯದಲ್ಲಿ ತಾಯಂದಿರ ಸಾವು. ಬಾಣಂತಿ ಸಾವು, ಗರ್ಭಪಾತ, ಶಿಶು ಮರಣ– ಇವೆಲ್ಲಾ ಬಾಲ್ಯ ವಿವಾಹದ ಅಮಾನವೀಯ ಆಯಾಮಗಳು ಎಂಬ ಬಗ್ಗೆ ಜಾಗೃತಿ ಹೆಚ್ಚಿಸಬೇಕಿದೆ. ಸುಪ್ರೀಂ ಕೋರ್ಟ್‌ನ ಈಗಿನ ಆದೇಶದಿಂದ ಮಗ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಬಗ್ಗೆ ಗಂಡಿನ ತಂದೆತಾಯಿಗಳಿಗೂ ಅರಿವು ಮೂಡಬೇಕು. ಹಾಗೆಯೇ ಕೊಲ್ಲಿ ರಾಷ್ಟ್ರಗಳ ಸಿರಿವಂತರಿಗೆ ಅಥವಾ ರಾಷ್ಟ್ರದೊಳಗೇ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರುವ ವಿವಿಧ ರಾಜ್ಯಗಳ ಗಂಡುಗಳಿಗೆ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳನ್ನು ವಿವಾಹದ ನೆಪದಲ್ಲಿ ಅಕ್ರಮ ಸಾಗಣೆ ಮಾಡುವ ವ್ಯವಸ್ಥಿತ ಜಾಲದ ವಿರುದ್ಧದ ಕಠಿಣ ಕ್ರಮಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ಪ್ರೇರಕವಾಗಬೇಕು.

ಖಾಸಗಿತನದ ಹಕ್ಕು ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ, ವೈಯಕ್ತಿಕ ಸ್ವಾಯತ್ತೆಯ ಪರಿಕಲ್ಪನೆ ಹಾಗೂ ಖಾಸಗಿತನಕ್ಕೆ ಅದರ ಸಂಬಂಧ, ಅತ್ಯಾಚಾರ ಸಂತ್ರಸ್ತೆಯರ ಖಾಸಗಿತನದ ಹಕ್ಕು, ಗರ್ಭಪಾತಕ್ಕೆ ಸಂಬಂಧಿಸಿದಂತೆ ಖಾಸಗಿತನದ ಹಕ್ಕು ಕುರಿತು ಸುದೀರ್ಘವಾಗಿ ಪರಿಶೀಲಿಸಲಾಗಿದೆ. ಆದರೆ, ವಿವಾಹಕ್ಕೆ ಸಂಬಂಧಿಸಿದಂತೆ ಹಾಗೂ ತನ್ನ ದೇಹದ ಮೇಲೆ ಮಹಿಳೆಯ ಹಕ್ಕು ಕುರಿತಾದ ಖಾಸಗಿತನದ ಪರಿಕಲ್ಪನೆಯನ್ನು ವಿಸ್ತರಿಸುವಲ್ಲಿ ಇಲ್ಲಿ ಐತಿಹಾಸಿಕ ಅವಕಾಶವೊಂದನ್ನು ಕಳೆದುಕೊಂಡಂತಾಗಿದೆ.

ಅಪರಾಧ ನ್ಯಾಯಶಾಸ್ತ್ರದ ತತ್ವಗಳನ್ನು ಗಾಳಿಗೆ ತೂರಲು ‘ವಿವಾಹ’ ನೆಪವಾಗಬಾರದು. ಬಾಲ್ಯವಿವಾಹವಾದ ಹೆಣ್ಣುಮಗುವಿನ ಮೇಲಿನ ಅತ್ಯಾಚಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಈಗಂತೂ ತಡೆ ನೀಡಿದೆ. ಈಗ ಈ ತೀರ್ಪು, ‘ವೈವಾಹಿಕ ಅತ್ಯಾಚಾರ’ವನ್ನು ಅಪರಾಧವಾಗಿ ಪರಿಗಣಿಸಬೇಕು ಎಂಬಂತಹ ವಿಚಾರದ ಮೇಲೂ ಪರಿಣಾಮ ಬೀರುವುದೇ? ಏಕೆಂದರೆ, ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಗಣಿಸಬೇಕೆಂದು ಕೋರುವ ಅರ್ಜಿ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಇನ್ನೂ ಬಾಕಿ ಇದೆ. ಅತ್ಯಾಚಾರ ಎಂಬುದು ಅಪರಾಧ. ಮದುವೆಯಾಗಿರಲಿ ಆಗಿರದಿರಲಿ ಅತ್ಯಾಚಾರ ಎಂಬುದು ಅತ್ಯಾಚಾರ ಅಷ್ಟೆ. ಅದಕ್ಕೆ ಯಾವುದೇ ಸಮರ್ಥನೆ ಇಲ್ಲ. ಸಂವಿಧಾನಕ್ಕೆ ನಿಷ್ಠವಾಗಿರುವ ಭಾರತ ಸರ್ಕಾರ, ‘ವಿವಾಹ ಸಂಬಂಧಗಳು ಅಸ್ಥಿರಗೊಳ್ಳುತ್ತವೆ’ ಎಂಬಂಥ ನೆಪ ಒಡ್ಡಿ ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿಸಲು ವಿರೋಧ ತೋರುತ್ತಿರುವುದನ್ನು ಸಮರ್ಥಿಸುವುದು ಸಾಧ್ಯವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.