ADVERTISEMENT

ಎಡೆಬಿಡದ ಸಂಗಾತಿಗಳು

ಡಾ. ಗುರುರಾಜ ಕರಜಗಿ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

 ಇಬ್ಬರು ಕಾಡಿನಲ್ಲಿ ಸರಸರನೇ ನಡೆದುಹೋಗುತ್ತಿದ್ದರು. ಮುಂದಿದ್ದವರು ಗುರುಗಳು, ಹಿಂಬಾಲಿಸುತ್ತಿದ್ದವನು ಶಿಷ್ಯ. ಗುರುಗಳು ಇಷ್ಟು ವೇಗವಾಗ ನಡೆಯುವುದನ್ನು ಕಂಡು ಶಿಷ್ಯನಿಗೆ ಆಶ್ಚರ್ಯವಾಗಿತ್ತು. ಅವರೆಂದೂ ಇಷ್ಟು ಅವಸರ ಮಾಡಿದವರಲ್ಲ.

ಅದಲ್ಲದೇ ಗುರುಗಳು ಕೈಯಲ್ಲಿ ಒಂದು ಚೀಲ ಹಿಡಿದುಕೊಂಡು ಅದನ್ನು ಎದೆಗೆ ಒತ್ತಿಕೊಂಡು ನಡೆಯುತ್ತಿದ್ದಾರೆ. ಅದನ್ನು ನೋಡಿದರೆ ಅದರಲ್ಲೇನೋ ಅಪೂರ್ವವಾದ ವಸ್ತು ಇರಬೇಕು ಎಂದು ತೋರುತ್ತಿತ್ತು. ಅದೇನು ಎಂಬುದು ಶಿಷ್ಯನಿಗೆ ಗೊತ್ತಿಲ್ಲ. ಆದರೆ ಗುರುಗಳು ಮಾತ್ರ ವಿಚಲಿತರಾದಂತೆ ಕಾಣುತ್ತಿತ್ತು.

ಆಗಾಗ ಗುರುಗಳು ತಿರುಗಿ ಶಿಷ್ಯನಿಗೆ ಕೇಳುವರು, `ಕತ್ತಲೆಯಾಗುವುದರ ಒಳಗೆ ನಾವು ಕಾಡು ದಾಟಿ ನಗರ ಸೇರುತ್ತೇವಲ್ಲ~.  ಹೀಗೆ ನಾಲ್ಕಾರು ಬಾರಿ ಗುರುಗಳು ಕೇಳಿದ ಮೇಲೆ ಶಿಷ್ಯ ಹೇಳಿದ,  `ನಾವು ವೇಗವಾಗಿ ನಡೆದರೆ ನಗರ ಸೇರಬಹುದೇನೋ.

ಸೇರದಿದ್ದರೆ ಯಾವ ತೊಂದರೆಯಿಲ್ಲ. ಇಲ್ಲೇ ಕಾಡಿನಲ್ಲೇ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಪ್ರಯಾಣ ಬೆಳೆಸಿದರಾಯಿತು. ನಮಗೆ ಇದೇನು ಹೊಸದೇ~ ಎಂದ. ಆಗ ಗುರುಗಳು ಮತ್ತಷ್ಟು ಅವಸರ ತೋರಿಸಿದರು,  `ಹೆಚ್ಚು ಮಾತನಾಡಿ ಸಮಯ ಹಾಳು ಮಾಡಬೇಡ. ಬೇಗ ಬೇಗ ಹೆಜ್ಜೆ ಹಾಕು. ನನಗೆ ಕಾಡಿನಲ್ಲಿ ರಾತ್ರಿ ಕಳೆಯುವುದು ಇಷ್ಟವಿಲ್ಲ~. ನಡಿಗೆ ಮತ್ತಷ್ಟು ವೇಗವಾಯಿತು.

ಸೂರ್ಯಾಸ್ತ ಸಮಯವಾಯಿತು. ಇವರಿಗೂ ತುಂಬ ಆಯಾಸವಾಗಿದೆ. ಆಗ ದಾರಿಯ ಬದಿಯಲ್ಲಿ ಬಾವಿಯೊಂದು ಕಂಡಿತು. ಗುರುಗಳು ಕ್ಷಣಕಾಲ ನಿಂತರು. ಸಂಜೆಯ ಪ್ರಾರ್ಥನೆಯಾಗಬೇಡವೇ. ಶಿಷ್ಯನ ಕೈಯಲ್ಲಿ ತಮ್ಮ ಚೀಲ ಕೊಟ್ಟರು.

`ಹುಷಾರು, ಜೋಪಾನವಾಗಿ ಹಿಡಿದುಕೋ. ಕ್ಷಣದಲ್ಲಿ ಕೈಕಾಲು ತೊಳೆದುಕೊಂಡು ಪ್ರಾರ್ಥನೆ ಮುಗಿಸಿ ಬರುತ್ತೇನೆ~ ಎಂದು ಹೊರಟರು. ಶಿಷ್ಯನಿಗೆ ಅತೀವ ಕುತೂಹಲ. ಗುರುಗಳು ಆ ಕಡೆಗೆ ನಡೆದೊಡನೆ ಆತ ಚೀಲ ತೆರೆದು ನೋಡಿದ. ಅದರಲ್ಲಿ ಎರಡು ಬಂಗಾರದ ಗಟ್ಟಿಗಳಿವೆ! ಅವುಗಳ ತೂಕವೂ ಭಾರಿಯಾಗಿಯೇ ಇದೆ.

 ಅವನಿಗೆ ಈಗ ಗುರುಗಳ ಆತಂಕದ ಕಾರಣ ಸ್ಪಷ್ಟವಾಯಿತು. ತಕ್ಷಣ ಅವುಗಳನ್ನು ಬಾವಿಯ ಬದಿಯಲ್ಲಿ ಹುಲುಸಾಗಿ ಬೆಳೆದಿದ್ದ ಪೊದೆಯಲ್ಲಿ ಎಸೆದುಬಿಟ್ಟ. ಸುಮಾರು ಅಷ್ಟೇ ತೂಕದ ಕಲ್ಲು ಚಪ್ಪಡಿಯ ತುಣುಕು ಚೀಲದಲ್ಲಿ ಹಾಕಿ ಮೊದಲಿನಂತೆಯೇ ಸುತ್ತಿ ಹಿಡಿದುಕೊಂಡ.

ಪ್ರತಿದಿನಕ್ಕಿಂತ ಅವಸರದಲ್ಲೇ ಪ್ರಾರ್ಥನೆ  ಮುಗಿಸಿ ಗುರುಗಳು ಬಂದು ಇವನ ಕೈಯಲ್ಲಿಯ ಚೀಲ ಕಿತ್ತುಕೊಂಡು ಮತ್ತೆ ಅವಸರವಸರವಾಗಿ ನಡೆಯತೊಡಗಿದರು.  ಎರಡು ಮೈಲಿ ನಡೆಯುವಷ್ಟರಲ್ಲಿ ಪೂರ್ತಿ ಕತ್ತಲೆಯಾಯಿತು. ಗುರುಗಳೆಂದರು,  `ಛೇ ರಾತ್ರಿಯಾಗಿಯೇ ಬಿಟ್ಟಿತು. ನಾವಿಬ್ಬರೇ ಇದ್ದೇವೆ. ಹೀಗಿರುವುದು ತುಂಬ ಅಪಾಯ~.

ಆಗ ಶಿಷ್ಯ,  `ಗುರುಗಳೇ ಯಾವ ಅಪಾಯವೂ ಇಲ್ಲ, ಅಪಾಯವನ್ನು ಬಾವಿಯ ಪಕ್ಕದ ಪೊದೆಯಲ್ಲಿ ಎಸೆದುಬಿಟ್ಟಿದ್ದೇನೆ~  ಎಂದ.  `ಏನು ಹಾಗೆಂದರೆ~  ಎಂದವರೇ ಚೀಲ ತೆರೆದು ನೋಡಿದರು. ಅಲ್ಲಿ ಬಂಗಾರದ ಗಟ್ಟಿಗಳ ಬದಲಾಗಿ ಕಲ್ಲು ಚಪ್ಪಡಿಯ ತುಣುಕುಗಳಿವೆ. ಒಂದು ಕ್ಷಣ ಸುಮ್ಮನಿದ್ದು ಗುರುಗಳು ಜೋರಾಗಿ ನಗತೊಡಗಿದರು. ಶಿಷ್ಯ,  `ಗುರುಗಳೇ ತಾವು ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತೀರಿ ಎಂದು ಭಾವಿಸಿದ್ದೆ.

ಈ ನಗು ಏಕೆ~  ಎಂದು ಕೇಳಿದ. ಗುರುಗಳು ಆ ಚೀಲವನ್ನು ಬಿಸಾಕಿ ಥಟ್ಟನೇ ಶಿಷ್ಯನ ಕಾಲುಮುಟ್ಟಿ ನಮಸ್ಕಾರ ಮಾಡಿ,  `ನೀನು ಸರಿಯಾಗಿಯೇ ಮಾಡಿದೆ. ನನ್ನನ್ನು ಅಪಾಯದಿಂದ ಪಾರುಮಾಡಿದೆ.  ಎರಡು ಮೈಲಿ ಕೈಯಲ್ಲಿ ಕಲ್ಲು ಹಿಡಿದಿದ್ದರೂ ಬಂಗಾರವೆಂದು ಭಯಪಟ್ಟಿದ್ದೆ. ನನಗೆ ಈಗ ಅರ್ಥವಾಯಿತು.

ನಮ್ಮಲ್ಲಿದ್ದ ವಸ್ತುವಿನ ಬೆಲೆ ಹೆಚ್ಚಾದಷ್ಟೂ ಅಪಾಯ ಹೆಚ್ಚು. ಹೆಚ್ಚಿನ ಮೋಹ ಹೆಚ್ಚಿನ ಅಪಾಯ ತಂದೊಡ್ಡುತ್ತದೆ. ಈಗ ಮೋಹದ ಕಾರಣವೇ ಹೋಯಿತಲ್ಲ, ಇನ್ನೆಲ್ಲಿಯ ಅಪಾಯ.

ರಾತ್ರಿ ಇಲ್ಲೇ ನಿದ್ರೆ ಮಾಡೋಣ~ ಎಂದರು! ನಾವು ಯಾವುದನ್ನು ಅತಿಯಾಗಿ ಪ್ರೀತಿಸುತ್ತೇವೋ- ಅದು ವಸ್ತುವಾಗಿರಬಹುದು, ವ್ಯಕ್ತಿಯಾಗಿರಬಹುದು, ಚಿಂತನೆಯಾಗಿರಬಹುದು, ಅದು ಅಪಾಯವೇ ಆಗುತ್ತದೆ. ಅದು ನಮ್ಮ ಬಳಿಯಲ್ಲಿ ಇರುವಷ್ಟು ಕಾಲ ಅದನ್ನು ರಕ್ಷಿಸುವ ಚಿಂತೆ, ಎಲ್ಲಿ ಕಳೆದುಕೊಂಡುಬಿಡುತ್ತೇವೋ ಎಂಬ ಅಪಾಯದ ಭಯ ನಮ್ಮನ್ನು ಕಾಡುತ್ತದೆ. ಅಂತೆಯೇ ಅತ್ಯಂತ ಮೋಹ ಮತ್ತು ಅಪಾಯಗಳು ಎಡೆಬಿಡದ ಸಂಗಾತಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.