ADVERTISEMENT

ಎತ್ತರಕ್ಕೇರಿದ ವಿನಯ

ಡಾ. ಗುರುರಾಜ ಕರಜಗಿ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ಇಂದ್ರಾ ಕೃಷ್ಣಮೂರ್ತಿ ನೂಯಿ ಇಂದು ಪೆಪ್ಸಿ ಕಂಪನಿಯ ಅಧ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿದ್ದಾರೆ. ಈಗ ಪೆಪ್ಸಿ ಕಂಪನಿ ಈ ವಿಭಾಗದಲ್ಲಿ  ಪ್ರಪಂಚದಲ್ಲೇ ಎರಡನೇ ದೊಡ್ಡ ಕಂಪನಿಯಾಗಿದೆ. ಮದ್ರಾಸ್‌ನಲ್ಲಿ  1955 ರ ಅಕ್ಟೋಬರ ತಿಂಗಳಿನಲ್ಲಿ  ಹುಟ್ಟಿದ ಇಂದ್ರಾ, ಅಲ್ಲಿಯೇ ಬಿಎಸ್.ಸಿ ಮುಗಿಸಿ ನಂತರ ಕೋಲ್ಕತ್ತದ `ಐಐಎಂ' ನಲ್ಲಿ  ಡಿಪ್ಲೋಮಾ ಪಡೆದರು. ಆ ಮೇಲೆ ಅಮೆರಕದ ಯೇಲ್ ವಿಶ್ವವಿದ್ಯಾಲಯದಿಂದ ಆಡಳಿತ ನಿರ್ವಹಣೆಯಲ್ಲಿ  ಸ್ನಾತಕೋತ್ತರ ಪದವಿ ಪಡೆದರು.

1994 ರಲ್ಲಿ  ಪೆಪ್ಸಿ ಕಂಪನಿ  ಸೇರಿದ ಇಂದ್ರಾ, 2006 ರಲ್ಲಿ  ಕಂಪನಿಯ ಮುಖ್ಯ ನಿರ್ವಹಣಾಧಿಕಾರಿಯಾಗಿದ್ದ ಸ್ಟೀಫನ್ ರೈನೆಮಂಡ್‌ರಿಂದ ಅಧಿಕಾರ ವಹಿಸಿಕೊಳ್ಳುವುದೆಂದು ನಿರ್ಧಾರವಾಯಿತು. ಆಗ ಈ ಮುಖ್ಯ ಹುದ್ದೆಗೆ ಮತ್ತೊಬ್ಬ ಸ್ಪರ್ಧಿಯಾಗಿದ್ದವರು ಮೈಕ್ ವೈಟ್. ಇವರಿಬ್ಬರೂ ಜೊತೆಗೆ ಎಷ್ಟೋ ವರ್ಷಗಳ ಕಾಲ ಕೆಲಸಮಾಡಿದ್ದವರು, ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದವರು. ಹಿಂದೆ ಇದೇ ಕಂಪನಿಯಲ್ಲಿ  ಕೆಲಸ ಮಾಡುತ್ತಿದ್ದಾಗ ಇವರಿಬ್ಬರನ್ನೂ ಬೋರ್ಡರೂಮಿನಿಂದ ಹೊರಗೆ ಹಾಕಿದ್ದರಂತೆ. ಇವರ ಭವಿಷ್ಯ ನಿರ್ಧರಿಸಲು ಕೊಠಡಿಯ ಒಳಗೆ ಚರ್ಚೆ ನಡೆಯುತ್ತಿದ್ದಾಗ ಸಹಜವಾಗಿಯೇ ಇಬ್ಬರಿಗೂ ಆತಂಕವಾಗಿದ್ದಿರಬೇಕು. ಆಗ ಅವರೇನು ಮಾಡಿದರೆಂಬುದು ವಿಶೇಷ.

ಮೇಲಿನವರು ಏನಾದರೂ ತೀರ್ಮಾನ ತೆಗೆದುಕೊಳ್ಳಲಿ, ತಾವು ತಲೆ ಕೆಡಿಸಿಕೊಳ್ಳುವುದು ಬೇಡ ಎಂದುಕೊಂಡು ಬ್ರಾಡ್‌ವೇದಲ್ಲಿ ದ್ದ ಜೆರ್ಸಿ ಬಾಯ್ಸ ಎನ್ನುವ ಕಲಾಭವನಕ್ಕೆ ಹೋಗಿ ಅಲ್ಲಿ  ಹಾಡುತ್ತಿದ್ದವರ ಜೊತೆಗೂಡಿ ಹಾಡುತ್ತ ಕುಳಿತರು. ಮೇಲಿನವರು ಇವರ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲವೆನ್ನುವುದಷ್ಟೇ ಅಲ್ಲ, ಮುಂದೆ ಕ್ರಮೇಣ ಬಡ್ತಿಯನ್ನೂ ನೀಡಿದರು. ಅಷ್ಟು ಸ್ನೇಹ ಇಂದ್ರಾ ಹಾಗೂ ವೈಟ್‌ರದ್ದು.  ಈಗ ಇಂದ್ರಾ ಅವರನ್ನು ಮುಖ್ಯ ನಿರ್ವಹಣಾಧಿಕಾರಿಯನ್ನಾಗಿ ನೇಮಿಸಿದಾಗ ಆಕೆಗೆ ಒಂದು ವಿಚಾರ ಬಂತು. ಸಾಮಾನ್ಯವಾಗಿ ಜೊತೆಯಲ್ಲೇ ಸ್ಪರ್ಧೆಯಲ್ಲಿದ್ದವರು ಆಯ್ಕೆಯಾಗದೇ ಇದ್ದಾಗ ಆಗಲೇ ರಾಜೀನಾಮೆ ನೀಡಿ ಬೇರೆ ಕಂಪನಿಗೆ ಹೋಗುವುದು ಸಾಮಾನ್ಯ. ಈಗ ವೈಟ್ ಹಾಗೆಯೇ ಮಾಡಿಬಿಡಬಹುದು, ಹೇಗಾದರೂ ಮಾಡಿ ಅತನನ್ನು ಕಂಪನಿಯಲ್ಲಿ  ಉಳಿಸಿಕೊಳ್ಳಬೇಕೆಂದು ತೀರ್ಮಾನಿಸಿದರು.

ತಕ್ಷಣ ವಿಮಾನವನ್ನೇರಿ ವೈಟ್ ಇದ್ದ ಕೇಪ್ ಕೊಡ್‌ಗೆ ಹೋದರು. ಇಂದ್ರಾರನ್ನು ಬರಮಾಡಿಕೊಳ್ಳಲು ವಿಮಾನನಿಲ್ದಾಣಕ್ಕೆ ಬಂದಿದ್ದ ವೈಟ್ ಇವರಿಗೊಂದು ಅಭಿನಂದನಾ ಪತ್ರ ತಂದಿದ್ದ. ಇಂದ್ರಾ, ವೈಟ್‌ನನ್ನು ಕರೆದುಕೊಂಡು ಸಮುದ್ರ ತೀರಕ್ಕೆ ಹೋಗಿ ನಡೆದಾಡಿದರು. ವೈಟ್‌ನ ಮನೆಗೆ ಹೋದಾಗ ಆತ ಪಿಯಾನೋ ನುಡಿಸಿದ, ಈಕೆ ಹಾಡಿದರು. ನಂತರ ಹೊರಡುವ ಮುನ್ನ ಇಂದ್ರಾ ವೈಟ್‌ನಿಗೆ ಹೇಳಿದರು,  ನೀನು ಕಂಪನಿಯಲ್ಲಿಯೇ ಉಳಿಯಲು ಏನು ಮಾಡಬೇಕೋ ಹೇಳು ಅದನ್ನು ಮಾಡುತ್ತೇನೆ. ಆದರೆ ನೀನು ಕಂಪನಿ ಬಿಡಕೂಡದು. ಆತ ಒಪ್ಪಿದ. ಮರುವಾರ ಇಂದ್ರಾರ ಆಯ್ಕೆಯನ್ನು ಕಂಪನಿಯ ನಿರ್ದೇಶಕರು ಪ್ರಕಟಿಸಿ ಅಧಿಕಾರ ನೀಡಿದಾಗ, ಇಂದ್ರಾ ಹೇಳಿದರು,  `ವೈಟ್ ಕೂಡ ಈ ಸ್ಥಳಕ್ಕೆ ಅರ್ಹನಾಗಿದ್ದ. ಇನ್ನು ಮೇಲೆ ಆತ ನನ್ನ ಬಲಗೈ ಇದ್ದ ಹಾಗೆ, ಅವನು ಪಿಯಾನೋ ನುಡಿಸುತ್ತಾನೆ, ನಾನು ಹಾಡುತ್ತೇನೆ'.

ಹೀಗೆ ಅಧಿಕಾರ ಪಡೆದ ಮೇಲೂ ವಿನಯ ಪ್ರದರ್ಶಿಸಿ ಸಹೋದ್ಯೋಗಿಗಳ ಪ್ರೀತಿ ಗಳಿಸಿದರು, ಮುಂದೆ ಅದೇ ಕಂಪನಿಯ ಅಧ್ಯಕ್ಷೆಯಾದರು. ಎತ್ತರಕ್ಕೆ ಹೋದಷ್ಟೂ ವಿನಯ ಹೆಚ್ಚಾಗಬೇಕು. ಅಧಿಕಾರದ ಗದ್ದುಗೆ ದೊರಕಿದೆಯೆಂದು ಜೊತೆಗಿದ್ದವರೊಂದಿಗೆ ದರ್ಪ ಚಲಾಯಿಸಿದರೆ ಆ ಗದ್ದುಗೆಗೇ ಕುತ್ತು ಬಂದೀತು. ಎಲ್ಲರನ್ನೂ ಜೊತೆಗೇ ಕರೆದುಕೊಂಡು ಹೋಗುವ ಯಜಮಾನ ಮಾತ್ರ ಜನಪ್ರಿಯನಾಗುತ್ತಾನೆ. ಸಂಸ್ಥೆಯ ಬೆಳವಣಿಗೆಗೆ ಕಾರಣನಾಗುತ್ತಾನೆ. ದರ್ಪದಿಂದಲೇ ಸಾಧಿಸಹೊರಟವರಿಂದ ಸಂಸ್ಥೆಯೂ ಬೆಳೆಯಲಾರದು ಮತ್ತು ವ್ಯಕ್ತಿಯೂ ಬೆಳೆಯಲಾರ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.