ADVERTISEMENT

ಅರ್ಥವಾಗದೇ ತಿಳಿದ ಮಾತು

ಡಾ. ಗುರುರಾಜ ಕರಜಗಿ
Published 22 ಫೆಬ್ರುವರಿ 2011, 17:25 IST
Last Updated 22 ಫೆಬ್ರುವರಿ 2011, 17:25 IST

ಇತ್ತೀಚಿಗೆ ನಾನು ಉತ್ತರಕರ್ನಾಟಕದ ಒಂದು ಹಳ್ಳಿಯ ಶಾಲೆಗೆ ಹೋಗಿದ್ದೆ. ಅಲ್ಲಿ ಮೈದಾನದ ಹತ್ತಿರ ನಿಂತು ನೋಡುತ್ತಿದ್ದಾಗ ಕೆಲವು ಮಕ್ಕಳು ಆಡುತ್ತಿರುವುದನ್ನು ಗಮನಿಸಿದೆ. ಬಹುಶ: ಇತ್ತೀಚೆಗೆ ಅವರ ಶಾಲೆಯ ಆಟೋಟದ ಪಂದ್ಯಾವಳಿಗಳು ಮುಗಿದಿರಬೇಕು. ಬಯಲಿನಲ್ಲಿ ಓಟಕ್ಕೆಂದು ಹಾಕಿದ ರಂಗೋಲಿಯ ಗುರುತುಗಳು ಹಾಗೆಯೇ ಇದ್ದವು.

ಈ ಮಕ್ಕಳು ಓಟದ ಪಂದ್ಯದ ಆಟವಾಡುತ್ತಿದ್ದರೆಂದು ತೋರುತ್ತದೆ. ಏಳೆಂಟು ಮಕ್ಕಳು ತಾವು ಓಟ ಪ್ರಾರಂಭಮಾಡುವ ಸ್ಥಳದಲ್ಲಿ ನಿಂತುಕೊಂಡಿದ್ದರು. ಇನ್ನೊಬ್ಬ ಸ್ವಲ್ಪ ಹಿರಿಯ ಹುಡುಗಿ ಈ ಓಟದ ನಿರ್ಣಾಯಕಿಯಂತೆ ಸಜ್ಜಾಗಿ ನಿಂತಳು. ಓಟಗಾರರೆಲ್ಲ ಕೆಳಗೆ ಕುಳಿತು ತಕ್ಷಣದ ಓಟಕ್ಕೆ ಸಿದ್ಧರಾದರು. ನಿರ್ಣಾಯಕಿ ಘೋಷಿಸಿದಳು, ‘ನಾನು ಆರ್ಡರ್ ಕೊಟ್ಟ ತಕ್ಷಣ ಓಡಬೇಕು. ಅದಕ್ಕಿಂತ ಮುಂಚೆ ಓಡಿದರೆ ನಿಮ್ಮನ್ನು ಆಟದಿಂದ ಹೊರಗೆ ಹಾಕುತ್ತೇನೆ ತಿಳಿಯಿತೇ’ ಓಟಗಾರರೆಲ್ಲ ಉತ್ಸಾಹದಿಂದ ‘ಆಯ್ತು’ ಎಂದರು. ಎಲ್ಲವೂ ಓಟಕ್ಕೆ ಸಿದ್ಧವಾಗಿತ್ತು. ಹುಡುಗಿ ತನ್ನೆರಡೂ ಕೈ ಗಳನ್ನು ಮೇಲೆತ್ತಿ, ‘ಆನೆ ಮಾರ್ಕ್ ಕಟಲೆಟ್ ಗೋ’ ಎಂದು ಕೂಗಿ ಕೈಗಳನ್ನು ಠಪ್ಪನೇ ಬಡಿದಳು. ಮಕ್ಕಳು ಉತ್ಸಾಹದಿಂದ ಓಡಿದರು.

ನನಗೆ ಆ ಹುಡುಗಿ ಕೂಗಿದ್ದು ವಿಚಿತ್ರವೆನ್ನಿಸಿತು. ಅದೇನದು ಆಕೆ ಕೂಗಿದ್ದು? ‘ಆನೆ ಮಾರ್ಕ್, ಕಟಲೆಟ್ ಗೋ’ ಅಂದರೇನು. ಆಕೆಯನ್ನು ಕರೆದು ಕೇಳಿದೆ, ‘ಅದೇನಮ್ಮ ನೀನು ಆರ್ಡರ್ ಕೊಟ್ಟದ್ದು’ ಆಕೆ ಮತ್ತೆ ತಾನು ಹೇಳಿದ್ದನ್ನೇ ಹೇಳಿ, ‘ದಿನಾಲು ನಮ್ಮ ಪಿ.ಟಿ ಸರ್ ಅದೇ ಆರ್ಡರ್ ಕೊಡುತ್ತಾರೆ, ನನಗೆ ಗೊತ್ತು’ ಎಂದು ಓಡಿಹೋದಳು. ನಾನು ಆ ಪಿ.ಟಿ. ಮೇಷ್ಟ್ರನ್ನು ಕರೆದು ಕೇಳಿದೆ, ‘ಅದೇನ್ರೀ ಕಟಲೆಟ್ಟು, ಆನೆಮಾರ್ಕ್ ಆರ್ಡರು?’ ಆತ ನಕ್ಕು ಹೇಳಿದರು. ‘ಇಲ್ಲ ಸರ್, ಆ ಆರ್ಡರ್ ಇರೋದು ಆನ್‌ಯುವರ್ ಮಾರ್ಕ್, ಗೆಟ್ ಸೆಟ್ ಗೋ’ ಎಂದು. ಮಕ್ಕಳಿಗೆ ಸರಿಯಾಗಿ ಅರ್ಥವಾಗಿರುವುದಿಲ್ಲವಲ್ಲ ಅದಕ್ಕೇ ಏನೇನೋ ಹೇಳುತ್ತಾರೆ.

ಓಡಿದ ಮಕ್ಕಳಿಗೆ ಆರ್ಡರಿನ ಅರ್ಥವಾಗಿರಲಿಲ್ಲ ಆದರೆ ಆರ್ಡರ್ ಅರ್ಥವಾಗಿತ್ತು. ಅಂತಲೇ ಅವರು ತಕ್ಷಣ ಓಡಿದ್ದರು. ಒಂದು ಅತ್ಯುತ್ತಮ ಕಾವ್ಯ ಸಂಪೂರ್ಣವಾಗಿ ಅರ್ಥವಾಗುವ ಮೊದಲೇ ಮನಸ್ಸನ್ನು ಮುಟ್ಟಿಬಿಟ್ಟಿರುತ್ತದೆ. ಮಕ್ಕಳ ಮಾತೂ ಹಾಗೆಯೇ. ಸಣ್ಣ ಸಣ್ಣ ಮಕ್ಕಳು ಬಂದು ಸೇರಿದಾಗ ಗಮನಿಸಿ. ಅದರಲ್ಲೂ ಬೇರೆ ಬೇರೆ ಭಾಷೆ ಮಾತನಾಡುವ ಮಕ್ಕಳು ಸೇರಿದಾಗ ಹೇಗೆ ಮಾತನಾಡುತ್ತಾರೆ. ಒಬ್ಬರಿಗೆ ಮತ್ತೊಬ್ಬರ ಭಾಷೆಯ ಅರ್ಥವಾಗುವುದಿಲ್ಲ ಆದರೆ ಇನ್ನೊಬ್ಬರು ಹೇಳಿದ ಮಾತಿನ ವಿಷಯ ಗೊತ್ತಾಗುತ್ತದೆ. ಇಡೀ ದಿನ ಆಡುತ್ತಾರೆ, ಸಂತೋಷಪಡುತ್ತಾರೆ. ಅದಕ್ಕೇ ಪುಟ್ಟ ಮಕ್ಕಳ ಮಾತೂ ಕಾವ್ಯವಿದ್ದಂತೆ, ಅರ್ಥವಾಗುವುದಕ್ಕಿಂತ ಮೊದಲು ತಿಳಿದುಬಿಡುತ್ತದೆ.

ಮುಗ್ಧ ಮನುಷ್ಯರೂ ಹಾಗೆಯೇ, ನನ್ನ ಸೋದರ ಮಾವ ಹೇಳುತ್ತಿದ್ದರು. ನಮ್ಮ ಊರಿನ ರೈತ ತರುಣನೊಬ್ಬ ಸೆ ನ್ಯ ಸೇರಿದ. ಎರಡು ವರ್ಷಗಳ ತರುವಾಯ ಹಳ್ಳಿಗೆ ಬಂದು ಬಡಾಯಿಕೊಚ್ಚಿಕೊಳ್ಳುತ್ತಿದ್ದ, ‘ನನ್ನ ಕೈಯಲ್ಲಿ ಬಂದೂಕು ಇರುತ್ತದೆ. ಅದನ್ನು ಹಿಡಿದುಕೊಂಡು ನಿಂತು ಯಾರಾದರೂ ಬೇರೆಯವರು ಕಂಡರೆ ಜೋರಾಗಿ, ಹುಕುಂಸೆ ಡರ್ ಪಂಢರಪೂರ ಎನ್ನುತ್ತೇನೆ’. ಇಂಗ್ಲೀಷಿನ ‘ಹೂ ಕಮ್ಸ್ ದೇರ್? ಫ್ರೆಂಡ್ ಆರ್ ಫೋ’ ಎನ್ನುವುದು ಅವನ ಬಾಯಿಯಲ್ಲಿ ‘ಹುಕುಂಸೆ ಡರ್ ಫಂಡರಪೂರ್’ ಆಗಿತ್ತು. ಆತನಿಗೆ ಇಂಗ್ಲೀಷ ಅರ್ಥವಾಗಿರಲಿಕ್ಕಿಲ್ಲ ಆದರೆ ಆಜ್ಞೆಯ ಅರ್ಥವಾಗಿತ್ತು.

ದುರ್ದೈವವೆಂದರೆ ನವನಾಗರಿಕ ಸಮಾಜದಲ್ಲಿ ನಮಗೆ ಪದಗಳ ಅರ್ಥವಾಗುತ್ತದೆ ಆದರೆ ಮನಸ್ಸು ತಿಳಿಯುವುದಿಲ್ಲ. ಶಬ್ದಗಳ ಅರ್ಥಕ್ಕಿಂತ ಅವುಗಳ ಹಿಂದಿನ ಭಾವ ತಿಳಿದರೆ ಜಗತ್ತು ಸುಂದರವಾಗುತ್ತದೆ. ಅದಕ್ಕೆ ನಾವು ಮುಗ್ಧರಾದರೂ ಆಗಬೇಕು ಇಲ್ಲವೇ ಮಕ್ಕಳಾದರೂ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.