ADVERTISEMENT

ಆರೋಗ್ಯದ ಗುಟ್ಟು

ಡಾ. ಗುರುರಾಜ ಕರಜಗಿ
Published 23 ಫೆಬ್ರುವರಿ 2011, 18:45 IST
Last Updated 23 ಫೆಬ್ರುವರಿ 2011, 18:45 IST

ಅದೊಂದು ಸಣ್ಣ ದೇಶ. ಆ ದೇಶಕ್ಕೊಬ್ಬ ರಾಜ. ಅವನು ತುಂಬ ಧರ್ಮಭೀರು. ಪ್ರಜೆಗಳ ಮೇಲೆ ಅಪಾರ ಪ್ರೀತಿ, ಕರುಣೆ. ಅವನಿಗೆ ತನ್ನ ರಾಜ್ಯ ವಿಸ್ತಾರದ ಬಗ್ಗೆ ಚಿಂತೆಯಿಲ್ಲ. ಹೆಚ್ಚು ತೆರಿಗೆ ಹಾಕುವ ವಿಚಾರವಿಲ್ಲ. ಬಂದ ಆದಾಯದಲ್ಲಿ ತನ್ನ ಮಂತ್ರಿಗಳ ಸಲಹೆಯಂತೆ ಧನವನ್ನು ಸರಿಯಾಗಿ ಹಂಚಿ ರಾಜ್ಯಭಾರ ಮಾಡುತ್ತಿದ್ದ. ಅಂಥ ರಾಜನ ಬಗ್ಗೆ ಪ್ರಜೆಗಳಿಗೂ ಅಭಿಮಾನ, ಗೌರವ.

ಆ ರಾಜನಿಗೆ ಭಗವಂತನಲ್ಲಿ ನಂಬಿಕೆ ಹಾಗೂ ಸಾಧುಸಂತರಲ್ಲಿ ಶ್ರದ್ಧೆ. ಅವನಿಗೊಬ್ಬ ಗುರುಗಳಿದ್ದರು. ಅವರು ರಾಜನ ಅಪೇಕ್ಷೆಯನ್ನು ಪೂರೈಸದೇ ರಾಜಧಾನಿಯಿಂದ ದೂರದಲ್ಲಿರುತ್ತಿದ್ದರು. ರಾಜ ಎಷ್ಟೇ ಕೇಳಿಕೊಂಡರೂ ಅವರು ರಾಜನ ಆಶ್ರಯದಲ್ಲಿ ಇರದೇ ಪರ್ವತಗಳ ಅಡಿಯಲ್ಲಿ ಆಶ್ರಮ ಕಟ್ಟಿಕೊಂಡು ಇರುತ್ತಿದ್ದರು. ತನಗೆ ಅವಶ್ಯಕತೆ ಬಿದ್ದಾಗಲೆಲ್ಲ ರಾಜನೇ ಆಶ್ರಮಕ್ಕೆ ಹೋಗಿ ಗುರುಗಳ ಮಾರ್ಗದರ್ಶನ ಮತ್ತು ಆಶೀರ್ವಾದಗಳನ್ನು ಪಡೆದು ಬರುತ್ತಿದ್ದ. ಗುರುಗಳ ಕೀರ್ತಿ ದೇಶದೆಲ್ಲೆಡೆ ಹರಡಿದಂತೆ ಅವರ ಭಕ್ತರ ಸಮೂಹ ದೊಡ್ಡದಾಗುತ್ತಿತ್ತು. ಅಲ್ಲದೇ ಅನೇಕ ಜನ ತರುಣ, ತರುಣಿಯರು ಗುರುಗಳ ಮಾತಿನಿಂದ ಪ್ರಭಾವಿತರಾಗಿ ಶಿಷ್ಯರಾಗಿ ಬಂದಿದ್ದರು. ಇಷ್ಟೊಂದು ಜನ ಹೆಚ್ಚಿದರೂ ಆಶ್ರಮದಲ್ಲಿ ಪರಸ್ಪರ ಗೌರವ, ನಂಬಿಕೆಗಳಿದ್ದವು, ಶಾಂತಿ ನೆಲೆಸಿತ್ತು.

ಒಂದು ಬಾರಿ ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ತಲೆದೋರಿತು, ಅನಾರೋಗ್ಯ ಹರಡಿತು. ರಾಜ ಸ್ವತಃ ವೈದ್ಯರುಗಳನ್ನು ಕರೆದುಕೊಂಡು ಮನೆಮನೆಗಳಿಗೆ ನಡೆದ. ಎಲ್ಲರಿಗೂ ಔಷಧಿ, ಉಪಚಾರ ನಡೆಯುವಂತೆ ನೋಡಿಕೊಂಡ. ಒಂದು ಪಕ್ಷ ಕಳೆದಮೇಲೆ ರೋಗ ಹತೋಟಿಗೆ ಬಂತು. ಒಂದು ದಿನ ಚಿಂತಿಸುತ್ತಿರುವಾಗ ರಾಜನಿಗೆ ಆಲೋಚನೆ ಬಂದಿತು.

ರಾಜ್ಯದಲ್ಲಿ ಅನಾರೋಗ್ಯ ಬಂದರೆ ಸಾಕಷ್ಟು ವೈದ್ಯರಿದ್ದಾರೆ, ಆಸ್ಪತ್ರೆಗಳಿವೆ. ರೋಗಿಗಳಿಗೆ ಸಕಾಲದಲ್ಲಿ ಸೇವೆ ದೊರೆಯುತ್ತದೆ. ಆದರೆ ನಮ್ಮ ಗುರುಗಳು ತಮ್ಮ ಶಿಷ್ಯ ಪರಿವಾರದೊಂದಿಗೆ ಅಷ್ಟು ದೂರ ಕಾಡಿನಲ್ಲಿರುತ್ತಾರೆ. ಅವರಲ್ಲಿ ಅನಾರೋಗ್ಯ ತಲೆದೋರಿದರೆ ಯಾರು ಕಾಳಜಿ ಮಾಡುತ್ತಾರೆ? ಇದರಿಂದ ಗುರುಗಳಿಗೆ ಬಹಳ ಚಿಂತೆಯಾಗುತ್ತದೆ. ಆದ್ದರಿಂದ ಅವರಿಗೆ ತೊಂದರೆಯಾಗದಂತೆ ವ್ಯವಸ್ಥೆಮಾಡಲು ನಿರ್ಧರಿಸಿದ.

ಮರುದಿನ ತನ್ನ ರಾಜ್ಯದ ಹಿರಿಯ ವೈದ್ಯರೊಬ್ಬರನ್ನು ಕರೆದು, “ನೀವು ಮತ್ತು ನಿಮ್ಮ ಸಿಬ್ಬಂದಿ ವರ್ಗ ಅಗತ್ಯವಿದ್ದ ಎಲ್ಲ ಔಷಧಿಗಳನ್ನು ತೆಗೆದುಕೊಂಡು ನಮ್ಮ ಗುರುಗಳ ಆಶ್ರಮಕ್ಕೆ ಹೋಗಿ ಅಲ್ಲಿಯೇ ಇರಬೇಕು. ಆಶ್ರಮದ ಯಾರಿಗೂ ಸ್ವಲ್ಪವೂ ತೊಂದರೆಯಾಗದಂತೆ ಎಚ್ಚರವಹಿಸಿಬೇಕು’’ ಎಂದು ತಾಕೀತು ಮಾಡಿ ಕಳುಹಿಸಿದ.

ಅಂತೆಯೇ ವೈದ್ಯಪರಿವಾರ ಹೋಗಿ ಆಶ್ರಮದಲ್ಲಿ ನೆಲೆಸಿತು. ದಿನಗಳು ಕಳೆದವು. ವಾರಗಳು ತಿಂಗಳುಗಳಾದವು. ಆದರೆ ಇವರೆಡೆಗೆ ಒಬ್ಬ ರೋಗಿಯೂ ಬರಲಿಲ್ಲ. ಬೇರೆಡೆಗೆ ಎಲ್ಲಿಯಾದರೂ ಹೋಗುತ್ತಿದ್ದಾರೋ ಎಂದು ನೋಡಿದರೆ ಹೊರಗಡೆ ಯಾರೂ ಹೋಗಿಲ್ಲ. ನಿಜವಾಗಿಯೂ ಯಾರಿಗೂ ಕಾಯಿಲೆ ಬಂದೆ ಇರಲಿಲ್ಲ. ವೈದ್ಯರಿಗೇ ಆಶ್ಚರ್ಯವಾಯಿತು.

ಅವರು ಹೋಗಿ ಗುರುಗಳನ್ನು ಕೇಳಿದಾಗ ಅವರು ಹೇಳಿದರು, “ಇಲ್ಲಿ ಆರೋಗ್ಯ ಕೆಡುವ ಪ್ರಮೇಯವೇ ಇಲ್ಲ. ನಾವೆಲ್ಲ ನಿಸರ್ಗದ ನಿಯಮಗಳಂತೇ ಬದುಕುತ್ತೇವೆ. ಹಸಿವಾದಾಗ ಮಾತ್ರ ಊಟ ಮಾಡುತ್ತೇವೆ. ಅದೂ ಹೊಟ್ಟೆಭಾರವಾಗುವವರೆಗೆ ಅಲ್ಲ. ಇನ್ನೂ ಹೊಟ್ಟೆಯಲ್ಲಿ ಸ್ವಲ್ಪ ಸ್ಥಳ ಬಾಕಿ ಇದೆ ಎನ್ನುವಾಗಲೇ ನಿಲ್ಲಿಸುತ್ತೇವೆ.

ದೈಹಿಕವಾದ ಶ್ರಮದಾನ ಮಾಡುತ್ತೇವೆ. ಅಗತ್ಯವಿಲ್ಲದ್ದನ್ನು ಎಂದಿಗೂ ತಿನ್ನುವುದಿಲ್ಲ. ಪ್ರಕೃತಿ ಸಹಜವಾಗಿ ಕಾಲಕಾಲಕ್ಕೆ ನೀಡುವ ಫಲಗಳನ್ನು, ಧಾನ್ಯಗಳನ್ನು ಬಳಸುತ್ತೇವೆ. ನಮ್ಮೆಲ್ಲರ ಉತ್ತಮ ಆರೋಗ್ಯಕ್ಕೆ ಮಿತಾಹಾರವೇ ಕಾರಣ” ರಾಜವೈದ್ಯರಿಗೆ ಮಾತು ಪಥ್ಯವಾಯಿತು. ತಮಗೆ ಇನ್ನು ಅಲ್ಲಿ ಕೆಲಸವಿಲ್ಲವೆಂದು  ತಿಳಿದು ರಾಜ್ಯಕ್ಕೆ ಮರಳಿದರು.

ಇಂದು ನಮ್ಮನ್ನು ಬಹುವಾಗಿ ಕಾಡುತ್ತಿರುವ ಅನಾರೋಗ್ಯ, ಸ್ಥೂಲಕಾಯಗಳ ಸಮಸ್ಯೆಗೆ ಪರಿಹಾರ ಇದೇ. ನಾವು ತಿನ್ನುವ ಆಹಾರ ಕೇವಲ ನಾಲಿಗೆಗೆ ರುಚಿ ಆದರೆ ದೇಹಕ್ಕೆ ಕೆಟ್ಟದ್ದು. ಹಸಿವಾಗದಿದ್ದರೂ ತುಂಬಿಕೊಳ್ಳುವ ಹವ್ಯಾಸ, ದೈಹಿಕ ಶ್ರಮದ ಕೊರತೆ ಇವೆಲ್ಲ ನಮ್ಮನ್ನು ನಿಸರ್ಗದಿಂದ ದೂರು ಒಯ್ಯುತ್ತಿವೆ. ಈ ಅಭ್ಯಾಸಗಳು ಅನಾರೋಗ್ಯವನ್ನು ಬೆಳೆಸುವ ಕಾರ್ಖಾನೆಗಳಾಗಿವೆ. ಈ ಸಮಯದಲ್ಲಿ ಗುರುಗಳು ನೀಡಿದ ಸಲಹೆ ಪ್ರಯೋಜನಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.