ADVERTISEMENT

ಇ-ಬಿಂದು

ಡಾ. ಗುರುರಾಜ ಕರಜಗಿ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ಆಕೆ ಬಹುವರ್ಷಗಳ ಹಿಂದೆ ನನ್ನ ಶಿಷ್ಯಳಾಗಿದ್ದವಳು. ಆಗಾಗ ನನ್ನನ್ನು ಕಾಣಲು ಬರುತ್ತಾಳೆ. ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಾಳೆ. ನನ್ನಿಂದ ಸಮಸ್ಯೆಗಳ ಪರಿಹಾರವಾಗದಿದ್ದರೂ ಆಕೆಗೊಂದು ಸಮಾಧಾನ ದೊರಕುತ್ತದಂತೆ.

ಇತ್ತೀಚಿಗೆ ಆಕೆ ಹೇಳಿಕೊಳ್ಳುವುದು ಬರೀ ಕಷ್ಟವೇ. ಕಳೆದ ಸುಮಾರು ಮೂರು-ನಾಲ್ಕು ವರ್ಷಗಳಿಂದ ಆಕೆಗೆ ಜೀವನದಲ್ಲಿ ಬೆಂಕಿಯಲ್ಲಿ ಹಾಯ್ದುಬಂದಷ್ಟು ಕಷ್ಟ ಕಾಡಿದೆ.

ಮದುವೆಯಾದ ನಾಲ್ಕೈದು ವರ್ಷ ಗಂಡ-ಹೆಂಡತಿ ಚೆನ್ನಾಗಿಯೇ ಇದ್ದರು. ಗಂಡನಿಗೆ ಒಳ್ಳೆಯ ಕೆಲಸ, ಈಕೆಗೂ ಸಂಬಳ. ವಾಸ ಗುರಗಾಂವ್‌ನಲ್ಲಿ. ಮನೆಯಲ್ಲಿ ಇಬ್ಬರೇ ಹಕ್ಕಿಗಳ ಹಾಗೆ ಹಾರಾಡಿಕೊಂಡು ಸಂತೋಷವಾಗಿದ್ದರು. ಎಲ್ಲವೂ ಚೆನ್ನಾಗಿದ್ದರೆ ಕಥೆಯಾಗುವುದು ಹೇಗೆ? ಮದುವೆಯಾಗಿ ಎರಡು ವರ್ಷಗಳ ಮೇಲೆ ಒಂದು ಗಂಡು ಮಗುವಾಯಿತು.
 
ಮಗುವನ್ನು ನೋಡಿಕೊಳ್ಳಲು ಹೆಂಡತಿ ಮನೆಯಲ್ಲೇ ಉಳಿದಳು. ಗಂಡ ಒಬ್ಬನೇ ದುಡಿದರೂ ಕೊರತೆ ಏನೂ ಇರಲಿಲ್ಲ. ಅವನ ಸಂಬಳವೇ ಬೇಕಾದಷ್ಟಿತ್ತು. ಅದರೊಂದಿಗೆ ಇಬ್ಬರೂ ಸೇರಿ ದುಡಿದು ಉಳಿಸಿದ ಹಣವೂ ಇತ್ತಲ್ಲ.

ಗಂಡ ಆಫೀಸಿನ ಕೆಲಸಕ್ಕೆಂದು ಆಗಾಗ ಪ್ರವಾಸಕ್ಕೆ ಹೋಗಬೇಕಾಗುತ್ತಿತ್ತು. ಆಗ ಮನೆಯಲ್ಲಿ ಹೆಂಡತಿ ಮತ್ತು ಪುಟ್ಟ ಮಗು ಇಬ್ಬರೇ. ಇದ್ದದ್ದು ಅಪಾರ್ಟ್‌ಮೆಂಟಿನಲ್ಲಿ ಆದ್ದರಿಂದ ಭಯವೇನೂ ಇರಲಿಲ್ಲ. ಅಷ್ಟಲ್ಲದೇ ಹೆಂಡತಿಯೂ ಜಾಣೆ. ಆಕೆಗೆ ಪರಿಸ್ಥಿತಿಯನ್ನು ನಿಭಾಯಿಸುವುದು ಗೊತ್ತು. ಅವಶ್ಯಕತೆ ಬಿದ್ದರೆ ಹತ್ತಿರವೇ ಮತ್ತೊಂದು

ಅಪಾರ್ಟ್‌ಮೆಂಟಿನಲ್ಲಿದ್ದ ತನ್ನ ಗಂಡನ ಸ್ನೇಹಿತನ ಸಹಾಯವನ್ನು ಪಡೆಯುತ್ತಿದ್ದಳು. ಎರಡು ಮೂರು ತಿಂಗಳು ಎಲ್ಲವೂ ಸುಸೂತ್ರವಾಗಿ ನಡೆಯಿತು. ಅನಂತರ ಗಂಡನ ನಡತೆಯಲ್ಲಿ ಬದಲಾವಣೆ ಕಂಡಿತು. ಪ್ರತೀಬಾರಿ ಊರಿನಿಂದ ಬಂದೊಡನೆ, ತನ್ನ ಸ್ನೇಹಿತ ಮನೆಗೆ ಬಂದಿದ್ದನೇ ಎಂದುಕೇಳುತ್ತಿದ್ದ. ಈಕೆ ಹೌದು ಎಂದರೆ ಅವನ ಸಹಾಯ ನಿನಗೇಕೆ ಬೇಕು, ಅಂಗಡಿಗೆ ಫೋನ್ ಮಾಡಿದರೆ ತಂದುಕೊಡುತ್ತಾರಲ್ಲ ಎಂದು ಹೇಳಿ ಮುಖ ಗಂಟು ಹಾಕಿಕೊಳ್ಳುತ್ತಿದ್ದ.
 
ಈಕೆಗೆ ಅವನ ಅಸಮಾಧಾನದ ಕಾರಣ ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ, ಈಕೆ ಚೆಂದದ ಹೆಣ್ಣು. ಭಾರ್ಯಾ ರೂಪವತೀ ಶತ್ರು ಅಲ್ಲವೇ? ಸುಂದರವಾದ ಹೆಂಡತಿಯ ನಡತೆಯ ಮೇಲೆ ಅವನಿಗೆ ಸಂಶಯ ಪ್ರಾರಂಭವಾಯಿತು. ಬರಬರುತ್ತ ಅದು ಹಿಂಸೆಗೆ ಇಳಿುತು. ಒಂದು ಬಾರಿ ಅದು ಅತಿರೇಕಕ್ಕೆ ಹೋಗಿ ಆಕೆಯನ್ನು ಹೊಡೆದು ತೌರುಮನೆಗೆ ಕಳುಹಿಸಿಬಿಟ್ಟ.

ಈ ಕಷ್ಟವನ್ನು ಆಕೆ ನನ್ನೊಂದಿಗೆ ಹೇಳಿಕೊಂಡಳು. ವಿಚಿತ್ರವೆಂದರೆ ಆಕೆಗೆ ಇನ್ನೂ ತನ್ನ ಗಂಡನ ಮೇಲೆ ಅಪಾರ ಪ್ರೀತಿ, ವಿಶ್ವಾಸ. ಆತ ಒಳ್ಳೆಯವನೇ. ಆದರೆ ಯಾರದೋ ಮಾತು ಕೇಳಿ ಈ ರೀತಿ ನಡೆದುಕೊಂಡಿದ್ದಾನೆ ಎಂಬ ನಂಬಿಕೆ. ಆ ವಿಶ್ವಾಸವನ್ನು ಹಾಗೆಯೇ ಬಲಪಡಿಸಿಕೋ ಎಂದು ಆಕೆಗೆ ಹೇಳಿದೆ. ಮರು ತಿಂಗಳು ನಾನು ದೆಹಲಿಗೆ ಹೋದಾಗ ಗುರಗಾಂವ್‌ಗೆ ಹೋಗಿ ಆತನನ್ನು ಕಂಡೆ. ಸಂಭ್ರಮದಿಂದ ಮನೆಗೆ ಕರೆದುಕೊಂಡು ಹೋದ.

ತನ್ನ ದುರದೃಷ್ಟದ ಕಥೆಯನ್ನು ಹೇಳಿಕೊಂಡ. ಒಂದಂಶ ನನಗೆ ಸ್ಪಷ್ಟವಾಯಿತು. ಆತ ತನ್ನ ಹೆಂಡತಿಯನ್ನು ಇನ್ನೂ ತುಂಬ ಪ್ರೀತಿಮಾಡುತ್ತಾನೆ. ಅತಿಯಾದ ಪ್ರೀತಿ ಸಂಶಯವನ್ನು ಹುಟ್ಟು ಹಾಕುತ್ತದೆ. ಅತಿಯಾದ ಪ್ರೀತಿ ಮಾತ್ರ ಅತಿಯಾದ ದ್ವೇಷವನ್ನು ಹುಟ್ಟಿಸಬಲ್ಲದು.
 
ಸ್ವಲ್ಪ ಹೊತ್ತು ಅವನ ಹೆಂಡತಿಯ ಬಗ್ಗೆ ಒಳ್ಳೆಯ ಮಾತನಾಡುತ್ತ ಒಳ್ಳೆಯ ಭಾವನೆಯ ವಾತಾವರಣವನ್ನು ನಿರ್ಮಾಣ ಮಾಡಿ  ಈಗ ನಿನ್ನ ಹೆಂಡತಿ ಇಲ್ಲಿಗೆ ಬಂದರೆ ಹೇಗೆ?  ಎಂದೆ. ಅವನು,  ಅವಳು ಹೇಗೆ ಬರುತ್ತಾಳೆ ಸಾರ್? ಆಕೆಗೆ ನನ್ನ ಮೇಲೆ ತುಂಬ ಕೋಪ ಇರುತ್ತದೆ  ಎಂದ. 

ಸರಿ ಈಗ ಆಕೆ ಒಳಗೆ ಬಂದು ನಿನ್ನ ಕೈಹಿಡಿದುಕೊಂಡು ಪಕ್ಕದಲ್ಲೇ ಕುಳಿತರೆ ಹೇಗೆನ್ನಿಸುತ್ತದೆ? ಎಂದೆ. ತಕ್ಷಣ ಅವನ  ಯಾಕೆ ಮುಖದ ಮೇಲೆ ಸಂತೋಷ ಮೂಡಿತಲ್ಲ?  ಎಂದೆ ಆತ,  ಒಂದು ಥರಾ ಸಂತೋಷವಾಯಿತು ಸರ್  ಎಂದ.  ಇದೇ ನೋಡು ನಮ್ಮ ಮೆದುಳಿನಲ್ಲಿರುವ ಇ-ಸ್ಪಾಟ್. ಇದು ಮೆದುಳಿನಲ್ಲಿರುವ ಭಾವನೆಗಳ ಕೇಂದ್ರ. ನಿನ್ನ ಹೆಂಡತಿ ಇಲ್ಲಿಗೆ ಬಂದಿಲ್ಲ. ಆದರೆ ಬಂದಿದ್ದಾಳೆ ಎಂದು ಭಾವಿಸಿದೊಡನೆ ಆ ಇ-ಬಿಂದುವಿಗೆ ಪ್ರಚೋದನೆ ದೊರೆತು ಸುಖದ ಭಾವನೆಯನ್ನು ಹರಡಿತು.
 
ಅದನ್ನು ಹಾಗೆ ಪ್ರಚೋದನೆ ಮಾಡುತ್ತಲೇ ಇದ್ದರೆ ಸಂತೋಷ ತುಂಬುತ್ತಲೇ ಇರುತ್ತದೆ. ಆದರೆ ನಾವು ಅದರ ಪ್ರತಿಯಾಗಿ ಋಣಾತ್ಮಕ ಚಿಂತನೆಗಳನ್ನೇ ಪ್ರಚೋದಿಸಿ ದು:ಖದ ವಾತಾವರಣವನ್ನು ಆಹ್ವಾನಿಸಿಕೊಳ್ಳುತ್ತೇವೆ . ನಂತರ ಈ ವಿಚಾರವನ್ನು ಆ ನಮ್ಮ ಚಿಂತನೆಗಳು ನಮ್ಮ ನಡವಳಿಕೆಗಳ ಮೇಲೆ ಅಪಾರ ಪರಿಣಾಮವನ್ನು ಮಾಡುತ್ತವೆ.
 
ಅವು ನಮ್ಮ ಆರೋಗ್ಯದ ಮೇಲೂ ಪ್ರಭಾವ ಬೀರುತ್ತವೆ. ಆದಷ್ಟು ಕಾಲ ಸುಂದರವಾದ ಚಿಂತನೆಗಳನ್ನು, ವಿಚಾರಗಳನ್ನು ಚಿಂತಿಸುತ್ತಿದ್ದರೆ ಮೆದುಳಿನಲ್ಲಿಯ ಇ-ಸ್ಪಾಟ್ (ಇಮೋಶನಲ್ ಸ್ಪಾಟ್) ವಿಶೇಷವಾದ ರಸಾಯನಿಕ ಕ್ರಿಯೆಗಳನ್ನು ನಡೆುಸಿ, ದೇಹದಲ್ಲಿ ಸುಖದ ಭಾವನೆಯನ್ನು ತುಂಬಿ ಉತ್ಸಾಹವನ್ನು ಮೆರೆದು ಧನಾತ್ಮಕವಾಗಿಸುತ್ತದೆ. ನಾವು ಸದಾಕಾಲ ಇ-ಬಿಂದುವನ್ನು ಪ್ರಚೋದಿಸುತ್ತಲೇ ಇರುವುದು ಒಳ್ಳೆಯದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.