ADVERTISEMENT

ಅದ್ಭುತ ಅವಕಾಶವೊಂದು ಕಳೆದುಹೋಯಿತೆ?

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:21 IST
Last Updated 16 ಜೂನ್ 2018, 9:21 IST

ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದ ಮೊದಲ ದಿನ ಸಂಜೆಯ ಹೊತ್ತಿಗೆ ಸಮ್ಮೇಳ­ನಾ­ಧ್ಯಕ್ಷರಾದ ಡಾ.ಸಿದ್ಧಲಿಂಗಯ್ಯ­ ಅವರು ದಣಿದಿದ್ದರು. ಅವರು ಎಪ್ಪತ್ತರ ದಶಕ­ದಲ್ಲಿ ತಮ್ಮ ಇಪ್ಪತ್ತರ ಹರೆಯದಲ್ಲಿ ಬರೆದ ಅಸಲಿ ಸಿಟ್ಟಿನ ಹೋರಾಟದ ಹಾಡುಗಳನ್ನು ಆ ಸಂಜೆ ಹಾಡುತ್ತಿದ್ದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಕೂಡ ಕೊಂಚ ದಣಿದಿದ್ದರು. ಪಿಚ್ಚಳ್ಳಿಯವರ ದನಿ ದಣಿದ ತಕ್ಷಣ ಹೊಸ ತಲೆಮಾರಿನ ಹಾಡುಗಾರ ಡಿ.ಆರ್. ರಾಜಪ್ಪ ಆ ಹಾಡಿನ ಸಾಲುಗಳನ್ನು ಮತ್ತೆ ಎಪ್ಪತ್ತರ ದಶಕದ ‘ಪಿಚ್’ಗೆ ಏರಿಸುತ್ತಿ­ದ್ದರು! ಒಂದು ತಲೆಮಾರು ಚಳವಳಿಗಳನ್ನು ಮುಂದಿನ ತಲೆಮಾರಿಗೆ ದಾಟಿಸುವಂತೆ ಆ ಸಂಜೆ ಚಳವಳಿಯ ಹಾಡುಗಳ ರಿಲೇ ಕೋಲು ಕೂಡ ಹೊಸ ತಲೆಮಾರಿಗೆ ದಾಟಿದಂತೆ ಕಾಣುತ್ತಿತ್ತು.

‘ಮರೆಯೋದುಂಟೆ ಮೈಸೂರ ದೊರೆಯ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ’ ಎಂದು ಶುರುವಾ­ಗುವ ಕವಿ ಹನಸೋಗೆಯವರ ಹಾಡು ಕರ್ನಾಟಕ­ದಲ್ಲಿ ನಾಲ್ವಡಿಯವರನ್ನು ಸಾಂಸ್ಕೃತಿಕ ನಾಯಕ­ರನ್ನಾಗಿ ನೆಲೆಗೊಳಿಸಿದ ಬಹುಜನ ಸಮಾಜ ಪಕ್ಷದ ಮುಖ್ಯ ಹಾಡಾಗಿಬಿಟ್ಟಿದೆ. ಮೊದಲಿಗೇ ಈ ಹಾಡು ಹಾಡಿದ ಪಿಚ್ಚಳ್ಳಿ ತಂಡ ಆಧುನಿಕ ಕರ್ನಾಟಕದ ಆರಂಭದಲ್ಲಿ ನಾಲ್ವಡಿ­ಯವರು ಮೀಸ­ಲಾತಿ ಹಾಗೂ ಇನ್ನಿತರ ಸುಧಾರಣೆ­ಗಳ ಮೂಲಕ ಉದ್ಘಾಟಿಸಿದ ಸಾಮಾಜಿಕ ನ್ಯಾಯದ ಪರಂಪರೆ­ಯನ್ನು ಕೃತಜ್ಞತೆಯಿಂದ ಸ್ಮರಿಸಿತು.

ಸಿದ್ಧಲಿಂಗಯ್ಯನವರ ‘ಗುಡಿಸಿಲಿನಲ್ಲಿ ಅರಳಿದ ಗುಲಾಬಿ ನಕ್ಷತ್ರ ನನ್ನ ಕವನ’, ‘ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ’ ಮುಂತಾದ, ಎರಡು ಮೂರು ದಶಕಗಳ ಕಾಲ ಕರ್ನಾಟಕದ ಚಳವಳಿಗಳ ಸ್ಫೂರ್ತಿಯ ಸೆಲೆಯಾಗಿ ಇವತ್ತಿಗೂ ಆ ಶಕ್ತಿಯನ್ನು ಉಳಿಸಿಕೊಂಡಿರುವ ಹೋರಾಟದ ಹಾಡುಗಳನ್ನು ಕೇಳುತ್ತಾ ಜನ ರೋಮಾಂಚನಗೊಳ್ಳುತ್ತಿದ್ದರು. ಈ ಹಿಂದೆ ಆ ಹಾಡು­ಗಳನ್ನು ಕೇಳಿದ್ದ ಹಿರಿಯರು ಕೊಂಚ ವಿಷಾದದಿಂದ ಕಳೆದು ಹೋದ ದಿನಗಳಿಗೆ ಮರಳಿದಂತಿದ್ದರು.

ನನ್ನ ಪಕ್ಕದಲ್ಲಿ ಕೂತಿದ್ದ ಚಿಗುರು ಮೀಸೆಯ ಪೋಲಿಸ್ ಕಾನ್‌ಸ್ಟೆಬಲ್ ಸೇರಿದಂತೆ ಹೊಸ ತಲೆಮಾರಿನವರು ಆ ಹೋರಾಟದ ಹಾಡು­ಗಳನ್ನು ಕೇಳಿ ಮೈದುಂಬುತ್ತಿದ್ದರು. ಸಿದ್ಧಲಿಂಗಯ್ಯ­ನವರ ಕಾರಣಕ್ಕಾಗಿಯೂ ಅಲ್ಲಿ ಸೇರಿದ್ದ ಸಾವಿರಾರು ದಲಿತ ಚಳವಳಿಯ ನಾಯಕರು ಹಾಗೂ ಕಾರ್ಯಕರ್ತರಿಗೆ, ಚಳವಳಿ ಬೇಕೋ ಬೇಡವೋ ಎಂದು ಗೊಂದಲದಲ್ಲಿರುವ ಕೆಂಪು­ಗಣ್ಣಿನ ಎಳೆಯರಿಗೆ ಈ ಹಾಡುಗಳು ಹಲವು ಬಗೆಯ ಚಳವಳಿಗಳ ಬಗ್ಗೆ ಹೊಸ ಕನಸುಗಳನ್ನು ಮೂಡಿಸಿದ್ದರೆ ಅದು ಅಚ್ಚರಿಯಲ್ಲ. ಈ ತಲೆಮಾರಿನ ಕವಿ­ಯೊಬ್ಬರ ಹೊಸ ನುಡಿಗಟ್ಟಿ­ನಲ್ಲೇ ಹೇಳುವು­ದಾದರೆ, ಚಳವಳಿಗಾರರು ಅವತ್ತು ‘ರೀಚಾರ್ಜ್’ ಆಗಿದ್ದರು!

ಒಂದು ಕಾಲಘಟ್ಟದಲ್ಲಿ ಸೃಷ್ಟಿಯಾದ ಚಳವಳಿ­ಗಳ ಚರಿತ್ರೆ ಪುನರಾವರ್ತನೆಯಾಗುತ್ತದೆಯೆ? ಆಯಾ ಕಾಲದ ಅಗತ್ಯ, ಸ್ಫೂರ್ತಿ ಮತ್ತು ಒತ್ತಡಗಳಿಂದ ಸೃಷ್ಟಿಯಾದ ಚಳವಳಿಗಳು ಮತ್ತೆ ಹುಟ್ಟುತ್ತವೆಯೆ? ಈ ಹಾಡುಗಳನ್ನು ಕೇಳಿ ಜನ ಚಳವಳಿಗೆ ಬಂದಾರೆ? ಹಳೆಯ ದಮನದ ರೂಪ­ಗಳು ಬೇರೆ ಬೇರೆ ವೇಷದಲ್ಲಿ ಬಂದಂತೆ  ಹಳೆಯ ಪ್ರತಿಭಟನೆಗಳು ಕೂಡ ಬೇರೆ ಬೇರೆ ರೂಪದಲ್ಲಿ ಬರಬಹುದಲ್ಲವೆ? ಈ ಥರದ ಪ್ರಶ್ನೆಗಳು ಆ ಹಾಡು­ಗಳನ್ನು ಕೇಳುತ್ತಿದ್ದ ನನ್ನಂಥ ಹಲವರಲ್ಲಿ ಮೂಡಿರಬಹುದು. ಆ ಗಳಿಗೆಯಲ್ಲಿ ನನಗೆ ಸಿದ್ಧಲಿಂಗಯ್ಯನವರನ್ನು ಸಮ್ಮೇಳನದ ಅಧ್ಯಕ್ಷರ­ನ್ನಾಗಿ ಆರಿಸಿದ ಪುಂಡಲೀಕ ಹಾಲಂಬಿ ಮತ್ತು ತಂಡಕ್ಕೆ ಈ ಸಮ್ಮೇಳನದ ಚಾರಿತ್ರಿಕ ಮಹತ್ವ ನಿಜಕ್ಕೂ ಅರ್ಥವಾಗಿರಲಿಕ್ಕಿಲ್ಲ ಎನ್ನಿಸತೊಡಗಿತು.

ಈ ಸಲದ ಸಮ್ಮೇಳನಕ್ಕೆ ಹೋರಾಟದ ವಲಯ­ಗಳಿಂದ ಬರುತ್ತಿದ್ದ ಉತ್ಸಾಹದ ಪ್ರತಿಕ್ರಿಯೆಗಳನ್ನು  ಹಾಗೂ ಸಮ್ಮೇಳನಕ್ಕೆ ಬಂದ ಹಲ ಬಗೆಯ ದಲಿತ ಸಂಘಟನೆಗಳ ನಾಯಕರನ್ನು, ಕಾರ್ಯಕರ್ತರನ್ನು ನೋಡಿದವರಿಗೆ ಈ ಸಮ್ಮೇಳನದ ಚಾರಿತ್ರಿಕ ಮಹತ್ವ ಗೊತ್ತಾಗಿರಬಹುದು. ಶ್ರವಣಬೆಳಗೊಳ­ದಲ್ಲಿ ಹಾಗೂ ಅಲ್ಲಿಗೆ ಬರುವ ಹಾದಿಯಲ್ಲಿ ಎಂದಿನಂತೆ ಸಮ್ಮೇಳನವನ್ನು ಸ್ವಾಗತಿಸುವ ಹಲವು ಬಗೆಯ ಬ್ಯಾನರುಗಳ ನಡುವೆ ಮೊದಲ ಬಾರಿಗೆ ದಲಿತ ಚಳವಳಿಗಳ ಹಲವು ಬಣಗಳ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳು ಎದ್ದು ಕಾಣುತ್ತಿದ್ದವು.

ರೈತ ಚಳವಳಿ ಹಾಗೂ ಹಸಿರುಸೇನೆಗಳ ಬ್ಯಾನರ್ ಕೂಡ ಇದ್ದವು. ಈ ಹೊಸ ವಾತಾವರಣದ ಸಾಧ್ಯತೆ­ಯನ್ನು ಊಹಿಸಿ ತುಂಬ ಚುರುಕಾದ ಹಾಗೂ ಗಟ್ಟಿಯಾದ ಸಾಮಾಜಿಕ ಚರ್ಚೆಗಳನ್ನು ರೂಪಿಸಬಲ್ಲ ಮುನ್ನೋಟ ಸಾಹಿತ್ಯ ಪರಿಷತ್ತಿಗೆ ಇದ್ದಂತಿರಲಿಲ್ಲ. ಒಂದು ಕಾಲಕ್ಕೆ ಚಳವಳಿಗಳನ್ನು ರೂಪಿಸಿದ್ದ ಸಿದ್ಧಲಿಂಗಯ್ಯನವರ ಇವತ್ತಿನ ಅಧ್ಯಕ್ಷ ಭಾಷಣ ಈ ಕಾಲದ ಮುಖ್ಯ ಸಮಸ್ಯೆಗಳನ್ನು ಪ್ರಸ್ತಾಪಿಸಿದರೂ ಅದರಲ್ಲಿ ಸಮಸ್ಯೆಗಳ ಪರಿಹಾರ­ಕ್ಕಾಗಿ ಸರ್ಕಾರಕ್ಕೆ ಮಾಡಿಕೊಂಡ ಮನವಿಯ ಧ್ವನಿಯೇ ಪ್ರಧಾನವಾಗಿತ್ತು; ಅಲ್ಲಿ ಕೂಡ ಚಳವಳಿ­ಗಳ ಹಾದಿ ಹಾಗೂ ಇವತ್ತು ಅವುಗಳ ಅಗತ್ಯದ ಬಗ್ಗೆ ಒತ್ತು ಇರಲಿಲ್ಲ.

ಈ ಕೊರತೆ ಕಣ್ಣಿಗೆ ಹೊಡೆಯುವಂತೆ ಕಂಡದ್ದು ಅಷ್ಟೊಂದು ಜನ ಆ ಸಭಾಂಗಣದಲ್ಲಿ ಕೂತು ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ರೀತಿ ಕಂಡಾಗ: ಒಂದು ದಶಕದ ಕೆಳಗೆ ತಮ್ಮೂರಿನ ಕಡೆಯ ಶಾಂತರಸರು ಸಮ್ಮೇಳನಾಧ್ಯಕ್ಷರಾಗಿದ್ದಾಗಿನಿಂದ ಸಾಹಿತ್ಯ ಸಮ್ಮೇಳನಗಳಿಗೆ ಹೋಗಲು ಶುರು ಮಾಡಿದ ಸೇಡಂನ ತರುಣ ಶ್ರೀನಿವಾಸ್ ಈಗಾ­ಗಲೇ ಹತ್ತು ಸಮ್ಮೇಳನಗಳಿಗೆ ಹಾಜರಾಗಿದ್ದಾನೆ. ಈ ನಡುವೆ ಕನ್ನಡ ಎಂ.ಎ., ಎಂ.ಫಿಲ್.  ಮುಗಿಸಿ­ದ್ದಾನೆ. ಸಮ್ಮೇಳನಗಳಲ್ಲಿ ಹೊಸ ಐಡಿಯಾಗಳು ಸಿಕ್ಕರೆ ಅವನ್ನು ತನ್ನ ತಲೆಯಲ್ಲಿ ಜೋಪಾನವಾಗಿ ಕಾಯ್ದುಕೊಂಡಿದ್ದಾನೆ. ಪ್ರತಿ ಸಮ್ಮೇಳನದಲ್ಲೂ ಇಂಥ ಲಕ್ಷಾಂತರ ಜನ ಸಿಗುತ್ತಾರೆ.

ತಾವು ಎಂದೋ ಓದಿದ ಲೇಖಕ, ಲೇಖಕಿಯರನ್ನು ಕಂಡು ಪುಳಕಗೊಳ್ಳುವ, ಅವರೊಂದಿಗೆ ಫೋಟೊ ತೆಗೆಸಿ­ಕೊಳ್ಳುವ ಮುಗ್ಧ ಓದುಗರಿದ್ದಾರೆ. ಪುಸ್ತಕಗಳನ್ನು ಕೊಂಡು ತಮ್ಮ ಪಾಡಿಗೆ ತಾವು ಓದಿಕೊಳ್ಳುವ ಮೂಲಕವೇ ಕನ್ನಡ ಸಾಹಿತ್ಯವನ್ನು ಪೊರೆಯು­ತ್ತಿ­ರುವ ಓದುಗರಿದ್ದಾರೆ. ತಪ್ಪದೆ ಸಮ್ಮೇಳನಗಳಿಗೆ ಹಾಜರಾಗುವ ಶಾಲಾ ಟೀಚರುಗಳಿಂದ ಹಿಡಿದು ಎಲ್ಲ ವರ್ಗದ ಜನರಿದ್ದಾರೆ. ಇಂಥ ಕನ್ನಡಿಗರಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೈ ಮುಗಿದು, ಅವರಿ­ಗೆಲ್ಲ ಪ್ರಯಾಣ ವೆಚ್ಚ ಕೊಟ್ಟು ಬರಮಾಡಿ­ಕೊಳ್ಳ­ಬೇಕು ಎನ್ನಿಸಿತು. ಅದಾಗದಿದ್ದರೂ ಕನ್ನಡ ಸಾಹಿತ್ಯದ ಹಾಗೂ ಒಟ್ಟು ಕರ್ನಾಟಕದ ಮುಖ್ಯ ಪ್ರಶ್ನೆಗಳನ್ನು ಚರ್ಚಿಸಿ, ಈ ಸಮ್ಮೇಳನಗಳಿಗೆ ಬರುವ ಲಕ್ಷಾಂತರ ಜನರ ಸಂವೇದನೆಯನ್ನು ರೂಪಿಸುವ ಜವಾಬ್ದಾರಿ ಹಾಗೂ ದೂರದೃಷ್ಟಿ ಸಾಹಿತ್ಯ ಪರಿಷತ್ತಿಗೆ ಇರಬೇಕು.

ಈಚೆಗೆ ಸಾಹಿತ್ಯಕ್ಕೆ ಸಂಬಂಧಪಟ್ಟ ಗಂಭೀರ ಗೋಷ್ಠಿಗಳನ್ನೇ ‘ಸಾಹಿತ್ಯ’ ಸಮ್ಮೇಳನಗಳು ಕೈಬಿಟ್ಟಿವೆ. ಸಾಮಾಜಿಕ ಹಾಗೂ ಸಾಹಿತ್ಯಕ ವಲಯಗಳೆರಡನ್ನೂ ಇಂಥ ಸಮ್ಮೇಳನ­ಗಳು ಬೆಸೆಯಬೇಕು. ಸಾಹಿತ್ಯ ಸಮ್ಮೇಳನಗಳು  ಸಾಹಿತ್ಯದ ಚರ್ಚೆಗಳನ್ನು ಅಂಚಿಗೆ ತಳ್ಳತೊಡಗಿ­ದರೆ, ಸಾಹಿತ್ಯದ ದೇಶಾವರಿ ಭಾಷಣಗಳನ್ನು ಅಥವಾ ಸಾಹಿತಿಗಳು ಹಾಗೂ ಸಾಹಿತ್ಯ ಕೃತಿಗಳ ಬಗೆಗಿನ ಮೇಲ್ಪದರದ ಮಾತುಗಳನ್ನೇ ‘ಸಾಹಿತ್ಯ ಚರ್ಚೆ’ ಎಂದು ಈ ತಲೆಮಾರಿನ ಸಾಹಿತ್ಯಾಸಕ್ತರು ತಿಳಿಯತೊಡಗಿದರೆ ಆಶ್ಚರ್ಯವಲ್ಲ!

ಈ ಬಗೆಯ ಸಮ್ಮೇಳನಗಳಲ್ಲಿ ಹತ್ತಾರು ಬಗೆಯ ವಿಚಾರಗಳನ್ನು ಒಳಗೊಳ್ಳಲು ಸಮಾ­ನಾಂ­ತರ ವೇದಿಕೆಯನ್ನು ರೂಪಿಸುವುದು ಅಗತ್ಯ­ವಿರ­ಬಹುದು. ಆದರೆ ಸಮಾನಾಂತರ ವೇದಿಕೆ­ಗಳನ್ನು ‘ಬಿ’ ಟೀಮ್ ವೇದಿಕೆಯನ್ನಾಗಿ  ಮಾಡು­ವುದು, ಅಲ್ಲಿಗೆ ಜನರೇ ಬಾರದಂಥ ವಾತಾವರಣ­ವಿರುವುದು, ಅಲ್ಲಿ ನಡೆಯುವ ಗೋಷ್ಠಿಗಳ ಬಗ್ಗೆ ಜನರಿಗೆ ಸರಿಯಾದ ತಿಳಿವಳಿಕೆ ಕೊಡದಿರುವುದು ಇವೆಲ್ಲ ಸೇರಿಕೊಂಡು ಸಮಾನಾಂತರ ವೇದಿಕೆ­ಗ­ಳಲ್ಲಿ ನಡೆಯುವ ಗಂಭೀರ ಚರ್ಚೆಗಳು ಯಾರಿಗೂ ತಲುಪದಂಥ ಸ್ಥಿತಿಯನ್ನು ನಿರ್ಮಿಸಿವೆ. ಇಂಥ ಸಮ್ಮೇಳನಗಳಲ್ಲಿ ಚರ್ಚಿಸಲಾಗುವ ವಸ್ತು­ವಿಷಯಗಳನ್ನು ಆರಿಸಲು ಒಂದು ಜವಾಬ್ದಾರಿ­ಯುತ ತಂಡ ಹಲವು ತಿಂಗಳ ಕಾಲ ಹಲವರೊಂ­ದಿಗೆ ಚರ್ಚಿಸಿ ಸಿದ್ಧತೆ ಮಾಡಿಕೊಳ್ಳುತ್ತಿರ­ಬೇಕಾಗು­ತ್ತದೆ.

ಈ ವಿಷಯಗಳನ್ನು ಸಮರ್ಥವಾಗಿ ಬಲ್ಲ ಆರೋಗ್ಯಕರ ಮನಸ್ಸಿನ ಚಿಂತಕ, ಚಿಂತಕಿಯರನ್ನು ಗೋಷ್ಠಿಗಳಿಗೆ ಆರಿಸಲು ಸ್ವಜನಪಕ್ಷಪಾತ, ಪೂರ್ವ­ಗ್ರಹ­ಗಳಿಲ್ಲದೆ ಮುಕ್ತವಾಗಿ ಯೋಚಿಸಬೇಕಾ­ಗು­ತ್ತದೆ. ಈ ದೃಷ್ಟಿಯಿಂದ, ಈ ಕಾಲದಲ್ಲಿ ಆಯೋಜಿ­ಸ­ಲಾಗುತ್ತಿರುವ ಲಿಟರರಿ ಫೆಸ್ಟಿವಲ್‌ಗಳ ಜೀವಂತಿಕೆ ಹಾಗೂ ಚುರುಕು ರೀತಿಗಳನ್ನೂ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ­ಗಳನ್ನೂ ಪರಿಷತ್ತು ಕೊಂಚ ಹತ್ತಿರದಿಂದ ನೋಡಿ ತನ್ನ ಸಮ್ಮೇಳನಗಳ ಸ್ವರೂಪಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು. ಜೊತೆಗೆ, ಸ್ವಾಗತ, ವಂದನೆ ಹಾಗೂ ನಿರೂಪಕರ ಭಯೋ­ತ್ಪಾ­ದನೆಯನ್ನು ತಡೆಗಟ್ಟಿ ಅವನ್ನೆಲ್ಲ ಒಂದು ಸಾಲಿಗೆ ಇಳಿಸುವುದು ಅತ್ಯಗತ್ಯ.

ದೇವನೂರ ಮಹಾದೇವ ಅವರು ಕನ್ನಡ ಮಾಧ್ಯಮದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಈ ಸಮ್ಮೇಳನದ ಅಧ್ಯಕ್ಷರಾಗಲು ಒಲ್ಲೆನೆಂದ­ದ್ದನ್ನು ಗಂಭೀರವಾಗಿ ತೆಗೆದುಕೊಂಡು ಇಡೀ ಪ್ರಶ್ನೆ­ಯನ್ನು ಕೇಂದ್ರಕ್ಕೆ ತಂದು ಚರ್ಚಿಸುವ ಪ್ರಾಮಾ­ಣಿಕ ಉತ್ಸಾಹವನ್ನು ಈ ಸಮ್ಮೇಳನ ಸೃಷ್ಟಿಸಲಿಲ್ಲ. ಆ ದಿಕ್ಕಿನಲ್ಲಿ ಜನಾಭಿಪ್ರಾಯ ರೂಪಿಸುವ ದನಿ ಸಮ್ಮೇಳನದಲ್ಲಿ ಕೇಳಿ ಬಂದರೂ ಅದರ ಹೊಣೆ­ಯನ್ನು ನಿರ್ವಹಿಸುವ ಖಚಿತ ಮಾರ್ಗಗಳನ್ನು ಕುರಿತು ಸಮ್ಮೇಳನ ಆಳವಾಗಿ ಚಿಂತಿಸಿದಂತಿಲ್ಲ. ಸಮ್ಮೇಳನದ ಯಾಂತ್ರಿಕ ನಿರ್ಣಯಗಳು ಆ ಕೆಲಸ ಮಾಡುತ್ತವೆಂಬ ಖಾತ್ರಿ ಯಾರಿಗೂ ಇಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಕನ್ನಡ ಮಾಧ್ಯಮದ ಜಾರಿಗಾಗಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿ­ದ್ದಾರೆ. ಆ ರೀತಿಯ ಹೇಳಿಕೆಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಸಂವಿಧಾನ ತಿದ್ದುಪಡಿ­ಯಂಥ ಸೂಕ್ಷ್ಮ ವಿಷಯವನ್ನು ತೀರ ಬಿಡುಬೀಸಾಗಿ ಚರ್ಚಿಸುವುದು ಕೂಡ ತಪ್ಪು. ಯಾಕೆಂದರೆ ಒಮ್ಮೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಚಾಳಿ ಶುರು­ವಾದರೆ ಸರ್ವಾಧಿಕಾರಿ ನಾಯಕರು ಹಾಗೂ ಪಕ್ಷಗಳ ಕೈಯಲ್ಲಿ ಇದು ಯಾವ ಮಟ್ಟಕ್ಕಾದರೂ ಇಳಿಯಬಹುದು ಎಂಬ ಎಚ್ಚರ ನಮಗಿರಬೇಕು.

ಈಗ ಕೆಲವರು ಸೂಚಿಸುತ್ತಿರು­ವಂತೆ ಕರ್ನಾಟಕ ಸರ್ಕಾರವೇ ಮುಂದಾಗಿ ಇನ್ನಿ­ತರ ರಾಜ್ಯಗಳನ್ನು ಭಾಷಾಮಾಧ್ಯಮ ಕುರಿತ ಮಹತ್ವದ ಕೇಸಿನಲ್ಲಿ ಭಾಗಿಯಾಗಲು ಮನವೊಲಿ­ಸ­ಬೇಕು; ಲೇಖಕ ಕೇಶವ ಮಳಗಿ ಹೇಳಿದಂತೆ, ಜಗತ್ತಿನಲ್ಲಿ ಈ ಬಗೆಯ ಬಿಕ್ಕಟ್ಟನ್ನು ಎದುರಿಸು­ತ್ತಿ­ರುವ ಬೇರೆ ಬೇರೆ ದೇಶಗಳ ವಿದ್ವಾಂಸರನ್ನು, ಬೇರೆ ಬೇರೆ ರಾಜ್ಯಗಳ ಚಿಂತಕರನ್ನು, ಚಳವಳಿಗಾರರನ್ನು ಕರ್ನಾಟಕಕ್ಕೆ ಅಥವಾ ದೆಹಲಿಗೆ ಆಹ್ವಾನಿಸಿ, ವಿಶಾಲ­ವಾದ ಹಾಗೂ ಖಚಿತ ದಿಕ್ಕು ಹುಡುಕುವ ಚರ್ಚೆಯನ್ನು ಆರಂಭಿಸಬೇಕು.

ಕನ್ನಡ ಮಾಧ್ಯ­ಮದ ಪ್ರಶ್ನೆಯನ್ನು ಭಾವುಕ ನೆಲೆಯಲ್ಲಿ ಮಾತಾಡಿ ಪ್ರಯೋಜನವಿಲ್ಲ; ಅದರ ಜೊತೆಗೆ, ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲೂ ಕನ್ನಡ­ವನ್ನು ಒಂದು ಭಾಷೆಯನ್ನಾಗಿ ಕಲಿಸುವ ಹಾಗೂ ಹೇಮಲತಾ ಮಹಿಷಿಯವರು ಹೇಳಿದಂತೆ ಕನ್ನಡವನ್ನು ಒಂದು ‘ವಿಷಯ’ವಾಗಿ ಕಡ್ಡಾಯ­ವಾಗಿ ಕಲಿಸುವ ಅಗತ್ಯವನ್ನು ಖಾಸಗಿ ಶಾಲೆಗಳಿಗೆ ಮನಗಾಣಿಸಬೇಕು. ಖಾಸಗಿ ಶಾಲೆಗಳು ಕನ್ನಡ ಮಾತೃಭಾಷೆಯಲ್ಲದ ಮಕ್ಕಳಿಗೆ ಅವರವರ ಭಾಷೆಗಳನ್ನು ಕಲಿಯುವ ಅವಕಾಶದ ಜೊತೆಗೆ ಸ್ಥಳೀಯ ಭಾಷೆಯಾದ ಕನ್ನಡವನ್ನು ಸರಳವಾಗಿ­ಯಾ­ದರೂ ಕಲಿಸಬೇಕು.

ಯಾವುದೇ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದಂತೆ ಆರೋಗ್ಯ­ಕರ ಪ್ರಧಾನ ಧ್ವನಿಯೊಂದು ಮೂಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತಿಗಳು ದಣಿದಿದ್ದರೂ ಸಮ್ಮೇಳನಕ್ಕೆ ಬರುವ ಕನ್ನಡಿಗರು ದಣಿದಿಲ್ಲ ಎಂಬ ತಿಳಿವಳಿಕೆ ಹಾಗೂ ಆ ಕುರಿತು ಗಟ್ಟಿ ನಂಬಿಕೆಯಿರದಿದ್ದರೆ ಎಲ್ಲ ಸಮ್ಮೇಳನಗಳೂ ಯಾಂತ್ರಿಕ ಆಚರಣೆಗಳಾಗುತ್ತವೆ.

ಕೊನೆ ಟಿಪ್ಪಣಿ: ಗಂಭೀರ ಚಿಂತನೆ ಮತ್ತು ಸರಳ ಭಾಷೆಯ ಬೆಸುಗೆ
ಖಾಸಗಿಯಾಗಿ ತುಂಬ ಲವಲವಿಕೆಯಿಂದ ಮಾತಾ­ಡುವ ಡಾ.ಸಿದ್ಧಲಿಂಗಯ್ಯನವರು ಸಮ್ಮೇಳನಾಧ್ಯಕ್ಷ ಭಾಷಣಗಳ ಪರಿಚಿತ ಜಾಡಿಗೆ ಇಳಿದು ತಮ್ಮ ಜೀವಂತಿಕೆ ಕಳೆದುಕೊಂಡಂತಿತ್ತು. ಹಾಗೆಯೇ ಇಂಥ ದೊಡ್ಡ ಸಮ್ಮೇಳನಗಳಲ್ಲಿ ವಿಚಾರ ಮಂಡಿಸುವವರೆಲ್ಲ ಸಂಕೀರ್ಣ ವಿಚಾರ­ಗಳನ್ನು ಸರಳವಾಗಿ ತಲುಪಿಸುವ ನುಡಿಗಟ್ಟು ಹಾಗೂ ಜವಾಬ್ದಾರಿ ಕುರಿತು ಆಳವಾಗಿ ಯೋಚಿಸು­ತ್ತಿರಬೇಕಾಗುತ್ತದೆ. ಈ ಸಮ್ಮೇಳನ­ದಲ್ಲಿ ಆ ಪ್ರಜ್ಞೆ ಕೆಲವರಲ್ಲಿ ಕೆಲವು ಕಡೆ ಮಾತ್ರ ಕಾಣುತ್ತಿತ್ತು.

ಸಮುದಾಯದ ಸಹಜ ಭಾಷೆಗೆ ಹತ್ತಿರವಾಗುವಂತೆ ಮಾತಾಡಿ ಜನರ ಜೀವನ್ಮ­ರಣದ ಪ್ರಶ್ನೆಗಳನ್ನು ಎಲ್ಲರಿಗೂ ತಲುಪಿಸುವ ಕಲೆಯನ್ನು ನಮ್ಮ ಚಿಂತಕ, ಚಿಂತಕಿಯರು ದಲಿತ ಚಳವಳಿಯನ್ನು ರೂಪಿಸಿದ  ಬಿ. ಕೃಷ್ಣಪ್ಪನವರಿಂದ  ಹಾಗೂ ರೈತ ಚಳವಳಿಯನ್ನು ಕಟ್ಟಿದ ಎಂ.ಡಿ. ನಂಜುಂಡಸ್ವಾಮಿ, ಸುಂದರೇಶ್ ಥರದವರಿಂದ ಕಲಿ­ಯಬೇಕು. ಇಂಥ ದೊಡ್ಡ ಸಭೆಗಳಲ್ಲಿ ಪರಿ­ಕಲ್ಪ­ನೆ­ಗಳ ಭಾರದಿಂದ ಜನರನ್ನು ಕಣ್ಣು ಕಣ್ಣು ಬಿಡು­ವಂತೆ ಮಾಡುವ ಅಗತ್ಯವಿಲ್ಲ; ಹಾಗೆಂದು ಅನಗತ್ಯ­ವಾಗಿ ವಿಷಯವನ್ನು ತೆಳುಗೊಳಿಸಿ ಚೀರ­ಬೇಕಾ­ಗಿಲ್ಲ.

ಹಸಿಹಸಿ ಪೂರ್ವಗ್ರಹಗಳು, ವಿಶ್ಲೇ­ಷಣೆಯ ಕಿಕ್ಕಿ­ಗಾಗಿ ಒಗೆಯುವ ಬೀಸು ಹೇಳಿಕೆಗಳು, ಅರೆ­ಬೆಂದ ವ್ಯಾಖ್ಯಾನಗಳು, ಜಾತಿಪೀಡಿತ ‘ಸಂಶೋ­ಧನೆ’­ಗಳು ಹಾಗೂ ವಿಕೃತ ಚಿಂತನೆಗ­ಳನ್ನು ಜನರ ಮೇಲೆ ಹರಿಯಬಿಡುವುದರಿಂದ ಜನರ ಕಣ್ಣು ಮುಚ್ಚಿಸಿದಂತಾಗುತ್ತದೆ; ಅವರ ಅಭಿರುಚಿಯನ್ನು ಶಾಶ್ವತವಾಗಿ ಹಾಳು ಮಾಡಿದಂತಾಗುತ್ತದೆ. ಈ ಎಚ್ಚರ ಸದಾ ನಮ್ಮೊಳಗಿರಲಿ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.